ಕುರಿಯ ವಿಠಲ ಶಾಸ್ತ್ರಿ ಆತ್ಮಕಥನ 14- ಮೈಸೂರಿನವರ ಮನಸೆಳೆದ ಕಲೆ

[ಕರಾವಳಿಯ ಅದ್ಭುತ ಕಲೆ ಯಕ್ಷಗಾನ ಕಂಡ ಮೇರು ಕಲಾವಿದ ದಿವಂಗತ ಕುರಿಯ ವಿಠಲ ಶಾಸ್ತ್ರಿಯವರ ಜನ್ಮಶತಮಾನ ವರ್ಷ (ಜನನ: 08-09-1912) ಹಿನ್ನೆಲೆಯಲ್ಲಿ ಅವರ ಪ.ಗೋ. ನಿರೂಪಿಸಿದ ಶಾಸ್ತ್ರಿಗಳ ಆತ್ಮ ಕಥನ "ಬಣ್ಣದ ಬದುಕು" ಪ್ರತೀ ಗುರುವಾರ ವೆಬ್‌ದುನಿಯಾದಲ್ಲಿ ಸರಣಿ ರೂಪದಲ್ಲಿ ಪ್ರಕಟವಾಗುತ್ತಿದೆ.- ಸಂ]

[ಕಳೆದ ವಾರದಿಂದ]
WD
ನಮ್ಮವನೇ ಆದ ನಾರಾಯಣನ ಮನೆಯಲ್ಲಿ ನಾನು, ಶ್ರೀ ಗೋಪಾಲಕೃಷ್ಣ ಭೇಟಿಯಾದೆವು. ವಿಷಯ ವಿವರ ಚರ್ಚಿಸಿಯಾಯಿತು. ಆದರೂ ಯಕ್ಷಗಾನದ ಪರಿಚಯವಿಲ್ಲದ ಮೈಸೂರು ನಗರಕ್ಕೆ ಮೇಳದ ಜನರನ್ನು ಕಟ್ಟಿಕೊಂಡು ಹೋಗುವುದೆಂದರೆ? ಎಂಬ ಸ್ವರವೆತ್ತಿದೆ. ಕೊನೆಗೆ ಹೇಸಿಗೆ ಕೆಲಸವೆಂದು ಆಗಬಾರದಲ್ಲ ಎಂದೆ.

"ಮೈಸೂರಿನವರು ಎಂದರೆ ಯುರೋಪಿನವರಲ್ಲ. ಅವರೂ ಕನ್ನಡಿಗರೇ. ನಿಮ್ಮ ಕಲೆಯ ಬಗ್ಗೆ ನಿಮಗೇ ಅಳುಕು ಇದೆ ಎಂದಾದರೆ ಪ್ರದರ್ಶನ ವಿಫಲವಾದೀತು. ವಿಶ್ವಾಸವಿದ್ದರೆ ಸಫಲಗೊಂಡೀತು. ಹೊರಡಿ" ಎಂದ. ನಮ್ಮ ಧರ್ಮಸ್ಥಳ ಮೇಳದಲ್ಲೇ ಮೊದಲು ಹಾಸ್ಯಗಾರನಾಗಿ ನನ್ನಿಂದಲೇ ತರಬೇತಿ ಪಡೆದು, ಆಗಲಷ್ಟೇ ಮೂಲ್ಕಿ ಮೇಳವನ್ನು ಆಡಳಿತಕ್ಕಾಗಿ ವಹಿಸಿಕೊಂಡಿದ್ದ ನಾರಾಯಣನೂ "ನಿಮ್ಮ ಜವಾಬ್ದಾರಿಯಲ್ಲಾದರೆ ಹೋಗೋಣ ಮಾವ. ವೇಷಭೂಷಣ ಸಾಮಗ್ರಿಗಳನ್ನು ಮೂಲ್ಕಿಯಿಂದ ಕೇಳಿ ತರಬಹುದು" ಎಂದು ತಿಳಿಸಿದ.

"ಸಂಭಾವನೆ ಎಷ್ಟು ಸಿಗುತ್ತದೆ?" ಎಂದು ಸಹಜವಾಗಿ ಪ್ರಶ್ನಿಸಿದೆ.

"ಬರಿಯ ನೂರು (ಒಂದು ನೂರು) ರೂಪಾಯಿಗಳು ಮಾತ್ರ. ನಿಮ್ಮ ವ್ಯಾನಿನ ಪೆಟ್ರೋಲ್ ಮತ್ತು ಎರಡು ದಿನದ ಕಾಫಿಯ ವೆಚ್ಚಕ್ಕೆ ಸಾಲಬಹುದಷ್ಟೆ. ಅಲ್ಲಿನ ಊಟ-ವಸತಿಗಳ ವೆಚ್ಚಕ್ಕಾಗಿ ಅಲ್ಲಿನ ಪರಿಚಿತರು ಕೆಲವರಿಂದ ವಂತಿಗೆ ಎತ್ತಿದ್ದೇನೆ" ಎಂದು ಹೇಳಿದ ಗೋಪಾಲಕೃಷ್ಣನನ್ನು ಏನೆಂದು ಕರೆಯಲೂ ಶಬ್ದ ಸಾಲದು ಎನ್ನಿಸಿತು.

