ಜಾತಕದ ಪ್ರಕಾರ ಲಾಭ ನಷ್ಟದ ಚಂದ್ರಯಾನ

ಬುಧವಾರ, 25 ಸೆಪ್ಟಂಬರ್ 2013 (12:54 IST)
PR
ಪರಮೇಶ್ವರ ಶೃಂಗೇರಿ

ಯಾವುದೇ ಒಬ್ಬ ವ್ಯಕ್ತಿ ಜಾತಕದ ಪ್ರಕಾರವಾಗಿ ಆತನ ಭವಿಷ್ಯ ನಿರ್ಣಯವಾಗುತ್ತದೆಂಬುದು ಜೋತಿಷ್ಯ ಶಾಸ್ತ್ರದ ಮೂಲ ಚಿಂತನೆಯಾಗಿದೆ. ಈ ಜಾತಕದಲ್ಲಿ ಚಂದ್ರನು ತನ್ನದೇ ಆದ ಪ್ರಭಾವವನ್ನು ಬೀರಿದ್ದು ಲಾಭ ಮತ್ತು ವ್ಯಯದಲ್ಲಿ ವಿಶಿಷ್ಟ ಪಾತ್ರ ವಹಿಸುತ್ತಾನೆ.

ಜೋತಿಷ್ಯ ಶಾಸ್ತ್ರದ ಪ್ರಕಾರ ಜಾತಕದಲ್ಲಿನ ಹನ್ನೊಂದನೆಯ ಮನೆಯನ್ನು ಲಾಭಕಾರಕವೆಂತಲೂ ಹನ್ನೆರಡನೆಯ ಮನೆಯನ್ನು ವ್ಯಯ (ನಷ್ಟ) ಕಾರಕವೆಂತಲೂ ಕರೆಯುತ್ತಾರೆ.ಹನ್ನೊಂದನೆಯ ಮನೆಯಲ್ಲಿ ಅಂದರೆ ಲಾಭಭಾವದಲ್ಲಿ ಚಂದ್ರನಿದ್ದ ಪಕ್ಷದಲ್ಲಿ ಜಾತಕನು ಅತ್ಯಂತ ಸಂಪತ್ತಿನಿಂದ ಕೂಡಿದ ವ್ಯಕ್ತಿಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ.

ಅಲ್ಲದೇ ಈ ವ್ಯಕ್ತಿಯು ಉನ್ನತ ಸ್ಥಾನದಲ್ಲಿದ್ದು ಅಪಾರ ಕೀರ್ತಿ,ಯಶಸ್ಸು ಗಳಿಸುತ್ತಾನೆ. ಸದ್ಗುಣ ಸಂಪನ್ನನೂ,ಉತ್ತಮ ವಾಗ್ಮಿಯೂ ಆದ ಈತನಿಗೆ ವಿಶೇಷವಾಗಿ ಬುದ್ಧಿ,ಧನ-ಸಂಪತ್ತು,ಸನ್ಮಾರ್ಗದಲ್ಲಿ ನಡೆಯುವವನೂ ಆಗಿದ್ದು ಸಮಾಜದಲ್ಲಿ ಗೌರವಕ್ಕೆ ಪಾತ್ರನಾಗುತ್ತಾನೆ. ಬಿಳಿಯವರ್ಣದಿಂದ ಕೂಡಿದ ಈತ ಅಧಿಕ ಮಿತ್ರವರ್ಗದಿಂದ ಕೂಡಿದವವನಾಗಿದ್ದು, ವಾಹನಾದಿ ಸುಖ ಭೋಗವನ್ನು ಅನುಭವಿಸುತ್ತಾನೆ. ಆಯಸ್ಸಿನ ಮಧ್ಯಭಾಗದ ಆಸುಪಾಸಿನಲ್ಲಿ ರಾಜಗೌರವ,ಪ್ರಶಸ್ತಿ,ಸನ್ಮಾನಗಳು ಪ್ರಾಪ್ತವಾಗುತ್ತವೆ.

ವಿಶೇಷವಾಗಿ ಈ ತರಹದ ಜಾತಕದ ಸ್ಥಿತಿ ಹೊಂದಿರುವ ಪುರುಷರಿಗೆ ಅಧಿಕ ಶುಭಫಲಗಳು ಕಂಡುಬರುತ್ತವೆ. ಸಾರ್ವಜನಿಕ ಸಂಸ್ಥೆಯಂತಹ ಕ್ಷೇತ್ರದಲ್ಲಿ ಮುಂದಾಳತ್ವ ವಹಿಸಿಕೊಂಡು ಮುನ್ನಡೆಯುವ ಸಾಧ್ಯತೆ ಹೆಚ್ಚು. ಅಲ್ಲದೇ ಹನ್ನೊಂದನೇ ಮನೆಯ ಮೇಷ,ಮಿಥುನ,ಸಿಂಹ,ತುಲಾ,ಧನು ಮತ್ತು ಕುಂಭವಾಗಿದ್ದರೆ ರೋಗಕ್ಕೆ ಸಂಬಂಧಿಸಿದ ಫಲ ಸ್ತ್ರೀ ಜಾತಿಯ ಚಂದ್ರನಲ್ಲಿ ಹೆಚ್ಚಾಗಿ ಕಂಡುಬರುತ್ತದೆ.

