ಅಪರೂಪದ ಕಂಕಣ ಸೂರ್ಯ ಗ್ರಹಣ: ಶುಭಾಶುಭ ಫಲಗಳು

ಆರ್. ಸೀತಾರಾಮಯ್ಯ, ಶಿವಮೊಗ್ಗ

PTI
ಖಗೋಲ ವಿದ್ಯಾಮಾನದಲ್ಲಿ, ಸೂರ್ಯ, ಚಂದ್ರ ಮತ್ತು ಭೂಮಿಯ ಸಹವರ್ತನೆಯಿಂದ, ತಮ್ಮದೇ ಆದ, ಚಲನೆಯ ಪಥಗಳನ್ನು ಹೊಂದಿರುವ, ಇವುಗಳ ವಿಶಿಷ್ಟ ಹೊಂದಾಣಿಕೆಯಿಂದ, ನಿರ್ದಿಷ್ಟ ಸ್ಥಳಗಳಲ್ಲಿ, ನಿಶ್ಚಿತ ಸಮಯಕ್ಕೆ, ನೆರಳಿನ ಪರಿಮಾಣಕ್ಕೆ ಅನುಗುಣವಾಗಿ, ಪಾರ್ಶ್ವ, ಕಂಕಣ ಹಾಗೂ ಪೂರ್ಣ ಗ್ರಹಣಗಳು ಸಂಭವಿಸುತ್ತಿರುತ್ತವೆ. ಸೂರ್ಯಗ್ರಹಣ ಅಮಾವಾಸ್ಯೆಯಂದು, ಚಂದ್ರಗ್ರಹಣ ಹುಣ್ಣಿಮೆಯಂದು ಸಂಭವಿಸುತ್ತದೆ.

ಈ ಕಂಕಣ ಸೂರ್ಯಗ್ರಹಣವು ಸಾರೋಸ್‌ನ 141ನೇ ಸರಣಿಯಲ್ಲಿ ಬರುವ 70 ಗ್ರಹಣಗಳಲ್ಲಿ 23ನೇಯ ಗ್ರಹಣವಾಗಿದೆ. ಈ ಗ್ರಹಣವು ಚಂದ್ರನ ಕೋನಿಯ ಗಾತ್ರ, ಸೂರ್ಯನ ಗಾತ್ರಕ್ಕಿಂತ ಚಿಕ್ಕದಾಗುವ, ಸೂರ್ಯನ ಪ್ರಭಾಗೋಳ ಪೂರ್ತಿಯಾಗಿ ಮುಚ್ಚದೆ, ಬಳೆಯಂತೆ ಕಂಡುಬರುವ, ಕಂಕಣಾಕೃತಿಯಲ್ಲಿ ಕಂಡುಬರುತ್ತದೆ. ಈ ಅಪರೂಪದ ಕಂಕಣಾಕೃತಿ ಸೂರ್ಯಗ್ರಹಣವನ್ನು ನೋಡುವುದು ಅತೀ ವಿರಳ. ಭಾರತದಲ್ಲಿ ಈ ಹಿಂದೆ 20-07-1944ರಂದು ಭಾರತದಲ್ಲಿ ಗೋಚರಿಸಿತ್ತು. ಮತ್ತೆ ಭಾರತದಲ್ಲಿ ಮುಂದಿನ ಕಂಕಣಾಕೃತಿ ಸೂರ್ಯಗ್ರಹಣ ವೀಕ್ಷಿಸುವ ಅವಕಾಶ 2019 ರ ಡಿಸೆಂಬರ್ 26 ರಂದು ದೊರೆಯುತ್ತದೆ. ಆಗ ಕರ್ನಾಟಕ, ತಮಿಳುನಾಡುವಿನಲ್ಲಿ ಕಂಕಣ ಸೂರ್ಯ ಗ್ರಹಣ ಹಾದು ಹೋಗುತ್ತದೆ.