"ದಸರಾ ವಸ್ತು ಪ್ರದರ್ಶನದಲ್ಲಿ ಅಪರಿಚಿತರಿಗೆ ಅವಕಾಶ ಸಿಗುವುದೇ ಕಷ್ಟ. ಅದು ನಿಮಗೂ ಗೊತ್ತಿದೆ. ಈಗ ಒಂದು ಬಾರಿ ನಷ್ಟವನ್ನು ಅನುಭವಿಸಿದರೆ ಏನಂತೆ? ತಿರುಗಾಟದಲ್ಲಿ ಒಂದು ದಿನ ನಷ್ಟವಾಯಿತು ಎಂದೇ ತಿಳಿಯಿರಿ. ಮೈಸೂರಿನ ನಗರವಾಸಿಗಳಿಗೆ - ಯಕ್ಷಗಾನವನ್ನು ತೋರಿಸಿಕೊಡುವ ಅವಕಾಶ ಸಿಗುವಾಗ ಅದನ್ನು ಕಳೆದುಕೊಳ್ಳಬೇಡಿ. ನಾನಂತೂ ದಕ್ಷಿಣ ಕನ್ನಡ ಕಲಾ ಪ್ರಚಾರ ಸಮಿತಿಯ ವತಿಯಿಂದ ನಿಮ್ಮ ಕಲಾವಿದರ ಹೆಸರು ಹಾಕಿ ಯಕ್ಷಗಾನ ಬಯಲಾಟ ನಡೆಯುವುದಾಗಿ ಕರಪತ್ರ ಹಂಚಿಯಾಗಿದೆ. ಇನ್ನು ಮಾನ ಕಳೆದುಕೊಳ್ಳುತ್ತೀರಾ?" ಎಂದು ನನ್ನನ್ನೇ ಬೆದರಿಸಿದ.

ಮೈಸೂರಿನವರ ಮೆಚ್ಚುಗೆಗೆ
ಯಾವ ಪ್ರಸಂಗ ಆಡಬಹುದು? ಎಂದು ಅವನು ಪತ್ರದಲ್ಲಿ ಕೇಳಿದುದಕ್ಕೆ "ದಕ್ಷಾಧ್ವರ" ಆಗಬಹುದು ಎಂದು ಮೊದಲೇ ಒಪ್ಪಿಗೆ ಕೊಟ್ಟಾಗಿತ್ತು.

"ಆಯಿತು. ಹೋಗು ಈಗ" ಎಂದು ಹುಸಿ ಮುನಿಸು ತೋರಿದೆ.

ಕಾರ್ಯಕ್ರಮ ನಿರ್ಧಾರವಾಗಿದ್ದ ದಿನಕ್ಕೆ ನಾವೆಲ್ಲ ಅಲ್ಲಿಗೆ ಮುಟ್ಟಿದೆವು. ನನ್ನ ಹಳೆಯ ಗೆಳೆಯ ರಾಮಯ ರೈಯವರನ್ನೂ ಕರೆದೊಯ್ಯಲಾದುದು ನನಗೆ ತುಂಬಾ ಸಂತೋಷವೆನ್ನಿತ್ತಿತ್ತು.

ಬಯಲಾಟದ ಪ್ರಾರಂಭ ರಾತ್ರಿ 9ಕ್ಕೆ ಎಂದು ಪ್ರಚಾರವಿದ್ದಿತು. 9ಕ್ಕೆ ನಾವೆಲ್ಲ ಸಿದ್ಧರಾಗಿದ್ದೆವು. ಪ್ರದರ್ಶನ ಸಮಿತಿಯ ಆಢ್ಯ ಮಹನೀಯರೊಬ್ಬರ ದೆಸೆಯಿಂದ, ನಮ್ಮ ಕಾರ್ಯಕ್ರಮದ ಮೊದಲಿಗೆ ನಡೆದಿದ್ದ ಸಂಗೀತ ಕಚೇರಿ ಸಮಯ ಮೀರಿ ಮುಂದುವರಿಯಿತು. ದೊಡ್ಡವರೆಂದು ಹೇಳಿಕೊಳ್ಳುವವರ ಶಿಸ್ತಿನ ಪರಿಚಯ ಮೊದಲ ಬಾರಿಗೆ ಆಯಿತು.

ಮೌನವಾಗಿಯೇ ಉರಿಯತೊಡಗಿದ್ದೆ. ಆದರೆ, ಗೌರಿಯ ಮರಣ ವಾರ್ತೆಯನ್ನು ಕೇಳಿದ ಶಿವನಾದಾಗ, ಉರಿಯೆಲ್ಲ ಮೈಯಿಂದ ಹೊರಹೊಮ್ಮಿತು.

'ಅದುವರೆಗೂ ಕಂಡಿರದಿದ್ದ' ಜನರು ನಮ್ಮ ಯಕ್ಷಗಾನ ಪ್ರದರ್ಶನವನ್ನು ಮೆಚ್ಚಿದರು. ಕರತಾಡನಗಳಿಂದ ತಮ್ಮ ಸಂತೋಷವನ್ನು ಸೂಚಿಸಿದರು.

(ಪ್ರದರ್ಶನದಲ್ಲಿ ಭಾಗವಹಿಸಿದವರು ನಾವು ಒಟ್ಟು 21 ಮಂದಿ. ಊರಿನಿಂದ ಮೈಸೂರಿಗೆ ಬಸ್ ಪ್ರಯಾಣದಲ್ಲಿ ಹೋಗಿ ಬರುವ ವೆಚ್ಚವೇ ತಲಾ 14 ರೂ. ಗಳಷ್ಟಾಗುತ್ತಿತ್ತು....)

