ಸೂರ್ಯಗ್ರಹಣ: ವೈಜ್ಞಾನಿಕವೋ? ಭವಿಷ್ಯಕ್ಕೆ ಮಾರಕವೋ?

ಶುಕ್ರವಾರ, 30 ಅಕ್ಟೋಬರ್ 2009 (17:34 IST)
PTI
ಬುಧವಾರ (ಜು.22) ನಡೆಯಲಿರುವ ಸಂಪೂರ್ಣ ಖಗ್ರಾಸ ಸೂರ್ಯಗ್ರಹಣದ ಹಿನ್ನೆಲೆಯಲ್ಲಿ ಜ್ಯೋತಿಷಿಗಳು ಮುಂದೆ ಕೆಟ್ಟ ಭವಿಷ್ಯ ಕಾದಿದೆ ಎಂದು ಭವಿಷ್ಯ ನುಡಿದರೆ, ಖಗೋಳವಿಜ್ಞಾನಿಗಳು ಇದೊಂದು ಕೇವಲ ವೈಜ್ಞಾನಿಕ ಘಟನೆ ಎಂದು ತಿಳಿಯಿರಿ ಎಂದು ಜನತೆಗೆ ಹೇಳಿದ್ದಾರೆ. ಹೀಗಾಗಿ ಜ್ಯೋತಿಷ್ಯ ಹಾಗೂ ಖಗೋಳ ವಿಜ್ಞಾನದ ನಡುವೆ ಜಿದ್ದಾಜಿದ್ದಿಗೆ ವೇದಿಕೆಯಾಗಿದೆ.

ಖ್ಯಾತ ಜ್ಯೋತಿಷಿ ದೈವಜ್ಞ ಕೆ.ಎನ್.ಸೋಮಯಾಜಿ ಅವರು, ಮಹಾಭಾರತ ಯುದ್ಧ, ಎರಡನೇ ವಿಶ್ವಯುದ್ಧ, ಇಂದಿರಾ ಗಾಂಧಿ ಮರಣ ಎಲ್ಲವೂ ಖಗ್ರಾಸ ಸೂರ್ಯಗ್ರಹಣದ ನಂತರವೇ ನಡೆದುದು ಎಂದಿದ್ದಾರೆ.

ಸೋಮಯಾಜಿ ಹೇಳುವಂತೆ, ಸೂರ್ಯಗ್ರಹಣದ ಸಂದರ್ಭ ಮಾನಸಿಕವಾಗಿಯೂ ಪ್ರತಿಯೊಬ್ಬನೂ ಸ್ವಲ್ಪ ಹೆಚ್ಚೇ ಹೈಪರ್ ಸೆನ್ಸಿಟಿವ್ ಆಗುತ್ತಾನೆ. ಯಾಕೆಂದರೆ ಸೂರ್ಯಗ್ರಹಣ ಋಣಾತ್ಮಕ ಶಕ್ತಿಯನ್ನು ಹೊರಹಾಕುತ್ತದೆ. ಇದರ ಫಲ ಮಾನಸಿಕವಾಗಿಯೂ ಬೀರುತ್ತದೆ. ಹಾಗಾಗಿ ಇದಕ್ಕೆ ಉತ್ತಮ ಉಪಾಯ ಯಜ್ಞ, ಯಾಗ, ಪೂಜೆಗಳನ್ನು ನಡೆಸುವುದು ಅಥವಾ ಯಾವುದಾದರೂ ದೇವಸ್ಥಾನಕ್ಕೆ ಹೋಗಿ ಪ್ರಾರ್ಥಿಸುವುದು ಎನ್ನುತ್ತಾರೆ.