ಇದೇ ಜನವರಿ 15 ರಂದು ಶುಕ್ರವಾರ, ಕಂಕಣ ಸೂರ್ಯಗ್ರಹಣ ಸಂಭವಿಸುತ್ತದೆ. ಭಾರತೀಯ ಕಾಲಮಾನ ಬೆಳೆಗ್ಗೆ 9 ಗಂಟೆ 35 ನಿಮಿಷಕ್ಕೆ ಗ್ರಹಣ ಸ್ಪರ್ಶವಾಗಲಿದ್ದು, ಮದ್ಯಾಹ್ನ 3 ಗಂಟೆ 38 ನಿಮಿಷಕ್ಕೆ ಗ್ರಹಣ ಮೋಕ್ಷ ಉಂಟಾಗುತ್ತದೆ. ಒಟ್ಟು ಗ್ರಹಣದ ಕಾಲ 6 ಗಂಟೆ 3 ನಿಮಿಷಗಳು. ಗ್ರಹಣದ ಕಂಕಣಾ ಕೃತಿಯ ಪೂರ್ಣತೆಯ ಅವಧಿ 11 ನಿಮಿಷ 8 ಸೆಕೆಂಡುಗಳು ಗ್ರಹಣದ ಗ್ರಾಸ ಪ್ರಮಾಣ 0.919 ರಷ್ಟಿರುತ್ತದೆ. ಗ್ರಹಣದ ನೆರಳು ಸುಮಾರು 300 ಕಿ.ಮೀ ವಿಸ್ತಾರದ ಪಥದಲ್ಲಿ ಭೂಮಿಯ ಅರ್ಧಭಾಗದಷ್ಟು ಕ್ರಮಿಸುತ್ತದೆ. ಈ ಗ್ರಹಣವು, ಮಧ್ಯ ಆಫ್ರಿಕಾ ಗಣರಾಜ್ಯದಲ್ಲಿ ಪ್ರಾರಂಭವಾಗಿ, ಕಾಂಗೋ, ಉಗಾಂಡ, ಕೀನ್ಯಾ, ಸೊಮಾಲಿಯಾ, ಮೂಲಕ ಹಾಯ್ದು, ಹಿಂದೂ ಮಹಾಸಾಗರ ಮೂಲಕ ಭಾರತದ ದಕ್ಷಿಣ ದಂಡೆಯ ಮೇಲೆ, ನೈರುತ್ಯದಿಂದ, ಈಶಾನ್ಯದ ಕಡೆಗೆ ಸಾಗಿ, ಶ್ರೀಲಂಕ, ಬಾಂಗ್ಲಾದೇಶ, ಬರ್ಮ, ಚೀನಾ ಮೇಲೆ ಹಾಯ್ದು ನಂತರ ಗ್ರಹಣ ಮುಕ್ತಾಯವಾಗುತ್ತದೆ.

ಕಂಕಣಾಕೃತಿ ಕಂಡುಬರುವ ಪರಿಪೂರ್ಣ ಪಟ್ಟಿ, ನೈರುತ್ಯದಿಂದ, ಈಶಾನ್ಯದ ಕಡೆಗೆ ದಕ್ಷಿಣಭಾರತದ ಸ್ಥಳಗಳಾದ, ರಾಮೇಶ್ವರಂ, ಕನ್ಯಾಕುಮಾರಿ, ನಾಗರ್ಕೋಯಿಲ್, ತಿರುನಲ್ವೇಲಿ, ತಾಂಜಾವೂರ್, ತ್ರೀವೇಂದ್ರಮ್, ಮಧುರೈ ಸ್ಥಳಗಳಲ್ಲಿ ಮುಂದುವರೆಯುತ್ತದೆ. ಈ ಸ್ಥಳಗಳಲ್ಲಿ ಮಾತ್ರ ಕಂಕಣಾಕೃತಿಯ ಸೂರ್ಯನನ್ನು ವೀಕ್ಷಿಸಬಹುದು. ರಾಮೇಶ್ವರಂನಲ್ಲಿ ಕಂಕಣಾಕೃತಿಯ ಮಧ್ಯಕಾಲದ ಪೂರ್ಣತೆಯ ಅವಧಿ 10 ನಿಮಿಷ 11 ಸೆಕೆಂಡುಗಳವರೆಗಿರುತ್ತದೆ. ಇದು ಕಂಕಣಾಕೃತಿ ಗ್ರಹಣ ವೀಕ್ಷಣೆಗೆ ಸೂಕ್ತವಾದ ಸ್ಥಳವಾಗಿದೆ. ಭಾರತದ ಉಳಿದ ಸ್ಥಳಗಳಲ್ಲಿ ಖಂಡಗ್ರಾಸ (ಭಾಗಶಃ) ಸೂರ್ಯ ಗ್ರಹಣ ಗೋಚರಿಸುತ್ತದೆ.

