ಮೀನ ರಾಶಿಗೆ ಗುರು: ಇಲ್ಲಿದೆ ಸಂಪೂರ್ಣ ರಾಶಿ ಫಲ

ಗುರು ಮಂಡಲ ಇದೀಗ ಮೇ 2ರಂದು ಮೀನ ರಾಶಿಗೆ ಪ್ರವೇಶಿಸಿದ್ದಾನೆ. ಇದರ ಫಲ ಎಲ್ಲ ರಾಶಿಗಳ ಮೇಲೂ ಆಗುತ್ತದೆ. ಸೂರ್ಯ ಗ್ರಹ ಮತ್ತು ಚಂದ್ರ ಗ್ರಹ ಮೀನ ರಾಶಿಯಲ್ಲಿ ಸೇರುವುದರಿಂದ ಹೊಸ ವರ್ಷ ಶ್ರೀ ವಿಕೃತಿ ನಾಮ ಸಂವತ್ಸರ ಆರಂಭವಾಗುತ್ತದೆ. ಪ್ರತಿ ವ್ಯಕ್ತಿಗೂ ಅವರ ರಾಶಿಗಳು ಅಂದರೆ ಚಂದ್ರಗ್ರಹ ಸ್ಥಿತ ರಾಶಿಯಾನುಸಾರ ಗೋಚರ ಮತ್ತು ದಶಾಭುಕ್ತಿಯ ಫಲಗಳನ್ನು ಪ್ರಧಾನವಾಗಿ ನೋಡಬೇಕು. ಆದರೂ, ಮೀನ ರಾಶಿಗೆ ಗುರುವಿನ ಪ್ರವೇಶವಾಗಿರುವ ಆಧಾರದಲ್ಲಿ ವಿವಿಧ ರಾಶಿಗಳ ಮೇಲಾಗುವ ಸಾಮಾನ್ಯ ಫಲವನ್ನು ಇಲ್ಲಿ ನೀಡಲಾಗಿದೆ.

WD
ಮೇಷ: ಈ ರಾಶಿಯವರಿಗೆ ಆರೋಗ್ಯದಲ್ಲಿ ವ್ಯತ್ಯಯ, ಮಕ್ಕಳಿಂದ ಅಸಮಾಧಾನ ಸಂಭವವಿದೆ. ಆರೋಗ್ಯದಲ್ಲಿ ಕೊಂಚ ಏರುಪೇರಾಗಬಹುದು. ಲಿವರ್ ಖಾಯಿಲೆ ಅಥವಾ ಮಧುಮೇಹ ಮತ್ತಿತರ ಸಮಸ್ಯೆಗಳೂ ಎದುರಾಗುವ ಸಂಭವವಿರುವುದರಿಂದ ಆರೋಗ್ಯದ ಮೇಲೆ ಹೆಚ್ಚು ಗಮನ ನೀಡಿ. ಆರ್ಥಿಕವಾಗಿ ಲಾಭವಾಗಲಿದೆ. ವ್ಯಾಜ್ಯಗಳಿಂದ ಮುಕ್ತಿ ಸಿಗಲಿದ್ದು, ವಿದೇಶ ಪ್ರವಾಸ ಯೋಗವೂ ಇದೆ. ವಿವಾಹೇತರ ಸಂಬಂಧಗಳಲ್ಲಿ ಸಿಲುಕುವ ಸಂಭವವೂ ಇರುವುದರಿಂದ ಜಾಗರೂಕರಾಗಿದ್ದು, ಮನಸ್ಸು ಹತೋಟಿಯಲ್ಲಿಡಿ. ತೊಂದರೆಗಳ ಪರಿಹಾರಕ್ಕಾಗಿ ಸುಬ್ರಹ್ಮಣ್ಯನ ಆರಾಧನೆ ಮಾಡಿ. ಆರು ಮುಖದ ರುದ್ರಾಕ್ಷಿಯನ್ನು ಧಾರಣೆ ಮಾಡಿ. ಹೆಂಗಸರಾದರೆ ಎಡಗೈಗೆ ಹಾಗ ಗಂಡಸರಾದರೆ ಬಲಗೈಗೆ ಕೆಂಪುಹವಳ ಧರಿಸಬಹುದು.

