ಬೆಂಗಳೂರು: ಪ್ರತಿ ನಿತ್ಯ ಸ್ನಾನ ಮಾಡುವ ರೂಢಿ ಸಾಮಾನ್ಯವಾಗಿ ಎಲ್ಲರಿಗೂ ಇರುತ್ತದೆ. ದಿನಕ್ಕೊಮ್ಮೆಯಾದರೂ ಚೆನ್ನಾಗಿ ಸ್ನಾನ ಮಾಡಿಕೊಳ್ಳುವುದು ಆರೋಗ್ಯವಂತರ ಲಕ್ಷಣ. ಆದರೆ ಯಾವ ಹೊತ್ತಿನಲ್ಲಿ ಸ್ನಾನ ಮಾಡಿದರೆ ಏನು ಫಲ? ಇಲ್ಲಿ ನೋಡಿ.
ಬೆಳಗಿನ ಸ್ನಾನ ಎಲ್ಲಕ್ಕಿಂತ ಉತ್ತಮ ಎಂದು ನಂಬಲಾಗಿದೆ. ಬೆಳಗ್ಗೆ ಎದ್ದ ತಕ್ಷಣ ನಿತ್ಯ ಕರ್ಮಾದಿಗಳನ್ನು ಮುಗಿಸಿಕೊಂಡು ಸ್ನಾನ ಮಾಡಬೇಕು. ಅದರಲ್ಲೂ ಬೆಳಗ್ಗೆ ಸೂರ್ಯ ಹುಟ್ಟುವುದಕ್ಕಿಂತ ಮೊದಲೇ ಮಾಡುವ ಸ್ನಾನವನ್ನು ಮುನಿ ಸ್ನಾನ ಎನ್ನಲಾಗುತ್ತದೆ. ಇದು ಅತ್ಯಂತ ಶ್ರೇಷ್ಠವಾದುದು. ಈ ಹೊತ್ತಿನಲ್ಲಿ ಸ್ನಾನ ಮಾಡುವುದರಿಂದ ಸುಖ, ನೆಮ್ಮದಿ, ಆರೋಗ್ಯ ವೃದ್ಧಿಸುತ್ತದೆ.
ಬೆಳಗ್ಗೆ ಐದು ಗಂಟೆಯ ನಂತರ ಆರು ಗಂಟೆಯೊಳಗೆ ಸ್ನಾನ ಮಾಡಿದರೆ ಆಯಸ್ಸು ಕೀರ್ತಿ ಹೆಚ್ಚುತ್ತದೆ. ಇದನ್ನು ದೇವಿ ಸ್ನಾನ ಎನ್ನಲಾಗುತ್ತದೆ. ಇದು ಕೂಡಾ ಶಾಸ್ತ್ರಗಳ ಪ್ರಕಾರ ಪ್ರಶಸ್ತವಾದುದು. ಮೂರನೆಯದ್ದು ಮನುಷ್ಯ ಸ್ನಾನ. ಇದು ಆರು ಗಂಟೆಯಿಂದ 8 ಗಂಟೆಯೊಳಗಿನದ್ದಾಗಿದೆ. ಈ ವೇಳೆ ಸ್ನಾನ ಮಾಡುವುದರಿಂದ ಕೆಲಸದಲ್ಲಿ ಯಶಸ್ಸು ಸಾಧ್ಯ.
ಕೊನೆಯದ್ದು ರಾಕ್ಷಸಿ ಸ್ನಾನ. ಇದು ಇಂದು ನಮ್ಮೆಲ್ಲರಿಗೂ ರೂಢಿಯಾಗಿರುವಂತಹದ್ದು. ಸಾಮಾನ್ಯವಾಗಿ ಆಧುನಿಕ ಜೀವನ ಪದ್ಧತಿಯಲ್ಲಿ ಏಳುವುದೇ 8 ಗಂಟೆಯ ಮೇಲೆ. ಹಾಗಾಗಿ ಹೆಚ್ಚಿನವರು 8 ಗಂಟೆಯ ನಂತರ ಸ್ನಾನ ಮಾಡುತ್ತಾರೆ. ಇದು ಶಾಸ್ತ್ರದ ಪ್ರಕಾರ ಸ್ನಾನಕ್ಕೆ ನಿಷಿದ್ಧ ಸಮಯವಂತೆ. ಈ ವೇಳೆ ಸ್ನಾನ ಮಾಡುವುದರಿಂದ ದಾರಿದ್ರ್ಯ, ಕಲಹ, ಅಶಾಂತಿ ಉಂಟಾಗುತ್ತದೆ ಎನ್ನಲಾಗುತ್ತದೆ.