ದಾಂಪತ್ಯ ಜೀವನ ಆಯ್ಕೆಗೆ ಪೂರಕವಾಗುವ ಗ್ರಹ ಸ್ಥಿತಿ

ಗುರುವಾರ, 30 ನವೆಂಬರ್ 2017 (14:34 IST)
ವಿವಾಹವೆಂಬ ಕಲ್ಪನೆಯು ಒಂದು ದೇಶದಿಂದ ಮತ್ತೊಂದು ದೇಶಕ್ಕೂ ಹಾಗು ಪೀಳಿಗೆಯಿಂದ ಪೀಳಿಗೆಗೂ ಬದಲಾಗುತ್ತಿರುತ್ತದೆ. ವಿವಾಹ ಸಂಬಂಧವು ಮನುಷ್ಯನ ವೈಯಕ್ತಿಕ ಬೆಳವಣಿಗೆ ಮತ್ತು ಆಧ್ಯಾತ್ಮಿಕ ಮಟ್ಟ ಪ್ರಮುಖವಾಗಿದೆ. ಇದು ಮಾನವನಿಗೆ ಕರ್ಮಗಳ ಮೂಲಕ ಅಭಿವೃದ್ಧಿ ಹೊಂದಲು ಸಹಕಾರಿಯಾಗಿದೆ. ಪರಿಪೂರ್ಣತೆಯನ್ನು ನೀಡುತ್ತದೆ. 

ವಿವಾಹವು ಮೂರು ಘಟ್ಟಗಳಲ್ಲಿ ಅಭಿವೃದ್ದಿ ಹೊಂದಲು ಸಹಕಾರಿಯಾಗಿದೆ - 1. ಭೌತಿಕ ಬೆಳವಣಿಗೆ 2. ಬೌದ್ಧಿಕ ಬೆಳವಣಿಗೆ 3. ಮಾನಸಿಕ ಬೆಳವಣಿಗೆ. ಈ ಮೂರು ಆಧಾರದ ಮೇಲೆ ಗಂಡು ಮತ್ತು ಹೆಣ್ಣಿನ ಅವಶ್ಯಕತೆಗಳು ಏನು ಎಂಬುದನ್ನು ಅಭ್ಯಸಿಸಬಹುದು. ಇದರಿಂದ ಅವರುಗಳ ಸಂಬಂಧದಲ್ಲಿ ಸುಧಾರಣೆಯನ್ನು ಕಂಡುಕೊಳ್ಳಬಹುದು.
 
ಪುರುಷ ಕುಂಡಲಿಯಲ್ಲಿ ಕುಜ ಮತ್ತು ಶುಕ್ರ 
 
ಪುರುಷ ಕುಂಡಲಿಯಲ್ಲಿ ಶುಕ್ರವು ಆತ ಯಾರಿಗೆ ಆಕರ್ಷಿತರಾಗುತ್ತಾನೆಂಬುದನ್ನು ತಿಳಿಸಿದರೆ, ಕುಜವು ಹೆಣ್ಣಿನ ಜೊತೆಗೆ ವರ್ತನೆಯನ್ನು ತಿಳಿಸುತ್ತದೆ.
 
1. ಪುರುಷನ ಕುಂಡಲಿಯಲ್ಲಿ ಶುಕ್ರನು ಕನ್ಯೆಯ ಗುಣಲಕ್ಷಣಗಳನ್ನು ಮತ್ತು ಯಾವ ರೀತಿಯ ಕನ್ಯೆ ಆಯ್ಕೆ ಮಾಡುತ್ತಾನೆಂದು ತಿಳಿಸುತ್ತದೆ. ಉದಾಹರಣೆಗೆ ಶುಕ್ರನು ಮೀನ ರಾಶಿಯಲ್ಲಿದ್ದರೆ ಕಲಾನಿಪುಣ ಕನ್ಯೆಯನ್ನು ಇಷ್ಟಪಡುತ್ತಾನೆ. ಶುಕ್ರನು ಕುಂಭರಾಶಿಯಲ್ಲಿದ್ದು ಕುಜನೊಂದಿಗೆ ವೃಷಭ ರಾಶಿ ಅಥವಾ ತುಲಾ ರಾಶಿಯಲ್ಲಿದ್ದರೆ ಅವರ ವೈಯಕ್ತಿಕ ದಾಂಪತ್ಯ ಜೀವನದಲ್ಲಿ ವ್ಯತ್ಯಾಸಗಳನ್ನು ನೋಡಬಹುದು.
 
