ನಮ್ಮ ಋಷಿಮುನಿಗಳ ಪ್ರಕಾರ ಆರು ವೇದಗಳಲ್ಲಿ ಜ್ಯೋತಿಷ್ಯವು ಒಂದು. ಜ್ಯೋತಿಷ್ಯವನ್ನು ವೇದಗಳ ಕಣ್ಣೆಂದು ಗುರುತಿಸುತ್ತಾರೆ. ವೇದಗಳ ಕಾಲದಿಂದಲೂ ಶುಭ ಕಾರ್ಯಗಳಿಗೆ ಮೂಹೂರ್ತಾದಿ ಕಾಲವನ್ನು ಗ್ರಹಗಳ ಸ್ಥಿತಿ-ಗತಿ, ರಾಶಿ-ನಕ್ಷತ್ರ, ಗ್ರಹಣ ಎಲ್ಲವನ್ನು ಸೂರ್ಯನ ಚಲನದಿಂದ ನಿರ್ಧರಿಸುತ್ತಿದ್ದರು. ಸೂರ್ಯನು ಒಂದು ರಾಶಿಯಲ್ಲಿ ಒಂದು ತಿಂಗಳು ಇರುತ್ತಾನೆ.
ವಿಷ್ಣುಪಾದ, ಸಾಡೆಸಾತಿ, ವಿಷ್ಣವತ್, ದಕ್ಷಿಣಾಯನ- ಉತ್ತರಾಯಣ ಪುಣ್ಯಕಾಲಗಳು ಎಂದು ವಿಂಗಡಿಸಿರುವರು. ಅವುಗಳಲ್ಲಿ ವಿಷ್ಣುಪಾದಕ್ಕಿಂತಲೂ ಸಾಡೆಸಾತಿ ಪುಣ್ಯಕಾಲ ಶ್ರೇಷ್ಠವಾಗಿದೆ. ಸಾಡೆಸಾತಿಕ್ಕಿಂತಲೂ ವಿಷುವತ್ ಪುಣ್ಯಕಾಲ ಶ್ರೇಷ್ಠವಾಗಿದೆ. ವಿಷುವತ್ ಪುಣ್ಯಕಾಲಕ್ಕಿಂತಲೂ ಆಯನ ಪುಣ್ಯಕಾಲ ಶ್ರೇಷ್ಠವಾಗಿದೆ. ಅದರಲೂ ದಕ್ಷಿಣಾಯನ ಕಾಲಕ್ಕಿಂತಲೂ ಉತ್ತರಾಯಣ ಕಾಲ ಶ್ರೇಷ್ಠವಾಗಿದೆ. ಅಂದರೆ ಸೂರ್ಯ ಮಕರ ರಾಶಿಗೆ ಬರುವ ಪುಣ್ಯಕಾಲ ಶ್ರೇಷ್ಠ.
ಉತ್ತರ ಎಂಬ ಪದಕ್ಕೆ ಶ್ರೇಷ್ಠ ಎಂಬ ಅರ್ಥವಿದ್ದು ಇದನ್ನು ಶ್ರೇಷ್ಠವಾದ ದಾರಿ ಎಂದೂ ಕೂಡಾ ಅರ್ಥೈಸಬಹುದು ಇದರ ಬಗ್ಗೆ ಭಗವದ್ಗೀತೆಯ 8ನೇ ಅಧ್ಯಾಯದ 24ನೇ ಶ್ಲೋಕದಲ್ಲಿ ಈ ರೀತಿ ಉಲ್ಲೇಖವಿದೆ.
ಅಗ್ನಿ ಜ್ಯೋರ್ತಿರ್ ಅಹ:ಶುಕ್ಲ:ಷಣ್ವೈಸ ಉತ್ತರಾಯಣಂ | ತತ್ರ ಪ್ರಯತಾ ಗಚ್ಛಂತಿ ಬ್ರಹ್ಮ ಬ್ರಹ್ಮವಿದೋ ಜನಾ: ||
ಅಂದರೆ ಈ ಕಾಲದಲ್ಲಿ ಎಲ್ಲಾ ಕಾರ್ಯಗಳು ಹೆಚ್ಚು ಶ್ರೇಯಸ್ಕರವಾಗಿ ನಡೆಯುವುದು. ಸ್ವರ್ಗದ ಬಾಗಿಲು ತೆರೆದಿರುವುದು. ಮುಕ್ತಿಯನ್ನು ಹೊಂದಲಿರುವ ಸೂತ್ರದ ಬಗ್ಗೆ ಈ ಶ್ಲೋಕದಲ್ಲಿ ವಿವರಿಸಲಾಗಿದೆ. ಅರ್ಥಾತ್, ಅಗ್ನಿ, ಜ್ಯೋತಿ, ಹಗಲು ಶುಕ್ಲ ಪಕ್ಷ ಉತ್ತರಾಯಣದ ಆರು ತಿಂಗಳುಗಳಲ್ಲಿ ಬ್ರಹ್ಮವಿದರಾದ ದೂಗಿಗಳ ಪ್ರಾಣಗಳು ಬ್ರಹ್ಮದಲ್ಲಿ ವಿಲೀನವಾಗುವುದು. ಇದು ಮುಕ್ತಿಯ ಕಡೆಗಿರುವ ಯಾತ್ರೆಯಾಗಿದೆ.