ಮೈಸೂರಿನಿಂದ ಹೊರಟು, ಹುಣಸೂರಿಗೆ ಬರುವಾಗ ವ್ಯಾನಿನ ಟೈರ್ ಒಂದು ಕೈ ಕೊಟ್ಟುದರಿಂದ, ಅಲ್ಲಿಯ ಒಂದು ಹೋಟೆಲಿನಲ್ಲಿ ಕಾಫಿ ಕುಡಿಯಲೆಂದು ಇಳಿದೆವು. ನಮ್ಮ ಕುತೂಹಲ ತಾಳಿದ ಹೋಟೆಲ್ ಮಾಲಿಕರಾದ ಶ್ರೀ ಸೀತಾರಾಮಾಚಾರ್ಯರು "ಇಲ್ಲಿ ಒಂದು ಆಟ ಆಡುತ್ತೀರಾ?" ಎಂದು ಕೇಳಿದರು. ತಮ್ಮ ಕೆಲವರು ಸ್ನೇಹಿತರನ್ನು ಒಟ್ಟುಗೂಡಿಸಿ ವೀಳ್ಯವನ್ನೇ ನಿಶ್ಚಯಿಸಿ, ಅಂದು ರಾತ್ರೆ ಆಟವಾಡಲು ಒಪ್ಪಿಸಿದರು. ರಂಗಸ್ಥಳ ಸಿದ್ಧಗೊಳಿಸುವ ವ್ಯವಸ್ಥೆ ಮಾಡಿದರು.

ಹೆಚ್ಚಿನ ಯಾವ ಪ್ರಚಾರವೂ ಇಲ್ಲದೆ, ನಾವು ಆಡಲು ತೊಡಗಿದ "ಪಂಚವಟಿ"ಯ ಕಥಾಭಾಗ ಪ್ರಾರಂಭವಾಗುವ ಹೊತ್ತಿಗೆ 3-4 ಸಾವಿರ ಮಂದಿ ಪ್ರೇಕ್ಷಕರು ಅಲ್ಲಿ ಸೇರಿದ್ದರು. ಸಮೀಪದ ಹಳ್ಳಿಗಳಿಂದ ಗಾಡಿಗಳಲ್ಲಿ ಜನರು ಬಂದು ಸೇರಿದ್ದರಂತೆ.

ಹುಣಸೂರಿನ ಮಿತ್ರರು ಇತ್ತ 'ವೀಳ್ಯದ' ಮೊಬಲಗು ವಸ್ತು ಪ್ರದರ್ಶನ ಸಮಿತಿಯವರು ದಯಪಾಲಿಸಿದ ಮೊತ್ತಕ್ಕಿಂತ ಎಷ್ಟೋ ಹೆಚ್ಚಿತ್ತು. ನಮ್ಮೆಲ್ಲರ ಊಟೋಪಚಾರಗಳನ್ನೂ ಅವರು ತುಂಬು ಮನಸ್ಸಿನಿಂದ ವ್ಯವಸ್ಥೆಗೊಳಿಸಿದ್ದರು.

ಪುನಃ ಕರೆ
ಊರು ಬಂದು ಸೇರಿದ ಎಂಟು ದಿನಗಳಲ್ಲಿ "ನಿಮ್ಮೊಂದಿಗೆ ಅಗತ್ಯವಾಗಿ ಮಾತನಾಡುವ ಕೆಲಸವಿದೆ. 14ನೇ ತಾರೀಕಿಗೆ ಪುತ್ತೂರಿಗೆ ಶ್ರೀ ಸಿ.ಎಸ್. ಶಾಸ್ತ್ರಿಗಳ ಮನೆಗೆ ಬಂದು ಭೇಟಿಯಾಗಿರಿ" ಎಂಬ ಇನ್ನೊಂದು ಕಾಗದ ಗೋಪಾಲಕೃಷ್ಣನಿಂದ ಬಂದಿತು.

"ಏನು? ಎಂದು ವಿಚಾರಿಸಿದೆ, ಮಾತಿನಂತೆ ಭೇಟಿಯಾದಾಗ.

"ಬೆಂಗಳೂರಿನಲ್ಲಿ ಒಂದು ಅರ್ಧ ಗಂಟೆಯ ಆಟವನ್ನು ಆಡಬೇಕು. ಹೇಗೆ? ಸಾಧ್ಯವಾದೀತೇ?"

ರಾತ್ರೆಯ ಹನ್ನೆರಡು ಗಂಟೆಗಳೂ ಸಾಕಾಗದೆ ಹೋದ ಅನುಭವ ನಮಗಿರುವಾಗ, ಅರ್ಧ ಗಂಟೆಯ ಹೊತ್ತು ಅದು ಎಂತಹ ಆಟ? ಎಂದು ಜಬರಿಸಿದೆ.

"ಅದರಿಂದ ಹೆಚ್ಚು ಸಮಯ ಸಿಗುವುದು ಆಸಾಧ್ಯ. ಚಿಕ್ಕದೊಂದು ದೃಶ್ಯವಾದರೂ ಸಾಕು. ಹೇಗಾದರೂ ಮಾಡಿ ನೋಡಿ."

"ಯಾವ ಸಂದರ್ಭಕ್ಕಾಗಿ ಈ ಆಟ ಆಗುವುದು?"

"ಬುಲ್ಗಾನಿನ್- ಕ್ರುಶ್ಚೇವ್ ಬೆಂಗಳೂರಿಗೆ ಭೇಟಿ ಕೊಟ್ಟಾಗ, ಅವರನ್ನು ಸತ್ಕರಿಸುವ ಕೂಟದಲ್ಲಿ, ಇತರ ಕಾರ್ಯಕ್ರಮಗಳೊಂದಿಗೆ ಯಕ್ಷಗಾನವೂ ಆಗಬೇಕು."