2. ಶುಕ್ರನು ಪೃಥ್ವಿತತ್ವದ ರಾಶಿಗಳಾದ ವೃಷಭ, ಕನ್ಯಾ, ಮಕರ ರಾಶಿಯಲ್ಲಿದ್ದರೆ ಪುರುಷನು ಘನತೆ ಹಾಗು ಹಣಕಾಸಿನ ಲಾಭ ಬರುವಂತಹ ಕನ್ಯೆಯನ್ನು ಇಷ್ಟಪಡುತ್ತಾನೆ.
 
3. ಶುಕ್ರನು ಅಗ್ನಿತತ್ವದ ರಾಶಿಗಳಾದ ಮೇಷ, ಸಿಂಹ, ಧನಸ್ಸು ರಾಶಿಯಲ್ಲಿದ್ದರೆ ಪುರುಷನು ಸ್ವತಂತ್ರ ಮನೋಭಾವವುಳ್ಳ ಮತ್ತು ದಾಂಪತ್ಯ ಜೀವನದ ಜವಾಬ್ದಾರಿ ಹೊಂದುವ ಕನ್ಯೆಯನ್ನು ಇಷ್ಟಪಡುತ್ತಾನೆ.
 
4. ಶುಕ್ರನು ವಾಯುತತ್ವದ ರಾಶಿಗಳಾದ ಮಿಥುನ, ತುಲಾ, ಕುಂಭ ರಾಶಿಯಲ್ಲಿದ್ದರೆ ಬುದ್ಧಿವಂತೆಯಾಗಿರುವ ಬಾಹ್ಯಾಕರ್ಷಣೆಯ ಕನ್ಯೆಯನ್ನು ಇಷ್ಟಪಡುತ್ತಾನೆ.
 
5. ಶುಕ್ರನು ಜಲತತ್ವದ ರಾಶಿಗಳಾದ ಕಟಕ, ವೃಶ್ಚಿಕ, ಮೀನ ರಾಶಿಯಲ್ಲಿದ್ದರೆ ಮಾನಸಿಕ ಸಂರಕ್ಷಣೆ ಮಾಡುವ ಕನ್ಯೆಯನ್ನು ಇಷ್ಟಪಡುತ್ತಾನೆ.
 
6. ಶುಕ್ರ ಮತ್ತು ಕುಜ ಇಬ್ಬರೂ ಜಲ ತತ್ವ ರಾಶಿಯಲ್ಲಿದ್ದಾಗ ದಂಪತಿಗಳು ಮಾನಸಿಕವಾಗಿ, ಬಹಳ ದುರ್ಬಲ ಉಳ್ಳವರೂ ಹಾಗು ಮನೋವಿಕಾರಿಗಳಂತೆ ವರ್ತಿಸುತ್ತಾರೆ.
 
7. ಶುಕ್ರನು ಜಲ ತತ್ವದ ರಾಶಿಯಲ್ಲಿದ್ದು ಕುಜನು ವಾಯುತತ್ವದ ರಾಶಿಯಲ್ಲಿದ್ದರೆ ಪುರುಷರು ತಮ್ಮ ಪತ್ನಿಗೆ ಬಗ್ಗುವುದಿಲ್ಲ. ಅದೇ ಕುಜ ಅಗ್ನಿ ತತ್ವದಲ್ಲಿದ್ದರೆ, ಪತ್ನಿಯ ಬುದ್ಧಿವಂತಿಕೆಗೆ ಮಾರುಹೋಗುತ್ತಾರೆ.
 
8. ಶುಕ್ರನು ಜಲತತ್ವ ಹಾಗು ಕುಜ ಪೃಥ್ವಿ ತತ್ವದಲ್ಲಿದ್ದರೆ, ಪುರುಷನು ತನ್ನ ಸ್ವಾರ್ಥಕ್ಕಾಗಿ ಕನ್ಯೆಯನ್ನು ಉಪಯೋಗಿಸಿಕೊಳ್ಳುತ್ತಾನೆ. ಸಾಮಾಜಿಕ ಸ್ತರದಲ್ಲಿ ಉನ್ನತ ಹುದ್ದೆ ಹಾಗೂ ಸೌಂದರ್ಯವತಿಯಾದ ಕನ್ಯೆಯನ್ನು ವಿವಾಹವಾಗಲು ಅಂಥವರು ಬಯಸುತ್ತಾರೆ. ಈ ರೀತಿಯ ಯೋಗವು ಕುಂಡಲಿಯಲ್ಲಿದ್ದಾಗ 5ನೇ ಮನೆಯು ಬಲಶಾಲಿಯಾಗಿದ್ದು ಮಕ್ಕಳು ತಂದೆಗಿಂತ ಉನ್ನತ ಮಟ್ಟವನ್ನು ಏರುತ್ತಾರೆ.
 
