ಈ ವರ್ಷ 4 ಸೂರ್ಯ, 2 ಚಂದ್ರಗ್ರಹಣಗಳು

2011ರಲ್ಲಿ 6 ಗ್ರಹಣಗಳು ಸಂಭವಿಸುತ್ತವೆ. 4 ಭಾಗಶಃ ಸೂರ್ಯ ಗ್ರಹಣಗಳು ಮತ್ತು 2 ಪೂರ್ಣ ಚಂದ್ರಗ್ರಹಣಗಳು. 4:2 ಪ್ರಮಾಣದಲ್ಲಿ ಸೂರ್ಯ ಗ್ರಹಣ ಮತ್ತು ಚಂದ್ರಗ್ರಹಣಗಳು ಒಂದೇ ವರ್ಷದಲ್ಲಿ ಬರುವುದು ಬಹಳ ಅಪರೂಪ. ಈ 21ನೇ ಶತಮಾನದಲ್ಲಿ ಕೇವಲ 6 ಬಾರಿ (2011, 2029, 2047, 2065, 2076 ಮತ್ತು 2094) ಮಾತ್ರ ಒಂದೇ ವರ್ಷದಲ್ಲಿ 4:2 ಪ್ರಮಾಣದಲ್ಲಿ ಸೂರ್ಯ -ಚಂದ್ರ ಗ್ರಹಣಗಳು ಸಂಭವಿಸುತ್ತವೆ. ಮೊದಲನೇ ಗ್ರಹಣ ಜನವರಿ ತಿಂಗಳಲ್ಲೂ, 6ನೇಯ ಗ್ರಹಣ, ವರ್ಷದ ಕೊನೆಯಲ್ಲಿ ಡಿಸೆಂಬರು ತಿಂಗಳಲ್ಲಿ ಸಂಭವಿಸುತ್ತದೆ.

ಜನವರಿ 4ರಂದು ಕರ್ನಾಟಕದಲ್ಲಿ ಗೋಚರ ಇಲ್ಲ
1. 4 ಜನವರಿ 2011 ರಂದು ಭಾಗಶಃ ಸೂರ್ಯಗ್ರಹಣ ಸಂಭವಿಸುತ್ತದೆ. ಈ ಗ್ರಹಣವು ಸಾರೋಸ್ ಸರಣಿಯಲ್ಲಿ 151ನೇಯದಾಗಿದ್ದು, 72 ಗ್ರಹಣಗಳಲ್ಲಿ ಇದು 14ನೇಯದಾಗಿರುತ್ತದೆ. ಗ್ರಹಣದ ಗ್ರಾಸ ಪ್ರಮಾಣ 0.8572ರಷ್ಟಿರುತ್ತದೆ. ಈ ಗ್ರಹಣವು ಯುರೋಪ್, ಉತ್ತರ ಅಮೆರಿಕಾ ಮತ್ತು ಮಧ್ಯ ಏಷ್ಯಾ ಖಂಡಗಳಲ್ಲಿ ಗೋಚರಿಸುತ್ತದೆ. ಉತ್ತರ ಅಲ್ಜೀರಿಯಾದಲ್ಲಿ ಬೆಳಿಗ್ಗೆ ಜಿ.ಎಂ.ಟಿ. 6 ಗಂಟೆ 40 ನಿಮಿಷ 11 ಸೆಕೆಂಡು ಗ್ರಹಣ ಸ್ಪರ್ಶಕಾಲವಾಗಿರುತ್ತದೆ. ಗ್ರಹಣದ ಮಧ್ಯಕಾಲ ಬೆಳಿಗ್ಗೆ 8 ಗಂಟೆ 50 ನಿಮಿಷ 35 ಸೆಕೆಂಡು, ಮೋಕ್ಷ ಕಾಲ 11 ಗಂಟೆ 00 ನಿಮಿಷ 35 ಸೆಕೆಂಡು. ಯೂರೋಪ್‌ನ ಮ್ಯಾಡ್ರಿಡ್, ಪ್ಯಾರಿಸ್, ಲಂಡನ್ ಮತ್ತು ಕೋಪನ್ ಹೇಗನ್ ಸಿಟಿ, ಸ್ವೀಡನ್‌ನ ಉತ್ತರ ಭಾಗದ ಮೇಲೆ ಹಾದು ಉತ್ತರ ಆಫ್ರಿಕಾ, ಮಿಡ್ಲ್ ಈಸ್ಟ್, ಮಧ್ಯ ಏಷ್ಯಾ ಮುಖಾಂತರ ಹಾದು ಹೋಗುತ್ತದೆ. ನಂತರ ಕೈರೊ, ಜೆರುಸಲೇಮ್, ಇಸ್ತಾಂಬುಲ್, ಟೆಹರಾನ್ ಮೂಲಕ ಹಾದು ಸೂರ್ಯ ಮುಳುಗುವ ವೇಳೆಯಲ್ಲಿ ರಷ್ಯ, ಕಜಕಿಸ್ತಾನ್, ಮಂಗೋಲಿಯಾ, ಚೀನಾದ ವಾಯುವ್ಯ ಭಾಗದಲ್ಲಿ ಗೋಚರಿಸಿ, ಮುಕ್ತಾಯವಾಗುತ್ತದೆ.