ಜ್ಯೋತಿಷಿಗಳು ಸೂರ್ಯಗ್ರಹಣದಿಂದ ಕೆಟ್ಟ ಪರಿಣಾಮವಿದೆ. ಭವಿಷ್ಯದ ಮೇಲೆ ಇದು ಪರಿಣಾಮ ಬೀರುತ್ತದೆ ಎಂದೆಲ್ಲಾ ಹೇಳಿರುವುದನ್ನು ಖಗೋಳವಿಜ್ಞಾನಿಗಳು ತಳ್ಳಿಹಾಕಿದ್ದಾರೆ. ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಆಸ್ಟ್ರೋಫಿಸಿಕ್ಸ್‌ (ಐಐಎ)ನ ನಿರ್ದೇಶಕ ಸಿರಾಜ್ ಹಾಸನ್ ಅವರು ಇದೆಲ್ಲಾ ಅಪಭ್ರಂಶ ಎಂದಿದ್ದಾರೆ. ಸೂರ್ಯಗ್ರಹಣ ಸೂರ್ಯ ಹಾಗೂ ಭೂಮಿಯ ಮಧ್ಯೆ ಚಂದ್ರ ಹಾದುಹೋಗುವಾಗ ನಡೆಯುವಂತಹ ಸಾಮಾನ್ಯ ಕ್ರಿಯೆ. ಚಂದ್ರ ಸೂರ್ಯನನ್ನು ನೋಡಲಾಗದಂತೆ ಅಡ್ಡವಿರುತ್ತಾನೆ. ಇಂತಹ ಕೇವಲ ವೈಜ್ಞಾನಿಕ ಕ್ರಿಯೆಯನ್ನು ವೈಜ್ಞಾನಿಕವಾಗಿಯೇ ನೋಡಿ ಎಂದಿದ್ದಾರೆ.

ಬೆಂಗಳೂರು ಸೈನ್ಸ್ ಫೋರಂ‌ನ ಅಧ್ಯಕ್ಷ ಎ.ಎಚ್.ರಾಮರಾವ್, ಸೂರ್ಯಗ್ರಹಣಕ್ಕೂ ಇಂತಹ ಮೂಢನಂಬಿಕೆಗಳಿಗೂ ಸಂಬಂಧವೇ ಇಲ್ಲ. ಜ್ಯೋತಿಷಿಗಳು ಜನರ ಹಾದಿ ತಪ್ಪಿಸುತ್ತಿದ್ದಾರೆ. ಅದಕ್ಕಾಗಿ ಜನರಿಗೆ ವೈಜ್ಞಾನಿಕ ಅರಿವು ಅಗತ್ಯ. ಜನರು ಇಂತಹ ಮೂಢನಂಬಿಕೆಗಳಿಗೆ ಬಲಿಯಾಗಬಾರದು. ವೈಜ್ಞಾನಿಕ ಕ್ರಿಯೆಯನ್ನು ವೈಜ್ಞಾನಿಕವಾಗಿಯೇ ನೋಡಬೇಕು ಎಂದಿದ್ದಾರೆ.

PTI
ಈ ಬಾರಿಯ ಸೂರ್ಯಗ್ರಹಣ ಈ ಶತಮಾನದ ಅತಿ ಹೆಚ್ಚು ಅವಧಿಯ ಸೂರ್ಯಗ್ರಹಣವಾಗಿದೆ. ಆರು ನಿಮಿಷ ಹಾಗೂ 39 ಸೆಕೆಂಡುಗಳ ಕಾಲ ನಡೆಯುವ ಈ ಸೂರ್ಯಗ್ರಹಣ ಆಗ್ನೇಯ ಏಷ್ಯಾ ಹಾಗೂ ಪಶ್ಚಿಮ ರಾಷ್ಟ್ರಗಳಲ್ಲಿ ಕಾಣಿಸಲಿದೆ. ಬೆಂಗಳೂರಿಗರಿಗೆ ಸ್ವಲ್ಪ ಮಾತ್ರವೇ ಗೋಚರಿಸಲಿದೆ. ಬೆಂಗಳೂರಿನಲ್ಲಿ ಬುಧವಾರ ಮುಂಜಾನೆ ಸೂರ್ಯ ಮೂಡುವ ಮುನ್ನ 5.38ರ ಹೊತ್ತಿಗೆ ನಡೆಯುವುದರಿಂದ ಉದಯವಾಗುತ್ತಿರುವ ಸೂರ್ಯನೇ ಗ್ರಹಣಕ್ಕೆ ಒಳಗಾಗಿರುತ್ತಾನೆ. ಆಗ ಶೇ.66ರಷ್ಟು ಸೂರ್ಯ ಗೋಚರಿಸಬಹುದು ಎಂದು ಐಐಎ ಅಧಿಕೃತ ಪ್ರಕಟಣೆ ತಿಳಿಸಿದೆ.

