ಕುರಿಯ ವಿಠಲ ಶಾಸ್ತ್ರಿ ಆತ್ಮಕಥನ 10- ಮೇಳವನ್ನು ಉಳಿಸಿದ ಹರಕೆಯ ಆಟಗಳು

[ಕರಾವಳಿಯ ಅದ್ಭುತ ಕಲೆ ಯಕ್ಷಗಾನ ಕಂಡ ಮೇರು ಕಲಾವಿದ ದಿವಂಗತ ಕುರಿಯ ವಿಠಲ ಶಾಸ್ತ್ರಿಯವರ ಜನ್ಮಶತಮಾನ ವರ್ಷ (ಜನನ: 08-09-1912) ಹಿನ್ನೆಲೆಯಲ್ಲಿ ಅವರ ಪ.ಗೋ. ನಿರೂಪಿಸಿದ ಶಾಸ್ತ್ರಿಗಳ ಆತ್ಮ ಕಥನ "ಬಣ್ಣದ ಬದುಕು" ಪ್ರತೀ ಗುರುವಾರ ವೆಬ್‌ದುನಿಯಾದಲ್ಲಿ ಸರಣಿ ರೂಪದಲ್ಲಿ ಪ್ರಕಟವಾಗುತ್ತಿದೆ.- ಸಂ]

[ಕಳೆದ ವಾರದಿಂದ ಮುಂದುವರಿದುದು]

WD
'ಧರ್ಮಸ್ಥಳ ಮೇಳದ ಆಡಳಿತವೆಂದರೆ ಅಷ್ಟು ಸುಲಭವಾಗಿ ತೀರ್ಮಾನಿಸುವ ವಿಷಯವಲ್ಲ. ಸುಲಭದ ಮಾತೂ ಅಲ್ಲ. ತುಂಬಾ ವಿಚಾರ ಮಾಡಿ ನಿರ್ಧರಿಸಬೇಕಾದುದು' ಎಂದು ಸಿ. ಎಸ್. ಶಾಸ್ತ್ರಿಗಳು ನನ್ನ ಯೋಜನೆಯ ಬಗ್ಗೆ ತಿಳಿಸಿದರು.

ಒಂದೆರಡು ದಿನ ಕಳೆದು ಕಾಣಸಿಕ್ಕಿದ ಶ್ರೀ ರಾಮಕೃಷ್ಣಯ್ಯನವರಲ್ಲೂ ಅದೇ ಆಸೆಯನ್ನು ಪ್ರಸ್ತಾಪಿಸಿದಾಗ ಅವರು-

"ಯಾವುದಕ್ಕೂ ನೀವು ಸ್ಥಳಕ್ಕೆ ಬನ್ನಿ. ಅಲ್ಲಿ ಮಾತನಾಡಿ ನೋಡೋಣ" ಎಂದರು.

ಆ ಮಾತಿಗೆ ಅಣ್ಣನವರ ಒಪ್ಪಿಗೆಯೂ ಸಿಕ್ಕಿತು. ಹಾಗೆ ನಾವಿಬ್ಬರೂ ಧರ್ಮಸ್ಥಳಕ್ಕೆ ಹೋಗಿ ಶ್ರೀಮಾನ್ ಹೆಗ್ಗಡೆಯವರನ್ನು ಭೇಟಿಯಾದೆವು.

ನನ್ನ ಆಸೆಯನ್ನು ಶ್ರೀ ರಾಮಕೃಷ್ಣಯ್ಯನವರೇ ಶ್ರೀ ಹೆಗ್ಗಡೆಯವರೊಂದಿಗೆ ಅರುಹಿದರು.

ಅವರದು ಶೀಘ್ರ ನಿರ್ಧಾರದ ಕ್ರಮವೋ ಏನೋ ಎಂದು ನಾನು ಭಾವಿಸುವ ಹಾಗೆ-

"ಆಗಲಿ ಸಂತೋಷ" ಎಂದು ಅವರ ಅಪ್ಪಣೆ ಬಂದಿತು.

ಮೇಳಕ್ಕೆ ಬೇಕಾದ ವೇಷಭೂಷಣಗಳು ಯಾವುವೆಲ್ಲ ಅಗತ್ಯವಿದೆ ಎಂದು ಒಂದು ಪಟ್ಟಿ ತಯಾರಿಸಿ ಕೊಡಲೂ ಹೇಳಿದರು.

ಅವರಿಂದ ವಾಗ್ದಾನ ಪಡೆದು ಊರಿಗೆ ಬರುವಾಗಲೇ ಧರ್ಮಸ್ಥಳ ಮೇಳವನ್ನು ನಾನು ವಹಿಸಿಕೊಳ್ಳಲಿರುವ ಸುದ್ದಿ ಗಾಳಿಯಲ್ಲಿ ಹರಡತೊಡಗಿತ್ತು.

