ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಗುರುವಾರ, 4 ಜೂನ್ 2020 (08:52 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


ಮೇಷ: ಕಾರ್ಯರಂಗದಲ್ಲಿ ತುಸು ಮುನ್ನಡೆ ತೋರಿಬರಲಿದ್ದು, ಅಂದುಕೊಂಡ ಕಾರ್ಯ ನೆರವೇರಿಸುವಿರಿ. ವಿದ್ಯಾರ್ಥಿಗಳಿಗೆ ಪ್ರಯತ್ನಬಲಕ್ಕೆ ತಕ್ಕ ಪ್ರತಿಫಲ ಸಿಗಲಿದೆ. ವ್ಯಾಪಾರಿಗಳಿಗೆ ನಷ್ಟದ ಭೀತಿಯಿದೆ. ಆರ್ಥಿಕವಾಗಿ ದುಂದು ವೆಚ್ಚಗಳಿಗೆ ಕಡಿವಾಣ ಹಾಕಿ.

ವೃಷಭ: ಸಾಂಸಾರಿಕವಾಗಿ ಅನಿರೀಕ್ಷಿತವಾಗಿ ಅತಿಥಿಗಳ ಆಗಮನದಿಂದ ಸಂತಸದ ವಾತಾವರಣವಾಗಲಿದೆ. ವೃತ್ತಿರಂಗದಲ್ಲಿ ಹೊಸ ಸವಾಲುಗಳಿಗೆ ಸಿದ್ಧರಾಗಬೇಕಾಗುತ್ತದೆ. ನಿರುದ್ಯೋಗಿಗಳಿಗೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಬಹುದು. ಆರೋಗ್ಯದ ಬಗ್ಗೆ ಕಾಳಜಿಯಿರಲಿ.

ಮಿಥುನ: ಆರ್ಥಿಕ ಪರಿಸ್ಥಿತಿಯಲ್ಲಿ ಸುದಾರಣೆಯಾಗಲಿದ್ದು, ಹೊಸ ಯೋಜನೆಗಳಿಗೆ ಕೈ ಹಾಕಲಿದ್ದೀರಿ. ಸಾಮಾಜಿಕ ರಂಗದಲ್ಲಿ ನಿಮ್ಮ ಕೆಲಸಗಳಿಗೆ ಜನಮನ್ನಣೆ ಸಿಗಲಿದೆ. ಹಿರಿಯರ ಮೆಚ್ಚುಗೆಗೆ ಪಾತ್ರರಾಗಲಿದ್ದೀರಿ. ಅವಿವಾಹಿತರಿಗೆ ಶೀಘ್ರ ಬಯಸಿದ ಸಂಬಂಧಗಳು ಕೂಡಿಬರಲಿದೆ.

ಕರ್ಕಟಕ: ಮಹಿಳೆಯರಿಗೆ ಉದ್ಯೋಗದಲ್ಲಿ ಮುನ್ನಡೆಯಿದ್ದರೂ ಅಧಿಕ ಕಾರ್ಯದೊತ್ತಡದಿಂದ ಹೈರಾಣಾಗಲಿದ್ದೀರಿ. ನ್ಯಾಯಾಲಯದ ಕಲಾಪಗಳಲ್ಲಿ ಹಿನ್ನಡೆಯಾದೀತು. ಕಾರ್ಯನಿಮಿತ್ತ ಸಂಚಾರ ಮಾಡಬೇಕಾಗುತ್ತದೆ. ಚಾಲನೆಯಲ್ಲಿ ಎಚ್ಚರಿಕೆಯಿಂದಿರಿ.

ಸಿಂಹ: ಕಾರ್ಮಿಕ ವರ್ಗದವರಿಗೆ ತಾತ್ಕಾಲಿಕ ಉದ್ಯೋಗ ಲಾಭವಾಗಲಿದೆ. ಸಾಮಾಜಿಕ ಕೆಲಸಗಳಿಂದ ಹೆಸರು, ಕೀರ್ತಿ ಸಂಪಾದನೆ ಮಾಡುವ ಯೋಗವಿದೆ. ಆರ್ಥಿಕವಾಗಿ ಅನಿರೀಕ್ಷಿತ ರೀತಿಯಲ್ಲಿ ಧನಾಗಮನವಾಗಲಿದೆ. ಹಿರಿಯರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.

ಕನ್ಯಾ: ಸಾಂಸಾರಿಕವಾಗಿ ಮಹಿಳೆಯರಿಗೆ ಸ್ವಜನರಿಂದಲೇ ಕಿರಿ ಕಿರಿ ಎದುರಾಗಲಿದೆ. ನೆರೆಹೊರೆಯವರ ಜತೆ ವ್ಯವಹರಿಸುವಾಗ ಎಚ್ಚರಿಕೆ ಅಗತ್ಯ. ಹಿರಿಯರ ಸಲಹೆಗಳಿಗೆ ಕಿವಿಗೊಡುವುದು ಉತ್ತಮ. ಕೃಷಿಕರಿಗೆ ವ್ಯವಹಾರ ಸುಗಮವಾಗಲಿದೆ.