ಲಾಲ್‌ಬಾಗ್ ಬೊಟಾನಿಕಲ್ ಗಾರ್ಡನ್ ಬಳಿ ಮುಂಜಾನೆಯಿಂದ ಬೆಳಿಗ್ಗೆ 7.17ರವರೆಗೆ ಹಲವು ವಿಜ್ಞಾನಿಗಳು, ಹಾಗೂ ಐಐಎ ವಿದ್ಯಾರ್ಥಿಗಳು ಈ ಸಂಪೂರ್ಣ ಸೂರ್ಯಗ್ರಹಣದ ವೀಕ್ಷಣೆ ಹಾಗೂ ಸಂಶೋಧನೆ ನಡೆಸಲಿದ್ದಾರೆ. ಇದಕ್ಕೆ ಆಸಕ್ತರೂ ಸೇರಿಕೊಳ್ಳಬಹುದು. ವಿಜ್ಞಾನಿಗಳು ಈ ಸೂರ್ಯಗ್ರಹಣದ ಬಗ್ಗೆ ಮಾಹಿತಿಗಳನ್ನೂ ನೀಡುತ್ತಾರೆ.

ಇನ್ನೊಂದು ವಿಜ್ಞಾನಿಗಳ ಗುಂಪು ಬನ್ನೇರುಘಟ್ಟ ನ್ಯಾಷನಲ್ ಪಾರ್ಕ್ ಬಳಿ ಸೂರ್ಯಗ್ರಹಣ ವೀಕ್ಷಿಸಲಿದ್ದಾರೆ. ಭಾರತೀಯ ವಿಜ್ಞಾನ ಮಂದಿರ(ಐಐಎಸ್ಸಿ) ಬೆಳಿಗ್ಗೆ ಆರು ಗಂಟೆಯಿಂದ ಸೂರ್ಯ ಗ್ರಹಣ ವೀಕ್ಷಣೆಗೆ ಬನ್ನೇರುಘಟ್ಟದಲ್ಲಿ ವ್ಯವಸ್ಥೆ ಮಾಡಿದೆ.

ಸಂಪೂರ್ಣ ಸೂರ್ಯಗ್ರಹಣದ ವೇಳೆ ಸೂರ್ಯನ ಹೊರಮೈ ಅರ್ಥಾತ್ ಉಂಗುರದಂತಹ ರಚನೆಯ ಪ್ರಭಾವಲಯ ತುಂಬ ಸುಂದರವಾಗಿ ಅಲ್ಲದೆ ಅಷ್ಟೇ ಸ್ಪಷ್ಟವಾಗಿ ಗೋಚರಿಸುತ್ತದೆ. ರಕ್ಷಣಾ ಕನ್ನಡಕಗಳನ್ನು ಧರಿಸಿ ಈ ಸುಂದರ ಅಪರೂಪದ ಸೂರ್ಯಗ್ರಹಣ ದೃಶ್ಯವನ್ನು ಸವಿಯಬಹುದು. ಜ್ಯೋತಿಷ್ಯದ ಭಯದಿಂದ ಇಂತಹ ಅಪರೂಪ ವಿಶಿಷ್ಟ ಸನ್ನಿವೇಶವನ್ನು ಸವಿಯದೆ ಇರಬೇಡಿ ಎನ್ನುತ್ತಾರೆ ಐಐಎಯ ವಿಜ್ಞಾನಿ ಹಾಗೂ ಪ್ರೊಫೆಸರ್ ಪ್ರಜ್ವಲ್ ಶಾಸ್ತ್ರಿ.

ವಿಜ್ಞಾನಿಗಳು ಸೂರ್ಯಗ್ರಹಣ ವೀಕ್ಷಣೆಗೆ ಭಾರೀ ತಯಾರಿ ಮಾಡುತ್ತಿದ್ದಂತೆಯೇ ಇತ್ತ ನಗರದಲ್ಲಿ ಧಾರ್ಮಿಕ ವಿಧಿಗಳೂ ಹೆಚ್ಚಿವೆ. ದೇವಸ್ಥಾನಗಳು ವಿಶೇಷ ಪೂಜೆಗೆ ತಯಾರಿ ನಡೆಸುತ್ತಿವೆ. ಸೂರ್ಯಗ್ರಹಣದ ಕೆಟ್ಟ ಪರಿಣಾಮಗಳನ್ನು ದೂರ ಸರಿಸಲು ದೇವಾಲಯಗಳು ಮೃತ್ಯುಂಜಯ ಜಪ, ಹವನ, ಉದಕ ಶಾಂತಿ, ನಕ್ಷತ್ರ ಹವನ ಹೀಗೆ ಹಲವು ಯೋಮ ಹವನಗಳನ್ನು ನಗರದ ಬಹುತೇಕ ದೇವಸ್ಥಾನಗಳು ಮುಂಜಾವಿನಲ್ಲೇ ನಡೆಸಲಿವೆ.