ಮಹಾಭಾರತದಲ್ಲಿ ಇಚ್ಛಾ ಮರಣಿಯಾಗಿದ್ದ ಭೀಷ್ಮರು ಈ ಉತ್ತರಾಯಣಕ್ಕಾಗಿ ಕಾದಿದ್ದರು. ಮನುಷ್ಯರ ಒಂದು ವರ್ಷವು ದೇವತೆಗಳ ಒಂದು ದಿನಕ್ಕೆ ಸಮ. ಆ ದಿನ ಹಗಲು-ರಾತ್ರಿಯನ್ನು ಒಳಗೊಂಡಿರುತ್ತದೆ. ಭೂಮಿಯಲ್ಲಿ ದಕ್ಷಿಣಾಯನವಿದ್ದಾಗ ದೇವಲೋಕದಲ್ಲಿ ರಾತ್ರಿ. ದೇವತೆಗಳು ನಿದ್ರಿಸುತ್ತಿರುತ್ತಾರೆ. ಪಿತೃಗಳ ಜಾಗೃತರಾಗಿರುತ್ತಾರೆ. ಹಾಗಾಗಿ ಈ ಅವಧಿ ಪಿತೃಯನ ನಮಗೆ ಉತ್ತರಾಯಣವಾದಾಗ ದೇವತೆಗಳಿಗೆ ಹಗಲು . ಅವರು ಜಾಗೃತವಾಗಿರುವ ಕಾಲ ಹಾಗಾಗಿ ಉತ್ತರಾಯಣದಲ್ಲಿ ಸ್ವರ್ಗದ ಬಾಗಿಲು ತೆರೆದಿರುವುದರಿಂದ ಸತ್ತವರು ನೇರವಾಗಿ ಸ್ವರ್ಗಕ್ಕೆ ಹೋಗುತ್ತಾರೆ. ಆದ್ದರಿಂದ ಭೀಷ್ಮರು ಉತ್ತರಾಯಣ ಬರುವವರಿಗೂ ಜೀವ ಹಿಡಿದಿದ್ದರು.
ಖಗೋಳಶಾಸ್ತ್ರದ ಪ್ರಕಾರ: ಸಾಮಾನ್ಯವಾಗಿ ಸೂರ್ಯೋದಯ ಪೂರ್ವದಲ್ಲಿ, ಸೂರ್ಯಾಸ್ತಮಾನ ಪಶ್ಚಿಮದಲ್ಲಿ ಎಂದು ಹೇಳುವುದಾದರೂ ಯಾವುದೇ ಸ್ಥಳದಲ್ಲಿ ಕರಾರುವಕ್ಕಾಗಿ ಪೂರ್ವದಲ್ಲೇ ಸೂರ್ಯೋದಯ. ಪಶ್ಚಿಮದಲ್ಲೇ ಸೂರ್ಯಾಸ್ತಮಾನವಾಗುವುದು ವರ್ಷದಲ್ಲಿ ಎರಡೇ ದಿನಗಳಂದು. ಆ ದಿನಗಳನ್ನು ಈಕ್ವಿನಾಕ್ಸ್ ಎಂದು ಕರೆಯುತ್ತಾರೆ. ಅಂದು ಹಗಲು-ಇರಳು ಸಮವಾಗಿರುವುದು ವರ್ಷದ ಉಳಿದ ದಿನಗಳಲ್ಲಿ ಹಗಲಿರುಳುಗಳ ಪಾಲು ಸಮವಾಗಿರುವುದಿಲ್ಲ.
