ಆಚರಣೆಯಲ್ಲಿ ವ್ರತ ಹಾಗೂ ಉಪವಾಸಗಳು

ಧಾರ್ಮಿಕ ಆಚರಣೆಗಳಲ್ಲಿ ಪ್ರಮುಖವಾಗಿರುವ ವ್ರತ ಹಾಗೂ ಉಪವಾಸಗಳನ್ನು ಆಧುನಿಕ ತಲೆಮಾರಿನವರು ಗೊಡ್ಡು ಆಚರಣೆ ಎಂದು ಹೇಳಬಹುದಾದರೂ ಇದಕ್ಕೆ ವೈಜ್ಞಾನಿಕ ತಳಹದಿ ಇದೆ ಎಂಬುದು ಹೊಸ ತಿಳುವಳಿಕೆ.

ಉಪವಾಸ ಹಾಗೂ ವ್ರತಗಳು ದೈವ ಪ್ರೀತಿಗಾಗಿ ದೇಹದಂಡನೆಯ ವಿಧಾನಗಳು ಎಂದು ಪರಿಗಣಿಸಲಾಗುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಈ ಆಚರಣೆಯಿಂದ ದೇಹ ಹಾಗೂ ಮನಸ್ಸು ಬಲಗೊಳ್ಳುತ್ತದೆ ಎಂಬುದಾಗಿ ಸಂಶೋಧನೆಗಳು ತಿಳಿಸಿವೆ. ಉಪವಾಸ ಕಾಲದಲ್ಲಿ ದೇಹದ ಅಂತರವಯವಗಳು ಶುಚೀಕರಣ ಕಾರ್ಯ ನಡೆದರೆ, ವ್ರತಗಳು ಮನಸ್ಸನ್ನು ಶುಚಿಗೊಳಿಸುತ್ತವೆ.

ಪ್ರತಿದಿನ ,ಪ್ರತಿ ಹೊತ್ತು ಹೊಟ್ಟೆ ತುಂಬಾ ತಿಂದು ತೇಗುವವರು ಉಪವಾಸವಿರುವುದರಿಂದ ಜೀರ್ಣಾಂಗಗಳು ಜಡವಾಗುತ್ತವೆ. ಜೀರ್ಣಕ್ರಿಯೆಗೆ ಪೂರಕವಾಗಿರುವ ಹಾರ್ಮೋನುಗಳು, ಜಠರ ದ್ರವ್ಯಗಳು ದುರ್ಬಲವಾಗಿ ದೇಹ ಅಸ್ವಸ್ಥವಾಗುತ್ತವೆ. ಆದರೆ ಉಪವಾಸ ನಡೆಸುವುದರಿಂದ ದೇಹದ ಜೀರ್ಣಾಂಗ ವ್ಯವಸ್ಥೆ ಸಕ್ರಿಯವಾಗುವುದು ಬಲಗೊಳ್ಳುವುದು.

ವ್ರತಗಳಲ್ಲಿ ಉಪವಾಸ ವ್ರತ, ಮೌನವ್ರತ, ಜಲಾಹಾರ ವ್ರತ, ಒಪ್ಪೊತ್ತಿನ ವ್ರತ ಇತ್ಯಾದಿ ವಿಧಾನಗಳನ್ನು ಅನುಸರಿಸಲಾಗುವುದು. ಇದು ಮನಸ್ಸನ್ನು ಬಲ ಪಡಿಸುವುದು. ಮನೋ ನಿಗ್ರಹ, ಸಂಯಮ ಶಕ್ತಿಯನ್ನು ಹೆಚ್ಚಿಸಿ ಏಕಾಗ್ರತೆಯನ್ನು ಬಲಗೊಳಿಸುವುದು. ಈ ಕಾರಣಕ್ಕಾಗಿ ವಾರಕ್ಕೊಮ್ಮೆಯಾದರೂ ಉಪವಾಸ, ತಿಂಗಳಲ್ಲಿ ಕೆಲವು ದಿನವಾದರೂ ವ್ರತಾಚರಣೆ ಮಾಡಬೇಕೆಂದು ಧರ್ಮಗುರುಗಳು ವಿನಂತಿಸುತ್ತಾರೆ.

ವೆಬ್ದುನಿಯಾವನ್ನು ಓದಿ