ತುಳಸಿ ಪೂಜೆಯ ಸನಾತನ ಮಹತ್ವ

vishnu
ಭಾರತದ ಸನಾತನ ಆಚಾರವಿಚಾರಗಳಲ್ಲಿ ಪೂಜೆ-ಪುನಸ್ಕಾರ, ವ್ರತಾಚರಣೆಗಳಿಗೆ ವಿಶೇಷ ಮಹತ್ವವಿದೆ. ಇಂತಹ ಆಚರಣೆಗಳು ಜನಕಲ್ಯಾಣಪರವಾಗಿರುತ್ತವೆ. ಅವುಗಳಲ್ಲಿ ತುಳಸಿ ಪೂಜೆಗೆ ಪ್ರಾಧಾನ್ಯವಿದೆ.

ಧಾರ್ಮಿಕ ಕ್ರಿಯೆಗಳಲ್ಲಿ ತುಳಸಿಗೆ ಮಹತ್ವವಿದೆ. ತುಳಸಿಗೆ ಮಹಿಳೆಯರಲ್ಲೂ ಆರಾಧನಾ ಭಾವವಿದೆ. ತುಳಸಿಯನ್ನು ಅಮೃತ ಸಮಾನ ಸ್ಥಾನನೀಡಿ ಗೌರವಿಸಲಾಗುತ್ತದೆ. ಇದರ ಕುರಿತು ಸಮುದ್ರ ಮಥನವನ್ನು ಸರಿಹೊಂದಿಸಿ ಕಥೆಯೊಂದು ಚಾಲನೆಯಲ್ಲಿದೆ. ಇದನ್ನಾಧರಿಸಿ ತುಳಸಿಗೆ ಅಮೃತತ್ವದ ಪರಿಕಲ್ಪನೆಯ್ನು ನೀಡಲಾಗುತ್ತಿದೆ.

ಆ ಕಥೆ ಹೀಗಿದೆ- ದೇವತೆಗಳೂ ದಾನವರೂ ಸೇರಿ ಸಮುದ್ರವನ್ನು ಕಡೆದರು. ಪ್ರಾರಂಭದಲ್ಲಿ ಕಾಳಕೂಟ ಎಂಬ ವಿಷವೂ ಬಳಿಕ ಅಮೃತವೂ ಹೊರಬಂತು. ಅಮೃತವನ್ನು ಮೋಹಿನಿ ರೂಪಿನ ಮಹಾವಿಷ್ಣುವು ಪಡೆದುಕೊಳ್ಳುವಾಗ ನೇತ್ರಗಳಿಂದ ಆಂದ ಭಾಷ್ಪವು ಉಕ್ಕಿಬಂತು. ಕಣ್ಣೀರಿನ ಒಂದು ಹನಿ ಅಮೃತದ ಕೊಡದೊಳಕ್ಕೆ ಬಿತ್ತು. ಆ ಹನಿಯು ಬಳಿಕ ತುಳಸಿ ಗಿಡವಾಗಿ ಬೆಳೆಯಿತು. ಅಮೃತ ಸ್ಪರ್ಷವಿರುವ ಸಸ್ಯವಾಗಿರುವ ಕಾರಣದಿಂದ ಇದನ್ನು ಅಮೃತ ಸಸ್ಯ ಎಂದು ಪರಿಗಣಿಸಲಾಯಿತು.


ತುಳಸಿಗೆ ಧಾರ್ಮಿಕ ನೆಲೆಗಟ್ಟಿರುವಂತೆಯೇ ಔಷಧೀಯ ಗುಣಗಳೂ ಇವೆ. ಇದು ಹೇರಳ ಆಮ್ಲಜನಕವನ್ನು ಹೊರಗೆಡಹುತ್ತಿರುವುದರಿಂದ ಇದು ವಾತಾವರಣದ ಶುದ್ಧೀಕರ ಹಾಗೂ ದೇಹದ ಆರೋಗ್ಯದ ಮೇಲೆ ಉತ್ತಮ ಪರಿಣಾಮವನ್ನು ಬೀರುತ್ತದೆ ಎಂಬುದಾಗಿ ವಿಜ್ಞಾನ ತಿಳಿಸಿದೆ. ತುಳಸಿಯ ಎಲೆ ಹಾಗೂ ಬೇರುಗಳಲ್ಲಿ ಔಷಧೀಯ ಗುಣವನ್ನು ಹೊಂದಿರುವುದರಿಂದ ವೈದ್ಯಶಾಸ್ತ್ರವೂ ಇದಕ್ಕೆ ಪ್ರಾಧಾನ್ಯ ನೀಡಿದೆ.

ತುಳಸಿಯ ಪೂಜನೀಯ ಸ್ಥಾನಮಾನ ನೀಡುವವರು ಉತ್ಥಾನ ದ್ವಾದಶಿಯಂದು ತುಳಸಿಯನ್ನು ಆರಾಧಿಸುತ್ತಾರೆ. ಶ್ರೀಮನ್ನಾರಾಯಣನ ನಿದ್ದೆ ಕಳೆದು ಜಾಗೃತನಾಗುವ ದಿನ ಇದು ಎಂದು ತಿಳಿದು ನಂಬುವ ಅವರು ತುಳಸಿಗೆ ವಿಶೇಷ ಪೂಜೆ ಸಲ್ಲಿಸುತ್ತಾರೆ. ಇಂತಹ ಪೂಜಾ ವಿಧಿಗಳ ಸಂಕೇತವಾಗಿ ತುಳಸಿಕಟ್ಟೆ ಚಾಲನೆಯಲ್ಲಿದೆ. ತುಳಸಿಯು ಭಾರತೀಯರ ಧಾರ್ಮಿಕ ನಂಬಿಕೆಗಳ ಪ್ರತೀಕವಾಗಿ ಬೆಳೆದು ಬಂದಿದೆ.

ವೆಬ್ದುನಿಯಾವನ್ನು ಓದಿ