ಈ ಗ್ರಹಣ ಭಾರತೀಯ ಕಾಲಮಾನ ಮಧ್ಯಾಹ್ನ 12 ಗಂಟೆ 10 ನಿಮಿಷ 11 ಸೆಕೆಂಡಿಗೆ ಸ್ಪರ್ಶ ಕಾಲ ಉಂಟಾಗುತ್ತದೆ. ಗ್ರಹಣದ ಮಧ್ಯ ಕಾಲ ಮಧ್ಯಾಹ್ನ 2 ಗಂಟೆ 20 ನಿಮಿಷ 35 ಸೆಕೆಂಡುಗಳು. ಮೋಕ್ಷ ಕಾಲ ಸಂಜೆ 4 ಗಂಟೆ 30 ನಿಮಿಷ 54 ಸೆಕೆಂಡುಗಳು. ಭಾರತದ ಉತ್ತರ ಭಾಗದ ವಾಯುವ್ಯ ಪ್ರದೇಶಗಳಲ್ಲಿ ಮಧ್ಯಾಹ್ನ 2 ಗಂಟೆ 46 ನಿಮಿಷ ಗ್ರಹಣ ಸ್ಪರ್ಶ ಗೋಚರಿಸುತ್ತದೆ. ಗಾಂಧಿ ಧಾಮ, ಭುಜ್, ಜೈಪುರ, ಜೋಧಪುರ, ದೆಹಲಿ, ಚಂಡೀಗಢ, ಗುಜರಾತ್, ರಾಜಸ್ಥಾನ ಪಶ್ಚಿಮ ಭಾಗದ ಪ್ರದೇಶ, ಪಂಜಾಬ್, ಹರಿಯಾಣ, ಹಿಮಾಚಲ, ಜಮ್ಮು ಕಾಶ್ಮೀರ ಪ್ರದೇಶಗಳಲ್ಲಿ ಗೋಚರಿಸುತ್ತದೆ. ಉಳಿದ ಪ್ರದೇಶಗಳಲ್ಲಿ ಗ್ರಹಣ ಗೋಚರಿಸುವುದಿಲ್ಲ. ಗ್ರಹಣದ ಮೋಕ್ಷ ಕಾಲ ಸಂಜೆ 5 ಗಂಟೆ 24 ನಿಮಿಷ. ಕರ್ನಾಟಕದಲ್ಲಿ ಗ್ರಹಣ ಕಾಣಿಸುವುದಿಲ್ಲವಾದ್ದರಿಂದ ಗ್ರಹಣಾಚರಣೆ ಇರುವುದಿಲ್ಲ.

