ನಿಮಗೆ ಕೋಪ ಬೇಗ ಬರುತ್ತಾ? ಹಾಗಾದ್ರೆ ನಿಮ್ಮ ಜಾತಕದಲ್ಲಿ ಏನಿದೆ ನೋಡಿ
ಸೋಮವಾರ, 18 ಡಿಸೆಂಬರ್ 2023 (10:31 IST)
ಕೆಲವರು ತುಂಬ ಸೆನ್ಸಿಟಿವ್. ಕೋಪದ ವಿಚಾರದಲ್ಲೂ ಕೂಡಾ. ಇನ್ನೂ ಕೆಲವರಿಗೆ ಕೋಪಾತಾಪಗಳೇನೂ ಇಲ್ಲದಿದ್ದರೂ, ಸಡನ್ನಾಗಿ ಮೂಡ್ ಅಪ್ಸೆಟ್ ಮಾಡಿಕೊಳ್ಳುತ್ತಾರೆ. ಎಲ್ಲರೊಂದಿಗೂ ಸಹವಾಗಿಯೇ ನಗುನಗುತ್ತಾ ಇದ್ದರೂ ಕ್ಷಣ ಮಾತ್ರದಲ್ಲಿ ನಿರಾಸಾದಾಯಕರಂತೆ, ಜಗದ ಭಾರವೆಲ್ಲ ತನ್ನ ತಲೆ ತಲೆ ಮೇಲೆ ಹೊತ್ತವರಂತೆ ಜೋಲು ಮೋರೆ ಹಾಕಿಕೊಳ್ಳುತ್ತಾರೆ. ಖಿನ್ನರಾಗಿಬಿಡುತ್ತಾರೆ. ಆಮೇಲೆ ಅವರೆಲ್ಲೋ, ಇವರೆಲ್ಲೋ.... ಮಾತಿಲ್ಲ, ಕಥೆಯಿಲ್ಲ....!
ಸಣ್ಣ ಸಣ್ಣ ವಿಚಾರಕ್ಕೂ ಕೆಲವು ಮುಖ-ಮೂತಿ ಸೊಟ್ಟಗೆ ಮಾಡಿ ಕೋಪ ಮಾಡಿಕೊಳ್ಳುತ್ತಾರೆ. ಇನ್ನೂ ಕೆಲವರಿಗೆ ಒಂದು ಮಾತಾಡಿ ಮತ್ತೊಂದು ಮಾತಾಡುವಷ್ಟರಲ್ಲಿ ಸರ್ರನೆ ಸಿಟ್ಟೇರಿ ಜಗಳವಾಡುತ್ತಾರೆ. ಇಂತಹ ಸಿಟ್ಟಿನಿಂದ ಎಷ್ಟೋ ವರ್ಷಗಳ ಗೆಳೆತನಗಳು ಮುರಿದು ಬಿದ್ದಿವೆ. ಎಷ್ಟೋ ದಾಂಪತ್ಯಗಳು ಛಿದ್ರವಾಗಿವೆ. ಅಷ್ಟೋ ದುರಂತಗಳೇ ಆಗಿಹೋಗಿವೆ. ಅಷ್ಟಕ್ಕೂ ಇಂತಹ ಸಿಟ್ಟು, ಮೂಡ್ ಅಪ್ಸೆಟ್‌ಗಳಿಗೆ ಕಾರಣವೇನು ಅಂತೀರಾ?
ಹಾಗಾದರೆ, ಇಂತಹ 'ಮೂಡಿ' ಸ್ವಭಾವ, ಸೆನ್ಸಿಟಿವ್ ನೇಚರ್, ಕೋಪಿಷ್ಟತನಗಳಿಗೂ ಜಾತಕಕ್ಕೂ ಸಂಬಂಧವಿದೆಯಾ? ಎಂಬ ಪ್ರಶ್ನೆ ಹಾಕಿದರೆ ಖಂಡಿತಾ ಉತ್ತರ ಹೌದೆಂಬುದೇ. ಎಸ್. ಇಂತಹ ಸ್ವಭಾವಗಳಿಗೂ ಜಾತಕದ ಚಂದ್ರನ ಸ್ಥಾನಕ್ಕೂ ಸಂಬಂಧವಿದೆ. ಕರ್ಕ ರಾಶಿ ಅಥವಾ ಕರ್ಕ ಲಗ್ನ ನಿಮ್ಮದಾಗಿದ್ದಂತೆ ಅಂಥವರದ್ದು ತುಂಬ ಸೆನ್ಸಿಟಿವ್ ವ್ಯಕ್ತಿತ್ವವಿರುತ್ತದೆ. ಆಗಾಗ ಮೂಡ್ ಆಫ್ ಮಾಡಿಕೊಳ್ಳುವುದು, ಬಹುಬೇಗನೆ ಬೇಸರವಾಗೋದು, ಅಳು ಸ್ವಭಾವ ಅಂಥವರದ್ದು. ಕಾರಣ ಅಂಥ ರಾಶಿ ಅಥವಾ ಲಗ್ನ ಹೊಂದಿರುವ ಜಾತಕದಲ್ಲಿ ಚಂದ್ರದ ಅಸ್ತಿತ್ವ ತುಂಬ ದುರ್ಬಲವಾಗಿರುತ್ತದೆ. ಹೀಗಾಗಿ ಅಂತ ವ್ಯಕ್ತಿ ಅತಿಯಾದ ಸ್ವಾರ್ಥಿಯೂ ಆಗಿರುವ ಸಂಭವವಿದೆ.