ಭಾರತದಲ್ಲಿ, ಭಾರತೀಯ ಕಾಲಮಾನ ಬೆಳೆಗ್ಗೆ 11 ಗಂಟೆಗೆ ಗ್ರಹಣ ಸ್ಪರ್ಶಕಾಲ ಉಂಟಾಗುತ್ತದೆ. ಮಧ್ಯಾಹ್ನ 1 ಗಂಟೆ 20 ನಿಮಿಷಕ್ಕೆ ಗ್ರಹಣದ ಮಧ್ಯಕಾಲವಾಗಿರುತ್ತದೆ. ಮದ್ಯಾಹ್ನ 3 ಗಂಟೆ 30 ನಿಮಿಷಕ್ಕೆ ಗ್ರಹಣದ ಮೋಕ್ಷ ಕಾಲವಾಗಿರುತ್ತದೆ. ಕರ್ನಾಟಕದಲ್ಲಿ ಆಯಾಸ್ಥಳದಲ್ಲಿ ಅಕ್ಷಾಂಶ - ರೇಖಾಂಶಕ್ಕನುಗುಣವಾಗಿ ಗ್ರಹಣದ ಸ್ಪರ್ಶಕಾಲ, ಮೋಕ್ಷಕಾಲ ವ್ಯತ್ಯಾಸವಾಗುತ್ತದೆ.

ರಾಶಿಗಳ ಮೇಲೆ ಪರಿಣಾಮ: ಪಂಚಾಂಗಗಳ ಪ್ರಕಾರ ರಾಹುಗ್ರಸ್ತ ಕಂಕಣ ಸೂರ್ಯ ಗ್ರಹಣವು ಮಕರಾಶಿಯಲ್ಲಿ ಉತ್ತರಾಷಾಡ ನಕ್ಷತ್ರದಲ್ಲಿ ಹಿಡಿಯುತ್ತದೆ. ಜನ್ಮರಾಶಿಯಿಂದ, ಮೇಷ, ಸಿಂಹ, ವೃಶ್ಚಿಕ, ಮೀನ ರಾಶಿಯವರಿಗೆ ಶುಭ ಫಲ, ವೃಷಭ, ಕಟಕ, ಕನ್ಯಾ, ಧನಸ್ಸು ರಾಶಿಯವರಿಗೆ ಮಿಶ್ರಫಲ, ಮಿಥುನ, ತುಲ, ಮಕರ, ಕುಂಭ ರಾಶಿಯವರಿಗೆ ಅಶುಭಫಲ ಉಂಟಾಗುತ್ತದೆ. ಅಶುಭ ಫಲವಿರುವ ರಾಶಿಯವರು ಮತ್ತು ಗರ್ಭಿಣಿ ಸ್ತ್ತ್ರೀಯರು, ಗ್ರಹಣ ನೋಡಬಾರದು, ಉತ್ತರಾಷಾಡ ನಕ್ಷತ್ರದವರು ಗ್ರಹಣ ಶಾಂತಿ ಮಾಡಿಸುವುದು ಸೂಕ್ತ.