WD
ವೃಷಭ: ಜೀವನದಲ್ಲಿ ಉತ್ಸಾಹ ಹೆಚ್ಚಾಗುತ್ತದೆ. ಮದುವೆಯಾಗಲು ಹೊರಟ ಮಂದಿಗೆ ಗುರುಬಲವಿದ್ದು ಕಂಕಣ ಬಲ ಕೂಡಿ ಬರಲಿದೆ. ಆರೋಗ್ಯದಲ್ಲಿ ವ್ಯತ್ಯಯವಾಗುವ ಸಂಭವವಿದ್ದು ಗಂಟಲಿಗೆ ಸಂಬಂಧಿಸಿದ ತೊಂದರೆಗಳು ಕಾಣಿಸಬಹುದು. ಸ್ವಂತ ಮನೆಯಿದ್ದರೆ ಆ ಸಂಬಂಧ ತೊಂದರೆ ಉಂಟಾಗಬಹುದು. ಈ ರಾಶಿಯವರ ತಾಯಿಗೆ ತೊಂದರೆ ಹೆಚ್ಚು. ಇವರ ಸಂಗಾತಿಗೆ ಆರೋಗ್ಯದಲ್ಲಿ ಏರುಪೇರಾಗುವ ಸಂಭವವಿದೆ. ಮಕ್ಕಳಿಗೆ ಇಷ್ಟವಿಲ್ಲದೇ ಮದುವೆ ನಡೆಯುವ ಸಂಭವವೂ ಹೆಚ್ಚಿರುವುದರಿಂದ ಮಕ್ಕಳ ಸಮ್ಮತ ಪಡೆದೇ ಮದುವೆಗೆ ಪ್ರಯತ್ನಿಸಿ. ಆದರೆ ವೃತ್ತಿಯಲ್ಲಿ ಏಳಿಗೆ ಕಂಡು ಬರಲಿದ್ದು, ಅನಾವಶ್ಯಕ ಖರ್ಚು ಹೆಚ್ಚಾಗಲಿದೆ. ಆದಿತ್ಯ ಹೃದಯ ಪಾರಾಯಣದಿಂದ ಈ ಕಷ್ಟಗಳ ಪರಿಹಾರ ಕಂಡುಕೊಳ್ಳಬಹುದು. ಬಿಳಿ ಹವಳವಿರುವ ಬೆಳ್ಳಿ ಉಂಗುರವನ್ನು ಮಧ್ಯ ಬೆರಳಿಗೆ ಧರಿಸಬೇಕು.

