ರಾಜ್ಯದ ವಿವಿಧೆಡೆ ಮತದಾನದ ಸ್ವಾರಸ್ಯಕರ ಮಾಹಿತಿಗಳು ಇಲ್ಲಿವೆ ಓದಿ

ಗುರುವಾರ, 17 ಏಪ್ರಿಲ್ 2014 (11:26 IST)
PR
PR
* ಹುಮ್ನಾಬಾದ್ ತಾಲೂಕಿನಲ್ಲಿ ಮತಯಂತ್ರ ದೋಷದಿಂದ ಮತ ಚಲಾಯಿಸುವುದಕ್ಕೆ ಸಾಧ್ಯವಾಗಲಿಲ್ಲ. ವಾರ್ಡ್ ನಂ. 14ರಲ್ಲಿ ಮತಯಂತ್ರ ಕೈಕೊಟ್ಟಿತು.

* ಚಾಮರಾಜನಗರದ ದೊಡ್ಡಾಣೆ ಗ್ರಾಮದಲ್ಲಿ ಮೂಲಸೌಕರ್ಯವಿಲ್ಲದ ಕಾರಣ ಮತದಾನವನ್ನು ಗ್ರಾಮಸ್ಥರು ಬಹಿಷ್ಕಾರ ಮಾಡಿದ ಘಟನೆ ನಡೆದಿದೆ. ದೊಡ್ಡಾಣೆಯ ಮತಗಟ್ಟೆ 148ರಲ್ಲಿ ಈ ಘಟನೆ ನಡೆದಿದ್ದು, ಅಲ್ಲಿ ಒಟ್ಟು 461 ಮತದಾರರಿದ್ದಾರೆ. ಚುನಾವಣಾಧಿಕಾರಿ ಮತದಾರರಿಗೆ ಮತಚಲಾಯಿಸುವಂತೆ ಯತ್ನಿಸಿದರಾದರೂ ಯಾವುದೇ ಫಲ ನೀಡಲಿಲ್ಲ.

* ಬಳ್ಳಾರಿಯಲ್ಲಿ ಚಿತ್ರೀಕರಣಕ್ಕೆ ಅವಕಾಶ ನೀಡದಿದ್ದರಿಂದ ಮಾಧ್ಯಮದವರು ಮತ್ತು ಚುನಾವಣಾ ಸಿಬ್ಬಂದಿ ನಡುವೆ ಮಾತಿನಚಕಮಕಿ ನಡೆಯಿತು. ಬಳ್ಳಾರಿಯ ದೇವಿನಗರ ಮತಗಟ್ಟೆಗೆ ಶ್ರೀರಾಮುಲು ಬರುತ್ತಿದ್ದಂತೆ ಮಾಧ್ಯಮದವರು ವಿಡಿಯೋದಿಂದ ಚಿತ್ರೀಕರಿಸಲು ಪ್ರಯತ್ನಿಸಿದಾಗ ಚುನಾವಣಾಧಿಕಾರಿಗಳು ಚಿತ್ರೀಕರಣಕ್ಕೆ ಅವಕಾಶ ನೀಡಲಿಲ್ಲ.ಇದರಿಂದ ಮಾಧ್ಯಮ ಮತ್ತು ಚುನಾವಣಾಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆಯಿತು. ಈ ಸಂದರ್ಭದಲ್ಲಿ ಪೊಲೀಸರು ಮಾಧ್ಯಮದವರ ಮೇಲೆ ಹಲ್ಲೆ ಮಾಡಲು ಯತ್ನಿಸಿದ ಘಟನೆ ನಡೆದಿದೆ. ಆಗ ಅಧಿಕಾರಿಗಳು ಬಾಗಿಲು ಹಾಕಿಕೊಂಡು ಮತದಾನ ನಡೆಸಿದರು.
ಇನ್ನಷ್ಟು ಸುದ್ದಿಗಳಿಗೆ ಮುಂದಿನ ಪುಟ ನೋಡಿ

