ಶಿವ ಜಡೆಯಿಂದ ಮಧುಸುರಿಸಿದ ಮಧುರೈ

PTI
ಭಾರತದಲ್ಲಿ ದಕ್ಷಿಣದ ಆಥೆನ್ಸ್‌ ಎಂದು ಗುರುತಿಸಲ್ಪಡುವ ತಮಿಳ್ನಾಡಿನ ಪವಿತ್ರ ಹಾಗೂ ಪ್ರಸಿದ್ಧ ಪುಣ್ಯಕ್ಷೇತ್ರಗಳಲ್ಲಿ ಮಧುರೈ ಪ್ರಸಿದ್ಧವಾಗಿದೆ.

ಮಧುರೆಯ ಕುರಿತು ಅನೇಕ ಐತಿಹ್ಯಗಳಿವೆ. ಇವುಗಳಲ್ಲೊಂದು ಇಂತಿದೆ. ಈ ಪ್ರದೇಶದಲ್ಲಿ ಬಹಳ ಹಿಂದೆ ಕದಂಬ ವನವಿತ್ತು. ಒಂದುದಿನ ಧನಂಜಯ ಎಂಬ ರೈತ ಅಲ್ಲೆ ಹಾದು ಹೋಗುತ್ತಿದ್ದಾಗ ದೇವೆಂದ್ರನು ಸ್ವಯಂಭೂ ಲಿಂಗವೊಂದನ್ನು ಪೂಜಿಸುವುದವನ್ನು ಕಂಡನು. ರೈತನು ಈ ಮಾಹಿತಿಯನ್ನು ನಾಡಿನ ರಾಜ ಕುಲಶೇಖರ ಪಾಂಡ್ಯನಿಗೆ ತಿಳಿಸಿದನು.

ಕುಲಶೇಖರ ಪಾಂಡ್ಯನು ಸ್ವಯಂಭೂ ಶಿವಲಿಂಗವಿದ್ದ ಪ್ರದೇಶವನ್ನು ಶುಚಿಗೊಳಿಸಿ ಅಲ್ಲೊಂದು ದೇವಸ್ಥಾನವನ್ನು ನಿರ್ಮಿಸಿದನು. ಒಂದು ಸಲ ಸ್ವತಹ ಪರಮಶಿವನೇ ಈ ದೇವಸ್ಥಾನವನ್ನು ವೀಕ್ಷಿಸಿ ತನ್ನ ಜಟಾಜೂಟವನ್ನು ಬಿಡಿಸಿ ಜೇನಿನ ಮಳೆಗರೆದನು. ಇದರಿಂದಾಗಿ ದೇವಸ್ಥಾನಕ್ಕೆ ಮಧುರೈ ಎಂಬ ಹೆಸರಾಯಿತು. ಈ ದೇವಸ್ಥಾನವನ್ನು ಕೇಂದ್ರವಾಗಿರಿಸಿ ಬಳಿಕ ನಗರೀಕರಣವಾಯಿತು.

ಮುಧುರೈಗೆ ತನ್ನದೇ ಆದ ವೈಶಿಷ್ಟ್ಯಗಳಿವೆ. ಶಿವನ ವಿಳಯಾಟ್ಟಂ (ವಿಸ್ಮಯಗಳು)ಗಳನ್ನು 64 ವಿಧಾನಗಳಲ್ಲಿ ಇಲ್ಲಿ ಚಿತ್ರಿಸಲಾಗಿದೆ. ಧಾರ್ಮಿಕವಾಗಿ , ಆಧ್ಯಾತ್ಮಿಕವಾಗಿ ವಿಶಿಷ್ಟವಾಗಿರುವಂತೆಯೇ ಈ ದೇವಸ್ಥಾನ ಸಂಸ್ಕೃತಿ ಪರಂಪರೆಗಳಿಗೂ ಮಹತ್ವಪಡೆದಿದೆ.

ಕ್ರಿಸ್ತಪೂರ್ವ 3ನೇ ಶತಮಾನದಲ್ಲಿ ಯಾತ್ರಿಕ ಮೆಗಸ್ತನೀಸ್‌ ಮಧುರೆಗೆ ಭೇಟಿ ನೀಡಿದ್ದನು. ಆ ಬಳಿಕ ಗ್ರೀಸ್‌ ಮತ್ತು ರೋಂಗಳಿಂದ ವರ್ತಕರು ಆಗಮಿಸಿ ಅಲ್ಲಿನ ಪಾಂಡ್ಯ ದೊರೆಗಳೊಂದಿಗೆ ವ್ಯಾಪಾರ ಸಂಪರ್ಕ ಹೊಂದಿದ್ದರು.

ಮಧುರೈ ಕ್ರಿಸ್ತಶಕ 10ನೇ ಶತಮಾನದವರೆಗೂ ವೈಭವೋಪೇತವಾಗಿತ್ತು. ಆದರೆ ಮಧುರೆಯನ್ನು ಪಾಂಡ್ಯರ ಶತ್ರುಗಳಾದ ಚೋಳರು ವಶಪಡಿಸಿದುದರಿಂದ ತನ್ನ ವೈಭವವನ್ನು ಕಳಕೊಂಡಿತು. ಆ ಬಳಿಕ ಚೋಳರು, ಹಂಪೆಯ ವಿಜಯನಗರ ಅರಸರು, ನಾಯಕ ದೊರೆಗಳು ಆಳಿದರು. ತಿರುಮಲ ನಾಯಕನ ಕಾಲದಲ್ಲಿ ದೇವಸ್ಥಾನ ಮತ್ತೆ ಸಮೃದ್ಧಿಯಿಂದ ಕಂಗೊಳಿಸಿತು.ಕೊನೆಗೆ ಬ್ರಿಟಿಷರ ಸ್ವಾಧೀನಕ್ಕೆ ಬಂದಿತು .

ಸ್ವಾತಂತ್ರ್ಯಾನಂತರ ತಮಿಳ್ನಾಡು ಸರಕಾರದ ಆಡಳಿತಕ್ಕೊಳಪಟ್ಟಿತು. ಮಧುರೈ ಪ್ರದೇಶವು ಯಾನಮಲೈ( ಆನೆಪರ್ವತ), ನಾಗಮಲೈ(ಸರ್ಪಪರ್ವತ), ಪಶುಮಲೈ(ಬಸವಪರ್ವತ)ಗಳಿಂದ ಸುತ್ತುವರಿಯಲ್ಪಟ್ಟಿದೆ. ಜಾಜಿ ಮಲ್ಲಿಗೆ ಹೂವಿಗೆ ಪ್ರಸಿದ್ಧವಾಗಿದೆ.ದೇಶದ ಇತರ ಭಾಗಗಳಿಗೂ ಇಲ್ಲಿಂದ ಹೂವು ಸರಬರಾಜಾಗುತ್ತಿದೆ.

- ವಿಷ್ಣು ಭಾರದ್ವಾಜ್

ವೆಬ್ದುನಿಯಾವನ್ನು ಓದಿ