ಹೊಸಬನಾದ ನನ್ನ ಕೈಗೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿಯ ಆಡಳಿತವನ್ನು ವಹಿಸಿಕೊಟ್ಟರೆ ಶ್ರೀ ಕ್ಷೇತ್ರದ ಘನತೆಗೆ ಕುಂದು ಬರಬಹುದು ಎಂಬ ಮಾತನ್ನು ಶ್ರೀ ಹೆಗ್ಗಡೆಯವರಿಗೆ ತಲುಪಿಸಲೂ ಕೆಲವು ಮಂದಿ ಆಸಕ್ತರು ಮಾಡಿದ ಪ್ರಯತ್ನಗಳ ವಿಚಾರ ಇಲ್ಲಿ ಅನಗತ್ಯ. ಶ್ರೀ ಹೆಗ್ಗಡೆಯವರು ಆ ಮಾತುಗಳಿಗೆ ಬೆಲೆ ಕೊಡಲಿಲ್ಲ ಎಂಬುದೂ, ನಾನಾಗಿ ಬಣ್ಣದ ಬದುಕನ್ನು 21 ವರ್ಷಗಳ ಅನಂತರ ತೊರೆಯುವಂತಾಗುವವರೆಗೂ ಶ್ರೀ ಧರ್ಮಸ್ಥಳ ಮೇಳವನ್ನೇ ನಾನು ನಡೆಸುತ್ತಾ ಬಂದುದೂ, ಯಕ್ಷಗಾನ ಚರಿತ್ರೆಯ ಪುಟಗಳಲ್ಲಿ ಸೇರಿಹೋಗಿವೆ.

ನವೋದಯ
ಧರ್ಮಸ್ಥಳ ಮೇಳ ಶತಮಾನಗಳಷ್ಟು ಹಳೆಯದಾದರೂ, ಹೊಸ ಜನರು, ಹೊಸದಾದ ವೇಷಭೂಷಣಗಳು ಇವೆಲ್ಲವುಗಳಿಂದಾಗಿ ಪುನರುದಿತ ಯಕ್ಷಗಾನ ಮಂಡಳಿಯೇ ಆಗಬೇಕು ಎಂದಾಯಿತು.

ಭಾಗವತರು, ವೇಷಧಾರಿಗಳಿಂದ ಮೊದಲ್ಗೊಂಡು ಪೆಟ್ಟಿಗೆ ಹೊರುವ ಹುಡುಗರವರೆಗೂ ಎಲ್ಲರನ್ನೂ ಒಬ್ಬೊಬ್ಬರಾಗಿ ಕಂಡು ಮಾತನಾಡಿ, ಅವರ ನಿರ್ಣಯಗಳನ್ನು ತಿಳಿದುಕೊಂಡು ಬಂದೆ. ಒಪ್ಪಿಸಿಕೊಂಡೆ.

ನನ್ನ ಮಟ್ಟಿಗೆ ಎಲ್ಲರೂ ಹೊಸಬರೇ. ಹಳಬನಾಗಿ ಉಳಿದವನು ಶ್ರೀ ಕ್ಷೇತ್ರದಿಂದ ಮೇಳದ ತಿರುಗಾಟಕ್ಕೆ ಬರುವ ಆ ಮಹಾಗಣಪತಿಯೊಬ್ಬನೇ.

ಆಡುಂಬೊಲದ ಅಗತ್ಯ.....
WD
ಕಾರ್ತೀಕ ಬಹುಳ ಅಮಾವಾಸ್ಯೆಯ ದಿನ ಶ್ರೀ ಧರ್ಮಸ್ಥಳದಲ್ಲಿ ದೀಪೋತ್ಸವ.

ಮರುದಿನ ಶ್ರೀ ಮಂಜುನಾಥ ಸ್ವಾಮಿಯ ಸನ್ನಿಧಿಯಲ್ಲಿ ಸೇವೆ ಸಲ್ಲಿಸಿ, ನನ್ನ ಜೀವನದ ಹೊಸ ವಿಭಾಗವೊಂದನ್ನು ಪ್ರಾರಂಭಿಸಿದೆ.

ತಿರುಗಾಟವನ್ನು ಪ್ರಾರಂಭಿಸಿದ ತರುಣದಲ್ಲಿಯೇ ಅಲ್ಲಲ್ಲಿ ಆಶ್ರಯ ಪಡೆದು, ಬಿಡುಆಟಗಳನ್ನು ಆಡುವ ಅವ್ಯವಸ್ಥೆಯ ಸಮಸ್ಯೆಯ ಕಡೆಗೆ ನನ್ನ ಗಮನ ಹರಿಯಿತು.

ಹೊಸ ಪ್ರಯತ್ನಗಳಿಗೆ ಹೇಗೂ ಅವಕಾಶ ಸಿಕ್ಕಿದೆ. ಪ್ರಾರಂಭ ದೆಸೆಯಲ್ಲೇ ಮಾಡಿ ನೋಡಿದರೆ, ಒಂದು ವೇಳೆ, ವಿಫಲವಾದರೂ ಅಷ್ಟೊಂದು ಬಿಸಿ ತಟ್ಟುವುದಿಲ್ಲ ಎಂದೇ ನಂಬಿ, ಒಂದೆರಡು ಊರುಗಳಲ್ಲಾದರೂ 'ಥಿಯೇಟರ್' ಕಟ್ಟಿಸಿ ಆಟಗಳಿಗೆ ಪ್ರವೇಶಧನವಿಟ್ಟು ಆಡಿ ನೋಡಬೇಕು ಎಂದು ತೀರ್ಮಾನಿಸಿದೆ.

ನಾಟಕ ಶಾಲೆಗಳಂತೆ ಇರುವ ತಾತ್ಕಾಲಿಕ ಕಟ್ಟಡಗಳ ನಿರ್ಮಾಣಕ್ಕೆ ತುಂಬಾ ವೆಚ್ಚ ತಗಲುತ್ತಿತ್ತು. ಆದ್ದರಿಂದ ಒಂದು ಆವರಣವನ್ನು ಮಾತ್ರ ಎತ್ತರಕ್ಕೆ ರಚಿಸಿಕೊಂಡು ತಕ್ಕ ಆಸನ ವ್ಯವಸ್ಥೆಯನ್ನು- ಕುರ್ಚಿ, ಈಸೀಚೆರ್‌ಗಳನ್ನು ಬಾಡಿಗೆಗೆ ತಂದು- ಮಾಡಿಕೊಂಡರಾಗಬಹುದು ಎಂದು ಯೋಚಿಸಿ, ಮೂಡುಬಿದರೆಯಲ್ಲಿ ಮುಂದಿನ ಕ್ಯಾಂಪಿಗಾಗಿ ವ್ಯವಸ್ಥೆ ಮಾಡಿದೆ.

