ಕಂಗನಾಳಿಂದ ಪ್ರೀತಿಯ ರಹಸ್ಯ ಅಧ್ಯಯನ !

ಬುಧವಾರ, 21 ಜನವರಿ 2009 (18:01 IST)
ಅಮಲುಗಣ್ಣಿನ ಹುಡುಗಿ ಕಂಗನಾ ರಣಾವತ್ 'ಗ್ಯಾಂಗ್‌ಸ್ಟರ್'ನಲ್ಲಿ ಬಾಲಿವುಡ್ ಮುತ್ತಪ್ಪ ಎಮ್ರಾನ್ ಹಷ್ಮಿ ಜತೆ ತುಟಿ ಚಪ್ಪರಿಸಿದ ಕ್ಷಣಗಳನ್ನು ಮರೆಯುವುದುಂಟೇ? ಅಲ್ಲಿ ಫೀಟುದ್ದದ ಬಾಟ್ಲಿ ಹಿಡಿದು ತೂರಾಡುತ್ತಿದ್ದ ಅವಳನ್ನು ಮೆಚ್ಚದವರು ಯಾರಿದ್ದಾರೆ. ಈಗ ಅದೇ ಹುಡುಗಿಗೊಂದು ಜತೆಗಾರ ಸಿಕ್ಕಿದ್ದಾನೆ, ಹಗಲು ರಾತ್ರಿಯೆನ್ನದೆ ಕೈಗೆ ಕೈ ಹೊಸೆದುಕೊಂಡು ತಿರುಗಾಡುತ್ತಿದ್ದಾರಂತೆ ಇಬ್ಬರೂ.

ಕಂಗನಾ ರಣಾವತ್‌ಳ ಹುಡುಗ ಹಿರಿಯ ನಟ ಶೇಖರ್ ಸುಮನ್ ಪುತ್ರ ಅಧ್ಯಯನ್ ಸುಮನ್. ಈ ಸಂಬಂಧ ಇತ್ತೀಚಿನವರೆಗೂ ಬಯಲಿಗೆ ಬಂದಿರಲಿಲ್ಲ. ಆದರೆ ಇದೀಗ ಜಗಜ್ಜಾಹೀರಾಗಿರುವ ಕಾರಣ ಚಿತ್ರವೊಂದರಲ್ಲಿ ಜತೆಗೆ ನಟಿಸುತ್ತಿರುವುದು. 'ರಾಝ್ - ದಿ ಮಿಸ್ಟರಿ ಕಂಟಿನ್ಯೂಸ್'ನಲ್ಲಿ ಜೋಡಿಯಾಗಿ ನಟಿಸುತ್ತಿರುವ ಇವರಿಬ್ಬರೂ ಹೊರಗಡೆಯೂ ಥಳುಕು ಹಾಕಿಕೊಂಡಿರುತ್ತಾರೆ ಎಂಬುದು ಹೊಸ ಸುದ್ದಿ. ಅಂದ ಹಾಗೆ ಈ ಚಿತ್ರದಲ್ಲಿ ನಾಯಕ ಎಮ್ರಾನ್ ಹಷ್ಮಿ !

ಈ ಬಗ್ಗೆ ಆಕೆಯನ್ನೇ ಪ್ರಶ್ನಿಸಿದಾಗ ಉತ್ತರಿಸಲು ನಿರಾಕರಿಸಿದ ಕಂಗನಾ, "ನಮ್ಮ ಸಂಬಂಧದ ಬಗ್ಗೆ ನಾವಿಬ್ಬರೂ ಮಾತನಾಡುವುದು ಅವನಿಗಿಷ್ಟವಿಲ್ಲ. ನಮ್ಮ ಬಗೆಗಿನ ಇಂತಹ ಪ್ರತಿಕ್ರಿಯೆಗಳತ್ತ ನಾನು ಗಮನ ಹರಿಸುವುದಿಲ್ಲ. ನಾವು ಪರಸ್ಪರ ಅರಿತುಕೊಂಡಿದ್ದೇವೆಂದು ಎಲ್ಲರಿಗೂ ಗೊತ್ತು. ಆದರೆ ಜನ ನಮ್ಮ ಚಿತ್ರದ ಬಗ್ಗೆ ಮಾತ್ರ ಮಾತನಾಡಬೇಕೆನ್ನುವುದು ನಮ್ಮ ಆಶಯ" ಎಂದು ಉತ್ತರಿಸಿದ್ದಾಳೆ.