ಈಕ್ವಿನಾಕ್ಸ್ ದಿವಸಗಳ ಹೊರತಾಗಿ ಸೂರ್ಯನ ಉದಯ ಪೂರ್ವದ ಬಲಕ್ಕೆ (ಉತ್ತರಕ್ಕೆ) ಅಥವಾ ಎಡಕ್ಕೆ (ದಕ್ಷಿಣಕ್ಕೆ) ಆಗುತ್ತದೆ. ಸೂರ್ಯನು 6 ತಿಂಗಳು ಉತ್ತರದ ದಿಕ್ಕಿನಲ್ಲಿ ಚಲಿಸುವ ಕಾರಣ ಅದನ್ನು ಉತ್ತರಾಯಣ ಕಾಲ ಎನ್ನುವರು. ವಾತಾವರಣದಲ್ಲಿ ಬದಲಾವಣೆಗಳಾಗುತ್ತದೆ.ಹಗಲಿನ ಅವಧಿ ಹೆಚ್ಚು ಇರಳಿನ ಅವಧಿ ಕಡಿಮೆಯಗುತ್ತಾ ಹೋಗುತ್ತದೆ. ಚಳಿಯೂ ಕಡಿಮೆಯಗುತ್ತಾ ಹೋಗಿ ವಾತಾವರಣ ಉಲ್ಲಾಸದಾಯಕವಾಗಿರುತ್ತದೆ. ಪ್ರತಿ ವರ್ಷ ಜನವರಿ 14 ಅಥವಾ 15ರಂದು ಮಕರ ಸಂಕ್ರಾಂತಿ ಬರುವುದು.
ಆಚರಣೆ: ಸೂರ್ಯದೇವನು ತನ್ನ ಏಳು ಕುದುರೆಗಳಿಂದ ಎಳೆಯಲ್ಪಡುವ ಭವ್ಯ ರಥದಲ್ಲಿ ಮಕರ ರಾಶಿಗೆ ಪ್ರವೇಶಿಸುವ ಕಾಲವೇ ಮಕರ ಸಂಕ್ರಾಂತಿ ಹಬ್ಬ. ಸಂಕ್ರಾಂತಿಯ ನಾಯಕ ಬೆಳಕು ನೀಡುವ ಸೂರ್ಯನಾದರೆ. ನಾಯಕಿ ಸಸ್ಯ ಬೆಳೆಯಲು ಅನುವು ಮಾಡುವ ಭೂಮಿತಾಯಿ. ಹಾಗೂ ವ್ಯವಸಾಯಕ್ಕೆ ಸಹಾಯ ಮಾಡುವ ದನಕರು. ಯಂತ್ರಗಳು ಪೋಷಕ ನಟರು. ಸಂಕ್ರಾಂತಿ ಹಬ್ಬದ ಹಿಂದಿನ ದಿನವೇ ಭೋಗಿ ಹಬ್ಬ, ಅಂದು ಹಳೆಯದನ್ನು ತೊರೆದು ಹೊಸದನ್ನು ಪಡೆದು ಸಂತೋಷಗೊಂಡು ಸಡಗರದಿಂದ ಮನೆಯನ್ನು ಶುದ್ದಿಗೊಳಿಸುವುದು. ಮನೆ ಮಂದಿ ಎಲ್ಲಾ ಎಳ್ಳು ಎಣ್ಣೆ ಸ್ನಾನ ಮಾಡಿ ನೂತನ ವಸ್ತ್ರಗಳನ್ನು ಧರಿಸುವುದು. ಅಂದು ಅಕ್ಕಿ ರೊಟ್ಟಿ, ಸಿಹಿ ಕುಂಬಳಕಾಯಿ ಪಲ್ಯ, ಮನೆ ಅವರೆಕಾಯಿ ಪಲ್ಯ ಭೋಜನದಲ್ಲಿ ಪ್ರಮುಖವಾಗಿರುವುದು.