"ಬುಲ್ಗಾನಿನ್- ಕ್ರುಶ್ಚೇವ್ ಅಂದರೆ ಯಾರು?" ಎಂದುದಕ್ಕೆ ಅಣ್ಣ (ಶ್ರೀ ಶಾಸ್ತ್ರಿಗಳು) ವಿವರಿಸಿದರು. "ಆಗಲಿ, ಮಾಡೋಣ. ಆದರೆ ಖರ್ಚು ವೆಚ್ಚದ ಎಲ್ಲ ಭಾರಕ್ಕೂ ವ್ಯವಸ್ಥೆ ಮಾಡಿಕೊ. ನಾನು ಯಾವ ಭಾರವನ್ನೂ ಹೊರುವ ಸ್ಥಿತಿಯಲ್ಲಿ ಇಲ್ಲ" ಎಂದು ಗೋಪಾಲಕೃಷ್ಣನನ್ನು ಕಳುಹಿಸಿದೆ.

ದಾರಿಯಲ್ಲಿ (ಐದಾರು ದಿನ ಮುಂಚಿತವಾಗಿ ಹೊರಟು) ಮಡಿಕೇರಿಯಿಂದ ಆರಂಭಿಸಿ ಬೆಂಗಳೂರಿನವರೆಗೂ ಅಲ್ಲಲ್ಲಿ ಆಟಗಳನ್ನಾಡಿ ಮುಂದುವರಿಯುವುದೆಂದು ಒಂದು 'ಕರಡು ಯೋಜನೆ' ಸಿದ್ಧಪಡಿಸಿಕೊಂಡು ಅವನು ಹೊರಟುಹೋದ.

ಹೋಗಿ ಎರಡು ದಿನವಾಗಬೇಕಾದರೆ 'ಕೂಡಲೆ ಪುತ್ತೂರಿಗೆ ಬರಬೇಕಂತೆ' ಎಂದು ಮನೆಗೆ ಕರೆ ಬಂತು. ಬಂದಾಗ, ಗೋಪಾಲಕೃಷ್ಣನ ದೂರವಾಣಿಯ ಕರೆ ಕಾದಿತ್ತು.

"ಪ್ರದರ್ಶನದಲ್ಲಿ ತೋರಬಹುದಾದ ಕಾರ್ಯಕ್ರಮಗಳ ಮುನ್ನೋಟವೊಂದು ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ಆಗಬೇಕಾಗಿದೆ. ಅದು ಆಗದೆ ನಮಗೆ ಅವಕಾಶ ದೊರೆಯುವುದು ಕಷ್ಟ. ನಾಡಿದ್ದು ಸಂಜೆ ಪುಟ್ಟಣ್ಣ ಚೆಟ್ಟಿ ಪುರಭವನದಲ್ಲಿ 'ರಿಹರ್ಸಲ್' ಇಟ್ಟಕೊಂಡಿದ್ದಾರೆ. ಎಲ್ಲರನ್ನೂ ಕರೆದುಕೊಂಡು ಬಂದು ಸೇರಿ" ಎಂದಿತು. 250 ಮೈಲುಗಳ ದೂರದಿಂದ ಗೋಪಾಲಕೃಷ್ಣನ ಧ್ವನಿ. ಟೆಲಿಫೋನ್ ಯಂತ್ರವನ್ನು ಕಂಡುಹಿಡಿದ ಮಹಾಶಯನನ್ನು ಮನಸಾರೆ ಶಪಿಸಿದೆ. ಆದರೆ, ಬೆಂಗಳೂರಿಗೆ ಬಂದು ತಲಪುವುದಾಗಿ ಮಾತು ಕೊಟ್ಟೆ.

ಪ್ರಥಮ ಸ್ಥಾನ
ಕೂಡಲೇ ಹತ್ತು ಹಲವು ಹಳ್ಳಿಗಳಿಗೆ ಹೋಗಿದ್ದ ಕಲಾವಿದರನ್ನು ಹುಡುಕಿ ಹಿಡಿದು ಕರೆತರುವುದಕ್ಕೆ ಜನರನ್ನು ಕಳುಹಿಸಿದೆ. ಒಬ್ಬರು ಬರಲಾಗುವುದಿಲ್ಲ ಎಂದರೆ ಮತ್ತೊಬ್ಬರು ಇರಲಿ ಎಂದೆ. ಭಾಗವತರು, ಇತರ ಹಿಮ್ಮೇಳದವರು, ವೇಷಧಾರಿಗಳು ಇತರ ಸಹಾಯಕರು ಎಲ್ಲರನ್ನೂ ಒಟ್ಟು ಮಾಡುವುದರೊಂದಿಗೆ ಧರ್ಮಸ್ಥಳಕ್ಕೂ ಹೋಗಿ- ತಿರುಗಾಟದ ಸಮಯವಲ್ಲವಾದ ಕಾರಣ ವಿಶೇಷ ಅನುಮತಿ ದೊರಕಿಸಿಕೊಂಡು ವೇಷಭೂಷಣಗಳನ್ನೂ ಪಡೆದು ಪುತ್ತೂರಿಗೆ ಬಂದೆ. ಅಲ್ಲಿಂದ ಎಲ್ಲೂ ನಿಲ್ಲದ ಪಯಣವಾಗಿ "ರಿಹರ್ಸಲ್"ನ ದಿನ ಮಧ್ಯಾಹ್ನ 12ರ ಹೊತ್ತಿಗೆ ಪ್ರದರ್ಶನವನ್ನು ಏರ್ಪಡಿಸುವ ಅಧಿಕಾರಿಗಳ ಕಚೇರಿಯ ಮುಂದೆ ನಮ್ಮ ವ್ಯಾನ್ ನಿಲ್ಲಿಸಲು ಸಾಧ್ಯವಾಯಿತು.