ತುಲಾ: ಮನಸ್ಸಿನಲ್ಲಿ ಹುಟ್ಟಿಕೊಂಡ ನಾನಾ ಗೊಂದಲಗಳಿಗೆ ಪರಿಹಾರ ಕಂಡುಕೊಳ್ಳಲು ದೇವರ ಮೊರೆ ಹೋಗುವಿರಿ. ದೇವತಾ ಕಾರ್ಯಗಳಿಗಾಗಿ ಧನವಿನಿಯೋಗ ಮಾಡುವಿರಿ. ಮಿತ್ರರ ಕಷ್ಟಗಳಿಗೆ ನೆರವು ನೀಡಲು ಹೋಗಿ ಸಂಕಷ್ಟಕ್ಕೆ ಸಿಲುಕುವ ಅಪಾಯವಿದೆ.

ವೃಶ್ಚಿಕ: ಯೋಗ್ಯ ವಯಸ್ಕರು ಕಂಕಣ ಬಲ ಕೂಡಿಬರಲು ದೇವರ ಮೊರೆ ಹೋಗಲಿದ್ದಾರೆ. ಹಿರಿಯರಿಗೆ ವಾತ ಸಂಬಂಧೀ ಆರೋಗ್ಯ ಸಮಸ್ಯೆ ಕಂಡುಬರಬಹುದು. ಉಪೇಕ್ಷೆ ಬೇಡ. ಆಸ್ತಿ ವಿವಾದಗಳು ಬಗೆಹರಿಯಲಿವೆ. ಹಣಕಾಸಿನ ವಿಚಾರದಲ್ಲಿ ಲೆಕ್ಕಾಚಾರ ಕಟ್ಟುನಿಟ್ಟಾಗಿರಲಿ.

ಧನು: ನ್ಯಾಯಾಲಯದ ಕೆಲಸಗಳು ಸುಗಮವಾಗಿ ನಡೆಯಲಿವೆ. ಸಹೋದರರಿಂದ ಉಡುಗೊರೆ ನಿರೀಕ್ಷಿಸಬಹುದು. ಸಾಂಸಾರಿಕವಾಗಿ ನೆಮ್ಮದಿಯ ದಿನವಾಗಿರಲಿದೆ. ಪ್ರೇಮಿಗಳಿಗೆ ಪ್ರೀತಿ ಪಾತ್ರರನ್ನು ಸೇರಿದ ಸಂತೋಷ ಸಿಗಲಿದೆ. ದಿನದಂತ್ಯಕ್ಕೆ ಶುಭ ಸುದ್ದಿ.

ಮಕರ: ಉದ್ಯೋಗದಲ್ಲಿ ಮನಸ್ಸು ಬದಲಾವಣೆ ಬಯಸಿದರೂ ಅಂದುಕೊಂಡ ಕೆಲಸ ಸಿಗದೇ ನಿರಾಸೆಯಾಗಲಿದೆ. ದಾಂಪತ್ಯದಲ್ಲಿ ಸಣ್ಣ ಪುಟ್ಟ ಅಸಮಾಧಾನಗಳನ್ನು ಮರೆತು ಮುನ್ನಡೆಯುವುದು ಮುಖ್ಯ. ಕೃಷಿಕರಿಗೆ ನೀರಿಗಾಗಿ ಬವಣೆ ತಪ್ಪಲಿದೆ.

ಕುಂಭ: ಒಂದು ರೀತಿಯ ಅಸಮಾಧಾನ ಮನಸ್ಸು ಕಾಡಲಿದ್ದು, ಸಂಗಾತಿಯ ಜತೆ ನಿಮ್ಮ ಮನಸ್ಸಿನ ದುಗುಡ ಹಂಚಿಕೊಳ್ಳಲಿದ್ದೀರಿ. ಕೌಟುಂಬಿಕವಾಗಿ ಜವಾಬ್ಧಾರಿಗಳು ಹೆಚ್ಚಲಿದೆ. ಕಾರ್ಯನಿಮಿತ್ತ ಓಡಾಟ ನಡೆಸಬೇಕಾಗುತ್ತದೆ. ಆರೋಗ್ಯದ ಬಗ್ಗೆ ಕಾಳಜಿಯಿರಲಿ.

ಮೀನ: ದೈವಾನುಕೂಲದಿಂದ ಇಂದು ನೀವು ಕೈ ಹಿಡಿಯುವ ಕೆಲಸ ಸುಸ್ರೂತ್ರವಾಗಿ ನೆರವೇರಲಿದೆ. ಆದರೆ ದೇಹಾಯಾಸವಾಗದಂತೆ ಎಚ್ಚರಿಕೆ ವಹಿಸಿ. ನಿರುದ್ಯೋಗಿಗಳು ಪಾಲಿಗೆ ಬಂದ ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳಬೇಕು. ದೇವತಾ ಪ್ರಾರ್ಥನೆ ಮರೆಯದಿರಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