ಧಾರ್ಮಿಕ ವಿಧಿ ಆಚಾರಣೆಗಳನ್ನು ಆಚರಿಸುವವರು, ಗ್ರಹಣವು ಶುಕ್ರವಾರ ಎರಡನೇ ಪ್ರಹರದಲ್ಲಿ ಪ್ರಾರಂಭವಾಗುವುದರಿಂದ, ಹಿಂದಿನ ದಿವಸ ಗುರುವಾರ ರಾತ್ರಿ 9-34 ಗಂಟೆಗೆ ವೇಧ ಪ್ರಾರಂಭವಾಗುವುದರಿಂದ ಶಕ್ತರು ಆಹಾರ ಸೇವಿಸಬಾರದು. ಅಶಕ್ತರು, ಅನಾರೋಗ್ಯದವರು ಶುಕ್ರವಾರ ಸೂರ್ಯೋದಯದಿಂದ ವೇಧವನ್ನು ಪಾಲಿಸಬೇಕು. ಗ್ರಹಣ ಸ್ಪರ್ಶ ಕಾಲದಿಂದ ಮೋಕ್ಷದವರೆಗೆ ಪುಣ್ಯಕಾಲವಾಗಿರುತ್ತದೆ.

ಗ್ರಹಣಕಾಲದಲ್ಲಿ ಏನು ಮಾಡಬೇಕು?: ಗ್ರಹಣ ಸ್ಪರ್ಶ ಕಾಲದಲ್ಲಿ ಸ್ನಾನ, ಗ್ರಹಣ ಮಧ್ಯ ಕಾಲದಲ್ಲಿ ಹೋಮ ಅಥವಾ ದೇವತಾರ್ಚನೆ ಮತ್ತು ಶ್ರಾದ್ಧ, ಗ್ರಹಣ ಬಿಡುವ ಸಮಯದಲ್ಲಿ ದಾನ, ಮೋಕ್ಷಾ ನಂತರ ಪುನಃ ಸ್ನಾನ ಮಾಡುವುದು ಕ್ರಮವಾಗಿದೆ. ಗ್ರಹಣ ಸ್ಪರ್ಶ ಕಾಲದಲ್ಲಿ ಹರಿಯುವ ನೀರು, ಸರೋವರ, ನದಿ, ಸಮುದ್ರಗಳಲ್ಲಿ ಸ್ನಾನಮಾಡಬೇಕು. ಸಾಧ್ಯವಾಗದಿದ್ದಲ್ಲಿ ಮನೆಯಲ್ಲೇ ತಣ್ಣೀರಿನಲ್ಲಿ ಸ್ನಾನ ಮಾಡುವುದು ಉತ್ತಮ, ಸ್ನಾನಾ ನಂತರ, ಮೋಕ್ಷ ಸಮಯದವರೆಗೆ, ಪೂಜೆ, ಜಪ, ತರ್ಪಣ, ಗ್ರಹಣ ಶ್ರಾದ್ಧ ಇವುಗಳ ಪೈಕಿ ಶಕ್ಯವಾದುದ್ದನ್ನು ಮಾಡಬೇಕು. ಗ್ರಹಣ ಕಾಲದಲ್ಲಿ ಮೊದಲು ತೆಗೆದುಕೊಂಡಿರುವ ಮಂತ್ರದ ಪುನಶ್ಚರಣ ಮಾಡಬೇಕು. ಇಲ್ಲದಿದ್ದಲ್ಲಿ ಮಂತ್ರಶಕ್ತಿ ಕ್ಷೀಣಿಸುತ್ತದೆ. ಹೊಸ ಮಂತ್ರಗಳನ್ನು ಪ್ರಾರಂಭಿಸಲು ಮತ್ತು ಮಂತ್ರದ ಪನಶ್ಚರಣ ಮಾಡಲು ಸೂರ್ಯಗ್ರಹಣದ ಕಾಲ ಅತ್ಯಂತ್ರ ಶ್ರೇಷ್ಠವಾಗಿದೆ. ಗ್ರಹಣಕಾಲದಲ್ಲಿ ನಿದ್ರೆ, ಅಭ್ಯಂಗ, ಆಹಾರ ಸೇವನೆ ಹಾಗೂ ಇತರೆ ಕಾರ್ಯಗಳನ್ನು ಮಾಡಬಾರದು. ಗ್ರಹಣ ಕಾಲದಲ್ಲಿ ಮಾಡುವ ಯಾವುದೇ ದಾನವು, ಭೂದಾನಕ್ಕೆ ಸಮಾನ, ಗ್ರಹಣಕಾಲದಲ್ಲಿ ಎಲ್ಲಾ ಜಲವು ಗಂಗಾ ಜಲಕ್ಕೆ ಸಮಾನವಾಗಿರುತ್ತದೆ.

