'ಕಡತೋಕ ಶೈಲಿ'ಯ ರೂವಾರಿ ಮಂಜುನಾಥ ಭಾಗವತರು ಇನ್ನಿಲ್ಲ

WD
ಐದು ದಶಕಗಳ ಕಾಲ ತಮ್ಮ ಕಂಠ ಸಿರಿಯಿಂದ ಯಕ್ಷಗಾನ ಪ್ರಿಯರನ್ನು ರಂಜಿಸಿದ್ದ, ಯಕ್ಷಗಾನದ ಪರಂಪರೆಯ ಕೊಂಡಿ, ತೆಂಕು-ಬಡಗು ತಿಟ್ಟುಗಳ ಸವ್ಯಸಾಚಿ ಕಡತೋಕ ಮಂಜುನಾಥ ಭಾಗವತರು ಸೋಮವಾರ ನಿಧನರಾಗಿದ್ದಾರೆ.

ಅವರಿಗೆ 85 ವರ್ಷ ವಯಸ್ಸಾಗಿತ್ತು. ತೆಂಕು ತಿಟ್ಟಿನ ಅಗ್ರಗಣ್ಯ ಮೇಳಗಳಲ್ಲೊಂದಾದ ಧರ್ಮಸ್ಥಳ ಮಂಜುನಾಥೇಶ್ವರ ಯಕ್ಷಗಾನ ಮಂಡಳಿಯೊಂದರಲ್ಲೇ 35 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿದ್ದ ಕಡತೋಕ ಭಾಗವತರು, ಕಡತೋಕ ಶೈಲಿಯನ್ನೇ ಹುಟ್ಟು ಹಾಕಿದವರು. ಮೂಲತಃ ಉತ್ತರ ಕನ್ನಡದ ಕುಮಟಾ ತಾಲೂಕಿನವರಾಗಿದ್ದ ಅವರು, ಕೆಲ ಕಾಲದಿಂದ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು.

22ನೇ ವಯಸ್ಸಿನಲ್ಲೇ ಯಕ್ಷಗಾನಕ್ಕೆ ಸಂಬಂಧಿಸಿದ 'ರಂಗಸ್ಥಳ' ಎಂಬ ನಿಯತಕಾಲಿಕವೊಂದನ್ನು ಸ್ಥಾಪಿಸಿದ್ದ ಅವರು, ಪಾರ್ತಿ ಸುಬ್ಬನ ಕೃತಿಗಳ ಹಾಡುಗಾರಿಕೆಯಲ್ಲಿ ನಿಪುಣರಾಗಿದ್ದರು. 1926ರಲ್ಲಿ ಜನಿಸಿದ್ದ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ, ಪಾರ್ತಿಸುಬ್ಬ ಪ್ರಶಸ್ತಿ ಮತ್ತು ಇತರ ಗೌರವಗಳು ದೊರೆತಿದ್ದವು.

ಧರ್ಮಸ್ಥಳ ಮಾತ್ರವಲ್ಲದೆ ಕರ್ಕಿ, ಕೊಳಗಿ, ಮೂರೂರು, ಮೂಲ್ಕಿ ಮೇಳಗಳಲ್ಲಿಯೂ ಸೇವೆ ಸಲ್ಲಿಸಿದ್ದರು. ಸಾಹಿತ್ಯಶುದ್ಧಿ, ಕಂಠ ಮಾಧುರ್ಯ, ಲಯ, ತಾಳ ಮತ್ತು ರಂಗ ಪೋಷಣೆಯಲ್ಲಿ ಎತ್ತಿದ ಕೈ.

ಅಧ್ಯಾಪಕರಾಗಿಯೂ ಸೇವೆ ಸಲ್ಲಿಸಿದ್ದ ಭಾಗವತರು, ಬಡಗಿನ ಅಭಿನಯ ಶೈಲಿಯನ್ನು ತೆಂಕು ತಿಟ್ಟಿಗೂ ಪರಿಚಯಿಸಿ, ಪ್ರಯೋಗ ಮಾಡಿದವರು. ಇಪ್ಪತ್ತಕ್ಕೂ ಹೆಚ್ಚು ಯಕ್ಷಗಾನ ಪ್ರಸಂಗಗಳನ್ನು, ಹಲವು ಲೇಖನಗಳನ್ನು ಬರೆದಿದ್ದಾರೆ.

ಕಡತೋಕ ಅವರ ನಿಧನದೊಂದಿಗೆ ಯಕ್ಷಗಾನದ ತೆಂಕು-ಬಡಗಿನ ವಿಶಿಷ್ಟವಾದ ಕೊಂಡಿಯೊಂದು ಕಳಚಿಕೊಂಡಂತಾಗಿದೆ.

ವೆಬ್ದುನಿಯಾವನ್ನು ಓದಿ