WD
ಮಿಥುನ: ಈ ರಾಶಿಯವರ ಲಗ್ನದಲ್ಲೇ ಕೇತು ಇರುವುದರಿಂದ ತೊಂದರೆ ಹೆಚ್ಚು. ಆದರೂ ವೃತ್ತಿಯಲ್ಲಿ ಏಳಿಗೆಯಿದೆ. ಅನಿರೀಕ್ಷಿತ ಧನಾಗಮನ, ಹಳೇ ಷೇರುಗಳಿದ್ದರೆ ಅದರಿಂದ ಲಾಭವೂ ಬರಬಹದು. ಆದರೆ ದೈಹಿಕವಾಗಿ ಆರೋಗ್ಯದಲ್ಲಿ ಏರುಪೇರಾಬಹುದು. ಅಲರ್ಜಿ, ಬಾಯಿಹುಣ್ಣು ಮತ್ತಿತರ ತೊಂದರೆ ಬರಬಹುದು. ಮಾತಿನ ಮೇಲೆ ಹಿಡಿತ ಅಗತ್ಯ. ತಾಯಿಯ ಶಾಪಕ್ಕೆ ಗುರಿಯಾಗುವ ಸಂಭವವಿರುವುದರಿಂದ ಎಚ್ಚರಿಕೆಯಿಂದ ಮಾತಾಡಿ. ಹೊಸ ಷೇರುಗಳಲ್ಲಿ ಹಣ ತೊಡಗಿಸಿದರೆ ಕಳಕೊಳ್ಳುವ ಸಂಭವವೇ ಹೆಚ್ಚು. ಇವುಗಳ ಪರಿಹಾರಕ್ಕಾಗಿ ವಿಷ್ಣು ಸಹಸ್ರ ನಾಮ ಪಾರಾಯಣ ಮಾಡಬಹುದು. ವಿಷ್ಣು ದೇವಾಲಯಕ್ಕೆ ಹೆಸರುಕಾಳು ದಾನ ಮಾಡಬಹುದು. ಬಲಗೈ ಉಂಗುರ ಬೆರಳಿಗೆ ಪಚ್ಚೆ ಧಾರಣೆ ಮಾಡುವುದರಿಂದಲೂ ಉತ್ತಮ ಪರಿಣಾಮ ಕಾಣಬಹುದು.

WD
ಕರ್ಕ: ಉತ್ತಮ ಮನೆಗೆ ಬದಲಾವಣೆಯಾಗುವ ಸಂಭವವಿದೆ. ಗರ್ಭಿಣಿ ಹೆಂಗಸರು ಹೆಚ್ಚು ಜಾಗ್ರತೆಯಾಗಿರಬೇಕು. ನೀರಿದ್ದಲ್ಲಿ, ಮೆಟ್ಟಲ ಬಳಿ ಹೋಗುವ ಸಹಾಸ ಬೇಡ. ನಿಧಾನವಾಗಿ ಜಾಗರೂಕರಾಗಿದ್ದರೆ ಒಳ್ಳೆಯದು. ತೀರ್ಥಯಾತ್ರೆ ಅವಕಾಶವೂ ಒದಗಿಬಂದೀತು. ಗಂಡ ಹೆಂಡತಿಯಲ್ಲಿ ವಿರಸ, ಸಣ್ಣಪುಟ್ಟ ಜಗಳ ಕಂಡು ಬಂದೀತು. ಆದರೆ ವೃತ್ತಿಯಲ್ಲಿ ಏಳಿಗೆಯಿದೆ. ಮೂಳೆ ಸಂಬಂಧಿ ತೊಂದರೆಗಳು, ನೋವು ಕಂಡುಬರಬಹುದು. ಈ ಸಮಯದಲ್ಲಿ ಸುಬ್ರಹ್ಮಣ್ಯನ ಆರಾಧನೆ ಮಾಡಿ. ಸೋಮವಾರದಂದು ಶಿವ ದೇವಸ್ಥಾನಕ್ಕೆ ಹೋಗಿ ಅರ್ಚನೆ ಮಾಡಿ. ಕೆಂಪು ಹವಳವನ್ನು ಉಂಗುರದ ಬೆರಳಿನಲ್ಲಿ ಧಾರಣೆ ಮಾಡುವುದರಿಂದಲೂ ಕೊಂಚ ಪರಿಣಾಮ ಕಾಣಬಹುದು.