ಧರ್ಮಸ್ಥಳದಿಂದ ಹೊರಟ ಅನಂತರದ ಕೆಲವು ದಿನಗಳವರೆಗೆ ಆಹ್ವಾನದ ಆಟಗಳು ಇದ್ದುದನ್ನು ಮುಗಿಸಿಕೊಂಡು, ಮುಂದೆ ದಕ್ಷಿಣದ ಜೈನ ಕಾಶಿಯಾದ ಮೂಡಬಿದರೆಗೆ ಬಂದು ತಳವೂರಿದೆ.

ಅಲ್ಲಿಂದ ಮುಂದೆ ಫಲಿಮಾರಿನ ಕ್ಯಾಂಪ್ ಇತ್ತು.

ಅವೆರಡೂ ಸ್ಥಳಗಳಲ್ಲಿ ಸುಮಾರು ಎರಡುವರೆ ತಿಂಗಳುಗಳ ಕಾಲವನ್ನು ಸುಲಭವಾಗಿ ನೂಕಿದೆವು. ಜನರಿಂದ ಸಾಕಷ್ಟು ಪ್ರೋತ್ಸಾಹವೂ ದೊರೆಯಿತು. ಪ್ರತಿದಿನವೂ ಬಿಡಾರ ಕೀಳುವ ಪರಿಸ್ಥಿತಿಯಿಲ್ಲವಾದ ಕಾರಣ- ಸಾಗಾಟದ ವೆಚ್ಟವೂ ಇರಲಿಲ್ಲ. ಆದುದರಿಂದ ಆರ್ಥಿಕ ಸ್ಥಿತಿ ಅಷ್ಟೊಂದು ತ್ರಾಸದಾಯಕವಾಗಲಿಲ್ಲ.

ಕ್ಷೇತ್ರದ ಮಹಿಮೆ
ಧರ್ಮಸ್ಥಳದ ಮೇಳಕ್ಕೆ- ಇತರ ಮೇಳಗಳಿಂದ ಹೆಚ್ಚು- ಹರಕೆಯ ಆಟಗಳು ಸಿಗುತ್ತವೆ. ಕ್ಷೇತ್ರದ ಮಹಿಮೆಯನ್ನು ನಂಬಿರುವ ಜನ, ತಾವು ಬಯಸಿದ ಕೆಲಸ ಕೈಗೂಡಿದರೆ ಧರ್ಮಸ್ಥಳ ಮೇಳದ ಒಂದು ಆಟವನ್ನು ಆಡಿಸುವ ಹರಕೆ ಹೊತ್ತುಕೊಳ್ಳುತ್ತಾರೆ. ಕೆಲವು ಕಡೆಗಳಲ್ಲಿ ಪ್ರತಿವರ್ಷವೂ ಆಟವಾಡಿಸುವ ಹರಕೆಗಳು ಇದ್ದು ಇಂದಿಗೂ ಅದೇ ಕ್ರಮವನ್ನು ಅವರು ಅನುಸರಿಸುವರು.

ಹಾಗೆ ಹರಕೆಯ ಆಟಗಳೂ ನಮಗೆ ದೊರೆತು, ವೀಳ್ಯದ ಕರೆಗಳೂ ಬಂದು ಪತ್ತನಾಜೆಯವರೆಗೂ ನಮ್ಮ ದಿನ ಕಳೆಯಿತು. ತಿರುಗಿ 'ಥಿಯೇಟರ್' ಕಟ್ಟಿಸಬೇಕಾದ ಶ್ರಮ ಆ ವರ್ಷ ಅಗತ್ಯವಾಗಲಿಲ್ಲ.

ಪತ್ತನಾಜೆಯ ಸೇವೆಯನ್ನು ಶ್ರೀ ಧರ್ಮಸ್ಥಳದಲ್ಲಿ ಮುಗಿಸಿ, ಮೇಳವನ್ನು ಶ್ರೀ ಹೆಗ್ಗಡೆಯವರಿಗೆ ಒಪ್ಪಿಸಿಕೊಟ್ಟು ಬಂದಾಗ, ಮೇಳಗಳು ಸ್ವತಂತ್ರವಾಗಿ ತಮಗೆ ಅನುಕೂಲವಾಗುವ ರೀತಿಯಲ್ಲಿ ಆಟಗಳನ್ನು ಆಡುತ್ತಾ ಹೋಗಬೇಕಾದರೆ, ಪ್ರದರ್ಶನ ಸ್ಥಳವನ್ನು ಅಳವಡಿಸಿಕೊಳ್ಳುವ ಅನುಕೂಲ ಅವರಿಗಿರಬೇಕು. ಸಂಚಾರಿ ನಾಟಕ ಶಾಲೆಗಳಂತೆ, ಅವುಗಳನ್ನು ಸಾಗಿಸುವ ಸಾರಿಗೆಯ ಅನುಕೂಲವೂ ಬೇಕು ಎಂಬುದನ್ನು ಸ್ವಂತ ಅನುಭವದಿಂದ ಅರಿತುಕೊಂಡೆ.

