ರಾಮಾಯಣಕ್ಕೆ ನಾಂದಿ ಹಾಡಿದ ಘಟನೆ

ಸರಯೂ ನದೀತೀರದಲ್ಲಿನ ಅಯೋಧ್ಯ ನಗರವನ್ನು ಹಲವಾರು ವರ್ಷಗಳ ಕಾಲ ಸತ್ಯ, ಧರ್ಮ, ನ್ಯಾಯ ನಿಷ್ಠೆಯಿಂದ ರಾಜ್ಯಭಾರ ಮಾಡಿದ ಸೂರ್ಯ ವಂಶದ ದಶರಥ ಮಹಾರಾಜ ತಾನು ವೃದ್ಧಾಪ್ಯದಂಚಿಗೆ ಬಂದಾಗ ತನ್ನ ಹಿರಿಯ ಮಗನಾದ ಶ್ರೀರಾಮಚಂದ್ರನಿಗೆ ರಾಜ್ಯಾಡಳಿತ ವಹಿಸುವ ನಿರ್ಧಾರ ಮಾಡಿದ.

ಈ ವಿಚಾರವಾಗಿ ಚರ್ಚೆ ನಡೆಸಲು ತನ್ನೆಲ್ಲಾ ಸಾಮಂತರು, ಮಂತ್ರಿಗಳು, ಆಡಳಿತ ಪ್ರತಿನಿಧಿಗಳು, ಸೇನಾ ಮುಖ್ಯಸ್ಥರು ಮುಂತಾದ ಗಣ್ಯರನ್ನು ಕರೆಸಿ ವಿಶೇಷ ಸಭೆ ನಡೆಸಿದನು.

ಎಲ್ಲರೂ ಒಕ್ಕೊರಲಿನಿಂದ ದಶರಥನ ಈ ತೀರ್ಮಾನಕ್ಕೆ ಅಂಗೀಕಾರ ಸೂಚಿಸಿದರು. ದಶರಥನು ಪುಷ್ಯ ನಕ್ಷತ್ರದ ಶುಭದಿನದಂದು ಶ್ರೀರಾಮಚಂದ್ರನಿಗೆ ಪಟ್ಟಾಭಿಷೇಕ ಮಾಡುವುದೆಂದು ನಿಶ್ಚಯಿಸಿದನು. ಶ್ರೀರಾಮಪಟ್ಟಾಭಿಷೇಕ್ಕಾಗಿ ಇಡೀ ಅಯೋಧ್ಯೆ ನಗರ ಸಂಭ್ರಮ ಸಡಗರಗಳಿಂದ ನವವಧುವಿನಂತೆ ಸಜ್ಜುಗೊಂಡಿತು.

ಇತ್ತ ದಶರಥನ ಮೂರನೆಯ ಹೆಂಡತಿ ಕೈಕೇಯಿ ತನ್ನ ನೆಚ್ಚಿನ ಸೇವಕಿಯಾದ ಮಂಥರೆಯನ್ನು ಅರಮನೆಯಲ್ಲಿನ ಸಂಭ್ರಮ ಸಡಗರಗಳಿಗೆ ಕಾರಣವೇನೆಂದು ಕೇಳಿದಾಗ ಆಕೆ ಶ್ರೀರಾಮಪಟ್ಟಾಭಿಷೇಕ್ಕಾಗಿ ಸಿದ್ಧಗೊಳ್ಳುತಿಹುದು ಅಯೋಧ್ಯಾ ನಗರಿ ಎಂದು ಹೇಳಿದಳು. ಈ ಮಾತನ್ನು ಕೇಳಿದ ಕೈಕೇಯಿ ತನ್ನ ಸ್ವಂತ ಮಗನಿಗೆ ಪಟ್ಟಾಭಿಷೇಕವಾದಷ್ಟು ಆನಂದದಿಂದ ಸಂಭ್ರಮಿಸಿದಳು.