WD
ಸಿಂಹ: ಈ ರಾಶಿಯ ಮಕ್ಕಳಿಲ್ಲದ ದಂಪತಿಗಳಿಗೆ ಸಂತಾನ ಭಾಗ್ಯ ಸಂಭವವಿದೆ. ವೃತ್ತಿಯಲ್ಲಿ ಏಳಿಗೆ ಹೊಂದಬಹುದು. ಹೊಸ ಕಾರು, ಮನೆ ಖರೀದಿ ಯೋಗವಿದೆ. ಆದರೆ ಮನೆಯಲ್ಲಿ ಅಶಾಂತಿಯ ವಾತಾವರಣ, ತಾಯಿಗೆ ಆರೋಗ್ಯ ವ್ಯತ್ಯಯವಾಗುವ ಸಂಭವವೂ ಇದೆ. ಆರ್ಥಿಕವಾಗಿ ಸಾಕಷ್ಟು ವೃದ್ಧಿಯಾಗಲಿದೆ. ಗಂಡ ಹೆಂಡತಿಯರಲ್ಲಿ ವಿರಸ, ಹೊಟ್ಟೆ ಸಂಬಂಧಿ ನೋವು ಕಂಡುಬರುವ ಸಂಭವವಿದೆ. ಪರಿಹಾರಕ್ಕಾಗಿ ದುರ್ಗಾ ಅಷ್ಟೋತ್ತರ ನಾಮ ಪಾರಾಯಣ, ಗೋಮೇದಕ ಚಿನ್ನದುಂಗುರವನ್ನು ಎಡಗೈಯ ಮಧ್ಯದ ಬೆರಳಿಗೆ ಧರಿಸಬಹುದು.

WD
ಕನ್ಯಾ: ಕೆಲಸಗಳು ವಿಳಂಬವಾಗುವ ಸಂಭವ ಹೆಚ್ಚು. ಪದೇ ಪದೇ ಆರೋಗ್ಯದಲ್ಲಿ ವ್ಯತ್ಯಯ, ಅಫಘಾತ ಸಂಭವ ಇದೆ. ಎಂಟು ವಯಸ್ಸಿನೊಳಗಿನವರು ಹಾಗೂ 60ರ ಮೇಲ್ಪಟ್ಟವರು ಹೆಚ್ಚು ಜಾಗರೂಕರಾಗಿರಬೇಕು. ಮೃತ್ಯುಂಜಯ ಹೋ, ಶಿವ ದೇವಸ್ಥಾನದಲ್ಲಿ ಹಾಲಿನ ಅಭಿಷೇಕ ಮಾಡುವುದರಿಂದ ಹಾಗೂ ಶನಿ ಮಂತ್ರ ಜಪ ಮಾಡುವುದರಿಂದ ತೊಂದರೆ ಪರಿಹರಿಸಿಕೊಳ್ಳಬಹುದು.

WD
ತುಲಾ: ಜೀವನದಲ್ಲಿ ಏರುಪೇರಾಗುವ ಸಂಭವವಿದೆ. ಒತ್ತಡ ಹೆಚ್ಚಾಗುತ್ತದೆಯಾದರೂ ಕಷ್ಟಗಳನ್ನು ಧೈರ್ಯದಿಂದ ಎದುರಿಸಬಲ್ಲಿರಿ. ಆಸ್ತಿ ಲಾಭ, ವಿದೇಶ ಪ್ರಯಾಣ ಯೋಗ, ಆರ್ಥಿಕ ಲಾಭ, ವೃತ್ತಿಯಿಂದ ಏಳಿಕೆ ನಿರೀಕ್ಷಿತ. ಕುಟುಂಬ ವರ್ಗದಲ್ಲಿ ಶುಭಕಾರ್ಯ ಸಾಧ್ಯತೆಯೂ ಇದೆ. ಸ್ವಂತ ಮನೆ ಹೊಂದುವ ಯೋಗವಿದೆ. ಮಕ್ಕಳ ವಿಚಾರದಲ್ಲಿ ನೆಮ್ಮದಿ ಕಡಿಮೆಯಾಗಲಿದ್ದು, ಆರೋಗ್ಯದ ಮೇಲೆ ಹೆಚ್ಚಿನ ಗಮನ ಅಗತ್ಯ. ಸಂಜೆ ಲಲಿತ ಸಹಸ್ರ ನಾಮ ಪಾರಾಯಣ ಮಾಡುವುದರಿಂದ ಶಿವನ ಗುಡಿಗೆ ಹೋಗಿ ಅರ್ಚನೆ ಮಾಡುವುದರಿಂದ ಪರಿಹಾರ ಸಾಧ್ಯ.