ಆಟವನ್ನು ಪುಕ್ಕಟೆಯಾಗಿಯೇ ನೋಡಬೇಕೆಂದು ಜನರು ಬಯಸುತ್ತಿಲ್ಲ. ತಕ್ಕ ಮನರಂಜನೆಯನ್ನು ಒದಗಿಸುವ ಭರವಸೆ ಇತ್ತರೆ, ಪ್ರತಿಫಲ ತೆರಲೂ ಸಿದ್ಧರಿದ್ದಾರೆ ಎಂಬ ವಿಚಾರವೂ ತಲೆಯಲ್ಲಿ ಸುಳಿದಿತ್ತು.

ಆದರೆ ಆಟಕ್ಕಾಗಿ, 'ಟೆಂಟ್' ಒದಗಿಸಿಕೊಳ್ಳುವುದು ಸುಲಭದ ಮಾತಲ್ಲವಲ್ಲ? ಅದಕ್ಕಾಗಿ ಸುರಿಯಬೇಕಾದ ಮೊತ್ತವನ್ನು ಒದಗಿಸುವುದಾದರೂ ಹೇಗೆ? ಎಂಬ ಪ್ರಶ್ನೆಗಳು ಮುಂದೆ ಬಂದು ನಿಂತವು.

ಆ ವರ್ಷ ಮೇಳಗಳ ಸಂಖ್ಯೆ ಹೆಚ್ಚಾಗಿತ್ತು. ವೇಷಧಾರಿಗಳೆನಿಸಿಕೊಂಡವರ ಬೇಡಿಕೆ ಹೆಚ್ಚಿತ್ತು. ಅದುವಲ್ಲದೆ, ಈಗಾಗಲೇ ವೃತ್ತಿಪರ ವೇಷಧಾರಿಗಳು ಎನಿಸಿಕೊಂಡವರನ್ನು ಕರೆದುಕೊಂಡರೆ, ನನಗೆ ಬೇಕಾದ ರೀತಿಯ ಕೆಲಸ ನಿರ್ವಹಿಸಲು ಅವರು ಒಪ್ಪಲಾರರು ಎಂಬ ಅನುಭವವೇ ಆಗಿತ್ತು.

ಸ್ವಂತ ತಂಡ
ನಮ್ಮದೇ ಆದ ಒಂದು ತಂಡವನ್ನು ತಯಾರಿಸಬೇಕು. ಆಸಕ್ತಿ ಇರುವವರನ್ನು ಒಟ್ಟುಗೂಡಿಸಿ, ಅವರಿಗೆ ತರಬೇತಿ ಕೊಟ್ಟರೆ, ನಿರೀಕ್ಷೆಯಂತೆ ಕಲಾಪ್ರದರ್ಶನ ಮಾಡಬಹುದು ಎಂದು ಯೋಚಿಸಿದೆ.

ಆ ಯೋಚನೆಯನ್ನು ಕಾರ್ಯರೂಪಕ್ಕೆ ಇಳಿಸಬೇಕಾದರೆ ಟೆಂಟಿನ ಯೋಜನೆಯಂತೆ ಏಕಗಂಟಿನಿಂದ ಹಣ ಸುರಿಯುವುದನ್ನು ಕುರಿತು ಯೋಚಿಸಿ ಕಂಗೆಡಬೇಕಾಗಿರಲಿಲ್ಲ.

ಅದೇ ಮಳೆಗಾಲದಲ್ಲಿ-

ವೇಷಧಾರಿಗಳಾಗಬಹುದಾದ ಸುಮಾರು 15 ಮಂದಿ ಹುಡುಗರನ್ನು ಕಲೆಹಾಕಿದೆ. ನಮ್ಮ ಮನೆಯಲ್ಲೇ ಅವರ ಊಟೋಪಚಾರಗಳ ವ್ಯವಸ್ಥೆಯಾಯಿತು.

ಹಗಲು ಹೊತ್ತಿನಲ್ಲಿ ಅವರಿಗೆ ಯಕ್ಷಗಾನದ ನಾಟ್ಯಾಭ್ಯಾಸವಾಯಿತು. ರಾತ್ರಿ 2 ಗಂಟೆಯವರೆಗೆ ಕಥಾ ಪ್ರಸಂಗಗಳ ಪುಸ್ತಕಗಳನ್ನು ಹಿಡಿದುಕೊಂಡು ಬೇರೆಬೇರೆ ಕಥೆಗಳ ಅಭ್ಯಾಸ ನಡೆಯಿತು.

ಒಬ್ಬೊಬ್ಬರಿಗೇ ಬೇರೆಬೇರೆ ಪಾತ್ರಗಳನ್ನು ಹಂಚಿಕೊಟ್ಟು ನೋಡುವುದೂ, ಮಾತುಗಳಲ್ಲಿ ರಸಪೋಷಣೆಯಾಗುವಂತೆ ಪ್ರಯತ್ನಿಸುವುದೂ ನಡೆದಿತ್ತು. ಅದರೊಂದಿಗೇ 'ಕಾಲು ಬಲ'ವಿದ್ದವರೂ, 'ನಾಲಿಗೆಯಲ್ಲಿ ಮುಂದೆ' ಎಂದಾದವರೂ, ಅವೆರಡಕ್ಕೂ ಸಮಾನವಾಗಿ ಗಮನ ಹರಿಸುವವರೂ ಯಾರೆಂದು ತಿಳಿದುಕೊಳ್ಳುವ ಕೆಲಸವೂ ಆಗುತ್ತಿತ್ತು.