PR
ವೃಷಭ,ಕರ್ಕಾಟಕ,ಕನ್ಯಾ,ವೃಶ್ಚಿಕ,ಮಕರ,ಮತ್ತು ಮೀನಗಳಲ್ಲಿ ಸ್ತ್ರೀರಾಶಿಯ ಚಂದ್ರನಿರುವವರು ವೈದ್ಯಕೀಯ ವೃತ್ತಿಯಲ್ಲಿ ನಿರತರಾಗುತ್ತಾರೆ. ಒಟ್ಟಿನಲ್ಲಿ ಚಂದ್ರನು ಹನ್ನೊಂದನೇ ಮನೆಯಲ್ಲಿರುವಾಗ ಸುಖ ಸಂಸಾರ,ಸ್ವತಂತ್ರ ಜೀವನ ನಡೆಸುವುದಲ್ಲದೇ ಹಲವು ಗೌರವಾದರಗಳಿಗೆ ಪಾತ್ರರಾಗುತ್ತಾರೆ.

ಇನ್ನು ವ್ಯಯಸ್ಥಾನವಾದ 12ನೇ ಮನೆಯಲ್ಲಿ ಚಂದ್ರನಿರುವ ಪಕ್ಷದಲ್ಲಿ ಜಾತಕನು ನೀಚ ವೃತ್ತಿಯವನೂ,ಆಲಸಿ,ಅಂಗವಿಕಲ,ರೋಗಪೀಡಿತನೂ ಆಗಿದ್ದು, ಸರ್ವಜನ ದ್ವೇಷಿಗಳಾಗಿ ಜೀವನ ನಡೆಸುತ್ತಾರೆ. ಅಲ್ಲದೇ ಪಂಚೇಂದ್ರಿಯ ದೋಷವನ್ನು ಕೂಡಿರುವ ಈತ ಶತ್ರುಭಾಧೆಯಿಂದ ತತ್ತರಿಸುತ್ತಾನೆ. ಆದರೆ ದ್ವಾದಶದ ಚಂದ್ರ ಬಲಪೂರ್ಣನಾಗಿದ್ದ ಪಕ್ಷದಲ್ಲಿ ಕೃಷಿ ಭೂವ್ಯವಹಾರಕ್ಕೆ ಸಂಬಂಧಿಸಿದ ಕ್ಷೇತ್ರದಲ್ಲಿ ಉತ್ತಮ ಲಾಭ ಕಂಡುಬರುವುದರ ಜೊತೆಗೆ ಜೀವನಪರ್ಯಂತ ಸುಖ ಪಡೆಯುತ್ತಾರೆ.

ವ್ಯಯಸ್ಥಾನ ಕರ್ಕಾಟಕ, ಮೀನರಾಶಿಗಳಿಗೆ ಚಂದ್ರನಿದ್ದರೆ ಸ್ತ್ರೀ ಸುಖವನ್ನು ಹೊಂದುವುದರ ಜೊತೆಗೆ ರಾಜಯೋಗಿಯೂ,ಜ್ಞಾನಿಯೂ ಆಗುವರಲ್ಲದೇ ಸಕಲ ಶಾಸ್ತ್ರ ಪಾರಂಗತರಾಗುತ್ತಾರೆ. ಮೇಷ,ಮಿಥುನ,ಸಿಂಹ,ತುಲಾ,ಧನು,ಕುಂಭ ರಾಶಿಯಾದರೆ ಸದಾ ಶುಭಫಲವನ್ನೇ ನೀಡುತ್ತದೆ. ಅತ್ಯಂತ ಸ್ಫುರದ್ರೂಪಿ ಪತ್ನಿ ಈ ಜಾತಕನಿಗೆ ದೊರೆಯುವುದಲ್ಲದೇ, ದಾಂಪತ್ಯ ಜೀವನವೂ ಸುಖಮಯವಾಗಿರುತ್ತದೆ.

ಮಿಥುನ, ತುಲಾ,ಕುಂಭ ಚಂದ್ರರು ಜಾತಕನನ್ನು ಜ್ಞಾನಿಯನ್ನಾಗಿ ಮಾಡಿದರೆ, ಕರ್ಕಾಟಕ,ವೃಶ್ಚಿಕ,ಮೀನ ಚಂದ್ರರು ಹಣಕಾಸಿನ ಅಡಚಣೆಯನ್ನುಂಟು ಮಾಡುತ್ತಾರೆ. ಅಲ್ಲದೇ ಇವರಿಗೆ ವಿಪರೀತ ಧನವ್ಯಯ ಜೀವನದಲ್ಲಿ ತೋರಿಬರುತ್ತದೆ. ಹೀಗೆ ಚಂದ್ರ ಲಾಭ ಮತ್ತು ವ್ಯಯಸ್ಥಾನದಲ್ಲಿ ತನ್ನದೇ ಆದ ಪ್ರಭಾವವನ್ನು ಜಾತಕದ ಮೇಲೆ ಬೀರುತ್ತಾನೆ.

ವೆಬ್ದುನಿಯಾವನ್ನು ಓದಿ