ಟ್ರೇಲರ್‌ನಲ್ಲಿ ಕಂಡ ಬಡ್ಡಿಮಗನ್ ಲೈಫು ಭರ್ಜರಿಯಾಗಿದೆ!

ಸೋಮವಾರ, 23 ಡಿಸೆಂಬರ್ 2019 (16:47 IST)
ಪದೇ ಪದೆ ಚಿಂತೆಗಳು ಕಾಡಿದಾಗ, ಅಡಿಗಡಿಗೆ ಥರ ಥರದ ಸವಾಲುಗಳು ಎದುರಾಗಿ ಕಂಗೆಟ್ಟು ಕೂತಾಗ ಯಾರಿಗೇ ಆದರೂ ಒಂದು ಹಂತದಲ್ಲಿ ಏನಪ್ಪಾ ಇದು ಬಡ್ಡಿಮಗನ್ ಲೈಫು ಅಂತನ್ನಿಸಿರುತ್ತದೆ. ಹಾಗೆ ಪ್ರತಿಯೊಬ್ಬರಿಗೂ ಹತ್ತಿರಾಗುವಂಥಾ ಅದೇ ಶೀರ್ಷಿಕೆಯನ್ನಿಟ್ಟುಕೊಂಡು ತಯಾರಾಗಿರುವ ಬಡ್ಡಿಮಗನ್ ಲೈಫು ಚಿತ್ರ ನವೀನ್ ಸಜ್ಜು ಹಾಡಿರುವ ಏನ್ ಚಂದಾನೊ ತಕ್ಕೋ ಎಂಬ ಹಾಡಿನ ಮೂಲಕ ಪ್ರಖ್ಯಾತವಾಗಿತ್ತು. ಇದೊಂದು ಹಾಡಿನಿಂದಲೇ ಎಲ್ಲರನ್ನೂ ತಲುಪಿಕೊಂಡಿದ್ದ ಈ ಸಿನಿಮಾದ ಟ್ರೇಲರ್ ಇದೀಗ ಬಿಡುಗಡೆಯಾಗಿದೆ.
ಗ್ರೀನ್ ಚಿಲ್ಲಿ  ಎಂಟರ್ಟೈನ್ಮೆಂಟ್ ಬ್ಯಾನರಿನಡಿಯಲ್ಲಿ ಪವನ್ ಕುಮಾರ್ ನಿರ್ಮಾಣ ಮಾಡಿರುವ ಬಡ್ಡಿ ಮಗನ್ ಲೈಫು ಚಿತ್ರದ ಟ್ರೇಲರ್ ಬರ್ಜರಿಯಾಗಿಯೇ ಮೂಡಿ ಬಂದಿದೆ. ಇದು ಊರಿಗೆಲ್ಲ ಬಡ್ಡಿಗೆ ಕಾಸು ಕೊಟ್ಟು ರಕ್ತ ಹೀರುವ ಬಡ್ಡಿ ಸೀನಪ್ಪ ಎಂಬ ಪಾತ್ರದ ಸುತ್ತಾ ಘಟಿಸೋ ಮಜವಾದ ಕಥೆಯನ್ನೊಳಗೊಂಡಿರುವ ಚಿತ್ರ. ಅದರ ಅಸಲೀ ಸ್ವಾದ ಎಂಥಾದ್ದೆಂಬುದನ್ನು ಈಗ ಬಿಡುಗಡೆಯಾಗಿರುವ ಟ್ರೇಲರ್ ಜಾಹೀರು ಮಾಡಿದೆ.
 
ಹರಿಕಥೆಯ ಶೈಲಿಯ ನಿರೂಪಣೆಯೊಂದಿಗೆ ತೆರೆದುಕೊಳ್ಳುವ ಈ ಟ್ರೇಲರಿನಲ್ಲಿ ಬಡ್ಡಿಮಗನ್ ಲೈಫು ಚಿತ್ರದ ಕಥೆಯ ನಾನಾ ಮಜಲುಗಳನ್ನು ಹೊಳೆಯಿಸಲಾಗಿದೆ. ಈ ಮೂಲಕವೇ ಇಲ್ಲಿನ ಥರ ಥರದ ಪಾತ್ರಗಳನ್ನೂ ಪರಿಚಯಿಸಲಾಗಿದೆ. ಗ್ರಾಮೀಣ ಸೊಗಡಿನ ಕಥೆಯ ಜೊತೆ ಜೊತೆಗೇ ಇಲ್ಲೊಂದು ಚೆಂದದ ಲವ್ ಸ್ಟೋರಿ ಇರೋದೂ ಕೂಡಾ ಈ ಟ್ರೇಲರ್ ಮೂಲಕ ಜಾಹೀರಾಗಿದೆ. ಅಂತೂ ಬಡ್ಡಿಮಗನ್ ಲೈಫು ಟ್ರೇಲರ್ ಈ ವರ್ಷದ ಪ್ರಾಮಿಸಿಂಗ್ ಟ್ರೇಲರ್ಗಳಲ್ಲೊಂದಾಗಿ ಗುರುತಿಸಿಕೊಂಡಿದೆ.
 
ಈ ಚಿತ್ರವನ್ನು ಪವನ್ ಮತ್ತು ಪ್ರಸಾದ್ ನಿರ್ದೇಶನ ಮಾಡಿದ್ದಾರೆ. ಸಚಿನ್ ಶ್ರೀಧರ್ ಮತ್ತು ಐಶ್ವರ್ಯಾ ರಾವ್ ನಾಯಕ ನಾಯಕಿಯರಾಗಿ ನಟಿಸಿದ್ದಾರೆ. ಬಲ ರಾಜವಾಡಿ ಇಲ್ಲಿ ಬಡ್ಡಿ ಸೀನಪ್ಪನಾಗಿ ಅಬ್ಬರದ ಪಾತ್ರವನ್ನು ನಿರ್ವಹಿಸಿದ್ದಾರೆ. ಈ ಸಿನಿಮಾದ ಮೂಲ ಉದ್ದೇಶ ಮನೋರಂಜನೆ. ಒಂದೊಳ್ಳೆ ಕಥೆಯೊಂದಿಗೇ ಚಿತ್ರತಂಡ ಅದನ್ನು ಸಾಧ್ಯವಾಗಿಸಲು ಮುಂದಾಗಿದೆ. ಈಗಾಗಲೇ ನಾನಾ ಥರದಲ್ಲಿ ನಿರೀಕ್ಷೆ ಮೂಡಿಸಿರುವ ಬಡ್ಡಿಮಗನ್ ಲೈಫ್ ಇದೇ ತಿಂಗಳ 27ರಂದು ಬಿಡುಗಡೆಯಾಗುತ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