ಯಕ್ಷಗಾನದಲ್ಲಿ ನಾಟಕದಂತೆ ಸಂಭಾಷಣೆಗಳನ್ನು ಉರು ಹೊಡೆಯುವ ಕೆಲಸ ಅಗತ್ಯ ಬೀಳುವುದಿಲ್ಲ. ಪ್ರಸಂಗದ 'ಪದ'ಗಳನ್ನು ನೆನಪಿಟ್ಟರೆ ಸಾಕಾಗುತ್ತದೆ. ಅರ್ಥಕ್ಕೆ ಅಗತ್ಯವಾದ ಮಾತುಗಳನ್ನು ಸ್ವಯಂ ವಾಕ್ಯರಚನೆಯಿಂದಲೇ ಹೇಳುತ್ತಾ ಹೋದರೆ ಭಾವನಾ ವಿಕಾಸಕ್ಕೆ ಅವಕಾಶ ದೊರೆಯುತ್ತದೆ ಎಂಬ ವಿಷಯವನ್ನೂ ಅವರ ತಲೆಗೆ ತುರುಕಲು ಪ್ರಯತ್ನ ನಡೆದಿತ್ತು.

ಮಳೆಗಾಲದಲ್ಲೇ ಒಂದು ದಿನ, ಧರ್ಮಸ್ಥಳಕ್ಕೆ ಹೋಗಿದ್ದಾಗ, ಕಲಾವಿದರ ತಂಡವೊಂದು ನಮ್ಮಲ್ಲಿ ಸಿದ್ಧವಾಗುತ್ತಲಿರುವ ವಿಷಯವನ್ನು ಶ್ರೀ ಹೆಗ್ಗಡೆಯವರಲ್ಲಿ ಪ್ರಸ್ತಾಪಿಸಿದೆ. ಆ ಸುದ್ದಿಯನ್ನು ಕೇಳಿ ಅವರು ಸಂತೋಷ ವ್ಯಕ್ತಪಡಿಸಿದರಲ್ಲದೆ "ನಮ್ಮದೇ ಆದ ಒಂದು ಮೇಳ ಈ ರೀತಿಯಲ್ಲಿ ಹೊಸ ಕಲಾವಿದರನ್ನು ನಾವೇ ತಯಾರಿಸಿದರೆ ಸುಲಭವಾಗಿಯೇ ಆಗಬಹುದು. ಒಂದು ಅರ್ಧ ಮೇಳವನ್ನು ತಯಾರಿಸುವ ಈ ಯೋಜನೆ ಎಲ್ಲ ರೀತಿಯಿಂದಲೂ ಉತ್ತಮವಾಗಿದೆ" ಎಂದು ಆಶೀರ್ವದಿಸಿದರು.

ಮುಂದಿನ ವರ್ಷದ ತಿರುಗಾಟಕ್ಕೆ ಅತ್ಯುತ್ತಮವಾದ ವೇಷ- ಭೂಷಣಗಳನ್ನೇ ಹೊಸದಾಗಿ ಸಿದ್ಧಗೊಳಿಸಲು ವ್ಯವಸ್ಥೆ ಮಾಡಿ ಪ್ರೋತ್ಸಾಹಿಸಿದರು.

ಆ ವರ್ಷ ಯಾವ ತೊಂದರೆಯೂ ಇಲ್ಲದೆ ತಿರುಗಾಟ ಯಶಸ್ವಿಯಾಗಿಯೇ ನೆರವೇರಿತು.

ಸತತ ಅಭ್ಯಾಸ
ಮತ್ತೇನು ಹೊಸದಿದ್ದರೂ ಮಳೆಗಾಲದಲ್ಲಿ ಮನೆಗೆ ಬಂದಾಗ- ಯೋಚನೆಯಾಗಬೇಕಷ್ಟೆ.

ಕೆಲವೊಂದು ಕಥಾ ಪ್ರಸಂಗಗಳಲ್ಲಿ ನೃತ್ಯವನ್ನೇ ಸಂಪೂರ್ಣವಾಗಿ ತೋರಿಸಬೇಕಾದ ಸಂದರ್ಭಗಳಲ್ಲಿ (ಉದಾ: ಮೋಹಿನಿ-ಭಸ್ಮಾಸುರ), ಭರತನಾಟ್ಯ- ಕಥಕ್ಕಳಿಗಳ ಕೆಲವು ಮುದ್ರೆಗಳನ್ನೂ ಉಪಯೋಗಿಸಿದರೆ ಕಳೆಗಟ್ಟಬಹುದು ಎಂದು ಯೋಚಿಸಿದೆ. ಕೇರಳ ಕಲಾಮಂಡಲದ ಸಂಪರ್ಕವಿದ್ದ ನೃತ್ಯಶಿಕ್ಷಕ ಶ್ರೀ ಪರಮಶಿವಮ್ ಎಂಬವರನ್ನು ಕೊಚ್ಚಿಯಿಂದ ಕರೆತರಿಸಿ, ಮನೆಯಲ್ಲೇ ನಾನೂ ನನ್ನ ಶಿಷ್ಯರೂ ಅಭ್ಯಾಸ ಮಾಡಿದೆವು. ಮಳೆಗಾಲವೆಲ್ಲ ನಮ್ಮ ಮನೆ ನಾಟ್ಯಮಂದಿರವೇ ಆಗಿತ್ತು.