ಸ್ತ್ರೀ ಕುಂಡಲಿಯಲ್ಲಿ ರವಿ ಮತ್ತು ಚಂದ್ರ 
 
ರವಿಯಿರುವ ರಾಶಿಯಿಂದ ಪತಿಯ ವಿಷಯದಲ್ಲಿ, ಪತಿಯಿಂದ ನೀರೀಕ್ಷಿಸುವ ಆಲೋಚನೆಗಳನ್ನು ಮತ್ತು ಚಂದ್ರನಿರುವ ರಾಶಿಯಿಂದ ಈಕೆಯ ವರ್ತನೆಗಳನ್ನು ತಿಳಿದು ಕೊಳ್ಳಬಹುದು.
 
1. ವಿವಾಹವೆಂದರೆ ತನ್ನ ಸಂಗಾತಿಯ ಜವಾಬ್ದಾರಿಯನ್ನು ನಿಭಾಯಿಸುವುದು ಹಾಗಾಗಿ ರವಿಯ ಸ್ಥಾನ ಪ್ರಮುಖವಾಗಿರುತ್ತದೆ. ರವಿಯಿರುವ ರಾಶಿಯಿಂದ ಪತಿಯ ಗುಣಲಕ್ಷಣಗಳನ್ನು ತಿಳಿಯಬಹುದು.
 
2. ರವಿಯು ಅಗ್ನಿ ತತ್ವದಲ್ಲಿದ್ದು, ಚಂದ್ರನೂ ಅಗ್ನಿ ತತ್ವದಲ್ಲಿದ್ದರೆ, ತನ್ನ ಮೇಲೆ ಅಧಿಕಾರ ಚಲಾಯಿಸುವಂತಹ ಪತಿಯು ದೊರೆಯುತ್ತಾನೆ. ತಾನೂ ಸಹಾ ಪತಿಯ ಮೇಲೆ ಅಧಿಕಾರ ಚಲಾಯಿಸುತ್ತಾಳೆ. ಎಲ್ಲರೆದುರಿಗೂ ತನ್ನ ಪ್ರೀತಿಯನ್ನು ತೋರಿಸಲೆಂದು ಬಯಸುತ್ತಾಳೆ.
 
3. ರವಿಯು ಅಗ್ನಿ ತತ್ವದಲ್ಲಿದ್ದು ಚಂದ್ರನು ಜಲತತ್ವದಲ್ಲಿದ್ದರೆ ಅಧಿಕಾರ ಚಲಾಯಿಸುವ ಪತಿಯನ್ನು ಇಷ್ಟಪಡುತ್ತಾಳೆ ಹಾಗೂ ಈಕೆ ಪತಿಯ ಜೊತೆ ಭಾವುಕಳಾಗಿ ವರ್ತಿಸುತ್ತಾಳೆ. ಪತಿ ಹಾಗು ತನ್ನ ನಡುವೆ ಏಕಾಂಗಿತನವನ್ನು ಬಯಸುತ್ತಾಳೆ.
 
4. ರವಿಯು ಅಗ್ನಿತತ್ವದಲ್ಲಿದ್ದು ಚಂದ್ರನು ವಾಯುತತ್ವದಲ್ಲಿದ್ದರೆ, ಪತಿಯ ಜೊತೆ ಬಹಳ ಮೃದುವಾಗಿ ವರ್ತಿಸುತ್ತಾಳೆ. ಇಂತಹ ಯೋಗಗಳಲ್ಲಿ ವಿಚ್ಚೇದನವು ಕಡಿಮೆಯಿರುತ್ತದೆ. ಪತಿಗೆ ತಕ್ಕ ಹಾಗೆ ನಡವಳಿಕೆಯಿರುತ್ತದೆ.
 