ತೀರ್ಥಕ್ಷೇತ್ರಗಳಲ್ಲಿಯೂ, ಸಿದ್ಧ ಕ್ಷೇತ್ರಗಳಲ್ಲಿಯೂ, ಶಿವಾಲಯಗಲ್ಲಿಯೂ ಗ್ರಹಣ ಕಾಲದಲ್ಲಿ ಮಂತ್ರವನ್ನು ಉಪದೇಶಿಸಿದರೆ, ಅದು ದೀಕ್ಷೊಪದೇಶವಾಗುವುದೆಂದು ಧರ್ಮ ಸಿಂಧುವಿನಲ್ಲಿ ಹೇಳಿದೆ. ಅಲ್ಲದೆ ಗ್ರಹಣ ಕಾಲದ ಆಚರಣೆಗಳನ್ನು ಮತ್ಸ್ಯಪುರಾಣದ 67 ನೇ ಅಧ್ಯಾಯದಲ್ಲಿ ವಿವರಿಸಿದ್ದಾರೆ.

ಗ್ರಹಣ ಪರಿಣಾಮ: ಬೃಹತ್ ಸಂಹಿತೆಯಲ್ಲಿ ಧನಸ್ಸು ಮತ್ತು ಮಕರರಾಶಿ ಮಧ್ಯದಲ್ಲಿ ಸೂರ್ಯಗ್ರಹಣ ಸಂಭವಿಸುವುದರಿಂದ, ಪ್ರಮುಖ ಮಂತ್ರಿಗಳಿಗೂ, ಕುಸ್ತಿಪಟುಗಳಿಗೆ, ವೈದ್ಯರು, ವ್ಯಾಪಾರಸ್ಥರು, ಗುರುಗಳಿಗೆ, ಅಶ್ವಗಳಿಗೆ ಹಾಗೂ ಮೀನುಗಳಿಗೆ ಅಲ್ಲದೆ ಕೆಳವರ್ಗದ ಜನತೆಗೆ, ಮಾಂತ್ರಿಕರಿಗೆ ಮೂಲಿಕೆ ಔಷಧಿ ತಯಾರಕರಿಗೆ ತೊಂದರೆ ಉಂಟಾಗುತ್ತದೆ. ಗ್ರಹಣದ ಜೊತೆ ಶುಕ್ರನಿದ್ದು ಕುಜನ ದೃಷ್ಠಿ ಗ್ರಹಣಕ್ಕಿರುವುದರಿಂದ ಮಹಿಳೆಯರಿಗೆ ಹೆಚ್ಚಾಗಿ ತೊಂದರೆ ಉಂಟಾಗುತ್ತದೆ. ಪೌಷ ಮಾಸದಲ್ಲಿ ಗ್ರಹಣವಾಗುವುದರಿಂದ ಬ್ರಾಹ್ಮಣ, ಕ್ಷತ್ರಿಯರಿಗೆ ತೊಂದರೆ, ಮಳೆ ಕಡಿಮೆ, ಮಹಿಳೆಯರಿಗೆ ಹೆಚ್ಚಿನ ಕಳವಳ ಉಂಟಾಗುತ್ತದೆಂದು ಸೂಚಿಸಿದೆ.