ಮಳೆಗಾಲದ ತರುವಾಯದ ತಿರುಗಾಟದಲ್ಲಿ ಕಲಿತು ತಂದುದನ್ನೂ ಉಪಯೋಗಿಸಿ ನೋಡಿದೆ. ಜನರು ಮೆಚ್ಚುವ ಸೂಚನೆಯೇ ಕಂಡುಬಂತು. ಯಕ್ಷಗಾನದಲ್ಲಿ ನೃತ್ಯದ ಸೆಳವು ಹೆಚ್ಚು. ನೃತ್ಯದ ಕಡೆಗೆ ಜನರ ಒಲವೂ ಇದೆ- ಎಂಬುದನ್ನು ತಿಳಿದುಕೊಂಡು, ನರ್ತನ ವೈಶಿಷ್ಟ್ಯಗಳ ಪ್ರಯೋಗವನ್ನೇ ಮಾಡಬೇಕು ಎಂದುಕೊಂಡೆ.

ಕೆಲವೊಂದು ವರ್ಷಗಳ ನಂತರ, ತಿರುಗಿ ಮೂಡಬಿದರೆಯಲ್ಲೇ ಒಂದು ಥಿಯೇಟರ್‌ನ ಕ್ಯಾಂಪ್ ಮಾಡಬೇಕೆನ್ನಿಸಿ, ವ್ಯವಸ್ಥೆ ಮಾಡಿ ಆಡತೊಡಗಿದೆ.

ಅಲ್ಲಿ-

ನಾನು ಅಭ್ಯಾಸ ಮಾಡಿದ್ದ ಶಿವತಾಂಡವ ನೃತ್ಯವನ್ನು ಪ್ರದರ್ಶಿಸಿಯೇ ತೀರಬೇಕೆಂಬ ಒತ್ತಾಯ ಒಂದು ದಿನ ಪ್ರೇಕ್ಷಕ ವರ್ಗದಿಂದ ಬಂದಿತು. ಆಗ ನಾವು "ದಕ್ಷಯಜ್ಞ"ವನ್ನು ಆಡುವ ಕಾರ್ಯಕ್ರಮವಿರಿಸಿಕೊಂಡಿದ್ದೆವು.

ಜನರ ಒತ್ತಾಯದಿಂದ ಕಥೆಗೆ ಹೊರತಾಗಿಯೇ ತಾಂಡವನೃತ್ಯವನ್ನು ಪೂರೈಸಿದೆನಾದರೂ, ತಾಂಡವವನ್ನು ಆಡುವ ಭಾಗವೂ ಇರುವ ಕಥೆ ಇದ್ದರೆ ಚೆನ್ನಿತ್ತು ಎನಿಸಿತು.

ನೃತ್ಯ ವೈಭವ
ದಕ್ಷಯಜ್ಞದ ಕಥಾ ಭಾಗದಲ್ಲಿ ಆ ಅವಕಾಶವಿರಲಿಲ್ಲ.

ದಾಕ್ಷಾಯಿಣಿಯ ಮರಣ ವಾರ್ತೆಯನ್ನು ಕೇಳಿದ ಶಿವನು ಕೋಪೋದ್ರಿಕ್ತನಾಗಿ ತನ್ನ ಜಟೆಯನ್ನು ನೆಲಕ್ಕೆ ಅಪ್ಪಳಿಸಿ ವೀರಭದ್ರನನ್ನು ಸೃಷ್ಟಿಸುವ ಸನ್ನಿವೇಶವೊಂದಿದೆ.

ಆಗ, ಆವೇಶದ ವೇಷವನ್ನು ವೀರಭದ್ರನಾದವನು ಪ್ರೇಕ್ಷಕರಿಗೆ ಪರಿಚಯ ಮಾಡಿಕೊಡುವ ಒಂದು ಕ್ರಮವೂ ವೈಶಿಷ್ಟ್ಯಪೂರ್ಣವಾದುದು. ಶಿವನ ಪಾತ್ರಧಾರಿ, ಆ ಹೊತ್ತಿನಲ್ಲಿ ರಂಗಸ್ಥಳದಲ್ಲೇ ಇರಬೇಕು. ಆದರೆ ಸ್ತಬ್ಧನಾಗಿ ನಿಂತಿದ್ದು ಮೂಕಪ್ರೇಕ್ಷಕನಾಗಿ ನಿಲ್ಲುವುದೇ ಅದುವರೆಗಿನ 'ದಕ್ಷಯಜ್ಞ'ಗಳ ವಾಡಿಕೆಯಾಗಿತ್ತು.

ನಾನು ವಾಡಿಕೆಯನ್ನು ಮುರಿದಿದ್ದೆ. ವೀರಭದ್ರನ ವೇಷಧರಿಸಿದ ಶ್ರೀ (ಬಣ್ಣದ) ಮಾಲಿಂಗನವರು ಸಂಪ್ರದಾಯದ ಪೂರ್ಣನೃತ್ಯದ ವೈಭವವನ್ನು ಜನರಿಗೆ ತೋರಿಸುತ್ತಿದ್ದಂತೆಯೇ, ನಾನೂ ನನ್ನ ಕೆಲಸ ಮಾಡುತ್ತಿದ್ದೆ.

ತನಗಾದ ಅಪಮಾನದ ಸೇಡನ್ನು ತೀರಿಸುವ, ನಿರ್ದಿಷ್ಟ ಕಾರ್ಯಕ್ಕಾಗಿ ಜನಿಸಿದ ಮಗನ ಜನನದಿಂದ, ಶಿವನಿಗಾದ ಆನಂದ- ಅವನಲ್ಲಿ ಇರಿಸಿಕೊಂಡ ನಿರೀಕ್ಷೆಗಳನ್ನು ಮನೋಭಾವಗಳನ್ನು ನೃತ್ಯದಲ್ಲೇ ಪ್ರದರ್ಶಿಸುತ್ತಾ ಆಗಾಗ ಮಾಲಿಂಗನವರಿಂದ ಪ್ರತಿಕ್ರಿಯೆಗಳ ಪ್ರದರ್ಶನ ಮಾಡಿಸಿಕೊಳ್ಳುತ್ತಿದ್ದೆ.