WD
ವೃಶ್ಚಿಕ: ಮದುವೆಯಾಗದೆ ಇದ್ದವರಿಗೆ ವಿವಾಹ ಬಲ ಕೂಡಿ ಬರಲಿದೆ. ಆರೋಗ್ಯದಲ್ಲಿ ವ್ಯತ್ಯಯ ಸಂಭವ, ರಕ್ತದೊತ್ತಡದ ಸಮಸ್ಯೆ ಕಾಣಿಸಿಕೊಳ್ಳಬಹುದು. ಬೆನ್ನು ನೋವು ಸಂಭವವಿದೆ. ಹೊಟೇಲು ಉದ್ಯಮಿಗಳಿ ಶುಭಕಾರಕವಾಗಿದ್ದು, ಚಿತ್ರೋದ್ಯಮಿಗಳಿಗೂ ಉನ್ನತಿಯಾಗಲಿದೆ. ಸಂತಾನ ಭಾಗ್ಯವೂ ಇದೆ. ಸುಬ್ರಹ್ಮಣ್ಯನ ಆರಾಧನೆ, ಗಣಪತಿ ಅಷ್ಟೋತ್ತರ ಜಪ, ಕೆಂಪು ಹವಳವನ್ನು ಚಿನ್ನದುಂಗುರದಲ್ಲಿ ಧರಿಸುವುದರಿಂದ ಪರಿಹಾರ ಸಾಧ್ಯ.

WD
ಧನು: ಇಷ್ಟವಿಲ್ಲದೆಡೆಗೆ ಸ್ಥಾನಪಲ್ಲಟ ಸಂಭವವಿದೆ. ಮಧುಮೇಹ, ರಕ್ತದೊತ್ತಡ ಸಮಸ್ಯೆ ಕಂಡುಬರಬಹುದು. ಅಫಘಾತ ಸಂಭವವಿದೆ. ವೃತ್ತಿಯಲ್ಲೂ ಕೊಂಚ ಏರುಪೇರಾಗುವ ಸಂಭವವಿದ್ದರೂ, ಶತ್ರುಗಳಿಂದ ತೊಂದರೆಯಿದೆ. ಜಾಗರೂಕರಾಗಿದ್ದು, ಮಾತಿನ ಮೇಲೆ ಹಿಡಿತ ಹೊಂದಿರುವುದು ಒಳ್ಳೆಯದು. ಶಿವ ಸಹಸ್ರನಾಮ ಪಾರಾಯಣ ದಿಂನ ಕಷ್ಟಗಳು ಪರಿಹಾರವಾಗಬಹುದು.

WD
ಮಕರ: ತಂದೆಯಿಂದ ಲಾಭವಾಗಬಹುದು. ಮಕ್ಕಳಿಂದಲೂ ಶುಭ ಸುದ್ದಿಯಿದೆ. ಹೆಣ್ಣು ಸಂತಾನ ಭಾಗ್ಯ ಸಂಭವವಿದೆ. ಆದರೆ ಹೆಂಡತಿಯರಿಗೆ, ತಂದೆಗೆ ಆರೋಗ್ಯ ಕೆಡುವ ಸಂಭವವಿದೆ. ವಿದೇಶ ಪ್ರಯಾಣ ಯೋಗವಿದ್ದು, ಸಾಲಗಳಿದ್ದರೆ ಅದು ತೀರುತ್ತದೆ. ಮಧುಮೇಹ, ಲಿವರ್ ಮತ್ತಿತರ ತೊಂದರೆಗಳು ಸಂಭವಿಸುವ ಸಂಭವವಿದೆ. ವಿಷ್ಣು ಸಹಸ್ರನಾಮ ಪಾರಾಯಣ, ಗೋಮೇದಕವನ್ನು ಮಧ್ಯದ ಬೆರಳಿಗೆ ಧರಿಸುವುದರಿಂದ ಸ್ವಲ್ಪ ಪರಿಹಾರ ಕಾಣಬಹುದು.