ಗ್ರಹಣಗಳಿಂದ ರಾಷ್ಟ್ತ್ರಗಳ ಕುಂಡಲಿಗಳಲ್ಲಿ ಗ್ರಹಣ ಸಂಭವಿಸುವ ರಾಶಿಯನ್ನು ಗುರ್ತಿಸಿ, ಆ ರಾಶಿ ಲಗ್ನದಿಂದ ಯಾವ ಭಾವವೆಂದು, ಆ ಭಾವ ನೀಡುವ ಶುಭಫಲ ಅಥವಾ ಅಶುಭಫಲವನ್ನು ವಿಶ್ಲೇಷಿಸಬಹುದು. ಜೊತೆಗೆ ವಾರ್ಷಿಕ ಕುಂಡಲಿ ತಯಾರಿಸಿಕೊಂಡು ಇದರ ಆಧಾರದಿಂದ ನಿಖರವಾಗಿ ಶುಭ ಅಥವಾ ಅಶುಭ ಫಲವನ್ನು ವಿಶ್ಲೇಷಿಸಬಹುದು. ಅಲ್ಲದೆ ರಾಜಕೀಯ ಪಕ್ಷಗಳ, ಸಂಘಗಳ, ಸಮಾಜ ಹಾಗೂ ವರ್ಗಗಳ ಮತ್ತು ಅತೀ ಪ್ರಾಮುಖ್ಯ ವ್ಯಕ್ತಿಗಳ (ಪ್ರಧಾನಮಂತ್ರಿ, ರಾಷ್ಟ್ತ್ರಪತಿ) ವಿದ್ಯಮಾನಗಳನ್ನು ವಿಶ್ಲೇಷಿಸಬಹುದು. ಯಾವ ರಾಶಿಯಲ್ಲಿ ಗ್ರಹಣ ಸಂಭವಿಸುತ್ತದೆಯೋ ಆ ರಾಶಿಗೆ ಗೋಚರದಲ್ಲಿ ಕುಜನ ದೃಷ್ಟಿ ಪಡೆದಾಗ ಅಶುಭ ಫಲವನ್ನು ಅನುಭವಿಸಬೇಕಾಗುತ್ತದೆ. ಸೂರ್ಯಗ್ರಹಣವಾಗಿ 6 ತಿಂಗಳುಗಳಲ್ಲಿ ಚಂದ್ರ ಗ್ರಹಣವಾಗಿ 3 ತಿಂಗಳುಗಳಲ್ಲಿ ಗ್ರಹಣದ ಫಲ ಉಂಟಾಗುತ್ತದೆ. ಒಬ್ಬ ವ್ಯಕ್ತಿಯ ವೈಯಕ್ತಿಕ ಘಟನೆಗಳನ್ನು ಗ್ರಹಣದಿಂದ ವಿಶ್ಲೇಷಿಸಲು ಸಾಧ್ಯವಾಗುವುದಿಲ್ಲ.

