ನಾಲ್ಕು ಬೆರಳಿಗೆ ನವ ರತ್ನಗಳು: ನಿಮಗ್ಯಾವ ರತ್ನ?

ಪಂ. ಅಶೋಕ್ ಪವಾರ್ ಮಯಂಕ
 
WD
ರತ್ನಗಳಲ್ಲಿ ಪ್ರಮುಖವಾಗಿ ಒಂಬತ್ತು ರತ್ನಗಳನ್ನು ಶುಭದಾಯಕ ಎಂಬ ಕಾರಣಕ್ಕೆ ನಾವು ಧರಿಸುತ್ತಿದ್ದೇವೆ. ಸೂರ್ಯನಿಗೆ ಮಾಣಿಕ್ಯ, ಚಂದ್ರನಿಗೆ ಮುತ್ತು, ಮಂಗಳನಿಗೆ ಕೆಂಪು ಹವಳ, ಬುಧನಿಗೆ ಮರಕತ (ಪಚ್ಚೆ), ಗುರುವಿಗೆ ಹಳದಿ ಪುಷ್ಯರಾಗ, ಶುಕ್ರನಿಗೆ ವಜ್ರ, ಶನಿಗೆ ನೀಲ, ರಾಹುವಿಗೆ ಗೋಮೇದಿಕ ಮತ್ತು ಕೇತುವಿಗೆ ವೈಢೂರ್ಯ.

ಪುಷ್ಯರಾಗ ಮಣಿಯನ್ನು (Yellow sapphire) ತರ್ಜನಿ (ತೋರು) ಬೆರಳಿಗೇ ಧರಿಸಬೇಕೆಂದು ಯಾಕೆ ಸೂಚಿಸುತ್ತಾರೆ? ಯಾಕೆಂದರೆ, ಯಾವುದೇ ವ್ಯಕ್ತಿ ಎಚ್ಚರಿಕೆ ಅಥವಾ ನಿರ್ದೇಶನ ನೀಡುವುದು ಇದೇ ಬೆರಳಿನ ಮೂಲಕ. ಇದೇ ಬೆರಳು ಜಗಳಕ್ಕೂ ಕಾರಣವಾಗುತ್ತದೆ, ಹೀಗಾಗಿ ಎಚ್ಚರದಿಂದಿರುವಂತೆ ಹೇಳಲೂ ಕೆಲಸಕ್ಕೆ ಬರುತ್ತದೆ. ಇದಕ್ಕಾಗಿ ಗುರುವಿನ ರತ್ನ ಪುಷ್ಯರಾಗವನ್ನು ಧರಿಸಬೇಕೆಂದು ಸಲಹೆ ನೀಡಲಾಗುತ್ತದೆ. ಈ ಮಣಿಯನ್ನು ಧರಿಸುವುದರಿಂದ ಆ ವ್ಯಕ್ತಿಗೆ ಗಂಭೀರತೆ ಬರುತ್ತದೆ ಮತ್ತು ಆತ ಅನ್ಯಾಯದ ವಿರುದ್ಧ ಜಾಗೃತನಾಗುತ್ತಾನೆ. ಇದು ಧರ್ಮ-ಕರ್ಮದಲ್ಲಿಯೂ ಶ್ರದ್ಧೆ ಹುಟ್ಟಿಸುತ್ತದೆ. ಗುರುವಿನ ಪ್ರಭಾವ ಹೆಚ್ಚಿಸಲು ಮತ್ತು ಅದರ ಅಶುಭ ಫಲಗಳನ್ನು ಕೊನೆಗಾಣಿಸಲು ಈ ರತ್ನವನ್ನು ಧರಿಸಲಾಗುತ್ತದೆ.

ರಾಜಕಾರಣಿಗಳು, ಅಧಿಕಾರಿಗಳು, ನ್ಯಾಯಾಧೀಶರು, ಮಂತ್ರಿಗಳು, ರಾಜನಾಯಕರು, ನಟರು ಮುಂತಾದವರ ಕೈಯಲ್ಲಿ ಈ ರತ್ನವನ್ನು ಕಾಣಬಹುದು. ಈ ರತ್ನದೊಂದಿಗೆ ಮಾಣಿಕ್ಯವನ್ನೂ ಧರಿಸಿದರೆ, ಅತಿ ಶುಭ ಫಲ ದೊರೆಯುತ್ತದೆ.