ಕರ್ಕ ಹೊರತು ಪಡಿಸಿ ಇತರ ರಾಶಿಗಳ ವ್ಯಕ್ತಿಗಳ ಜಾತಕದಲ್ಲಿ ಚಂದ್ರ 3, 6, ಅಥವಾ 8ನೇ ಮನೆಯಲ್ಲಿದ್ದರೆ ಚಂದ್ರ ದುರ್ಬಲವಾಗಿದ್ದಾನೆ ಅಂತರ್ಥ. ಇದಲ್ಲದೆ ಕೃಷ್ಣ ಪಕ್ಷದಲ್ಲಿ ನೀವು ಜನಿಸಿದ್ದರೆ, ಅಥವಾ ಅಮವಾಸ್ಯೆಯಲ್ಲಿ ನಿಮ್ಮ ಜನನವಾಗಿದ್ದರೂ ಕೂಡ ಅತಿಯಾದ ಸೆನ್ಸಿಟಿವ್ ಆಗಿರುವ ಸಂಭವವಿದೆ.
ಚಂದ್ರನ ಮೇಲೆ ಕೇತುವಿನ ಪ್ರಭಾವವಿದ್ದರೆ, ಅಥವಾ ಚಂದ್ರ ಕೇತುವಿನ ಜೊತೆಗಿದ್ದರೆ, ಚಂದ್ರನ ಯುತಿ ಶನಿ ಅಥವಾ ಕೇತುವಿನ ಜೊತೆಗಿದ್ದರೆ, ಚಂದ್ರನ ಯುತಿ ಕೇವಲ ಶನಿಯೊಂದಿಗೆ ಮಾತ್ರವಿದ್ದರೆ ಅಂತಹ ಜಾತಕವಿರುವ ವ್ಯಕ್ತಿಗಳೂ ಕೂಡಾ ಅತಿಯಾದ ಸೆನ್ಸಿಟಿವ್ ಅಥವಾ ಪರ್ಸನಾಲಿಟಿ ಡಿಸಾರ್ಡರ್ ಹೊಂದಿರುವ ಸಾಧ್ಯತೆಗಳಿವೆ.
ಚಂದ್ರನ ದುರ್ಬಲ ಸ್ಥಿತಿಯ ಜೊತೆಜೊತೆಗೆ ಮುಖ್ಯಗ್ರಹವೂ ಅತ್ಯಂತ ದುರ್ಬಲ ಸ್ಥಿತಿಯಲ್ಲಿದ್ದರೆ, ಗುರುವಿನ ಕೃಪಾಕಟಾಕ್ಷ ಅಥವಾ ಬೆಂಬಲ ಅಷ್ಟಾಗಿ ಇಲ್ಲದಿದ್ದರೂ ಕೂಡಾ ಅಂತಹ ಜಾತಕವಿರುವ ವ್ಯಕ್ತಿಗೆ ಕೊಂಚ ಮಾನಸಿಕ ಅಶಾಂತಿ, ಕ್ಷೋಬೆ, ತಲ್ಲಣ ಇತರರಿಗಿಂತ ಹೆಚ್ಚು. ಅದರಲ್ಲೂ ಇದರ ಜೊತೆಗೆ ಮಂಗಳನ ಸ್ಥಾನ ಉಗ್ರವಾಗಿದ್ದರೆ, ಅಂತಹ ವ್ಯಕ್ತಿ ಹಿಂಸೆಯೆಡೆಗೆ, ರಕ್ತಪಾತದೆಡೆಗೆ ಮುಖ ಮಾಡುವ ಸಂಭವ ಹೆಚ್ಚು.
ಜಾತಕದಲ್ಲಿ ಇಂಥ ಸ್ಥಿತಿಯಿದ್ದರೆ, ಜೊತೆಗೆ ಮಾನಸಿಕವಾಗಿ ತಲ್ಲಣಗೊಂಡಿದ್ದರೆ, ಜಾತಕದ ಗ್ರಹಗಳ ದುರ್ಬಲ ಸ್ಥಾನಗಳನ್ನು ಇಷ್ಟ ದೇವತೆಗಳ ಆರಾಧನೆಯ ಮೂಲಕ ಹಾಗೂ ಇತರ ಪರಿಹಾರ ಕ್ರಮಗಳ ಮೂಲಕ ಭದ್ರಪಡಿಸಿಕೊಳ್ಳುವ ಮಾರ್ಗಗಳೂ ಇವೆ.