ಗ್ರಹಣ- ಭಯ ಬೇಡ: ಆಕಾಶ ಕಾಯದಲ್ಲಿ ಸಂಭವಿಸುವ ಗ್ರಹಣಗಳು ಒಂದು ನೈಸರ್ಗಿಕ ಕ್ರಿಯೆ. ಅದೊಂದು ನಿಸರ್ಗದ ಸುಂದರ ಪ್ರದರ್ಶನ. ಜಗತ್ತಿನಾದ್ಯಂತ ವಿಜ್ಞಾನಿಗಳು ಮತ್ತು ಹವ್ಯಾಸಿ ಖಗೋಳ ಶಾಸ್ತ್ತ್ರಜ್ಞರು ಕಾತುರದಿಂದ ಕಾಯುತ್ತಿದ್ದಾರೆ. ಅಪರೂಪದ ಕಂಕಣ ಸೂರ್ಯ ಗ್ರಹಣದ ವಿಸ್ಮಯ ವಿದ್ಯಮಾನವನ್ನು ಭಾರತದಲ್ಲಿ ವೀಕ್ಷಿಸಬಹುದಾಗಿದೆ. ಇದು ಬೇಕೆಂದಾಗ ಬಾರದ, ಬಂದಾಗ ಕಳೆದುಕೊಳ್ಳಬಾರದ ಒಂದು ಸುಂದರ ವಿದ್ಯಮಾನ. ಅದನ್ನು ಸುರಕ್ಷಿತವಾಗಿ ವೀಕ್ಷಿಸಿದಲ್ಲಿ, ಮನಸ್ಸಿನಲ್ಲಿ ತೃಪ್ತಿ ಮತ್ತು ನಿಸರ್ಗದ ಬಗ್ಗೆ ಆಸಕ್ತಿ ಮೂಡುತ್ತದೆ. ಗ್ರಹಣದ ಆಧಾರದಿಂದ ರಾಷ್ಟ್ತ್ರದ, ಪಕ್ಷಗಳ ಹಾಗೂ ಪ್ರಮುಖ ರಾಜಕಾರಣಿಗಳ ಆಗು ಹೋಗುಗಳ ಫಲ ನಿರೂಪಣೆಗೆ ಅನುಕೂಲವಾಗುತ್ತದೆ. ಹೊರತು, ಪ್ರತೀ ವ್ಯಕ್ತಿಯ ಮೇಲೆ ಕೆಟ್ಟ ಪರಿಣಾಮ ಬೀರುವುದಿಲ್ಲ. ಗ್ರಹಣದಿಂದ ಯಾರೂ ಭಯಪಡುವುದು ಅಗತ್ಯವಿಲ್ಲ. ಗಾಳಿಸುದ್ದಿಗಳಿಗೆ ಕಿವಿಗೊಡದೆ, ಗ್ರಹಣವನ್ನು ಎಲ್ಲರೂ ವೀಕ್ಷಿಸಬಹುದು.

ಸೂರ್ಯ ಗ್ರಹಣದ ವೇಳೆಯಲ್ಲಿ ಮಾದ್ಯಮಗಳಲ್ಲಿ ಗಾಬರಿಹುಟ್ಟಿಸುವಂತಹ ಹಾಗೂ ಜನರನ್ನು ತಪ್ಪುದಾರಿಗೆ ಎಳೆಯುವ ಮತ್ತು ಇದಕ್ಕೆ ಪರಿಹಾರಗಳನ್ನು ಸೂಚಿಸುವವರಿದ್ದಾರೆ. ಅದರಲ್ಲೂ ಸೂರ್ಯಗ್ರಹಣದ ಸಂದರ್ಭದಲ್ಲಿ ಮಗುವಿನ ಜನನವನ್ನು ಅನಿಷ್ಟವೆಂದು ತಾಯಿ ಮತ್ತು ಮಗುವಿಗೆ ಕೆಟ್ಟದ್ದಾಗುತ್ತದೆಂದು ಹೇಳುತ್ತಾರೆ. ಆದರೆ, ಈ ಹಿಂದೆ ಜುಲೈ 22, 2009 ರಲ್ಲಿ ಸೂರ್ಯ ಗ್ರಹಣ ಸಂಭವಿಸಿತ್ತು ದೆಹಲಿಯಲ್ಲಿ ಸಂಶೋಧಕರಾದ ನೀಲಂ ಗುಪ್ತ ಎಂಬುವವರ ಪ್ರಕಾರ, ದೆಹಲಿಯ ಕಸ್ತೂರಿಬಾ ಗಾಂಧಿ ಆಸ್ಪತ್ರೆಯಲ್ಲಿ ಜುಲೈ 22ರಂದು ಸೂರ್ಯ ಗ್ರಹಣದ ದಿವಸ 37 ಶಿಶುಗಳ ಜನನವಾಗಿದೆ. ಗ್ರಹಣದ ಹಿಂದಿನ ದಿವಸ ಅಂದರೆ ಜುಲೈ 21 ರಂದು 31 ಶಿಶುಗಳ ಜನನವಾಗಿರುವುದಾಗಿ ದಾಖಲೆಯಿದ್ದು, ಈ ಎರಡೂ ದಿವಸಗಳಲ್ಲಿ ಜನಿಸಿದ ಶಿಶುಗಳು, ಬೇರೆ ದಿವಸಗಳಲ್ಲಿ ಜನಸಿದ ಶಿಶುಗಳಂತೆಯೇ ಆರೋಗ್ಯವಾಗಿ ಸಹಜ ಸ್ಥಿತಿಯಲ್ಲಿದ್ದವು. ಯಾವುದೇ ವ್ಯತ್ಯಾಸ ಕಂಡುಬಂದಿರುವುದಿಲ್ಲ.