ನಾವಾಗಿಯೇ ಬಂದವರೆಂದೋ ಏನೊ, ಆಯ್ಕೆಯಾಗುವುದು ಅನಿಶ್ಚಿತವೆನಿಸಿಯೋ, ನಾವು ಇಳಿದುಕೊಳ್ಳಲು ಕಲಾಸಿಪಾಳ್ಯಂ ಬಸ್ ನಿಲ್ದಾಣಕ್ಕೆ ಸಮೀಪದ ಒಂದು ಉರ್ದೂ ಶಾಲೆಯಲ್ಲಿ ಒಂದು ಕೋಣೆಯನ್ನು ದಯಪಾಲಿಸಲಾಯಿತು.

ಆಯ್ಕೆಗಾಗಿ ನಡೆದ ಪ್ರಾಯೋಗಿಕ ಪ್ರದರ್ಶನಕ್ಕೆ ಭಾಗವಹಿಸಲೆಂದು ಬಂದವರು ಹಲವು ಮಂದಿ. ಅವರಲ್ಲೆಷ್ಟೋ ಜನರಿಗೆ ತಾವು ಬೀರಬಹುದಾದ ಪ್ರಭಾವದ ಧೈರ್ಯವಿತ್ತು. ನಾವು ಅಪರಿಚಿತರು. ನಮ್ಮನ್ನು ಯಾರೂ ಮಾತನಾಡಿಸುವವರಿರಲಿಲ್ಲ. ಆಗಿದ್ದ ಅಲ್ಪ ಪರಿಚಯವೇನಿದ್ದರೂ ಗೋಪಾಲಕೃಷ್ಣನ ಓಡಾಟದಿಂದ. ಆದರೆ ಕಲಾವಿದರ ಕುರಿತು ಆಸಕ್ತಿ ವಹಿಸುವುದು ರಕ್ತಗುಣವಾಗಿದ್ದ ಶ್ರೀ ಎಂ. ಎಸ್. ನಟರಾಜನ್ ಅವರು ನಮ್ಮ ಬಗ್ಗೆ ಮೊದಲಿನಿಂದಲೇ ಆಸಕ್ತಿ ವಹಿಸಿದ್ದುದಾಗಿ ಅನಂತರ ನನಗೆ ತಿಳಿಯಿತು.

ಅಂದು ನಮ್ಮ ಕಾರ್ಯಕ್ರಮ ಕೊನೆಯದಾಗಿತ್ತು. ಆದರೆ ಕುಳಿತು ಪ್ರದರ್ಶನವನ್ನು ನೋಡುತ್ತಿದ್ದ ಮುಖ್ಯಮಂತ್ರಿ ಶ್ರೀ ಕೆಂಗಲ್ ಹನುಮಂತಯ್ಯನವರು ಮತ್ತು ಇತರ ಅಧಿಕಾರಿಗಳು, ಆಯ್ಕೆಯ ಸಮಿತಿಯಲ್ಲಿದ್ದ ಶ್ರೀಮತಿ ದೇವಿಕಾರಾಣಿ ರೋರಿಚ್ ಅವರು, ನಗರದ ಪತ್ರಿಕೋದ್ಯಮಿಗಳು ಇವರ ದೃಷ್ಟಿಯಲ್ಲಿ ಮೊದಲನೆಯ ಆಯ್ಕೆಯಾಗಿಯೇ ಪರಿಣಮಿಸಿತು.

ಪಂಥಾಹ್ವಾನ
ಯಕ್ಷಗಾನದ ಪ್ರದರ್ಶನವೂ ನಮ್ಮ ಕಾರ್ಯಕ್ರಮದಲ್ಲಿ ಇದೆ. 13 ನಿಮಿಷಗಳ ಕಾಲ ಎಂಬುದಾಗಿ ತಿಳಿಸಲಾಯಿತು.

ಆ ಸುದ್ದಿಯನ್ನು ಹೊತ್ತು ತಂದ ಗೋಪಾಲಕೃಷ್ಣನ ಎದುರು "ನನಗೆ ಈ ಅವಕಾಶ ಬೇಡಲೇ ಬೇಡ. ಈಗಲೇ ಮನೆಗೆ ಹಿಂದಿರುಗುತ್ತೇನೆ" ಎಂದೆ. ಅರ್ಧಗಂಟೆಯ ಅವಕಾಶವೇ ಸಾಲದೆನ್ನುವ ಭಾವನೆ ನನ್ನಲ್ಲಿರುವಾಗ 13 ನಿಮಿಷಗಳಲ್ಲಿ ಏನು ತಾನೆ ಮಾಡಬಹುದು?

