ರಥ ಸಪ್ತಮಿಯಂದು ಸೂರ್ಯನಿಗೆ ಅರ್ಘ್ಯ ನೀಡಿ, ಪಾಪ ಕಳೆಯಿರಿ

ಬುಧವಾರ, 9 ಫೆಬ್ರವರಿ 2011 (18:30 IST)
WD
ಮಾಘ ಮಾಸ ಶುಕ್ಲ ಪಕ್ಷದ ಸಪ್ತಮಿ ತಿಥಿಯಿರುವ ಇದೇ ಗುರುವಾರವನ್ನು (10-02-2011) ಸೂರ್ಯ ಆರಾಧನೆಯ ರಥ ಸಪ್ತಮಿ ದಿನವೆಂದು ಆಚರಿಸಲಾಗುತ್ತದೆ. ಈ ದಿನದಲ್ಲಿ ನಡೆಯುವ ಕೆಲಸ-ಕಾರ್ಯಗಳು, ಕೋರಿಕೆಗಳು ಫಲಪ್ರದವಾಗಿರುತ್ತವೆ.

ನಿಯಮಬದ್ಧವಾದ ಉದಯ ಹಾಗೂ ಅಸ್ತಗಳ ಮೂಲಕ ನಮಗೆ ಶಿಸ್ತು ಬದ್ಧವಾದ ಕರ್ತವ್ಯ ಪ್ರಜ್ಞೆಯನ್ನು, ಚೈತನ್ಯವನ್ನು ತುಂಬುವ ಸೂರ್ಯನ ಪೂಜೆಯೇ ಈ ದಿವಸದ ಮುಖ್ಯ ಆಚರಣೆಯಾಗಿದೆ. ಈ ದಿನ ಸೂರ್ಯನ ಜನ್ಮದಿನ. ವೈವಸ್ವತ ಮನ್ವಂತರದ ಪ್ರಾರಂಭದ ದಿನ. ಸೂರ್ಯನು ಉತ್ತರಾಯಣನಾಗಿ ಸಪ್ತಾಶ್ವಗಳ ರಥವನ್ನೇರಿ ಉತ್ತರ ದಿಕ್ಕಿನ ಮಾರ್ಗದಲ್ಲಿ ಹೊರಟ ದಿನ.

ರಥ ಸಪ್ತಮಿ ದಿವಸ ರೋಗ ನಿವಾರಣೆಯನ್ನು, ದೇಹದಾರ್ಢ್ಯ ಹಾಗೂ ಆರೋಗ್ಯವನ್ನು ಬಯಸುವವರು ಸೂರ್ಯನ ಆರಾಧನೆ ಮಾಡಬೇಕೆಂಬ ನಿಯಮವಿದೆ. ರೋಗಾಣುಗಳನ್ನು ನಾಶ ಪಡಿಸುವ ಶಕ್ತಿ ಸೂರ್ಯನ ಕಿರಣಗಳಲ್ಲಿವೆ. ಬೆಳಗಿನ ಹಾಗೂ ಸಂಜೆಯ ಸೂರ್ಯ ಕಿರಣಗಳಿಂದ ಆರೋಗ್ಯ ವೃದ್ಧಿಯಾಗುತ್ತದೆ. ರೋಗದಿಂದ ನರಳುವವರು ಈ ದಿವಸ ಸೂರ್ಯಾರಾಧನೆಯನ್ನು ಮಾಡಿದರೆ ಬೇಗ ಗುಣ ಹೊಂದುತ್ತಾರೆ.

ಅಂದು ಸೂರ್ಯೋದಯಕ್ಕೆ ಸರಿಯಾಗಿ ನದಿ, ಸಮುದ್ರ, ಸರೋವರ, ಸಂಗಮ ಮುಂತಾದೆಡೆ ಸ್ನಾನ ಮಾಡಿ ಸೂರ್ಯನಿಗೆ ಅರ್ಘ್ಯ ನೀಡಿದರೆ ಪೂರ್ವ ಜನ್ಮದ ಪಾಪಗಳು ಹಾಗೂ ಈ ಜನ್ಮದ ಸಕಲ ದುಃಖಗಳು ಪರಿಹಾರವಾಗುತ್ತವೆ. ಆಯುಷ್ಯ, ಆರೋಗ್ಯ, ಸಂಪತ್ತು ಲಭಿಸುವುದಲ್ಲದೇ, ಸೂರ್ಯನ ಅನುಗ್ರಹ ಪ್ರಾಪ್ತಿಯಾಗುತ್ತದೆಂದು ಪುರಾಣದಲ್ಲಿದೆ. ಸೂರ್ಯನ ಆರಾಧನೆ ಋಗ್ವೇದದ ಕಾಲದಿಂದಲೂ ಪ್ರಚಲಿತದಲ್ಲಿದೆ. ಪ್ರಾಚೀನ ವೈದಿಕ ಧರ್ಮದಲ್ಲಿ ಸೂರ್ಯನಿಗೆ ಅತ್ಯಂತ ಪ್ರಾಮುಖ್ಯತೆ ಇತ್ತು. ಆತನ ಆರಾಧನೆಯಿಂದಲೇ ಸೌರ ಪಂಥ ಹುಟ್ಟಿದ್ದು. ಕಾಲ ಗಣನೆಯಲ್ಲಿ ಸೌರಮಾನ ಎಣಿಕೆ ಇಂದಿಗೂ ಇದೆ.

ವ್ಯಕ್ತಿಯ ಜನ್ಮ ಕುಂಡಲಿಯಲ್ಲಿ ಸೂರ್ಯನು ಬಲಹೀನನಾಗಿದ್ದರೆ ಅಥವಾ ಷಡ್ಬಲವಿರದಿದ್ದರೆ ರಥಸಪ್ತಮಿಯಂದು ಸೂರ್ಯಾರಾಧನೆ ಮಾಡಿದರೆ ದೋಷ ಪರಿಹಾರವಾಗುತ್ತದೆ. ಮಾಣಿಕ್ಯದ ಹರಳು ಧರಿಸಲು ಶುಭ ದಿನವಾಗಿದೆ.

ಈ ಸೂರ್ಯರಾಧನೆ ಮುಖ್ಯವಾಗಿ ಭಾರತ, ಮಧ್ಯ ಆಫ್ರಿಕಾ, ಈಜಿಪ್ತ್, ಗ್ರೀಸ್ ಹಾಗೂ ಮಧ್ಯ ಏಷ್ಯಾಗಳಲ್ಲಿ ಆಚರಿಸಲಾಗುತ್ತಿದೆ.

ಆರ್. ಸೀತಾರಾಮಯ್ಯ,
ಜ್ಯೋತಿಷ್ಯರು,
ಪೋನ್: 08182-227344

ವೆಬ್ದುನಿಯಾವನ್ನು ಓದಿ