ಮಧ್ಯ ಬೆರಳಿನಲ್ಲಿ ನೀಲ ಮಣಿ ಧಾರಣೆ ಮಾಡಿದರೆ, ಅವರು ಆ ಬೆರಳಲ್ಲಿ ಅದರ ಹೊರತು ಬೇರಾವುದೇ ರತ್ನ ಧರಿಸಬಾರದು. ಇಲ್ಲವಾದರೆ ಶುಭ ಫಲ ದೊರೆಯುವುದಿಲ್ಲ. ಈ ಬೆರಳಲ್ಲಿ ಭಾಗ್ಯ ರೇಖೆಯು ಕೊನೆಗೊಳ್ಳುತ್ತದೆಯಾದುದರಿಂದ, ಯಾರಲ್ಲಿ ಭಾಗ್ಯ ರೇಖೆ ಇಲ್ಲವೋ ಅವರು ತಿಳಿದವರಲ್ಲಿ ಕೇಳಿ, ನೀಲ ಮಣಿ ಧರಿಸಿದರೆ, ಲಾಭ ಪಡೆಯಬಹುದಾಗಿದೆ.

ನೀಲಮಣಿಯು ಶನಿಯ ಶುಭ ಫಲ ದೊರಕಿಸಲು ಸಹಾಯ ಮಾಡುತ್ತದೆ. ಲೋಹದ ಉದ್ಯಮಿಗಳು, ರಾಜಕಾರಣಿಗಳು, ಆಡಳಿತಗಾರರು ಇದನ್ನು ಹೆಚ್ಚಾಗಿ ಧರಿಸುತ್ತಾರೆ. ಈ ರತ್ನವು ತ್ವರಿತ ಫಲದಾಯಕವಾಗಿದೆ ಮತ್ತು ಇದರ ಶುಭ ಅಥಲಾ ಅಶುಭ ಪರಿಣಾಮವು ಅತ್ಯಂತ ಶೀಘ್ರದಲ್ಲೇ ತಿಳಿದುಬಿಡುತ್ತದೆ ಎಂದು ಹೇಳಲಾಗುತ್ತದೆ. ಯಾವುದೇ ರತ್ನ ಶಾಸ್ತ್ರಜ್ಞರ ಸಲಹೆಯಿಲ್ಲದೆ ಇದನ್ನು ಧರಿಸಬಾರದು ಎಂದು ಹೇಳಲಾಗುತ್ತದೆ.

ಮಾಣಿಕ್ಯವನ್ನು ಅನಾಮಿಕ (ಉಂಗುರ) ಬೆರಳಿಗೆ ಧರಿಸಲಾಗುತ್ತದೆ. ಇದು ಸೂರ್ಯನ ರತ್ನ. ಬರ್ಮಾ ದೇಶದ ಮಾಣಿಕ್ಯಕ್ಕೆ ಬೆಲೆ ಹೆಚ್ಚು. ಇಂದು ಕೆಲವು ನಕಲಿ ಮಾಣಿಕ್ಯಗಳೂ ಬರ್ಮಾದವು ಎಂದು ಹೇಳಿ ಮಾರಾಟ ಮಾಡಲಾಗುತ್ತದೆ. ಈ ಬಗ್ಗೆ ಎಚ್ಚರ ವಹಿಸಬೇಕು. ಬರ್ಮಾದ ಮಾಣಿಕ್ಯವು ದಾಳಿಂಬೆ ಬೀಜದಂತಿರುತ್ತದೆ. ಇದನ್ನು ಧರಿಸುವುದರಿಂದ ಆಡಳಿತಾತ್ಮಕ ಪ್ರಭಾವ ವೃದ್ಧಿಸುತ್ತದೆ ಮತ್ತು ಶತ್ರುವಿನ ಎದುರು ಜಯ ಸಾಧಿಸಲು ಪೂರಕವಾಗುತ್ತದೆ. ಇದನ್ನು ಕೂಡ ರಾಜಕಾರಣ ಜೊತೆ ಸಂಬಂಧ ಇರುವವರು, ಉಚ್ಚ ಅಧಿಕಾರಿಗಳು, ನ್ಯಾಯಾಧೀಶರು, ಜಿಲ್ಲಾಧಿಕಾರಿಗಳು ಮುಂತಾದವರ ಬೆರಳುಗಳಲ್ಲಿ ಕಾಣಬಹುದು.

ಕನಿಷ್ಠ ಬೆರಳಿನಲ್ಲಿ ಅಂದರೆ ಕಿರು ಬೆರಳಿನಲ್ಲಿ ಪಚ್ಚೆ ರತ್ನವನ್ನು ಧರಿಸಬೇಕು. ಇದು ಬೌದ್ಧಿಕ ಗುಣಗಳನ್ನು ಹೆಚ್ಚಿಸುತ್ತದೆಯಾದುದರಿಂದ ಉದ್ಯಮಿಗಳು ಹೆಚ್ಚಾಗಿ ಧರಿಸುತ್ತಾರೆ. ಇದನ್ನು ಧರಿಸುವುದರಿಂದ ಪತ್ರಕರ್ತರು, ಸೇಲ್ಸ್‌ಮ್ಯಾನ್‌ಗಳು, ಪ್ರಕಾಶನದ ಕೆಲಸಗಾರರು, ಕಲಾವಿದರು, ವಾಕ್ಪಟುಗಳು ಹಾಗೂ ಬೌದ್ಧಿಕ ಸಾಮರ್ಥ್ಯ ಹೆಚ್ಚು ಬೇಕಾಗಿರುವ ಕೆಲಸದಲ್ಲಿ ನಿರತರಾದವರಿಗೆ ಶುಭ ಫಲಗಳಾಗುತ್ತವೆ.