WD
ಕುಂಭ: ದೀರ್ಘಕಾಲದ ವಿಚ್ಛೇದನ ಪ್ರಕರಣವಿದ್ದರೆ ಅದರಿಂದ ಮುಕ್ತಿ ಸಿಗಲಿದ್ದು, ಮರು ಮದುವೆಯ ಸಂಭವವೂ ಇದೆ. ಗರ್ಭಿಣಿಯರಿಗೆ ತೊಂದರೆಯಿದ್ದು ಜಾಗರೂಕರಾಗಿರಬೇಕು. ಮದುವೆಯಾಗದವರಿಗೆ ಕಂಕಣ ಬಲ ಕೂಡಿ ಬರಲಿದೆ. ರಕ್ತದೊತ್ತಡ ಸಮಸ್ಯೆ ಇರಬಹುದು. ಶತ್ರುಗಳಿಂದ ಲಾಭವೇ ಹೆಚ್ಚು. ಪ್ರೇಮಿಗಳಿಗೂ ತಮ್ಮ ಪ್ರೇಮದ್ಲಲಿ ಜಯ ಲಭಿಸಲಿದೆ. ಮನೆ ಬದಲಾವಣೆಯಾಗಬಹುದು. ಗಣಪತಿ ಅಷ್ಟೋತ್ತರ ನಾಮ ಪಠಣ, ಶನಿ ಮಂತ್ರ ಜಪ, ಗೋಮೇದಕ ಬಲಗೈಯಲ್ಲಿ ಮಧ್ಯದ ಧಾರಣೆಯಿಂದ ಪರಿಹಾರ ಸಿಗಬಹುದು.

WD
ಮೀನ: ಯೋಚನೆ ಹೆಚ್ಚಾಗಬಹುದು. ಕೆಲವರಿಗೆ ಸಂತಸ ಲಭಿಸಿದರೆ, ಇನ್ನೂ ಕೆಲವರಿಗೆ ಜೀವನದಲ್ಲಿ ಆಸಕ್ತಿ ಕಡಿಮೆಯಾಗಿ ಜಿಗುಪ್ಸೆ ಬರಬಹುದು. ನಿರುತ್ಸಾಹ, ಆಧ್ಯಾತ್ಮದೆಡೆಗೆ ಒಲವು ಹೆಚ್ಚಾಗಬಹುದು. ವ್ಯಾಜ್ಯ ಪರಿಹಾರವಾಗಿ ಲಾಭವಾಗುವ ಸಂಭವವೂ ಇದೆ. ಆಸ್ತಿ ಲಾಭವಾಗಬಹುದು. ಮಕ್ಕಳಿಂದ ಅಸಮಾಧಾನ, ಮೂಳೆಗಳಲ್ಲಿ ಸಮಸ್ಯೆ ಕಂಡುಬರಬಹುದು. ನಿಯಮಿತ ವ್ಯಾಯಾಮ ಮಾಡಿದರೆ ಉತ್ತಮ. ಬೆನ್ನು, ಹೊಟ್ಟೆಗೆ ಸಂಬಂಧಿ ವಿಚಾರಗಳಲ್ಲಿ ಹುಷಾರಾಗಿರಿ. ಶಿವ ಸಹಸ್ರ ನಾಮ ಪಾರಾಯಣ, ಪಂಚಮುಖಿ ರುದ್ರಾಕ್ಷಿ ಧಾರಣೆಯಿಂದ ಕಷ್ಟ ಪರಿಹಾರವಾಗಿ ಕೊಂಚ ಫಲ ಸಿಗಬಹುದು.

ವೆಬ್ದುನಿಯಾವನ್ನು ಓದಿ