ಆದರೆ, ಮಂಥರೆ ಮಾತ್ರ ಕೈಕೇಯಿಯನ್ನು ನೋಡಿ ಸಿಡಿಮಿಡಿಗೊಂಡು ಈಗ ನಡೆಯಬೇಕಿರುವ ಪಟ್ಟಾಭಿಷೇಕ ನಿನ್ನ ಕೇಡಿಗಾಗಿಯೇ ಹೊರತು ನಿನ್ನ ಒಳಿತಿಗಾಗಲ್ಲ ಎಂದು ಕೋಪದಿಂದ ನುಡಿದಳು. ಚಿಕ್ಕಂದಿನಿಂದಲೂ ತನ್ನನ್ನು ತಾಯಿಯಂತೆಯೇ ಪೋಷಿಸಿದ್ದ ಮಂಥರೆಯನ್ನು ಕಂಡರೆ ಕೈಕೇಯಿಗೂ ಕೂಡ ವಿಶೇಷವಾದ ಮಮತೆ, ಅಕ್ಕರೆ. ಹಾಗಾಗಿ, ಆಕೆ ಏನೇ ಹೇಳಿದರೂ ತನ್ನ ಒಳ್ಳೆಯದಕ್ಕೆ ಎಂಬ ನಂಬಿಕೆಯಿಂದ ಆಕೆಯ ಮಾತಿನ ಹಿಂದಿರುವ ಅರ್ಥವನ್ನು ವಿವರಿಸೆಂದಳು.

ಆಗ ಮಂಥರೆಯು ಶ್ರೀರಾಮಪಟ್ಟಾಭಿಷೇಕವಾದಲ್ಲಿ ನಿನ್ನ ಮಗನಾದ ಭರತನು ಶ್ರೀರಾಮನ ಸೇವಕನಾಗಬೇಕಾಗುತ್ತದೆ ಮತ್ತು ನೀನು ಶ್ರೀರಾಮನ ತಾಯಿ ಕೌಸಲ್ಯೆಯ ದಾಸಿಯಾಗಬೇಕಾದೀತು ಎಚ್ಚರ ಎಂದು ಕೈಕೇಯಿ ಮನಸ್ಸಿನಲ್ಲಿ ವಿಷಬೀಜ ಬಿತ್ತಿದಳು.

ಶ್ರೀರಾಮಪಟ್ಟಾಭಿಷೇಕವನ್ನು ತಪ್ಪಿಸಬೇಕಿದ್ದಲ್ಲಿ, ಭರತನನ್ನು ಪಟ್ಟಕ್ಕೇರಿಸಬೇಕೆಂದಿದ್ದಲ್ಲಿ ತನ್ನ ಮಾತನ್ನು ಕೇಳು ಎಂದು ಕೈಕೇಯಿಯ ಮನ ಕದಡಿ, ಹಿಂದೆ ದೇವಾಸುರ ಯುದ್ಧದಲ್ಲಿ ಕೈಕೇಯಿ ದಶರಥನಿಗೆ ಜತೆ ನೀಡಿ ಆತನನ್ನು ಪ್ರಾಣಾಪಾಯದಿಂದ ರಕ್ಷಿಸಿದ್ದಕ್ಕೆ ಬದಲಾಗಿ ಆತ ನೀಡಿದ್ದ ಎರಡು ವರಗಳನ್ನು ನೆನಪಿಸಿ ಅವನ್ನು ಈ ಸಂದರ್ಭದಲ್ಲಿ ಸದುಪಯೋಗಪಡಿಸಿಕೊಂಡು ಆ ಎರಡು ವರಗಳಲ್ಲಿ ಮೊದಲನೆಯದಾಗಿ ರಾಮನನ್ನು ಹದಿನಾಲ್ಕು ವರ್ಷ ವನವಾಸಕ್ಕೆ ಕಳುಹಿಸಬೇಕೆಂದು, ಎರಡನೆಯದನ್ನು ಭರತನಿಗೆ ಪಟ್ಟಾಭಿಷೇಕವಾಗುವಂತೆ ಕೇಳೆಂದು ಹೇಳಿಕೊಟ್ಟಳು.

ವೆಬ್ದುನಿಯಾವನ್ನು ಓದಿ