ಜೂನ್ 1ರಂದು ಭಾಗಶಃ ಸೂರ್ಯ ಗ್ರಹಣ ಭಾರತದಲ್ಲಿ ಗೋಚರ ಇಲ್ಲ
2. 1 ಜೂನ್ 2011 ರಲ್ಲಿ ಭಾಗಶಃ ಸೂರ್ಯ ಗ್ರಹಣ ಸಂಭವಿಸುತ್ತದೆ. ಈ ಗ್ರಹಣವು ಸಾರೋಸ್ ಸರಣಿಯಲ್ಲಿ 118 ನೆಯದಾಗಿದ್ದು, 68ನೇ ಬಾಗಶಃ ಸೂರ್ಯ ಗ್ರಹಣವಾಗಿರುತ್ತದೆ. ಈ ಗ್ರಹಣವು ಜಿಎಂಟಿ 7 ಗಂಟೆ 25 ನಿಮಿಷ 18 ಸೆಕೆಂಡಿಗೆ ಪ್ರಾರಂಭವಾಗುತ್ತದೆ. ಸೈಬೀರಿಯ ಮತ್ತು ಉತ್ತರ ಚೀನಾದಲ್ಲಿ ಗೋಚರಿಸುತ್ತದೆ. ಗ್ರಾಸ ಪ್ರಮಾಣ 0.601 ರಷ್ಟಿರುತ್ತದೆ. ಈ ಗ್ರಹಣವು ಅಲಸ್ಕಾ, ಕೆನಡಾದ ಉತ್ತರ ಭಾಗ, ಐಸ್ಲ್ಯಾಂಡ್, ನಾರ್ವೆ, ಸ್ವೀಡನ್, ಫಿನ್ಲೆಂಡ್ ಮೂಲಕ ಹಾಯ್ದು ಫೇರ್ ಬ್ಯಾಂಕ್ಸ್ ದಕ್ಷಿಣ ಭಾಗ ಮೂಲಕ ಹಾಯ್ದು ಅಟ್ಲಾಂಟಿಕ್ ಸಾಗರದಲ್ಲಿ ಜಿಎಂಟಿ ರಾತ್ರಿ 11 ಗಂಟೆ 6 ನಿಮಿಷ 56 ಸೆಕೆಂಡಿಗೆ ಮುಕ್ತಾಯವಾಗುತ್ತದೆ. ಇದು ಭಾರತದಲ್ಲಿ ಗೋಚರಿಸುವುದಿಲ್ಲ. ಗ್ರಹಣಾಚಾರಣೆ ಇರುವುದಿಲ್ಲ.

