ಸಾಯೋದ್ರೊಳಗೆ ಮಾಸಾಶನ ಕೊಡಿಸಿ: ಯಕ್ಷಗಾನ ಕಲಾವಿದರ ಕೋರಿಕೆ

WD
ಯಕ್ಷಗಾನ ಕಲೆಗಾಗಿ ದುಡಿದಿದ್ದೇವೆ. ಕುಣಿದಿದ್ದೇವೆ. ಕಾಲು ಗಂಟು ನೋಯತೊಡಗಿದೆ. ನನಗೀಗ 71 ವರ್ಷ. ಅದೆಷ್ಟೋ ವರ್ಷಗಳಿಂದ ಮಾಸಾಶನಕ್ಕಾಗಿ ಪ್ರಯತ್ನಿಸುತ್ತಲೇ ಇದ್ದೇವೆ. ಸಾಯುವ ಮುಂಚೆಯಾದರೂ ಕಲಾವಿದರಿಗೆ ಮಾಸಾಶನ ಕೊಡಿಸಿ ಎಂದು ನೇರವಾಗಿ ಸರಕಾರಕ್ಕೆ ಚುರುಕು ಮುಟ್ಟಿಸಿದವರು ಹಿರಿಯ ಯಕ್ಷಗಾನ ಕಲಾವಿದ ಶಿವರಾಮ ಜೋಗಿ.

ಸಂದರ್ಭ: ಮಂದಾರ್ತಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಸನ್ನಿಧಿಯಲ್ಲಿ ಭಾನುವಾರ 2010ನೇ ಸಾಲಿನ ಯಕ್ಷಗಾನ ಅಕಾಡೆಮಿ ಪ್ರಶಸ್ತಿ ಪ್ರದಾನ ಸಮಾರಂಭ. ವೇದಿಕೆಯಲ್ಲಿ ಸಚಿವ ವಿ.ಎಸ್.ಆಚಾರ್ಯ, ಯಕ್ಷಗಾನ ಕಲಾಪೋಷಕ ಶಾಸಕ ರಘುಪತಿ ಭಟ್, ಯಕ್ಷಗಾನ ಬಯಲಾಟ ಅಕಾಡೆಮಿ ಅಧ್ಯಕ್ಷ ಕುಂಬಳೆ ಸುಂದರ ರಾವ್ ಕೂಡ ಇದ್ದರು.

ಸನ್ಮಾನ ಪುರಸ್ಕೃತ 10 ಮಂದಿ ಕಲಾವಿದರ ಪರವಾಗಿ ಮಾತನಾಡಿದ ಶಿವರಾಮ ಜೋಗಿ, "ಮಾಸಾಶನಕ್ಕಾಗಿ ಅರ್ಜಿ ತೆಗೆದುಕೊಂಡಿದ್ದಾರೆ. ಕೇಳಿದರೆ, ನಾವು ಕಳುಹಿಸಿಕೊಟ್ಟಿದ್ದೇವೆ ಎನ್ನುತ್ತಾರೆ. ಅಕಾಡೆಮಿಯಲ್ಲಿ ಕೇಳಿದರೆ, ಕೆಳಗಿನವರಿಗೆ ಕಳುಹಿಸಿದ್ದೇವೆ ಎನ್ನುತ್ತಾರೆ. ಹೀಗೆಲ್ಲಾ ಹೆಣಗಾಡುವಾಗ, ಸಾಯುವ ಮುಂಚೆ ಮಾಸಾಶನ ಕೊಡಿಸಿದರೆ ಒಳ್ಳೆಯದಿತ್ತು" ಎನ್ನುತ್ತಾ ಕಲಾವಿದರ ಸ್ಥಿತಿಗತಿಯನ್ನೂ ತೆರೆದಿಟ್ಟರು ಜೋಗಿ.