PR
PR
* ಮುಲ್ಕಿಯಲ್ಲಿ 105 ವರ್ಷ ವಯಸ್ಸಿನ ವೃದ್ಧ ಜೋಸೆಪ್ ಮಿನೆಜೆಸ್ ಎಂಬವರು ಮಕ್ಕಳ ಸಹಾಯದಿಂದ ಆಗಮಿಸಿ ಮತದಾನ ಮಾಡಿದ ಘಟನೆ ನಡೆದಿದೆ. ಬಳಕುಂಜೆ ಶಾಲೆಯ ಮತಗಟ್ಟೆಯಲ್ಲಿ ತಮ್ಮ ಹಕ್ಕನ್ನು ಅವರು ಚಲಾಯಿಸಿದರು.

* ಬೆಂಗಳೂರು ಹೊರವಲಯದ ಕಮ್ಮನಹಳ್ಳಿ ವಾರ್ಡ್‌ನಲ್ಲಿ ಚುನಾವಣಾ ಸಿಬ್ಬಂದಿಯ ಅಚಾತುರ್ಯದಿಂದ ಎಡಗೈ ಹೆಬ್ಬೆಟ್ಟಿಗೆ ಶಾಯಿಯನ್ನು ಹಾಕುವ ಬದಲಿಗೆ ಎಡಗೈ ತೋರುಬೆರಳಿಗೆ ಶಾಯಿಯನ್ನು ಹಾಕಿದ ಅಚಾತುರ್ಯ ನಡೆದಿದೆ. ಸುಮಾರು ಹತ್ತುಗಂಟೆಯ ನಂತರ ಎಚ್ಚೆತ್ತುಕೊಂಡ ಸಿಬ್ಬಂದಿ ಎಡಗೈ ಹೆಬ್ಬೆರಳಿಗೆ ಶಾಯಿಯನ್ನು ಹಾಕಿದರು.ಕೋರಮಂಗಲದ ಚುನಾವಣಾಧಿಕಾರಿಗಳು ಕೂಡ ಎಡವಟ್ಟು ಮಾಡಿ, ನಂದನ್ ನಿಲೇಕಣಿ ತೋರುಬೆರಳಿಗೆ ಶಾಯಿಯನ್ನು ಹಾಕಿದರು. ನಂತರವೇ ಅವರಿಗೆ ತಮ್ಮ ತಪ್ಪಿನ ಅರಿವಾಯಿತು. ಮಂಗಳೂರಿನ ಪಣಂಬೂರಿನಲ್ಲಿ ಬಲಗೈ ಹೆಬ್ಬರಳಿಗೆ ಶಾಯಿ ಹಾಕಿದ ಅಚಾತುರ್ಯ ನಡೆಯಿತು. ನಂತರ ಎಚ್ಚೆತ್ತುಕೊಂಡು ಎಡಗೈ ಹೆಬ್ಬೆರಳಿಗೆ ಶಾಯಿಯನ್ನು ಹಾಕಲಾರಂಭಿಸಿದರು.

* ಕೇಂದ್ರಸಚಿವ ಮುನಿಯಪ್ಪ ಮೂಢನಂಬಿಕೆಗೆ ಮೊರೆಹೋದ ಘಟನೆ ನಡೆದಿದೆ.ಮತಯಂತ್ರದ ದಿಕ್ಕನ್ನು ಬದಲಾಯಿಸಿ ಮುನಿಯಪ್ಪ ಮತದಾನ ಮಾಡಿದ ಘಟನೆ ನಡೆದಿದೆ. ಮುನಿಯಪ್ಪನವರಿಗೆ ಮತಗಟ್ಟೆಯಲ್ಲಿ ವಾಸ್ತುದೋಷದ ಭೀತಿ ಆವರಿಸಿದ್ದರಿಂದ ಈ ರೀತಿಯಲ್ಲಿ ಮತಚಲಾಯಿಸಿದ್ದಾರೆ.
ಇನ್ನಷ್ಟು ಸುದ್ದಿಗಳು ಮುಂದಿನ ಪುಟದಲ್ಲಿದೆ