ವಜ್ರ, ಮುತ್ತು, ಹವಳ, ಗೋಮೇಧಿಕ ಮತ್ತು ವೈಢೂರ್ಯ: ಹವಳವು ಶಕ್ತಿ ಹೆಚ್ಚಿಸಬಲ್ಲ, ಸಾಹಸ, ಮಹತ್ವಾಕಾಂಕ್ಷೆ ವೃದ್ಧಿ ಮಾಡಲು ಮತ್ತು ಶತ್ರುವಿನ ಮೇಲೆ ಪ್ರಭಾವ ಮಾಡಲು ನೆರವಾಗುತ್ತದೆ. ಅದರ ಮಿತ್ರರು ಗುರು ಮತ್ತು ಸೂರ್ಯ. ಮಕರ ಉಚ್ಚವಾಗಿದ್ದರೆ ಅದನ್ನು ಮಧ್ಯಮ, ಉಂಗುರ ಬೆರಳು ಅಥವಾ ಕಿರು ಬೆರಳಲ್ಲಿ ಧರಿಸಬಹುದು. ಇದನ್ನು ಹೆಚ್ಚಾಗಿ ರಾಜಕಾರಣಿಗಳು, ಪೊಲೀಸರು, ಆಡಳಿತದೊಂದಿಗೆ ಸಂಬಂಧ ಹೊಂದಿರುವವರು ಮತ್ತು ಉನ್ನತ ಅಧಿಕಾರಿಗಳು, ಭೂಮಿ ಸಂಬಂಧಿತ ವ್ಯಕ್ತಿಗಳು, ಬಿಲ್ಡರ್ ಮುಂತಾದವರ ಕೈಗಳಲ್ಲಿ ಕಾಣಬಹುದು.

ಇದನ್ನು ಮಾಣಿಕ್ಯ ಮತ್ತು ಪುಷ್ಯರಾಗದ ಜೊತೆಗೂ ಧರಿಸಬಹುದಾಗಿದೆ. ಯಾರಿಗೆ ಹೆಚ್ಚು ಕೋಪ ಬರುವುದೋ, ಅಂಥವರು ಈ ರತ್ನವನ್ನು ಧರಿಸಬಾರದು. ಹವಳವನ್ನು ಮುತ್ತಿನ ಜತೆಗೆ ಅಥವಾ ಸಂಯುಕ್ತ ರತ್ನದ ಉಂಗುರವನ್ನೂ ಧರಿಸಬಹುದಾಗಿದೆ.

ಕಿರು ಬೆರಳಿನಲ್ಲಿ ಮುತ್ತು ಧರಿಸುವುದು ಶುಭ ಫಲದಾಯಕ. ಯಾಕೆಂದರೆ, ಕನಿಷ್ಠ ಬೆರಳಿನ ಬುಡದಲ್ಲಿ ಚಂದ್ರ ಪರ್ವತ ಇರುತ್ತದೆ. ಈ ಕಾರಣದಿಂದ, ಚಂದ್ರನ ಅಶುಭ ಪರಿಣಾಮ ತಡೆಗಟ್ಟಿ ಶುಭತ್ವಕ್ಕಾಗಿ ಇದು ಲಾಭಪ್ರದವಾಗುತ್ತದೆ. ಇದನ್ನು ಉಂಗುರ ಬೆರಳಿನಲ್ಲಿ ಧರಿಸಬಾರದು. ಗುರುವಿನ ಬೆರಳಾಗಿರುವ ತೋರು ಬೆರಳಿನಲ್ಲಿಯೂ ಇದನ್ನು ಧರಿಸಬಹುದು. ಈ ರತ್ನವು ಮನಸ್ಸನ್ನು ಅಶಾಂತಿಯಿಂದ ರಕ್ಷಿಸುತ್ತದೆ ಮತ್ತು ಯಾರಿಗೆ ಹೆಚ್ಚು ಕೋಪ ಬರುವುದೋ ಅಂಥವರು, ಜಲ ಕಾರ್ಯದ ಜೊತೆ ಸಂಬಂಧ ಹೊಂದಿರುವವರು, ಹಾಲಿನ ವ್ಯಾಪಾರಿಗಳು, ಬಿಳಿ ವಸ್ತುಗಳ ವ್ಯವಹಾರದಲ್ಲಿ ತೊಡಗಿರುವವರು ಧರಿಸಬಹುದಾಗಿದೆ. ಇದನ್ನು ಪುಷ್ಯರಾಗದ ಜೊತೆ ಮತ್ತು ಮಾಣಿಕ್ಯದ ಜೊತೆಗೂ ಧರಿಸಲಾಗುತ್ತದೆ.