WD
10 ಮಂದಿಗೆ ಸನ್ಮಾನ : ಹಿರಿಯ ಯಕ್ಷಗಾನ ಕಲಾವಿದೆ, ಏಕೈಕ ವೃತ್ತಿಪರ ಮಹಿಳಾ ಭಾಗವತರು ಎಂದು ಖ್ಯಾತಿ ಪಡೆದ ಲೀಲಾ ಬೈಪಾಡಿತ್ತಾಯ, ತೆಂಕುತಿಟ್ಟಿನ ಖ್ಯಾತ ವೇಷಧಾರಿಗಳಾದ ಶಿವರಾಮ ಜೋಗಿ ಮತ್ತು ಪುತ್ತೂರು ಶ್ರೀಧರ ಭಂಡಾರಿ, ಬಡಗು ತಿಟ್ಟಿನ ಹಿರಿಯ ಕಲಾವಿದರಾದ ಕೃಷ್ಣ ತಿಮ್ಮಯ ಹೆಗಡೆ, ಹಳ್ಳಾಡಿ ಮಂಜಯ್ಯ ಶೆಟ್ಟಿ, ಬೇಗಾರು ಪದ್ಮನಾಭ ಶೆಟ್ಟಿಗಾರ್, ಮೂಡಲಪಾಯ ಯಕ್ಷಗಾನ ಕಲಾವಿದ ಸಿದ್ಧಲಿಂಗಯ್ಯ ಅರಳುಗುಪ್ಪೆ, ಶ್ರೀಕೃಷ್ಣ ಪಾರಿಜಾತ ಬಯಲಾಟದ ಭಾಗವತ ಮಲ್ಲಿಕಾರ್ಜುನ ರಾಚಪ್ಪ ಮುದಕವಿ, ಬಯಲಾಟ ದೊಡ್ಡಾಟದ ರಂಗಕರ್ಮಿ ಹುಸೇನ್ ಸಾಬ್, ಕುಷ್ಟಗಿ ಹಾಗೂ ಬೆಂಗಳೂರಿನ ಯಕ್ಷದೇಗುಲ ಸಂಸ್ಥೆಯ ಪರವಾಗಿ ಕೆ.ಮೋಹನ್ ಅವರಿಗೆ 2010ನೇ ಸಾಲಿನ ಯಕ್ಷಗಾನ ಬಯಲಾಟ ಅಕಾಡೆಮಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಅರ್ಹರಿಗೇ ಸಿಕ್ಕಿದೆ, ವ್ಯವಸ್ಥೆ ಮಾಡುತ್ತೇವೆ...
ಸಮಾರಂಭದಲ್ಲಿದ್ದ ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಅವರು ಜೋಗಿ ಮಾತಿಗೆ ಉತ್ತರಿಸುತ್ತಾ, ಈಗಾಗಲೇ ಅಕಾಡೆಮಿ ವತಿಯಿಂದ 25 ವರ್ಷಕ್ಕೂ ಹೆಚ್ಚು ಕಾಲ ಸೇವೆ ಸಲ್ಲಿಸಿದ, 58 ವರ್ಷ ದಾಟಿದ 15,460 ಮಂದಿ ಹಿರಿಯ ಕಲಾವಿದರಿಗೆ ಸರಕಾರ ಮಾಸಾಶನ ನೀಡುತ್ತಿದೆ ಎಂದರಲ್ಲದೆ, ಇಲ್ಲಿ ಅಕಾಡೆಮಿ ಪ್ರಶಸ್ತಿ ವಿಜೇತರು ಎಲ್ಲರೂ ಪ್ರಶಸ್ತಿಗೆ ಅರ್ಹರಾದವರೇ. ರಾಜ್ಯೋತ್ಸವ ಪ್ರಶಸ್ತಿಯಲ್ಲಿ ಕೊನೆಗಳಿಗೆಯಲ್ಲಿ ಬದಲಾವಣೆ, ಒತ್ತಡ ಇತ್ಯಾದಿಗಳಿಂದಾಗಿ ಅನರ್ಹರಿಗೂ ಸಿಗುವ ಸಾಧ್ಯತೆಗಳಿರುತ್ತವೆ. ಆದರೆ ಇಲ್ಲಿ ಹೀಗಾಗಿಲ್ಲ ಎಂದು ತೃಪ್ತಿ ವ್ಯಕ್ತಪಡಿಸಿದರು.

ಕಾರ್ಯಕ್ರಮ ಉದ್ಘಾಟಿಸಿ ಪ್ರಶಸ್ತಿ ಪ್ರದಾನ ಮಾಡಿದ ಉನ್ನತ ಶಿಕ್ಷಣ ಸಚಿವ ವಿ.ಎಸ್.ಆಚಾರ್ಯ ಮಾತನಾಡಿ, ಸರಕಾರವು ಇಷ್ಟು ಮಂದಿಗೆ ಮಾಸಾಶನ ನೀಡುತ್ತಿದ್ದರೂ, ಅದರಲ್ಲಿ ಯಕ್ಷಗಾನ ಕಲಾವಿದರು ಸುಮಾರು 85ರಷ್ಟು ಮಂದಿ ಮಾತ್ರ ಇದ್ದಾರೆ. ಈಗ ಕಲಾವಿದರ ಆದಾಯ ಮುಂತಾಗಿ ಮಾಸಾಶನದ ನಿಯಮ ನಿಬಂಧನೆಗಳನ್ನೆಲ್ಲಾ ಸಡಿಲಗೊಳಿಸಲಾಗಿದೆ. ಹೀಗಾಗಿ ಯಕ್ಷಗಾನ ಕಲಾವಿದರಿಗೆ ಮಾಸಾಶನ ಕೊಡುವ ಪ್ರಕ್ರಿಯೆಯೂ ಅಡಚಣೆಗಳಿಲ್ಲದೆ ಸಾಗಲಿದೆ. ಹಿರಿಯ ಕಲಾವಿದರಿಗೆ ಮಾಸಾಶನ ಕೊಡಿಸುವ ವ್ಯವಸ್ಥೆ ಮಾಡಲಾಗುತ್ತದೆ ಎಂದರು.

