ಒಬಾಮ ಕುಂಡಲಿಯಲ್ಲಿ ರಾಜಯೋಗ ಪ್ರಬಲ

ಸ್ಮೃತಿ ಜೋಷಿ
PTI
ಬರಾಕ್ ಒಬಾಮ ಮತ್ತು ಜಾನ್ ಮೆಕೇನ್ ಅವರಿಬ್ಬರೂ ಅಮೆರಿಕ ಅಧ್ಯಕ್ಷ ಪದವಿಯ ಸ್ಥಾನಾಕಾಂಕ್ಷಿಗಳು ಮತ್ತು ಪ್ರಬಲ ಪ್ರತಿಸ್ಪರ್ಧಿಗಳು. ಅವರ ತಾರಾ ಬಲಗಳು ಕೂಡ ಅತ್ಯಂತ ಪ್ರಬಲವಾಗಿವೆ ಎಂಬುದು ಇಲ್ಲಿ ಉಲ್ಲೇಖನೀಯ.

1961ರಲ್ಲಿ ಜನಿಸಿದ ಒಬಾಮ ಅವರ ಕುಂಡಲಿಯಲ್ಲಿ ಭರ್ಜರಿಯಾಗಿ ರಾಜಯೋಗವು ಪ್ರಕಾಶಿಸುತ್ತಿದೆ. ಬುಧಾದಿತ್ಯ ಮಾತ್ರವಲ್ಲದೆ ಗಜಕೇಸರಿ, ವಿಪರೀತ ರಾಜಯೋಗ, ನೀಚ ಭಂಗ ಮುಂತಾದ ಪ್ರಭಾವಿ ಯೋಗಗಳು ಒಬಾಮ ಕುಂಡಲಿಯಲ್ಲಿ ಕಂಡುಬರುತ್ತದೆ. ಗುರುವಿನ ಗೋಚಾರ ಬದಲಾವಣೆಯು ಅವರ ಸುಖ ಸ್ಥಾನದ ಮೇಲೆ ಪ್ರಭಾವ ಬೀರುತ್ತದೆ. ಒಟ್ಟಾರೆ ಪರಿಣಾಮವೆಂದರೆ ತಾರಾಬಲವು ಒಬಾಮಗೆ ಅನುಕೂಲಕರವಾಗಿದೆ. ವಿಶೇಷವಾಗಿ ಡಿಸೆಂಬರ್ 8ರ ರಾತ್ರಿಯಿಂದ ಅವರ ತಾರೆಗಳು ಮತ್ತಷ್ಟು ಪ್ರಕಾಶಮಾನವಾಗುತ್ತವೆ.

ವಾಸ್ತವವಾಗಿ ಬುಧಾದಿತ್ಯ ಯೋಗವು ಬುಧ ಮತ್ತು ಸೂರ್ಯನ ಸಂಯೋಗದಿಂದ ಉಂಟಾಗುತ್ತದೆ. ಈ ಯೋಗದಲ್ಲಿ ಜನಿಸಿದ ವ್ಯಕ್ತಿಯು ಚತುರನೂ, ಸುವಿಖ್ಯಾತನೂ ಆಗಿರುತ್ತಾನೆ ಮತ್ತು ಕಷ್ಟಾತಿಕಷ್ಟ ಸಮಸ್ಯೆಗಳನ್ನು ಜಯಿಸಲು ಸಮರ್ಥನೂ ಆಗಿರುತ್ತಾನೆ.

ಗಜಕೇಸರಿ ಯೋಗ: ಹೆಸರೇ ಹೇಳುವ ಹಾಗೆ ಗಜಕೇಸರಿ ಯೋಗವು ಕೇಸರಿ ಅಥವಾ ಸಿಂಹದ ರೀತಿಯಲ್ಲಿ ಶತ್ರುಗಳನ್ನು ಓಡಿಸುತ್ತದೆ. ಈ ಯೋಗದ ವ್ಯಕ್ತಿಯು ತೇಜಸ್ವಿಯಾಗಿರುತ್ತಾನೆ ಮಾತ್ರವೇ ಅಲ್ಲ, ತೀಕ್ಷ್ಣ ಬುದ್ಧಿಯವನೂ, ಯಶಸ್ಸು, ಕೀರ್ತಿಯಿಂದ ಸಂಪನ್ನನೂ ಮತ್ತು ತಮ್ಮ ಸತ್ಕರ್ಮಗಳಿಂದ ಸಮಾಜದಲ್ಲಿ ಲೋಕಪ್ರಿಯನೂ ಆಗಿರುತ್ತಾನೆ.