"ಎಲ್ಲಕ್ಕೂ, ಸುಖದ ವ್ಯವಸ್ಥೆ ಎಂದರೆ ಯಾರು ಕುಣಿಯುತ್ತಾರೆ. ನಿಮ್ಮಲ್ಲಿರುವ ನಿಜವಾದ ಪ್ರತಿಭೆಯನ್ನು 13 ನಿಮಿಷಗಳ ಕಾಲವೇ ಪ್ರದರ್ಶಿಸಿದರೆ ಸಾಕು. 13 ವರ್ಷ ಅದು ನೆನಪಿನಲ್ಲಿ ಉಳಿಯಬೇಕು. ಎಷ್ಟು ಅನನುಕೂಲವಾದರೂ ನಮ್ಮ ಕಲೆಯನ್ನು ಪರಿಣಾಮಕಾರಿಯಾಗಿ ತೋರಿಸಲು ಸಾಧ್ಯವಿದೆ ಎಂದು ತೋರಿಸಿಕೊಡಿ. ಹಳ್ಳಿಯಿಂದ ಬಂದವರು ಇವರು ಎನ್ನುವ ತಿರಸ್ಕಾರದಿಂದ ಇರುವ ಆಯ್ಕೆಯ ಸಮಿತಿಯ ಪ್ರಭೃತಿಗಳೂ ಕಣ್ಣು ತೆರೆಯುವಂತಾಗುತ್ತದೆ" ಎಂದ ಆತ.

ಹೌದು. ಕಲಾಸಕ್ತರು ನೀಡಿರುವ ಒಂದು ಪಂಥಾಹ್ವಾನ ಇದು ಎಂದು ಸುಮ್ಮನಾದೆ.

ಮರುದಿನದಿಂದಲೇ, ಅಭ್ಯಾಸಕ್ಕೆ ತೊಡಗಬೇಕಾಯಿತು.

ಅರ್ಥ ವಿವರಣೆಯನ್ನು ಒಂದೆರಡು ಶಬ್ದಗಳಿಗೇ ನಿಲ್ಲಿಸಿ, ಪದ್ಯಗಳನ್ನು ಮೊಟಕುಗೊಳಿಸಿ ಸನ್ನಿವೇಶಗಳನ್ನು ಹೊಂದಿಸಿ ದಿನವೊಂದಕ್ಕೆ 50 ಬಾರಿಯಾದರೂ ಅಭ್ಯಾಸ ಮಾಡುವ ನಿರ್ಧಾರಕ್ಕೆ ಬಂದೆವು. ನಮ್ಮ ಅಭ್ಯಾಸ ಸಾಗುತ್ತಲಿದ್ದಾಗ ಚೆಂಡೆಯ ಬಡಿತ, ಗೆಜ್ಜೆಗಳ ಕುಣಿತದಿಂದ ಅಕ್ಕಪಕ್ಕದ ತರಗತಿಗಳಲ್ಲಿನ ಹುಡುಗರಿಗೂ ಉಪಾಧ್ಯಾಯರಿಗೂ ಆಗುತ್ತಲಿದ್ದ ಶ್ರಮವನ್ನು ಪೋರ್ಟ್ ಹೈಸ್ಕೂಲಿನ ಅಧಿಕಾರಿ ವರ್ಗದವರು ಇನ್ನೂ ನೆನಪಿನಲ್ಲಿಟ್ಟಿರಬಹುದು.

ಕಾರ್ಯಕ್ರಮದ ದಿನ ಬಂದಿತು. ಅಂದವಾಗಿ ಸಿಂಗರಿಸಿದ ಲಾಲ್‌ಬಾಗ್ ಗಾಜಿನ ಮನೆಯಲ್ಲಿ ಮನರಂಜನೆಯ ಕೊನೆಯ ಕಾರ್ಯಕ್ರಮವಾಗಿ 13 ನಿಮಿಷಗಳ "ದಕ್ಷಾಧ್ವರ" ಯಕ್ಷಗಾನ ಕಾರ್ಯಕ್ರಮವಾಯಿತು.

ಗಣ್ಯ ಅತಿಥಿಗಳ ಎದುರು, ಸಾವಿರಾರು ಅಮಂತ್ರಿತ ನಾಗರಿಕರ ಮುಂದೆ, ಚಲನಚಿತ್ರ- ಟೆಲಿವಿಷನ್ ಕ್ಯಾಮರಗಳ ಎದುರು, ಶಿವನಾಗಿ ಕುಣಿದೆ.

(ವೀರಭದ್ರನ ಭಯಂಕರ ಅವತಾರವನ್ನು ನಿಕಿತಾ ಕ್ರುಶ್ಚೇವರು ಬಾಯಿತೆರೆದು ನೋಡುತ್ತಿದ್ದುದೂ, ಅವನ ದೊಂದಿಯಿಂದ ಹಾರಿದ ಬೆಂಕಿಯ ರಾಸಿಯಿಂದಾಗಿ ಗಾಬರಿಗೊಂಡು ಅತಿಥಿಗಳ ದ್ವಿಭಾಷಿ ಕೆಲಸ ಮಾಡುತ್ತಲಿದ್ದ ಮಹಿಳೆ ಎರಡೂ ಕೈಗಳಿಂದ ಕಣ್ಣುಮುಚ್ಚಿಕೊಂಡುದೂ, ಎಲ್ಲರ ಜೊತೆಗೆ ಭಾವಚಿತ್ರ ತೆಗೆಯಲಾದಾಗ-

'ಜಗತ್ತಿನ ಆರನೇ ಒಂದಂಶ ಜನರನ್ನು ಆಳುವ ಆ ವ್ಯಕ್ತಿ ಈಗ ನನ್ನ ಪಕ್ಕದಲ್ಲಿ ಇದ್ದಾನೆ' ಎಂಬ ಭಾವನೆ ನನಗೆ ಬಂದುದೂ ಪಾರ್ಶ್ವಪ್ರಕಾಶದ ವಿವಿಧ ನೋಟಗಳು.)