ಹೆಚ್ಚಾಗಿ, ಈ ಪ್ರವೇಶ ನೃತ್ಯವೇ ಅರ್ಧಗಂಟೆಯ ಕಾಲ ನಡೆಯುತ್ತಿತ್ತು. ಸ್ಫೂರ್ತಿಯುತ ವಾತಾವರಣ, ಹಿಮ್ಮೇಳದ ಪೂರ್ಣ ಸಹಕಾರವೇ ಅದಕ್ಕೆ ಮಿತಿ ಎನಿಸಿತ್ತು. ತುಂಬಿದ ಸಭೆ ಇದ್ದರೆ, ಅದು ಮತ್ತೂ ಕಳೆಗಟ್ಟುತ್ತಿತ್ತು. ನೃತ್ಯಗತಿಯ ವಿವಿಧ ಪ್ರಾಕಾರಗಳು ತನ್ನಿಂದ ತಾನೇ ಮುಂದುವರಿಯುವಷ್ಟರ ಮಟ್ಟಿಗೂ ಅದು ಅಭ್ಯಾಸವಾಗಿ ಹೋಗಿತ್ತು. ತಲೆಯಲ್ಲಿ ಬೇರೆ ಏನಾದರೂ ಯೋಚನೆ ಬಂದರೂ ತೊಡಕಾಗುತ್ತಿರಲಿಲ್ಲ.

ಅಂದು ಕೂಡಾ-

ವೀರಭದ್ರ ಬಂದಿದ್ದ. ಕುಣಿಯುತ್ತಲಿದ್ದ ನಾನು ಭೈರವಿ-ಅಷ್ಟತಾಳದ "ಕೊಲ್ಲು ಆ ದಕ್ಷಗಿಕ್ಷಾದ್ಯರ" ಎಂಬ ಪದ್ಯಕ್ಕೆ ಕುಣಿದು, ರೌದ್ರರಸವನ್ನು ಚೆಲ್ಲುತ್ತಿದ್ದಂತೆ ಕಾಣಿಸಿಕೊಂಡಿದ್ದಾಗ.... ಇಂತಹದೇ ರಸಪೂರ್ಣ ಕಥಾಭಾಗವು ತುರಂಗಭಾರತದಲ್ಲೊಂದು ಕಡೆ ಇರುವ ವಿಚಾರ ನೆನಪು ಆಯಿತು.

ಐದು ತಲೆಗಳಿದ್ದ ಬ್ರಹ್ಮನ ಒಂದು ತಲೆಯನ್ನು ಚಿವುಟಿ ತೆಗೆದ ಈಶ್ವರನು, ಕೈಗೆ ಆ ಕಪಾಲವನ್ನು ಕಚ್ಚಿಸಿಕೊಂಡು, ಕೈಲಾಸದ ಅಧಿಪತಿಯಾಗಿಯೂ ಬೀದಿಯ ಭಿಕಾರಿಯಾಗಿಯೂ ಕುಣಿದ ಕಥಾ ಸಂದರ್ಭ ನೆನಪಿಗೆ ಬಂತು.

'ಇದೇ ನನಗೆ ಬೇಕು!'

'ಪ್ರಸಂಗ ರಚನೆ ಆ ಕಥೆಯಲ್ಲಿ ಆಗಿಲ್ಲ.'

'ಆಗದಿದ್ದರೆ ಮಾಡಿಸೋಣ!'

ಯೋಚನೆಯ ತಾಳಕ್ಕೆ ಮುಕ್ತಾಯ ಹಾಕಿದೆ. ಕಥೆಯ ಮುಂದಿನ ಓಟದ ಕಡೆಗೆ ಗಮನ ಕೊಟ್ಟೆ.

ಮುಂಜಾನೆಯೇ ಮತ್ತೆ ಅದರ ಯೋಚನೆ. ಬಿಡದಿಯಲ್ಲಿ ಮಲಗಿದ್ದಂತೆ, ಈ ಕಪಾಲದ ಕಥೆಯನ್ನು ಆಡಬೇಕು. ಪ್ರಸಂಗವನ್ನು ಬರೆಸಲೇಬೇಕು ಎಂದು ತೀರ್ಮಾನಿಸಿದೆ.

ಹೊಸ ಪ್ರಸಂಗಗಳನ್ನು ರಚಿಸುವ ಆಸಕ್ತಿ ಇದ್ದ ಮಹನೀಯರೆಲ್ಲ ಮೂಲೆಗೇ ಉಳಿದಿದ್ದರು. ತಮ್ಮ ಸಂತೋಷಕ್ಕಷ್ಟೇ ಬರೆದು ಇರಿಸಿದ ಕೆಲವು ಪ್ರಸಂಗಗಳ ಕರ್ತೃಗಳು, ಅವುಗಳನ್ನು ತಮ್ಮಲ್ಲೇ ಭದ್ರವಾಗಿ ಇರಿಸಿಕೊಂಡಿದ್ದರು.

ಯಾವ ರೀತಿಯಲ್ಲೂ ಪ್ರಯೋಜನ ಕೊಡದ ಆ ಒಂದು ವಿದ್ಯೆಯನ್ನು ನೆಚ್ಚಿ ಬಾಳುವುದಾದರೂ ಹೇಗೆ? ಇದ್ದರೆ ಇರುತ್ತವೆ- ಮಸಿಯಿಂದ ಕಪ್ಪಾದ ಕೆಲವು ಕಾಗದಗಳು ಎಂಬಷ್ಟು ಉಪೇಕ್ಷೆಯೂ ಅವರಿಗೆ ಇತ್ತು.