ಜೂನ್ 15ರಂದು ಪೂರ್ಣ ಚಂದ್ರ ಗ್ರಹಣ, ಭಾರತದಲ್ಲೂ ಇದೆ
3. 15 ಜೂನ್ 2011 ರಂದು ಪೂರ್ಣ ಚಂದ್ರಗ್ರಹಣ ಸಂಭವಿಸುತ್ತದೆ. ಈ ಗ್ರಹಣವು ಸಾರೋಸ್ ಸರಣಿಯಲ್ಲಿ 130 ನೆಯದಾಗಿದ್ದು, 71 ಗ್ರಹಣಗಳಲ್ಲಿ ಇದು 34ನೆಯದು. ಈ ಗ್ರಹಣದ ಎಲ್ಲಾ ಹಂತಗಳು ಗ್ರಹಣ ಸ್ಪರ್ಶ ಕಾಲದಿಂದ ಮೋಕ್ಷ ಕಾಲದವರೆಗೆ ಆಫ್ರಿಕಾದ ಪೂರ್ವ ಭಾಗ, ಮಿಡ್ಲ್ಈಸ್ಟ್, ಏಷ್ಯಖಂಡದ ಮಧ್ಯಭಾಗ, ಆಸ್ಟ್ರೇಲಿಯಾದ ದಕ್ಷಿಣ ಭಾಗದಲ್ಲಿ ಗೋಚರಿಸುತ್ತದೆ. ಭಾರತದಲ್ಲಿಯೂ ಗ್ರಹಣದ ಎಲ್ಲಾ ಹಂತಗಳು ಗೋಚರಿಸುತ್ತವೆ. ಯುರೋಪಿನಲ್ಲಿ ಗ್ರಹಣದ ಸ್ಪರ್ಶ ಕಾಲ ಗೋಚರಿಸುವುದಿಲ್ಲ. ಅಲ್ಲಿ ಗ್ರಹಣದೊಂದಿಗೆ ಚಂದ್ರ ಉದಯವಾಗುತ್ತದೆ. ಪೂರ್ವ ಏಷ್ಯ, ಆಸ್ಟ್ರೇಲಿಯಾದ ಪೂರ್ವ ಭಾಗ, ನ್ಯೂಜಿಲೆಂಡುಗಳಲ್ಲಿ ಗ್ರಹಣದ ಮೋಕ್ಷ ಕಾಲ ಗೋಚರಿಸುವುದಿಲ್ಲ ಅಂದರೆ ಗ್ರಹಣದೊಂದಿಗೆ ಚಂದ್ರ ಮುಳುಗುತ್ತಾನೆ. ಬ್ರೆಜಿಲ್ ಪೂರ್ವಭಾಗ, ಉರುಗ್ವೆ, ಅರ್ಜೆಂಟೈನಾದಲ್ಲಿ ಪೂರ್ಣ ಚಂದ್ರಗ್ರಹಣವನ್ನು ನೋಡಬಹುದು. ಉತ್ತರ ಅಮೆರಿಕಾದಲ್ಲಿ ಗ್ರಹಣ ಗೋಚರಿಸುವುದಿಲ್ಲ.

ಭಾರತದಲ್ಲಿ ಭಾರತೀಯ ಕಾಲಮಾನ ರಾತ್ರಿ 10 ಗಂಟೆ 55 ನಿಮಿಷಕ್ಕೆ ಗ್ರಹಣ ಸ್ಪರ್ಶ ಗೋಚರಿಸುತ್ತದೆ. ಗ್ರಹಣದ ಪರಿಪೂರ್ಣತೆ 12 ಗಂಟೆ 52 ನಿಮಿಷದಿಂದ ರಾತ್ರಿ 2 ಗಂಟೆ 33 ನಿಮಿಷದವರೆಗೆ ಕಂಡುಬರುತ್ತದೆ. ಗ್ರಹಣದ ಮಧ್ಯಕಾಲದ ಪರಿಪೂರ್ಣತೆ ರಾತ್ರಿ 1 ಗಂಟೆ 42 ನಿಮಿಷ. ಮಾರನೇ ದಿನ ಬೆಳಗಿನ ಜಾವ 4 ಗಂಟೆ 31 ನಿಮಿಷಕ್ಕೆ ಗ್ರಹಣದ ಮೋಕ್ಷ ಕಾಲವಾಗಿರುತ್ತದೆ. ಗ್ರಹಣದ ಪರಿಪೂರ್ಣತೆಯ ಅವಧಿ 1 ಗಂಟೆ 40 ನಿಮಿಷ 13 ಸೆಕೆಂಡ್. ಗ್ರಹಣದ ಗ್ರಾಸ ಪ್ರಮಾಣ 2.6868 ರಷ್ಟಿರುತ್ತದೆ. ಭಾರತದಲ್ಲಿ ಗ್ರಹಣಾಚರಣೆ ಇರುತ್ತದೆ.