ಸಂಕ್ರಾಂತಿ ಹಬ್ಬಕ್ಕೆ ಪ್ರತ್ಯೇಕವಾದ ಯಾವುದೇ ಪೂಜಾವಿಧಾನ ವ್ರತವಿಲ್ಲ. ಒಂದು ವಾರದಿಂದಲೇ ಮಹಿಳೆಯರು ಸಡಗರದಿಂದ ತಯಾರಿಸಿದ ಸಕ್ಕರೆ ಅಚ್ಚು, ಹುರಿದ ಬಿಳಿ ಎಳ್ಳು ,ಸಿಪ್ಪೆತೆಗೆದ ಕಡಲೇಕಾಯಿ ಬೀಜ, ಬೆಲ್ಲ ಕೊಬ್ಬರಿ, ಹುರಿಗಡಲೆ ಈ ಐದು ಸಾಮಗ್ರಿಗಳನ್ನು ಸರಿಯಾದ ಪ್ರಮಾಣದಲ್ಲಿ ಮಿಶ್ರಮಾಡಿ ದೇವರಿಗೆ ಕಬ್ಬು, ಬಾಳೆಹಣ್ಣುಗಳ ಜೊತೆ ನೈವೇದ್ಯ ಮಾಡುವರು ಹಾಗೂ ಹೊಸ ಧಾನ್ಯ , ಎಳ್ಳು, ಕುಂಬಳಕಾಯಿ, ಹತ್ತಿ ಸಜ್ಜೆ ,ವಸ್ತ್ರವನ್ನು ಪುರೋಹಿತರಿಗೆ ಕೊಟ್ಟು ನಮಸ್ಕಾರ ಮಾಡಿ ಅವರ ಅಶೀರ್ವಾದ ಪಡೆಯುತ್ತಾರೆ. ದನಕರುಗಳನ್ನು ವಿಶೇಷವಾಗಿ ಸಿಂಗರಿಸಿ ಮನೆಯಲ್ಲಿ ಮಾಡಿದ ವಿಶೇಷ ತಿನಿಸುಗಳನ್ನು ಅವುಗಳಿಗೆ ತಿನ್ನಿಸುತ್ತಾರೆ. ವೈಭವದ ಮೆರವಣಿಗೆಯಲ್ಲಿ ಅವುಗಳನ್ನು ಊರೆಲ್ಲಾ ತಿರುಗಾಡಿಸುತ್ತಾರೆ. ವರ್ಷವಿಡೀ ರೈತನೊಂದಿಗೆ ಬಿಡುವಿಲ್ಲದೆ ದುಡಿದ ಆ ಪ್ರಾಣಿಗಳಿಗೆ ಒಂದೆರಡು ದಿನಗಳು ವಿರಾಮವೂ ದೊರೆಯುತ್ತದೆ. ಈ ರೀತಿ ದನಕರುಗಳಿಗೂ ಗೌರವ ನೀಡುವರು. ಮನೆಯ ಹಿರಿಯರು (ತಂದೆ ಅಥವಾ ತಾಯಿ ಇಲ್ಲದವರು) ಪಿತೃದೇವತೆಗಳಿಗೆ ಪರ್ವಕಾಲದಲ್ಲಿ ಎಳ್ಳನಿಂದ ತರ್ಪಣ ನೀಡುವು ಅಂದಿನ ವಿಶೇಷ ಕಾರ್ಯಗಳಲ್ಲಿ ಒಂದು.
ಕೆಲವು ಪ್ರದೇಶಗಳಲ್ಲಿ ಪವಿತ್ರ ಸ್ಥಳಗಳಾದ ಪ್ರಯಾಗ, ಹರಿದ್ವಾರ್ , ಉಜ್ಜೈನಿ, ನಾಸಿಕ ಮೂದಲಾದೆಡೆಗಳಲ್ಲಿ ವಿಶೇಷ ಮೇಳಗಳು ನಡೆಯುತ್ತದೆ. 12 ವರುಷಕ್ಕೊಮ್ಮೆ ಬರುವ ಕುಂಭಮೇಳ ಹರಿದ್ವಾರದಲ್ಲಿ ನಡೆಯುತ್ತದೆ.
ಇತರ ಸ್ಥಳಗಳಲ್ಲಿ: ದೇವನೊಬ್ಬ ನಾಮಹಲವು ಎನ್ನುವಂತೆ ವಿವಿಧ ಹೆಸರುಗಳಿಂದ ಆಚರಿಸುವರು. ಪಂಜಾಬ್, ಹರಿಯಾಣದಲ್ಲಿ ಲೋಹರಿ ಎಂದು ,ಪಶ್ಚಿಮ ಬಂಗಾಳ ಅಸ್ಸಾಂನಲ್ಲಿ ಬೋಗಲಿ ಬಿಹು ಎಂದು , ಗುಜರಾತ್ , ರಾಜಸ್ಥಾನದಲ್ಲಿ ಉತ್ತರಾಯಣ್ ಎಂದು (ಇಲ್ಲಿ ಗಾಳಿಪಟ ಹಾರಿಸುವುದು ವಿಶೇಷ) ತಮಿಳ್ನಾಡಿನಲ್ಲಿ ಪೊಂಗಲ್ ಎಂದು (ಹೊಸ ಅಕ್ಕಿ ಊಟವನ್ನು ತಯರಿಸಿ ಧಾನ್ಯಪ್ಮಿಯನ್ನು ಪೂಜಿಸಿ ದೇವರ ಕೃಪೆಗೆ ಪಾತ್ರರಾಗುತ್ತಾರೆ. ಮನೆ ಮುಂದೆ ವರ್ಣರಂಜಿತ ಕೋವಲಂ ಎಂದರೆ ರಂಗೋಲಿ ಇಲ್ಲಿಯ ವಿಶೇಷ) ಕರ್ನಾಟಕ, ಆಂಧ್ರಪ್ರದೇಶ ಮಕರ ಸಂಕ್ರಾಂತಿ ಎಂದು, ಮಹಾರಾಷ್ಟ್ರಗಳಲ್ಲಿ ಕುಸುರಕಾಳ ಅಥವಾ ಎಳ್ಳು ಲಡ್ಡು ಹಂಚುವರು ಎಳ್ಳುಂಡೆ ಕೊಡುವಾಗ ತಪ್ಪದೆ 'ತಿಳ್ಳಳ್ ಘ್ಯಾ ಅಣಿ ಗೋಡ್ ಗೋಡ್ ಬೋಲ್' ಎನ್ನುವರು. ಕೇರಳದಲ್ಲಿ ಶಬರಿಮಲೆ ದೇವಸ್ಥಾನದಲ್ಲಿ ವಿಳುಕ್ಕ್ ಉತ್ಸವ ಮಾಡುವರು.