ನನಗಾಗಿ ಈ ಕಥೆಯ ಪ್ರಸಂಗವನ್ನು ರಚಿಸಿ ಕೊಡುವವರು ಯಾರು?

ಆಗ ನಮ್ಮ ಸಮೀಪದಲ್ಲೇ ಇದ್ದ 'ಹಿತ್ತಲ ಗಿಡ' ಒಬ್ಬರ ನೆನಪು ಬಂತು.

ಕಾಸರಗೋಡು ತಾಲೂಕಿನ ಚಿಪ್ಪಾರು ಗ್ರಾಮದ ಕಜೆ ಎಂಬ ಹಳ್ಳಿ ಮೂಲೆಯಲ್ಲಿ ಶ್ರೀ ವೆಂಕಟರಮಣ ಭಟ್ಟ ಎಂಬವರು ಒಬ್ಬರು ಇದ್ದರು. ಅತ್ತಿತ್ತಣ ಹಳ್ಳಿಗಳಲ್ಲೆಲ್ಲ ಅವರನ್ನು ತಿಳಿದವರು ಬಹಳ ಮಂದಿ. ಅವರು ಆಶುಕವಿ. ಆದರೆ ಅವರನ್ನು ಮಾಸ್ತರ್ ಭಟ್ಟರೆಂದೇ ಎಲ್ಲರೂ ಹೇಳುತ್ತಿದ್ದ ಕಾರಣ, ಅವರ ನಿಜವಾದ ಹೆಸರೇ ಹೆಚ್ಚಿನವರಿಗೆ ಮರೆತುಹೋಗಿತ್ತು.

ಪ್ರತಿಭಾವಂತ ಕವಿ
ವಾಗ್ದೇವಿ ಅವರಿಗೆ ಒಲಿದು ಬಂದವಳು. ಅವರ ಬಡತನದ ಪರಿಣಾಮವಾಗಿ ಅವರನ್ನಾಡಿಕೊಂಡವರು ಎಷ್ಟೋ ಮಂದಿ.

ಅವರ ಶಬ್ದ ಭಂಡಾರ ಯಾವ ಕ್ರಮದಿಂದ ಬೆಳೆದಿತ್ತೋ ನಾನರಿಯೆ. ನಿರರ್ಗಳವಾಗಿ ಹರಿದು ಬರುವ ಕವಿತಾ ಪ್ರವಾಹಕ್ಕೆ ಅವರು ಸೆಲೆಯಾಗಿದ್ದರು. ಸಣ್ಣ ಮಗುವೊಂದು ಬಂದು ಮಾತನಾಡಿಸಿ ಕೇಳಿದರೂ, ಆ ಮಗುವಿಗೆ ಬೇಕಾದ ಕವಿತೆಯನ್ನು ಅಲ್ಲೇ ರಚಿಸಿ ಕೊಡುತ್ತಿದ್ದರು. ದೊಡ್ಡವರು ಹೇಳಿದರೂ ಹಾಗೆಯೇ. ಮತ್ತೇಭವಿಕ್ರೀಡಿತ ವೃತ್ತವಾಗಲಿ, ಪರಿವರ್ಧಿನಿ ಷಟ್ಪದಿಯಾಗಲಿ ಬೇಕಾದುದನ್ನು ಎಳ್ಳಷ್ಟೂ ದೋಷವಿಲ್ಲದೆ ಒದಗಿಸುತ್ತಿದ್ದರು. ಸೌಜನ್ಯದ ಮೂರ್ತಿ.

ಸಂಪೂರ್ಣ ಕಥಾ ಪ್ರಸಂಗ (400-500 ಪದ್ಯಗಳು) ಒಂದೇ ದಿನದಲ್ಲಿ ಅವರಿಂದ ರಚನೆಗೊಂಡುದೂ ಇದೆ. ಸಂಪೂರ್ಣ ಸುಬ್ರಹ್ಮಣ್ಯ ಚರಿತೆಯನ್ನೂ ಅವರು ರಚಿಸಿದ್ದಾರೆ.

ಅವರ ಸಾಹಿತ್ಯ ಭಂಡಾರವನ್ನು ಬರಹದಲ್ಲಿ ಸಂಗ್ರಹಿಸಿಡಲಾಗದುದು ನಮ್ಮ ದೌರ್ಭಾಗ್ಯ. ಅವರು ಕವಿತೆಗಳನ್ನು ರಚಿಸುತ್ತಿದ್ದರೇ ಹೊರತು ಬರೆದು ಇಡುವ ಅಭ್ಯಾಸ ಕಡಿಮೆ. ಕಾಗದವನ್ನೂ ಕೊಳ್ಳಲಾಗದ ಪರಿಸ್ಥಿತಿ ಅವರದು. ಅವರು ವಾಸವಿದ್ದ ಮನೆಯ ಗೋಡೆಗಳ ಮೇಲೆ ಕೆಲವೊಮ್ಮೆ ಕವಿತೆಗಳನ್ನು ಬರೆದು ಇರಿಸಿದ್ದರಂತೆ.

[ಮುಂದಿನ ವಾರಕ್ಕೆ]
ನಿರೂಪಣೆ: ಪದ್ಯಾಣ ಗೋಪಾಲಕೃಷ್ಣ ( ಪ.ಗೋ. 1928 -1997)

ವೆಬ್ದುನಿಯಾವನ್ನು ಓದಿ