ಈ ಗ್ರಹಣದ ವಿಶೇಷವೇನೆಂದರೆ ಗ್ರಹಣದ ಪ್ರಾರಂಭದಲ್ಲಿ ಚಂದ್ರ ಬೂದು ಬಣ್ಣಕ್ಕಿರುತ್ತದೆ. ಕ್ರಮೇಣ ಕಪ್ಪಾಗುತ್ತದೆ. ಗ್ರಹಣದ ಪರಿಪೂರ್ಣತೆಯ ಅವಧಿಯಲ್ಲಿ ತಾಮ್ರ ಬಣ್ಣವಾಗುತ್ತದೆ. ಚಂದ್ರ ಗ್ರಹಣದಲ್ಲಿ ಸೂರ್ಯನ ಬೆಳಕನ್ನು ಚಂದ್ರನಿಗೆ ತಲುಪದಂತೆ ಭೂಮಿ ತಡೆಯುತ್ತದೆ. ಸೂರ್ಯನ ಬೆಳಕನ್ನು ಭೂಮಿಯ ವಾತಾವರಣ ಚದುರಿಸಿದಾಗ ಕೆಂಪು ಬಣ್ಣದ ಬೆಳಕು ಮಾತ್ರ ಚಂದ್ರನನ್ನು ತಲುಪಿ ಪೂರ್ಣ ಗ್ರಹಣದಲ್ಲೂ ಚಂದ್ರ ಕೆಂಪಗೆ ಕಾಣಿಸುತ್ತಾನೆ.

ಜುಲೈ 1ರಂದು ಭಾಗಶಃ ಸೂರ್ಯ ಗ್ರಹಣ, ಭಾರತದಲ್ಲಿ ಇಲ್ಲ
4. 1 ಜುಲೈ 2011 ರಲ್ಲಿ ಭಾಗಶಃ ಸೂರ್ಯ ಗ್ರಹಣ ಸಂಭವಿಸುತ್ತದೆ. ಈ ಗ್ರಹಣವು ಸಾರೋಸ್ ಸರಣಿಯಲ್ಲಿ 156ನೆಯದಾಗಿದ್ದು, 69 ಗ್ರಹಣಗಳಲ್ಲಿ ಇದು ಮೊದಲನೆಯದು. ಈ ಗ್ರಹಣವು ದಕ್ಷಿಣ ಆಫ್ರಿಕಾದ ಅಂಟಾರ್ಟಿಕ್ ಸಮುದ್ರದಲ್ಲಿ ಮಾತ್ರ ಗೋಚರಿಸುತ್ತದೆ. ಉಳಿದ ಭೂ ಪ್ರದೇಶಗಳಲ್ಲಿ ಕಂಡು ಬರುವುದಿಲ್ಲ. ಜಿಎಂಟಿ ವೇಳೆ ಬೆಳಿಗ್ಗೆ 7 ಗಂಟೆ 53 ನಿಮಿಷ 41 ಸೆಕೆಂಡಿಗೆ ಗ್ರಹಣ ಸ್ಪರ್ಶವಾಗಿ 9 ಗಂಟೆ 22 ನಿಮಿಷ 47 ಸೆಕೆಂಡಿಗೆ ಮೋಕ್ಷವಾಗುತ್ತದೆ. ಗ್ರಹಣಾಚರಣೆ ಇರುವುದಿಲ್ಲ.