ND
ಇಸ್ಕಾನ್‌ನ ಪೂಜಾ ಸದಸ್ಯರೊಬ್ಬರು ಹೇಳುವಂತೆ, ನಾವು ಬುಧವಾರ ಸೂರ್ಯಗ್ರಹಣ ಬಿಟ್ಟ ತಕ್ಷಣ ಹಲವು ವಿಶೇಷ ಪೂಜೆ ಹವನಗಳನ್ನು ನಡೆಸಿ ದುಷ್ಟ ಶಕ್ತಿಯ ನಿಗ್ರಹಕ್ಕೆ ಪ್ರಾರ್ಥಿಸುತ್ತೇವೆ ಎನ್ನುತ್ತಾರೆ.

ಆದರೆ ವಿಜ್ಞಾನಿ ಶಾಸ್ತ್ರಿ ಹೇಳುವಂತೆ, ಸಾಫ್ಟ್‌ವೇರ್ ಎಂಜಿನಿಯರುಗಳೂ ಸೇರಿದಂತೆ ಬಹುತೇಕ ಯುವ ವಿದ್ಯಾವಂತರೂ ಕೂಡಾ ಇಂತಹ ಮೂಢನಂಬಿಕೆಗಳನ್ನು ಆಚರಿಸುತ್ತಾರೆ. ಇದಕ್ಕೆ ತಾಜಾ ಸಾಕ್ಷಿ, ಬೆಂಗಳೂರಿನಂತಹ ವಿದ್ಯಾವಂತರ ಮಹಾನಗರಿಯಲ್ಲೇ ಚಂದ್ರಗ್ರಹಣ ಸೂರ್ಯಗ್ರಹಣಗಳಾದಾಗ ರಸ್ತೆಗಳು ಖಾಲಿ ಹೊಡೆಯುತ್ತವೆ. ವಾಹನಗಳೇ ಇರುವುದಿಲ್ಲ. ಹೊರಗೆ ಬಂದರೆ ಅಪಾಯ ಎಂದು ಅವರು ಆದಷ್ಟು ಇಂತಹ ಸಮಯದಲ್ಲಿ ಒಳಗೇ ಕೂರುತ್ತಾರೆ ಎಂದು ಬೇಸರ ವ್ಯಕ್ತಪಡಿಸುತ್ತಾರೆ. ಆದರೂ ವಿಜ್ಞಾನದಲ್ಲಿ ಆಸಕ್ತಿಯಿರುವ ಮಂದಿ ಸೂರ್ಯನ ಪ್ರಭಾವಲಯ ಸಂಶೋಧನೆಗೆ ಇದು ಸೂಕ್ತ ಸಮಯ ಎನ್ನುತ್ತಾರೆ ಅವರು.

ಬೆಂಗಳೂರಿನ ಐಟಿ ಉದ್ಯೋಗಿ ಪೂಜಾ ಮೋಹನ್ ಹೇಳುವಂತೆ, ವಿದ್ಯಾವಂತರಲ್ಲೂ ಇಂತಹ ಮೂಢನಂಬಿಕೆ ಇರುವುದು ಸತ್ಯ. ಆದರೆ ವಿಜ್ಞಾನದಲ್ಲಿ ನಂಬಿಕೆ ಇರುವವರು ಇಂತಹ ಮೂಢನಂಬಿಕೆಗಳನ್ನು ಕಿತ್ತು ಹಾಕಬೇಕು ಎನ್ನುತ್ತಾರೆ. ಕಾಲೇಜು ವಿದ್ಯಾರ್ಥಿನಿ ದೀಪಿಕಾ ಹೇಳುವಂತೆ, ನಾನು ನನ್ನ ಎಲ್ಲ ಗೆಳೆಯ ಗೆಳತಿಯರ ಜತೆಗೆ ಈ ಅಪರೂಪದ ಸೂರ್ಯಗ್ರಹಣ ಸವಿಯುತ್ತೇನೆ ಎನ್ನುತ್ತಾರೆ.