ಪ್ರಥಮ ಬಾರಿಗೆ 'ರಿಹರ್ಸಲ್' ನಡೆದ ದಿನದಿಂದ ಲಾಲ್‌ಬಾಗಿನ ಕಾರ್ಯಕ್ರಮ ಆಗುವವರೆಗೆ ಇದ್ದ ಕೆಲವು ದಿನಗಳ ಬಿಡುವಿನಲ್ಲಿ-

ಪ್ರಸಾರ- ಧ್ವನಿಮುದ್ರಣ
ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಬೇರೆ ಒಂದೆರಡು ಕಡೆಗಳಲ್ಲಿ ಕಾರ್ಯಕ್ರಮಗಳನ್ನು ನಡೆಸಿದ್ದೆವು. ಹಾಗೆಯೇ ಕಾರ್ಯಕ್ರಮವಾದ ತರುವಾಯ ಒಂದೆರಡು ದಿನ ಕಳೆದು ಗುಬ್ಬಿ ಥಿಯೇಟರಿನಲ್ಲೂ ದಕ್ಷಾಧ್ವರವನ್ನು ಆಡಿದೆವು.

ಆ ಸಂದರ್ಭಗಳಲ್ಲೆಲ್ಲ ನಮಗೆ ಸಿಕ್ಕಿದ ಪ್ರೋತ್ಸಾಹ, ಕನ್ನಡದ ಕಲೆಯನ್ನು ಕನ್ನಡಿಗರಿಗೇ ತೋರಿಸಿಕೊಡಲು ಅಳುಕಬೇಕಾಗಿಲ್ಲ ಎಂಬ ಧೈರ್ಯವನ್ನೇ ನನಗೆ ಇತ್ತಿತ್ತು.

ಆ ಸಂದರ್ಭದಲ್ಲೇ ಆಕಾಶವಾಣಿಯವರು ನಮ್ಮ ಒಂದೆರಡು ಕಾರ್ಯಕ್ರಮಗಳ ಪ್ರಸಾರ- ಧ್ವನಿ ಮುದ್ರಣ ಇತ್ಯಾದಿಗಳನ್ನು ನಡೆಸಿದರು.

ಅನಂತರ ಒಂದು ಬಾರಿ, ಜಾನಪದ ಕಲೆಗಳ ವಿಶೇಷ ಕಾರ್ಯಕ್ರಮವನ್ನೂ ನಡೆಸಿ ಅದಕ್ಕಾಗಿ ನಮ್ಮ ತಂಡವನ್ನೇ ಆಹ್ವಾನಿಸಿದ್ದರು.

ನಮ್ಮ ಬೆಂಗಳೂರು ಯಾತ್ರೆ- ಅನಂತರ ಎರಡು ಬಾರಿ ನಡೆದ ಮೈಸೂರು ಪ್ರವಾಸ- ಮಲೆನಾಡು ಸಮ್ಮೇಳನದ ಕಾರ್ಯಕ್ರಮಕ್ಕಾಗಿ ಶಿವಮೊಗ್ಗಕ್ಕೆ ಸಂದರ್ಶನ, ಇವುಗಳೆಲ್ಲ ನಮ್ಮ ಕಲೆಯ ಬಗ್ಗೆ ಜನರಿಗೆ ಉಂಟಾಗಬಹುದಾದ ಆದರದ ಸೂಚನೆಯನ್ನೇ ಸ್ಪಷ್ಟವಾಗಿ ತೋರಿಸಿದ್ದುವು.

ಆದರೆ, ದಾವಣಗೆರೆಯಲ್ಲಿ ನಡೆದ ನಾಟ್ಯೋತ್ಸವದಲ್ಲಿ ಮಾತ್ರ ನಮ್ಮ ಪ್ರದರ್ಶನ ಪ್ರೋತ್ಸಾಹ ಪಡೆಯಲಿಲ್ಲ. ಅದಕ್ಕೆ ನಾವು ಕಾರಣರಾಗಿರಬಹುದು. ಆದರೆ ನಮ್ಮ ದೋಷವನ್ನು ನನಗೆ ಇಷ್ಟು ವರ್ಷಗಳ ತರುವಾಯವೂ ತಿಳಿದುಕೊಳ್ಳಲು ಸಾಧ್ಯವಾಗಿಲ್ಲ. ಪ್ರದರ್ಶನಕ್ಕೆ ವ್ಯವಸ್ಥೆ ಮಾಡಿದ್ದ ಸ್ಥಳೀಯ ಆಸಕ್ತರ ಅಸಡ್ಡೆ ಅನಾಸ್ಥೆಗಳ ದೋಷವಂತೂ ತಿಳಿದಿದೆ.

ಮತ್ತೊಮ್ಮೆ ದಸರಾ ವಸ್ತುಪ್ರದರ್ಶನದಲ್ಲೂ, ಹಣದ ವಿಚಾರ ಬಂದಾಗ, "ಅವರು ಹಣ ಕೊಡಲು ಗತಿ ಇಲ್ಲದವರಾದರೆ ಬೇಡ, ಉಚಿತವಾಗಿ ಅಲ್ಲಿ ಪ್ರದರ್ಶನ ನಡೆಸಿ ಬನ್ನಿ" ಎಂದು ಶ್ರೀ ರತ್ನವರ್ಮ ಹೆಗ್ಗಡೆಯವರು ನುಡಿದುದಲ್ಲದೆ, ನಮಗೆ ತಗಲಿದ ಎಲ್ಲ ಖರ್ಚುಗಳನ್ನೂ ಇತ್ತು ನುಡಿಯಂತೆ ನಡೆದಿದ್ದಾರೆ.