ವಿಪರೀತ ರಾಜಯೋಗ: ಯಾವುದೇ ಕುಂಡಲಿಯಲ್ಲಿ ಆರನೇ, ಎಂಟನೇ ಮತ್ತು ಹನ್ನೆರಡನೇ ಮನೆಗಳು ದುಃಸ್ಥಾನ ಎಂದು ಪರಿಗಣಿಸಲ್ಪಟ್ಟಿರುತ್ತವೆ. ಈ ಭಾವಗಳಲ್ಲಿ ಯಾವ ಗ್ರಹವು ಸ್ಥಿತವಾಗುತ್ತವೆಯೋ, ಅವು ಆ ಭಾವ ಅಥವಾ ಸ್ಥಾನಗಳ ಫಲವನ್ನು ನಾಶಪಡಿಸುತ್ತವೆ.

ಆದರೆ, ಒಬಾಮ ಕುಂಡಲಿ ಪ್ರಕಾರ, ಒಂದು ದುಃಸ್ಥಾನದ ಅಧಿಪತಿಯು ಮತ್ತೊಂದು ದುಃಸ್ಥಾನದಲ್ಲಿ ಸ್ಥಿತವಾದರೆ, ಆ ದುಃಸ್ಥಾನದ ಅಶುಭ ಫಲಗಳನ್ನು ನಾಶಪಡಿಸಿ ಶುಭ ಫಲವನ್ನು ಮತ್ತು ರಾಜಯೋಗವನ್ನು ನೀಡುವಂತಾಗುತ್ತದೆ.

ಇನ್ನು ಒಬಾಮ ಪ್ರತಿಸ್ಪರ್ಧಿ ಜಾನ್ ಮೆಕೇನ್ ಕೂಡ ಯಾವುದೇ ರೀತಿಯಲ್ಲೂ ಕಡಿಮೆಯಿಲ್ಲ. ಅವರು ಒಬಾಮಗೆ ಅತ್ಯಂತ ಪ್ರಬಲವಾದ ಸ್ಪರ್ಧೆ ನೀಡಲು ಶಕ್ತವಾಗಿರುವುದೇಕೆಂದರೆ ರಾಹುವು ಅವರ ಧನು ರಾಶಿಯಲ್ಲಿ ಸ್ಥಿತವಾಗಿದ್ದು, ಅದು ಅವರ ಪರಾಕ್ರಮ ವೃದ್ಧಿಗೆ ಕಾರಣವಾಗಿದೆ. ಧನು ರಾಶಿಯಲ್ಲಿನ ರಾಹುವು ಅವರನ್ನು ಹಲವು ಸಂದರ್ಭಗಳಲ್ಲಿ ದುಸ್ಸಾಹಸಿಯನ್ನಾಗಿ ಮಾಡುತ್ತದೆ. ಆದರೆ ಮೆಕೇನ್‌ಗೆ ಪ್ರತಿಕೂಲ ವಿಷಯವೆಂದರೆ, ಅವರ ಬುಧ ಮಹಾದೆಶೆಯಲ್ಲಿ ಬುಧನದ್ದೇ ಅಂತರ್ದೆಶೆಯೂ ನಡೆಯುತ್ತಿದೆ. ಇದುವೇ ಅವರ ಹತಾಶೆಗೆ ಕಾರಣವಾಗುತ್ತದೆ. ಗೋಚಾರ ಗುರುವು ಮೆಕೇನ್‌ಗೆ ಕೂಡ ಲಾಭ ದೊರಕಿಸಿಕೊಡುತ್ತದೆ ಆದರೂ ಒಬಾಮಗೆ ಹೋಲಿಸಿದರೆ ಇದು ಕಡಿಮೆ.

ಇಬ್ಬರ ಲಗ್ನವೂ ಒಂದೇ ರೀತಿಯಾಗಿರುವುದರಿಂದ ತಾರೆಗಳ ಚಲನೆಯ ಪ್ರಭಾವವೂ ಸಮಾನವಾಗಿರುತ್ತದೆ. ಆದರೆ ಒಬಾಮ ಕುಂಡಲಿಯ ಪ್ರಬಲ ತಾರೆಗಳು ಅವರನ್ನು ಪದವಿಯ ಮೇಲೇರಿಸಿಯೇ ವಿರಮಿಸುತ್ತವಾದರೆ, ಮೆಕೇನ್‌ಗೆ ಬುಧನ ಮಹಾದಶೆ-ಅಂತರದೆಶೆಗಳು ಅವರ ಪ್ರಯತ್ನಕ್ಕೆ ಪೂರ್ಣ ಪ್ರಮಾಣದ ಫಲ ದೊರೆಯಲು ಅಡ್ಡಿಯಾಗುತ್ತಿವೆ.