'ಫ್ಯಾಷನ್' ಚಿತ್ರದಲ್ಲಿನ ತನ್ನ ಪಾತ್ರ ಪ್ರೇಕ್ಷಕರಿಗೆ ಬಹುವಾಗಿ ಇಷ್ಟವಾದಂತಿಲ್ಲ ಎಂಬುದನ್ನು ಒಪ್ಪಿಕೊಳ್ಳುವ ಆಕೆ, ಸಂದೇಶ ಕೊಡುವಲ್ಲಿ ಸಮಸ್ಯೆಗಳು ಎದುರಾಗಿವೆ ಎಂದು ಹೇಳಿಕೊಂಡಿದ್ದಾಳೆ.

ದೇಹ ಸೌಂದರ್ಯದ ರಹಸ್ಯಗಳ ಬಗ್ಗೆ ಮಾತನಾಡುತ್ತಾ ಆಕೆ ತಾನು ಮಾಡುತ್ತಿರುವ ಅನುಸರಿಸುತ್ತಿರುವ ಯೋಗದ ಬಗ್ಗೆ ಹೇಳುತ್ತಾ ಹೋದಳು. "ನಾನು ನನ್ನ 18ನೇ ವಯಸ್ಸಿನಲ್ಲಿ ಚಿತ್ರಜೀವನ ಆರಂಭಿಸಿದೆ. ನನ್ನ ನಡೆಗಳ ಬಗ್ಗೆ ನಾನು ಸಂಪೂರ್ಣ ನಿಯಂತ್ರಣ ಹೊಂದಿದ್ದು, ಸಾಗಬೇಕಾದ ನಿಜವಾದ ದಾರಿಯಲ್ಲೇ ಬಂದಿದ್ದೇನೆ. ಧ್ಯಾನ ಮತ್ತು ಯೋಗ ನನ್ನನ್ನು ಒಂದು ಹಂತದವರೆಗೆ ತಂದು ನಿಲ್ಲಿಸಲು ಸಹಕರಿಸಿದೆ" ಎನ್ನುವುದು ಕಂಗನಾ ವಿಶ್ಲೇಷಣೆ.

ತಾನು ಚಿತ್ರಗಳ ಆಯ್ಕೆಯಲ್ಲಿ ಚೂಸಿಯಾಗಿರುವುದಾಗಿ ಹೇಳುವ ಆಕೆ, "ಫ್ಯಾಷನ್ ಚಿತ್ರಕ್ಕಿಂತ ಮೊದಲು ಆರು ತಿಂಗಳು ನಾನು ಬಿಡುವಾಗಿದ್ದಾಗ ಸುಮಾರು 50ರಷ್ಟು ಚಿತ್ರಕಥೆಗಳನ್ನು ಓದಿದ್ದೇನೆ. ಪ್ರೇಕ್ಷಕರನ್ನು ರೋಮಾಂಚನಗೊಳಿಸುವ ಪಾತ್ರಗಳಿರುವ ಚಿತ್ರ ನನಗೆ ಬೇಕು. ಶಾರೂಖ್ ಖಾನ್ ಮತ್ತು ಅಮೀರ್ ಖಾನ್ ಜತೆ ಕೇವಲ ಒಂದೊಂದು ಸಿನಿಮಾಗಳಲ್ಲಿ ನಟಿಸಿ ದಿನ ಬೆಳಗಾಗುವುದರೊಳಗೆ ಪ್ರಸಿದ್ಧಿಗೆ ಬಂದ ನಟಿಯನ್ನು ನಾನು ನೋಡಿದ್ದೇನೆ. ಆದರೆ ನಾನು 'ಗ್ಯಾಂಗ್‌ಸ್ಟರ್'ನಲ್ಲಿ ನಟಿಸಿದ ನಂತರ ಕಂಗನಾ ಯಾರು ಎಂದು ತಿಳಿದುಕೊಳ್ಳುವ ಪ್ರಯತ್ನವನ್ನು ಯಾರೂ ಮಾಡಿಲ್ಲ. ಆದರೆ ಈಗ ನಾನು ನನ್ನ ಪಾತ್ರ ಜನರನ್ನು ಆಕರ್ಷಿಸಬಲ್ಲುದೇ ಎಂಬುದನ್ನು ಖಚಿತಪಡಿಸಿಕೊಂಡೇ ಮುಂದುವರಿಯುತ್ತಿದ್ದೇನೆ" ಎಂದಿದ್ದಾಳೆ.

'ರಾಝ್ - ದಿ ಮಿಸ್ಟರಿ ಕಂಟಿನ್ಯೂಸ್'ನಲ್ಲಿ ಕಂಗನಾ, ಅಧ್ಯಯನ್
IFM