ಬಾಳೆಹಣ್ಣು, ತೆಂಗಿನಕಾಯಿ ನೀರಿನ ಮೇಲೆ ತೇಲುವಂತಹ ಪವಾಡವಿರುವ ಈ ದೇವಾಲಯ ಎಲ್ಲಿದೆ ಗೊತ್ತಾ?
ಸೋಮವಾರ, 24 ಸೆಪ್ಟಂಬರ್ 2018 (14:33 IST)
ಬೆಂಗಳೂರು : ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲ್ಲೂಕಿನಿಂದ 11 ಕಿಲೋ ಮೀಟರ್ ದೂರದಲ್ಲಿರುವ ಶ್ರೀ ಕ್ಷೇತ್ರ ಹಾಲುರಾಮೇಶ್ವರ ದೇವಾಲಯ ರಾಮಾಯಣ ಕಾಲದಲ್ಲಿ ವಾಲ್ಮೀಕಿ ನಿರ್ಮಿಸಿದ್ದಾರಂತೆ. ಸಂತಾನ ಇಲ್ಲದವರು ಸಂತಾನ ಫಲ ಬೇಡಲು ಇಲ್ಲಿಗೆ ಬರುತ್ತಾರಂತೆ. ಅಷ್ಟೇ ಅಲ್ಲದೇ ಮೈಸೂರು ಮಹಾರಾಜರು ಸಹ ಇಲ್ಲಿ ಫಲ ಬೇಡಲು ಬಂದ ಇತಿಹಾಸವಿದೆ.
ಈ ದೇವಾಲಯದ ಕೊಳದಲ್ಲಿ ಬರವಿರಲಿ, ಮಳೆಯಿರಲಿ ಎಲ್ಲ ಕಾಲದಲ್ಲೂ ನೀರು ಸದಾ ಇರುತ್ತದೆಯಂತೆ. ಬಾಳೆಹಣ್ಣು, ತೆಂಗಿನಕಾಯಿ ಹೋಳು ಇತ್ಯಾದಿ ವಸ್ತುಗಳು ನೀರಿನ ಮೇಲೆ ತೇಲುವುದೇ ಇಲ್ಲಿನ ಒಂದು ಪವಾಡ. ಹಾಗೇ ಕರಗುವ ಕುಂಕುಮ, ಅರಿಶಿನ ಕರಗದೆ ತೇಲುವುದು ಮತ್ತೊಂದು ವಿಶೇಷ.
ಮೈಸೂರು ಮಹಾರಾಜರಾಗಿದ್ದ ಜಯಚಾಮರಾಜ ಒಡೆಯರ್ ಅವರು ಇಲ್ಲಿ ಬಂದು ಗಂಗೆಯನ್ನು ಪೂಜಿಸಿ ಸಂತಾನ ಕರುಣಿಸುವಂತೆ ಕೋರಿದಾಗ ಅವರಿಗೆ ಬೆಳ್ಳಿ ತೊಟ್ಟಿಲು ಬಂತಂತೆ. ಆ ನಂತರವೇ ಶ್ರೀಕಂಠದತ್ತ ನರಸಿಂಹರಾಜ ಒಡೆಯರು ಜನಿಸಿದರು ಎಂದು ಅಧಿಕೃತ ಉಲ್ಲೇಖವಿದೆ ಎನ್ನುತ್ತಾರೆ.
ಇಲ್ಲಿಗೆ ಬರುವ ಭಕ್ತರಿಗೆ ದೇವರನ್ನು ಮುಟ್ಟಿ ಪೂಜಿಸುವ ಅವಕಾಶವುಂಟು. ಜಾತಿ, ಮತ, ಧರ್ಮಗಳ ಭೇದವಿಲ್ಲದೆ ಎಲ್ಲರೂ ಭಕ್ತಿಯಿಂದ ದೇವರನ್ನು ಪೂಜಿಸುತ್ತಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.