ದೆಹಲಿಯ ಡಾ. ರಾಮ್ ಶರ್ಮ ಹೃದಯ ರೋಗತಜ್ಞರು ಹಿಂದೂರಾವ್ ಆಸ್ಪತ್ರೆಯಲ್ಲಿ ಜುಲೈ 21, 2009ರ ಮಧ್ಯರಾತ್ರಿಯಿಂದ, ಜುಲೈ 22, 2009 ರ ಮಧ್ಯರಾತ್ರಿಯವರೆಗೆ ಒಟ್ಟು 18 ಶಿಶುಗಳು ಜನನವಾದ ಬಗ್ಗೆ ದಾಖಲಾಗಿದ್ದು, ಇದರಲ್ಲಿ 14 ಶಿಶುಗಳು ಸಹಜವಾಗಿ ಜನನವಾಗಿದ್ದರೆ, 1 ಸಿಜೆರಿಯನ್ ಮೂಲಕ ಜನಿಸಿದ್ದು, 3 ಶಿಶುಗಳು ಕಿರಿಯ ಸಹಾಯಕ ವೈದ್ಯರುಗಳ ನೆರವು ಪಡೆದಿದ್ದು, 1 ಶಿಶು ಗರ್ಭಾಶಯದ ತೊಂದರೆಯಿದ್ದುದರಿಂದ ಶಸ್ತ್ತ್ರ ಕ್ರಿಯೆಯಿಂದ ಹೊರತೆಗೆಯಲಾಗಿತ್ತು. ಆದರೆ ಯಾವುದೇ ಶಿಶುವನ್ನು ತೀವ್ರ ಚಿಕಿತ್ಸಾ ಘಟಕದಲ್ಲಿರಿಸಿರಲಿಲ್ಲ. ಗಮನಿಸಬೇಕಾದ ಅಂಶವೆನೆಂದರೆ, ಸಾಮಾನ್ಯ ದಿನಗಳಲ್ಲಿ 3 ಅಥವಾ 4 ಶಿಶುಗಳನ್ನು ತೀವ್ರ ಚಿಕಿತ್ಸಾ ಘಟಕದಲ್ಲಿರಿಸಲಾಗುತ್ತಿತ್ತು ಹಾಗೂ ವೀಕ್ಷಣೆಯಲ್ಲಿಡಲಾಗುತ್ತಿತ್ತು.

ಸೂರ್ಯ ಗ್ರಹಣದ ದಿವಸ ಮಕ್ಕಳು ಹುಟ್ಟಿದರೂ ಒಳ್ಳೆಯದೆ, ಹಾಗೂ ಇದು ವ್ಯಕ್ತಿಗೆ ವೈಯುಕ್ತಿಕವಾಗಿ ಯಾವುದೇ ರೀತಿಯ ಉತ್ಪಾತವನ್ನುಂಟು ಮಾಡುವುದಿಲ್ಲ ಎಂದು ಈ ಮೇಲಿನ ಅಂಶಗಳಿಂದ ಗೊತ್ತಾಗುತ್ತದೆ. ಈ ಸಂದರ್ಭದಲ್ಲಿ ಪ್ರಕೃತಿಯು ಜಪ, ತಪಕ್ಕೆ ಒಳ್ಳೆಯ ಸುಯೋಗವನ್ನು ಒದಗಿಸುತ್ತದೆ.

(ಆರ್. ಸೀತಾರಾಮಯ್ಯ ಅವರ ದೂರವಾಣಿ ಸಂಖ್ಯೆ- 08182 227344)

ವೆಬ್ದುನಿಯಾವನ್ನು ಓದಿ