ವಜ್ರ ಎಂಬುದು ಎಷ್ಟು ಬೆಲೆ ಬಾಳುವ ರತ್ನವೋ ಅಷ್ಟೇ ಸುಂದರವೂ ಹೌದು. ಇದನ್ನು ಗುರುವಿನ ಬೆರಳಾಗಿರುವ ತೋರು ಬೆರಳಿನಲ್ಲಿ ಧರಿಸುತ್ತಾರೆ. ಯಾಕೆಂದರೆ, ಈ ತರ್ಜನಿ ಬೆರಳಿನ ಬುಡದಲ್ಲಿಯೇ ಶುಕ್ರ ಪರ್ವತ ಇರುತ್ತದೆ. ಶುಕ್ರನ ಅಶುಭ ಫಲವನ್ನು ನಷ್ಟವಾಗಿಸಿ ಶುಭ ಫಲ ಪಡೆಯಲು ವಜ್ರದ ಉಂಗುರ ಧರಿಸುತ್ತಾರೆ. ಇದನ್ನು ಕಲಾವಿದರು, ಸೌಂದರ್ಯ ಪ್ರಸಾಧನದೊಂದಿಗೆ ಸಂಬಂಧ ಹೊಂದಿದವರು, ಪ್ರೇಮಿಗಳು, ಇಂಜಿನಿಯರ್‌ಗಳು, ಚಿಕಿತ್ಸಕರು, ಕಲಾತ್ಮಕ ವಸ್ತುಗಳ ಮಾರಾಟಗಾರರು ಮುಂತಾದವರು ಧರಿಸುತ್ತಾರೆ.

ರಾಹುವಿನ ರತ್ನ ಗೋಮೇದಿಕವನ್ನು ಕನಿಷ್ಠ ಬೆರಳಿನಲ್ಲಿ ಅಂದರೆ ಕಿರು ಬೆರಳಿನಲ್ಲಿ ಧರಿಸಬೇಕು. ಯಾಕೆಂದರೆ, ಮಿಥುನ ರಾಶಿಯಲ್ಲಿ ಉಚ್ಚ ಸ್ಥಾನದಲ್ಲಿರುವ ಬುಧನ ಬೆರಳು ಕನಿಷ್ಠ ಬೆರಳಿನಲ್ಲಿ ಧರಿಸುವುದು ಶುಭ ಫಲದಾಯಕ. ರಾಜನೀತಿ, ಪತ್ತೆದಾರಿಕೆ, ತಂತ್ರ-ಮಂತ್ರದಲ್ಲಿ ತೊಡಗಿರುವ ಮಂದಿ ಧರಿಸುತ್ತಾರೆ. ಇದು ರಾಹುವಿನ ಅಶುಭ ಪ್ರಭಾವವನ್ನು ದೂರೀಕರಿಸುತ್ತದೆ.

ಬೆಕ್ಕಿನ ಕಣ್ಣು ಎಂದು ಆಂಗ್ಲ ಭಾಷೆಯಲ್ಲಿ ಕರೆಯಲಾಗುವ ವೈಢೂರ್ಯವನ್ನು ತೋರು ಬೆರಳಿಗೆ ಧರಿಸಬೇಕು. ಯಾಕೆಂದರೆ, ಗುರುವಿನ ರಾಶಿ ಧನುವಿನಲ್ಲಿ ಉಚ್ಚವಾಗಿರುತ್ತದೆ. ಇದು ಉನ್ನತಿಯನ್ನು ಪ್ರದಾನಿಸುತ್ತದೆ ಮತ್ತು ಶತ್ರುನಾಶಕ್ಕೆ ಕಾರಣವಾಗುತ್ತದೆ. ಈ ರತ್ನವನ್ನು ವಜ್ರದ ಜೊತೆಗೆ ಎಂದಿಗೂ ಧರಿಸಬಾರದು. ಯಾಕೆಂದರೆ, ಇದರಿಂದ ಬಾರಿಬಾರಿಗೆ ದುರ್ಘಟನೆಯ ಯೋಗ ಉಂಟಾಗುತ್ತದೆ.

ವೆಬ್ದುನಿಯಾವನ್ನು ಓದಿ