PR
PR
* ಇಂಡಿ ತಾಲೂಕಿನ ಕೆಲ ತಾಂಡಗಳಲ್ಲಿ ಕಾಂಗ್ರೆಸ್ ವಿರುದ್ಧ ಅಕ್ರಮ ಮತದಾನ ನಡೆಸಿದ ಆರೋಪ ಹೊರಿಸಲಾಗಿದೆ. ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ಈ ಕುರಿತು ತೀವ್ರ ಮಾತಿನ ಚಕಮಕಿ ನಡೆಯಿತು.

* ಓಟು ಹಾಕುವುದಕ್ಕೆ ಮುನ್ನ ಜೆಡಿಎಸ್ ಅಭ್ಯರ್ಥಿ ದೇವೇಗೌಡರು ದೇವಸ್ಥಾನಕ್ಕೆ ಒಂದು ಸುತ್ತು ಹಾಕಿದ ನಂತರ ಮತದಾನ ಮಾಡಿದರು.

* ಕೊಪ್ಪಳದಲ್ಲಿ ಮತದಾನ ಬಹಿಷ್ಕರಿಸಿದ ಘಟನೆ ನಡೆದಿದೆ. ಮೂಲಸೌಕರ್ಯದ ಕೊರತೆ ಹಿನ್ನೆಲೆಯಲ್ಲಿ ತಾವು ಚುನಾವಣೆಯಲ್ಲಿ ಯಾವ ಪಕ್ಷಕ್ಕೂ ಮತದಾನ ಮಾಡುವುದಿಲ್ಲ ಎಂದು ಹೇಳಿ ಗಣೇಶ್ ಕಾಲೋನಿಯ ನಿವಾಸಿಗಳು ಬಹಿಷ್ಕರಿಸಿದರು.

*ರಾಮನಗರದ ಜಿಲ್ಲೆಯ ಬಿಡದಿಯಲ್ಲಿ ಡಿ.ಕೆ.ಶಿವಕುಮಾರ್ ಬೆಂಬಲಿಗರು ಆಮ್ ಆದ್ಮಿ ಪಕ್ಷದ ಕಾರ್ಯಕರ್ತರ ಮೇಲೆ ಗೂಂಡಾಗಿರಿ ನಡೆಸಿದ್ದಾರೆಂದು ವರದಿಯಾಗಿದೆ. ಈ ಹಲ್ಲೆಯಲ್ಲಿ ಇಬ್ಬರು ಆಮ್ ಆದ್ಮಿ ಕಾರ್ಯಕರ್ತರಾದ ಮೋಟೇಗೌಡ ಮತ್ತು ಚಂದನ್ ಗಾಯಗೊಂಡಿದ್ದಾರೆ.

* ಚುನಾವಣಾಧಿಕಾರಿಗಳು ಬೆಂಗಳೂರಿನ ಪದ್ಮಾವತಿ ಟೆಕ್ಸ್‌ಟೈಲ್ಸ್ ಮೇಲೆ ದಾಳಿ ಮಾಡಿ ಕೂಪನ್‌ಗಳ ಜತೆ ಸಾವಿರಾರು ಸೀರೆಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಮತದಾರರಿಗೆ ಕೂಪನ್‌ಗಳನ್ನು ಹಂಚುವ ಮೂಲಕ ಕೂಪನ್ ನೀಡಿ ಸೀರೆಗಳನ್ನು ಪಡೆಯುತ್ತಿದ್ದರು. ಸೀರೆಯಿದ್ದ ಕವರ್ ಮೇಲೆ ನರೇಂದ್ರ ಮೋದಿ ಭಾವಚಿತ್ರವಿರುವುದು ಪತ್ತೆಯಾಗಿದೆ.

ವೆಬ್ದುನಿಯಾವನ್ನು ಓದಿ