ನ.25ರಂದು ಪಾರ್ಶ್ವ ಸೂರ್ಯಗ್ರಹಣ, ಭಾರತದಲ್ಲಿ ಇಲ್ಲ
5. 25 ನವೆಂಬರ್ 2011 ರಂದು ಭಾಗಶಃ ಸೂರ್ಯ ಗ್ರಹಣ ಸಂಭವಿಸುತ್ತದೆ. ಈ ಗ್ರಹಣವು ಸಾರೋಸ್ ಸರಣಿಯಲ್ಲಿ 123 ನೆಯದಾಗಿದ್ದು, 70 ಗ್ರಹಣಗಳಲ್ಲಿ ಇದು 53ನೆಯದು. ಈ ಗ್ರಹಣವು ದಕ್ಷಿಣ ಧ್ರುವ, ದಕ್ಷಿಣ ಆಫ್ರಿಕಾದಲ್ಲಿ ದಕ್ಷಿಣ ಭಾಗದ ಪ್ರದೇಶಗಳಲ್ಲಿ, ಅಂಟಾರ್ಟಿಕ, ತಾಸ್ಮೇನಿಯ, ನ್ಯೂಜಿಲೆಂಡ್ ದೇಶಗಳಲ್ಲಿ ಗೋಚರಿಸುತ್ತದೆ. ಈ ವರ್ಷದ ಇದು ಅತಿ ದೊಡ್ಡ ಭಾಗಶಃ ಸೂರ್ಯಗ್ರಹಣವಿದು. ಗ್ರಹಣ ಸ್ಪರ್ಶ ಕಾಲ ಜಿಎಂಟಿ ವೇಳೆ ಬೆಳಿಗ್ಗೆ 4 ಗಂಟೆ 23 ನಿಮಿಷ 15 ಸೆಕೆಂಡಿಗೆ ಉಂಟಾಗುತ್ತದೆ. ಗ್ರಹಣದ ಮಧ್ಯಕಾಲ 6 ಗಂಟೆ 23 ನಿಮಿಷ 17 ಸೆಕೆಂಡುಗಳು, ಗ್ರಹಣದ ಮೋಕ್ಷ ಕಾಲ 8 ಗಂಟೆ 17 ನಿಮಿಷ 15 ಸೆಕೆಂಡುಗಳು. ಗ್ರಹಣದ ಗ್ರಾಸ ಪ್ರಮಾಣ 0.9047 ರಷ್ಟಿರುತ್ತದೆ. ಭಾರತದಲ್ಲಿ ಕಾಣಿಸುವುದಿಲ್ಲವಾದ್ದರಿಂದ ಗ್ರಹಣಾಚರಣೆ ಇರುವುದಿಲ್ಲ.

ಡಿ. 10ರಂದು ಪೂರ್ಣ ಚಂದ್ರಗ್ರಹಣ, ಭಾರತಕ್ಕೂ ಗೋಚರ
6. 10 ಡಿಸೆಂಬರ್ 2011 ರಂದು ಪೂರ್ಣ ಚಂದ್ರಗ್ರಹಣ ಸಂಭವಿಸುತ್ತದೆ. ಈ ಗ್ರಹಣವು ಸಾರೋಸ್ ಸರಣಿಯಲ್ಲಿ 135ನೆಯದಾಗಿದ್ದು, 71 ಗ್ರಹಣಗಳಲ್ಲಿ ಇದು 23ನೆಯದು. ಈ ಗ್ರಹಣವು ಭೂಮಿಯ ಎಲ್ಲಾ ಭಾಗಗಳಲ್ಲಿ ಗೋಚರಿಸುತ್ತದೆ. ಏಷ್ಯಾ ಮತ್ತು ಆಸ್ಟ್ರೇಲಿಯಾಗಳಲ್ಲಿ ಗ್ರಹಣದ ಎಲ್ಲಾ ಹಂತಗಳನ್ನು ನೋಡಬಹುದು. ಉತ್ತರ ಅಮೆರಿಕಾದಲ್ಲಿ ಗ್ರಸ್ತ ಚಂದ್ರ ಮುಳುಗುವುದರಿಂದ ಪೂರ್ಣ ಗೋಚರಿಸುವುದಿಲ್ಲ. ಯುರೋಪ್ ಮತ್ತು ಆಫ್ರಿಕಾ ದೇಶಗಳಲ್ಲಿ ಗ್ರಹಣ ಸ್ಪರ್ಶ ಕಾಲ ಕಂಡುಬರುವುದಿಲ್ಲ. ಗ್ರಸ್ತೋದಿತ ಚಂದ್ರ ಗ್ರಹಣವನ್ನು ವೀಕ್ಷಿಸಬಹುದು. ದಕ್ಷಿಣ ಅಮೆರಿಕಾ ಮತ್ತು ಅಂಟಾರ್ಟಿಕಾದಲ್ಲಿ ಗ್ರಹಣ ಕಂಡುಬರುವುದಿಲ್ಲ. ಭಾರತದ ಎಲ್ಲಾ ಭಾಗಗಳಲ್ಲೂ ಈ ಪೂರ್ಣ ಚಂದ್ರ ಗ್ರಹಣ ಗೋಚರಿಸುತ್ತವೆ. ಭಾರತೀಯ ಕಾಲಮಾನ ಸಾಯಂಕಾಲ 5 ಗಂಟೆ 3 ನಿಮಿಷ 32 ಸೆಕೆಂಡಿಗೆ ಗ್ರಹಣ ಸ್ಪರ್ಶಕಾಲ ಉಂಟಾಗುತ್ತದೆ. ಗ್ರಹಣದ ಮಧ್ಯಕಾಲ ರಾತ್ರಿ 8 ಗಂಟೆ 1 ನಿಮಿಷ 49 ಸೆಕೆಂಡುಗಳು, ಮೋಕ್ಷ ಕಾಲ ರಾತ್ರಿ 11 ಗಂಟೆಗೆ. ಗ್ರಹಣದ ಪರಿಪೂರ್ಣತೆಯ ಅವಧಿ 51 ನಿಮಿಷ 8 ಸೆಕೆಂಡುಗಳು ಕರ್ನಾಟಕದಲ್ಲಿ ಗ್ರಸ್ತೋದಿತ ಚಂದ್ರಗ್ರಹಣವನ್ನು ನೋಡಬಹುದು. ಗ್ರಹಣದ ಗ್ರಾಸ ಪ್ರಮಾಣ 1.1061 ರಷ್ಟಿರುತ್ತದೆ.

