ವಿಷ್ಣುಪದ ಪುಣ್ಯಕಾಲಕ್ಕಿಂತಲೂ, ಷಡಶೀತಿ ಪುಣ್ಯಕಾಲ ಶ್ರೇಷ್ಠವಾಗಿದೆ. ಷಡಶೀತಿ ಪುಣ್ಯ ಕಾಲಕ್ಕಿಂತಲೂ, ವಿಷ್ಣುವತ್ ಪುಣ್ಯಕಾಲ ಶ್ರೇಷ್ಠವಾಗಿದೆ. ವಿಷ್ಣುವತ್ ಪುಣ್ಯಕಾಲಕ್ಕಿಂತಲೂ ಆಯನ ಪುಣ್ಯ ಕಾಲ ಅತ್ಯಂತ ಶ್ರೇಷ್ಠವಾಗಿದೆ. ದಕ್ಷಿಣಾಯನ ಕಾಲಕ್ಕಿಂತಲೂ, ಉತ್ತರಾಯಣ ಕಾಲ ಶ್ರೇಷ್ಠವಾಗಿದೆ.
ಸಂಕ್ರಾಂತಿ ಪುಣ್ಯ ಕಾಲದಲ್ಲಿ, ನದಿ ಸ್ನಾನ, ದೇವತೆಗಳಿಗೆ, ಪಿತೃಗಳಿಗೆ ತರ್ಪಣ, ಉಪವಾಸ, ಹೋಮ, ಜಪ, ದಾನಗಳಿಗೆ ಪ್ರಶಸ್ತವೆನಿಸಿದ್ದು, ವಿಧ್ಯುಕ್ತವಾಗಿ ನಡೆಸಬೇಕಾದ ಕಾರ್ಯಗಳು.
ಆಯನವೆಂದರೆ ಸೂರ್ಯನು ಚಲಿಸುವ ಮಾರ್ಗ. ಸೂರ್ಯನು ಕಟಕ ಸಂಕ್ರಾಂತಿಯಿಂದ ದಕ್ಷಿಣದತ್ತ ವಾಲಿ ಚಲಿಸುತ್ತಿದ್ದು, ಮಕರ ಸಂಕ್ರಾಂತ್ರಿಯಿಂದ ತನ್ನ ಮಾರ್ಗವನ್ನು ಬದಲಾಯಿಸಿ, ಉತ್ತರದ ಕಡೆ ವಾಲಿ ಚಲಿಸುತ್ತಾನೆ. ಹಗಲು ಜಾಸ್ತಿಯಾಗಿ, ಕತ್ತಲು ಕಡಿಮೆಯಾಗುತ್ತದೆ. ದೇವತೆಗಳಿಗೆ ಹಗಲು, ರಾಕ್ಷಸರಿಗೆ ರಾತ್ರಿ ಪ್ರಾರಂಭವೆಂದು ಪುರಾಣದಲ್ಲಿದೆ. ದಕ್ಷಿಣಾಯನದಲ್ಲಿ ಮುಚ್ಚಿದ ಸ್ವರ್ಗದ ಬಾಗಿಲು, ಈ ಉತ್ತರಾಯಣದಲ್ಲಿ ತೆರೆಯುತ್ತದೆ. ಅದಕ್ಕಾಗಿಯೇ ಭೀಷ್ಮ ಪಿತಾಮಹರು ದೇಹ ತ್ಯಜಿಸಲು, ಉತ್ತರಾಯಣದ ಕಾಲದವರೆಗೂ, ಶರಶಯ್ಯೆಯಲ್ಲಿ ಹರಿಸ್ಮರಣೆ ಮಾಡುತ್ತಾ ಕಾದಿದ್ದರು. ಉತ್ತರಾಯಣವು ದೇವತೆಗಳ ಕಾಲ, ದಕ್ಷಿಣಾಯನ ಪಿತೃಗಳ ಕಾಲವಾಗಿರುತ್ತದೆ. ಆದ್ದರಿಂದ ಯಜ್ಞ ಯಾಗಾದಿಗಳಿಗೆ, ಸಮಸ್ತ ದೇವತಾ ಕಾರ್ಯ ಶುಭಕಾರ್ಯಗಳಿಗೆ ಉತ್ತರಾಯಣ ಕಾಲ ಶ್ರೇಷ್ಠವಾಗಿದೆ.
ಸೂರ್ಯನು ಜನವರಿ 14 ರಂದು ಸಾಯಂಕಾಲ 6 ಗಂಟೆ 44 ನಿಮಿಷಕ್ಕೆ ನಿರಯಣ ಮಕರ ರಾಶಿಗೆ ಪ್ರವೇಶಿಸುತ್ತಾನೆ. ಈ ವೇಳೆಗೆ ಸೂರ್ಯಾಸ್ತವಾಗಿರುವುದರಿಂದ, ಜನವರಿ 15ರಂದು ಮಕರ ಸಂಕ್ರಾತಿಯನ್ನು ಆಚರಿಸಲಾಗುತ್ತದೆ. ಜನವರಿ 15 ರಂದು ಹಗಲು ಪೂರ್ತಿ ಅಂದರೆ ಸೂರ್ಯೋದಯದಿಂದ, ಸೂರ್ಯಾಸ್ತದವರೆಗೆ ಪುಣ್ಯ ಕಾಲವಿರುತ್ತದೆ. ಈ ಪುಣ್ಯ ಕಾಲದಲ್ಲಿ ಕಪ್ಪು ಎಳ್ಳಿನೊಂದಿಗೆ ಸ್ನಾನ ಮಾಡಿ, ಎಳ್ಳು ದಾನ ಮಾಡಬೇಕು. ದೇವಸ್ಥಾನಗಳಲ್ಲಿ ಎಳ್ಳೆಣ್ಣೆ ದೀಪ ಹಚ್ಚಬೇಕು. ಮಾಡಿದ ದಾನಕ್ಕೆ ಜನ್ಮ ಜನ್ಮದಲ್ಲೂ ಸದಾ ನಮಗೆ ಫಲ ಸಿಗುವಂತೆ ಸೂರ್ಯನು ಅನುಗ್ರಹಿಸುತ್ತಾನೆ. ಇದಕ್ಕಾಗಿಯೇ ಎಳ್ಳು - ಬೆಲ್ಲ ಹಂಚುವುದು.
ಎಳ್ಳು - ಬೆಲ್ಲ, ಶೀತ - ವಾತದಿಂದ ಉಂಟಾಗುವ ಜಡ್ಡು, ಆಲಸ್ಯಗಳನ್ನು ದೂರಮಾಡುವ ಸ್ನೇಹ ದ್ರವ್ಯಗಳ ಹಂಚಿಕೆ, ಸೇವನೆ, ದಾನ ಈ ಸಂಕ್ರಾಂತಿಯ ವೈಶಿಷ್ಟ. 'ಎಳ್ಳು - ಬೆಲ್ಲ ತಿಂದು ಒಳ್ಳೆ ಮಾತಾಡು' ಎನ್ನುವುದೇ ಮಕರ ಸಂಕ್ರಾಂತಿಯ ಸಂದೇಶವಾಗಿದೆ.