5. ರವಿಯು ಅಗ್ನಿತತ್ವದಲ್ಲಿದ್ದು ಚಂದ್ರನು ಪೃಥ್ವಿ ತತ್ವದಲ್ಲಿದ್ದರೆ, ಪತಿಯ ಜೊತೆ ಅತಿಯಾದ ಭಾವುಕತೆಯಿಂದ ವರ್ತಿಸುತ್ತಾಳೆ. ಪತಿಯ ಅಭಿರುಚಿಗೆ ತಕ್ಕಂತೆ ಉತ್ತಮವಾದ ರುಚಿಯಾದ ತಿನಿಸುಗಳನ್ನು ಮಾಡುವುದರಲ್ಲಿ ನಿಪುಣೆಯಾಗಿರುತ್ತಾಳೆ. ವೈಯಕ್ತಿಕ ಜೀವನದಲ್ಲಿ ಬೇರೆಯವರ ಹಸ್ತಕ್ಷೇಪವನ್ನು ಸಹಿಸುವುದಿಲ್ಲ.
 
ಶನಿಯಿಂದ ಸಂಬಂಧಗಳ ಅಡಚಣೆ 
 
1. ವಿವಾಹ ಸಂಬಂಧಗಳಲ್ಲಿ ಅಡಚಣೆ ಮಾಡುವ ಗ್ರಹವೆಂದರೆ ಶನಿ, 12ನೇ ಮನೆ ಅಧಿಪತಿ ಮತ್ತು ರಾಹು. ರಾಹು ಬದುಕನ್ನು ದುಸ್ತರಗೊಳಿಸಿದರೆ, ಶನಿಯು ವಿವಾಹದ ಸಾಮರಸ್ಯವನ್ನೇ ಹಾಳು ಮಾಡುತ್ತದೆ.
 
2. ಉದಾಹರಣೆಗೆ ಸ್ತ್ರೀ ಕುಂಡಲಿಯಲ್ಲಿ ಮೇಷ ರಾಶಿಯಲ್ಲಿ ರವಿ ಇದ್ದು ಪುರುಷನ ಕುಂಡಲಿಯಲ್ಲಿ ಮೇಷ ರಾಶಿಯಲ್ಲಿ ಶನಿಯಿದ್ದರೆ, ಇಬ್ಬರ ನಡುವೆ ಪರಸ್ಪರ ಹೊಂದಾಣಿಕೆ ಬರುವುದಿಲ್ಲ. ಈ ರೀತಿ ಪ್ರತಿಯೊಂದು ರಾಶಿಗೂ ಹೇಳಬಹುದು. ಇಂತಹ ಸಂಧರ್ಭಗಳಲ್ಲಿ ಪತಿಗೆ, ಪತ್ನಿಯ ಗೌರವವಿರುವುದಿಲ್ಲ.
 
3. ಸ್ತ್ರೀ ಕುಂಡಲಿಯಿಂದ ಶನಿಯ ದೃಷ್ಟಿ/ಸಂಯೋಗಗಳು, ಪುರುಷ ಕುಂಡಲಿಯಲ್ಲಿ ರವಿಗೆ ಬಂದರೆ, ಅಂತಹ ಸಂಧರ್ಭಗಳಲ್ಲಿ ಹೊಂದಾಣಿಕೆ ಸಾಧ್ಯವಿಲ್ಲ.
 
4. ಪುರುಷ ಮತ್ತು ಸ್ತ್ರೀ ಕುಂಡಲಿಯಲ್ಲಿ ಗುರುವಿನ ಸಂಬಂಧವು ರವಿಗೆ ಬಂದಾಗ ಗೌರವವಿರುತ್ತದೆ. ಉದಾಹರಣೆಗೆ ರವಿಯು ಹೆಣ್ಣಿನ ಕುಂಡಲಿಯಲ್ಲಿ ತುಲಾರಾಶಿಯಲ್ಲಿದ್ದು (ನೀಚಸ್ಥಾನ) ಪುರುಷ ಕುಂಡಲಿಯಲ್ಲಿ ಗುರುವು ಮಿಥುನ, ತುಲಾ ಅಥವಾ ಕುಂಭದಲ್ಲದ್ದರೆ ಸ್ತ್ರೀಯು ಪತಿಯನ್ನು ಗೌರವಿಸುತ್ತಾಳೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