ಈ ಗ್ರಹಣದ ವಿಶೇಷವೇನೆಂದರೆ, ಗ್ರಹಣದ ಪ್ರಾರಂಭದಲ್ಲಿ ಚಂದ್ರ ಬೂದು ಬಣ್ಣಕ್ಕಿರುತ್ತದೆ. ಕ್ರಮೇಣ ಕಪ್ಪಾಗುತ್ತದೆ. ಗ್ರಹಣದ ಪರಿಪೂರ್ಣತೆಯ ಅವಧಿಯಲ್ಲಿ ತಾಮ್ರ ಬಣ್ಣವಾಗುತ್ತದೆ. ಚಂದ್ರ ಗ್ರಹಣದಲ್ಲಿ ಸೂರ್ಯನ ಬೆಳಕನ್ನು ಚಂದ್ರನಿಗೆ ತಲುಪದಂತೆ ಭೂಮಿ ತಡೆಯುತ್ತದೆ. ಸೂರ್ಯನ ಬೆಳಕನ್ನು ಭೂಮಿಯ ವಾತಾವರಣ ಚದುರಿಸಿದಾಗ ಕೆಂಪು ಬಣ್ಣದ ಬೆಳಕು ಮಾತ್ರ ಚಂದ್ರನನ್ನು ತಲುಪಿ ಪೂರ್ಣ ಗ್ರಹಣದಲ್ಲೂ ಚಂದ್ರ ಕೆಂಪಗೆ ಕಾಣಿಸುತ್ತಾನೆ. ಭಾರತದಲ್ಲಿ ಗ್ರಹಣಾಚರಣೆ ಆಚರಿಸುತ್ತಾರೆ.