ಎಳ್ಳಿನ ವಿಶೇಷತೆ: ಸಂಕ್ರಾಂತಿಯ ಆಚರಣೆಯಲ್ಲಿ ಎಳ್ಳು ಬೆಲ್ಲದ ಸೇವನೆಯು ಆರೋಗ್ಯಕರವಾಗಿರುತ್ತದೆ. ಎಳ್ಳಿಗೆ ಶಾಖವನ್ನು ಮಾಡುವ ಶಕ್ತಿಯಿರುವುದರಿಂದಲೇ ಚಳಿಗಾಲದಲ್ಲಿ ಇದರ ಸೇವನೆ ಉತ್ತಮ. ಬರಿಯ ಎಳ್ಳು ಸೇವನೆಯು ಕಫ, ಪಿತ್ತ ರೋಗವೃದ್ದಿಗೆ ಕಾರಣವಾಗುವುದರಿಂದ ಎಳ್ಳಿನೊಡನೆ ಹುರಿದ ಕಡಲೆ ಬೀಜ ,ಕೊಬ್ಬರಿ, ಬೆಲ್ಲವನ್ನು ಸೇವಿಸಲಾಗುತ್ತದೆ. ಹಾಗೂ ಹವಾಮಾನದಲ್ಲಿ ನಿಧಾನವಾಗಿ ಉಷ್ಣತೆ ಹೆಚ್ಚುತ್ತಾ ಹೋಗುವುದರಿಂದ ಚಿಕ್ಕ ಮಕ್ಕಳ ಆರೋಗ್ಯದಲ್ಲಿ ಏರುಪೇರು ಮಾಡುತ್ತದೆ. ಹೃದಯದ ಬಡಿತ ಹಾಗೂ ರಕ್ತ ಚಲನೆ ಹೆಚ್ಚುತ್ತದೆ. ಇದನ್ನು ಹತೋಟಿಯಲ್ಲಿಡಲು ಬೋರೆ ಹಣ್ಣು ಔಷಧಿ ರೀತಿ ಕೆಲಸ ಮಾಡುತ್ತದೆ. ಜಡ್ಡು ಆಲಸ್ಯಗಳನ್ನು ದೂರ ಮಾಡುತ್ತದೆ.
ನಮ್ಮ ಹಿರಿಯರು ತುಂಬ ಬುದ್ದಿವಂತರು ಯವ ಋತುವಿನಲ್ಲಿ ಯಾವ ಯಾವ ಆಹಾರ ದೇಹಕ್ಕೆ ಅವಶ್ಯಕ ಎಂದು ಅರಿತು ಹಬ್ಬಹರಿದಿನಗಳ ಮೂಲಕ ಆರೋಗ್ಯದ ದೃಷ್ಟಿಯಿಂದ ವೈಜ್ಞಾನಿಕವಾಗಿಯೂ ಹಬ್ಬ ಆಚರಣೆ ಮಾಡುವುದರ ಹಿಂದಿನ ಗುಟ್ಟು. ನಮ್ಮ ಬಾಳಲ್ಲೂ ಕತ್ತಲೆ ಹೋಗಿ ಹೊಸ ಬೆಳಕು ಬರಲಿ ಎಂದು ಹರಸುವ.
ವೀಣಾ ಎಚ್.ಎಸ್. (ವೈಷ್ಣವಿ ) ಜೀವ ರಸಾಯನಶಾಸ್ತ್ರ ವಿಭಾಗ, ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಶಿವಮೊಗ್ಗ.