ಧರ್ಮ, ಸಂಸ್ಕೃತಿ, ಕಲೆ ಇತ್ಯಾದಿಗಳನ್ನು ಪೋಷಿಸಲು ಒತ್ತು ನೀಡಿರುವ ರಾಜ್ಯ ಸರಕಾರವು, ಇದುವರೆಗೆ ಕನ್ನಡ ಸಂಸ್ಕೃತಿ ಇಲಾಖೆಗೆ ಬರುತ್ತಿದ್ದ 15-20 ಕೋಟಿ ರೂ. ಅನುದಾನವನ್ನು 200 ಕೋಟಿಗೆ ಏರಿಸಿದೆ. ಪ್ರತೀ ಅಕಾಡೆಮಿಗೆ ದೊರೆಯುತ್ತಿರುವ ಅನುದಾನದ ಪ್ರಮಾಣವು ಕೂಡ 7ರಿಂದ 40 ಲಕ್ಷಕ್ಕೆ ಏರಿಕೆಯಾಗಿದೆ ಎಂಬ ಅಂಕಿ ಅಂಶಗಳನ್ನು ತೆರೆದಿಟ್ಟರು.

ಅಧ್ಯಕ್ಷತೆ ವಹಿಸಿದ್ದ ಅಕಾಡೆಮಿ ಅಧ್ಯಕ್ಷ ಕುಂಬಳೆ ಸುಂದರ ರಾವ್ ಮಾತನಾಡಿ, ಮೇಳಗಳು ಹೆಚ್ಚುತ್ತಿವೆ, ಯಕ್ಷಗಾನ ಬೆಳೆಯುತ್ತಿದೆ ಎಂಬ ಮಾತಿನ ನಡುವೆಯೂ, ಯಕ್ಷಗಾನದ ಮೂಲ ಮೆಟ್ಟಿಲಾಗಿರುವ ಬಾಲಗೋಪಾಲರ ವೇಷಗಳಿಗೆ ಜನ ಸಿಗುತ್ತಿಲ್ಲ. ಮೇಳಗಳನ್ನು ಹೆಚ್ಚಿಸುವ ಬದಲು, ಯಕ್ಷಗಾನ ಶಿಕ್ಷಣದತ್ತ ಗಮನ ಹರಿಸುವ ಕಾರ್ಯ ಆಗಬೇಕಾಗಿದೆ ಎಂದರು.

3ನೇ ಹಣಕಾಸು ವರದಿ ಅನುಷ್ಠಾನ ಸಮಿತಿ ಅಧ್ಯಕ್ಷ ಎ.ಜಿ.ಕೊಡ್ಗಿ ಅವರು ಇದೇ ಸಂದರ್ಭದಲ್ಲಿ ಯಕ್ಷೋಪಾಸಕರು ಎಂಬ 600 ಯಕ್ಷಗಾನ ಕಲಾವಿದರ ಸಮಗ್ರ ಮಾಹಿತಿಯನ್ನೊಳಗೊಂಡ ಎರಡು ಸಂಪುಟಗಳುಳ್ಳ ಪುಸ್ತಕಗಳನ್ನು ಬಿಡುಗಡೆಗೊಳಿಸಿದರು. ಮಾಹಿತಿ ಸಂಗ್ರಹಿಸಿದವರು ದಿನಕರ ಎಸ್.ಪಚ್ಚನಾಡಿ ಹಾಗೂ ಪ್ರಸಾದ್ ಕುಮಾರ್ ಮೊಗೆಬೆಟ್ಟು.

ಮಂದಾರ್ತಿ ದೇವಸ್ಥಾನ ಆಡಳಿತ ಮೊಕ್ತೇಸರ ಎಚ್.ಧನಂಜಯ ಶೆಟ್ಟಿ, ಅಕಾಡೆಮಿ ರಿಜಿಸ್ಟ್ರಾರ್ ಪದ್ಮಜಾ ಕುಮಾರಿ, ಸದಸ್ಯರಾದ ಮುರಳಿ ಕಡೆಕಾರ್ ಮತ್ತು ಸೀಮಂತೂರು ನಾರಾಯಣ ಶೆಟ್ಟಿ ಮುಂತಾದವರು ವೇದಿಕೆಯಲ್ಲಿದ್ದರು.

ಕಾರ್ಯಕ್ರಮಕ್ಕೆ ಮೊದಲು ಲೀಲಾ ಬೈಪಾಡಿತ್ತಾಯ ನೇತೃತ್ವದಲ್ಲಿ ಸುದರ್ಶನ ವಿಜಯ ಯಕ್ಷಗಾನ ಪ್ರದರ್ಶನ ನಡೆಯಿತು. ಕಾರ್ಯಕ್ರಮದ ನಂತರ ಮಂದಾರ್ತಿಯ ಮೂರು ಮೇಳಗಳಿಂದ ಯಕ್ಷಗಾನ ಪ್ರದರ್ಶನ ನಡೆಯಿತು.

ವೆಬ್ದುನಿಯಾವನ್ನು ಓದಿ