ಗ್ರಹಣಗಳ ವಿಸ್ಮಯ
1. ಸಾಮಾನ್ಯವಾಗಿ ಗ್ರಹಣದ ಅವಧಿಯಲ್ಲಿ ಚಂದ್ರನ ನೆರಳಿನ ವೇಗವು 1700 ಕಿ.ಮೀ./ಗಂಟೆ.
2. ಗ್ರಹಣದ ಪರಿಪೂರ್ಣತೆಯ ಗರಿಷ್ಠ ಅವಧಿ 7 ನಿಮಿಷ 30 ಸೆಕೆಂಡುಗಳು.
3. ಭೂಮಿಯ ಎಲ್ಲಾ ಪ್ರದೇಶಗಳಲ್ಲೂ ಪೂರ್ಣ ಸೂರ್ಯ ಗ್ರಹಣವನ್ನು ನೋಡಲು 400 ವರ್ಷಗಳು ಬೇಕು.
4. ಒಂದು ವರ್ಷದಲ್ಲಿ ಸೂರ್ಯ ಗ್ರಹಣವು, ಚಂದ್ರ ಗ್ರಹಣಕ್ಕಿಂತ ಹೆಚ್ಚಾಗಿ ಸಂಭವಿಸುತ್ತದೆ. (5:3)
5. ಒಂದು ವರ್ಷದಲ್ಲಿ ಕಡಿಮೆ ಎಂದರೆ 2 ಸೂರ್ಯ ಗ್ರಹಣಗಳು ಸಂಭವಿಸುತ್ತವೆ.
6. ಒಂದು ತಿಂಗಳ ಅವಧಿಯಲ್ಲಿ ಎರಡು ಸೂರ್ಯ ಗ್ರಹಣಗಳು ಸಂಭವಿಸಿದರೆ. ಈ ಎರಡು ಸೂರ್ಯ ಗ್ರಹಣಗಳ ಮಧ್ಯದಲ್ಲಿ ಒಂದು ಪೂರ್ಣ ಚಂದ್ರಗ್ರಹಣ ಸಂಭವಿಸುತ್ತದೆ.
7. ಒಂದು ವರ್ಷದಲ್ಲಿ ತ್ರಿವಳಿ ಗ್ರಹಣಗಳು ಎರಡು ಸಲ ಸಂಭವಿಸುತ್ತದೆ. ಈ ಪ್ರಕ್ರಿಯೆ ಈ ಹಿಂದೆ 1935ರಲ್ಲಿ ಸಂಭವಿಸಿತ್ತು. ಮುಂದೆ 2160 ರಲ್ಲಿ ಪುನಃ ಈ ಪ್ರಕ್ರಿಯೆ ಸಂಭವಿಸುತ್ತದೆ.
8. ಒಂದು ವರ್ಷದಲ್ಲಿ ಅತೀ ಹೆಚ್ಚು ಗ್ರಹಣಗಳು-7, ಸೂರ್ಯಗ್ರಹಣ -4, ಮತ್ತು ಚಂದ್ರಗ್ರಹಣ -3. ಈ ಹಿಂದೆ 1982 ರಲ್ಲಿ ಸಂಭವಿಸಿತ್ತು. ಪುನಃ 2485 ರಲ್ಲಿ ಸಂಭವಿಸುತ್ತದೆ.

ಸಾರೋಸ್
ಸಾರೋಸ್-ಇದು ಗ್ರೀಕ್ ಭಾಷೆಯ ಪದವಾಗಿದ್ದು, ಇದರ ಅರ್ಥ ಪುನರಾವರ್ತನೆ. ಒಂದು ಗ್ರಹಣ ಸಂಭವಿಸಿ, ಇದೇ ಗ್ರಹಣ ಪುನರಾವರ್ತನೆಯಾಗಲು 18 ವರ್ಷ 11 ತಿಂಗಳು 8 ಗಂಟೆಗಳು ಬೇಕಾಗುತ್ತದೆ. ಇದನ್ನೆ ಸಾರೋಸ್ ಎಂದು ಕರೆಯುತ್ತಾರೆ. ಯಾವುದೇ ಒಂದು ಗ್ರಹಣ ಸಂಭವಿಸಿ ಪುನಃ ಇದೇ ಗ್ರಹಣ ಇದೇ ಸ್ಥಳಗಳಲ್ಲಿ ಕಾಣಿಸಿಕೊಳ್ಳಲು 54 ವರ್ಷ 1 ತಿಂಗಳು 4 ದಿವಸಗಳು ಬೇಕು (3 ಸಾರೋಸ್‌ಗಳು)

ಆರ್. ಸೀತಾರಾಮಯ್ಯ
ಜ್ಯೋತೀಷ್ಕರು,
'ಕಮಲ', 5ನೇ ತಿರುವು,
ಬಸವನಗುಡಿ,
ಶಿವಮೊಗ್ಗ - 577 201
ಮೊ: 94490 48340

ವೆಬ್ದುನಿಯಾವನ್ನು ಓದಿ