ದೆಹಲಿಯಲ್ಲಿ ...
ಕನ್ನಡ ನಾಡಿನಿಂದ ಹೊರಗೆ, ದೂರದ ದೆಹಲಿಯಲ್ಲೂ ನಮ್ಮ ಕಾರ್ಯಕ್ರಮ ನಡೆಯಿತು. ಆಕಾಶವಾಣಿಯ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿಕ್ಕಿದ ಸಮಯಾವಕಾಶ ಸಾಲದೆ ಬಂದು, ನನ್ನ ಅತೃಪ್ತಿ ಮತ್ತೊಂದು ಅವಕಾಶವನ್ನೂ ಹುಡುಕಿಕೊಂಡಿತು.

ದೆಹಲಿಯ ಕರ್ನಾಟಕ ಸಂಘದ ಆಶ್ರಯದಲ್ಲಿ ಯಾವುದೇ ಸಂಭಾವನೆ ತೆಗೆದುಕೊಳ್ಳದೆ ನಾವಿತ್ತ ಒಂದು ಕಾರ್ಯಕ್ರಮ, ಅಂದು ಅಲ್ಲಿ ಉಪಸ್ಥಿತರಿದ್ದ ಕೇಂದ್ರ ಸಚಿವ ಶ್ರೀ ಕೆ.ಸಿ. ರೆಡ್ಡಿಯವರಿಂದಲೂ, ಇತರ ಹಲವು ನೂರು ಮಂದಿಯಿಂದಲೂ ಮೆಚ್ಚುಗೆ ಗಳಿಸಿತು.

ದೆಹಲಿಯಲ್ಲಿ ಆಡಿದ ರೀತಿಯ ಆಟವನ್ನೇ, ಹುಬ್ಬಳ್ಳಿಯಲ್ಲೂ ನಾವು ಆಡಿದ್ದೇವೆ. ಯಾವ್ಯಾವ ಕಾರಣಗಳಿಂದಲೋ, ನಾವು ಬಾಡಿಗೆಗೆ ಹಿಡಿದ ಪ್ರದರ್ಶನ ಮಂದಿರ ಖಾಲಿಯಾಗಿಯೇ ಉಳಿದು "ನಾವು ಈ ಊರನ್ನು ಬಿಟ್ಟರೆ ಒಳ್ಳೆಯದು" ಎಂಬ ಭಾವನೆ ಬಂದಾಗ, ಕೊನೆಯ ದಿನ- ನಗರದ ಮಧ್ಯ ಸ್ಥಳದಲ್ಲಿ - ಬಿಡು ಬಯಲಿನಲ್ಲಿ "ಬಯಲಾಟ"ವನ್ನೇ ಆಡಿ, ಸೇರಿದ್ದ ಸಾವಿರಾರು ಮಂದಿ ನಾಗರಿಕರನ್ನು ಮುಗ್ಧಗೊಳಿಸಿದ್ದೇವೆ.

ಎಲ್ಲ ಕಡೆಗಳಲ್ಲೂ ಒಂದೇ ರೀತಿಯ ವ್ಯವಸ್ಥೆಯಾಗಿರುವುದು ಸಾಧ್ಯವಿಲ್ಲ. ಯಾವುದಾದರೂ ಕುಂದುಕೊರತೆಗಳಿಂದ ದೊರೆತ ಪ್ರೋತ್ಸಾಹ ಕಡಿಮೆಯಾಯಿತು ಎಂದು ಕೊರಗಬೇಕಾಗಿಯೂ ಇಲ್ಲ. ಕೊರತೆ ಏನು? ಪರಿಹಾರವೇನು? ಎಂದು ತಿಳಿಯುವ ವಿಮರ್ಶಕ ಬುದ್ಧಿ ಇದ್ದರೆ ದೇಶದ ಯಾವ ಕಡೆಯಲ್ಲಾದರೂ ಯಕ್ಷಗಾನವನ್ನು ಪ್ರದರ್ಶಿಸಬಹುದು. ಸುಸಂಸ್ಕೃತ ರೂಪದಲ್ಲಿ ಅದನ್ನು ಪ್ರದರ್ಶಿಸುವ ಎದೆಗಾರಿಕೆ ವಹಿಸಿದರೆ, ನಾವಾಗಿಯೇ ನಮ್ಮ ತಂಡಗಳನ್ನು ಕೊಂಡೊಯ್ಯಬಹುದು.

ಅದಕ್ಕಾಗಿ ರಾಜ್ಯ ಸರಕಾರಗಳ- ಅಥವಾ ಅಕಾಡೆಮಿಗಳ ವ್ಯವಸ್ಥೆ- ವಿನಿಮಯ ಆಶ್ರಯವನ್ನು ಪಡೆಯಬೇಕಾಗಿಲ್ಲ,

ನಮ್ಮ ಕಲೆ ಇಂತಹದು ಎಂದು ತೋರಿಸಿಕೊಳ್ಳುವ ಧೈರ್ಯ ನಮಗಿದ್ದರೆ ಎಲ್ಲೂ ಅದನ್ನು ಮೆರೆಸಬುಹುದು; ಎಂತಹವರ ಎದುರೂ ಪ್ರದರ್ಶಿಸಬಹುದು.
[ಮುಂದಿನ ವಾರಕ್ಕೆ]

ನಿರೂಪಣೆ: ಪದ್ಯಾಣ ಗೋಪಾಲಕೃಷ್ಣ ( ಪ.ಗೋ. 1928 -1997)

ವೆಬ್ದುನಿಯಾವನ್ನು ಓದಿ