ಬ್ಯಾಟ್‌ಮ್ಯಾನ್, ಸೂಪರ್‌ಮ್ಯಾನ್, ಹೀಮ್ಯಾನ್...ಹೆಸರುಗಳನ್ನು ಕೇಳಿರುತ್ತೀವಿ. ಇದ್ಯಾವುದಿದು ಪ್ಯಾಡ್‍ಮ್ಯಾನ್? ಇದರ ಬಗ್ಗೆ ಗೊತ್ತಾಗಬೇಕಾದರೆ ಮೊದಲು ಅರುಣಾಚಲಂ ಮುರುಗನಂತಮ್ ಬಗ್ಗೆ ತಿಳಿದುಕೊಳ್ಳಬೇಕು. ತಮಿಳುನಾಡಿನ ಅರುಣಾಚಲಂ ಕೊಯಂಬತ್ತೂರಿನ ಒಬ್ಬ ವರ್ತಕ. ಬಡ ಹೆಣ್ಣುಮಕ್ಕಳಿಗಾಗಿ ಅತ್ಯಂತ ಕಡಿಮೆ ಬೆಲೆಗೆ ಸ್ಯಾನಿಟರಿ ಪ್ಯಾಡ್‍ಗಳ ತಯಾರಿ ಮೆಷಿನ್‌ಗಳನ್ನು ತಯಾರಿಸಿದ್ದಾರೆ.
ಈಗ ಕಮರ್ಷಿಯಲ್ಲಾಗಿ ಸಿಗುತ್ತಿರುವ ಪ್ಯಾಡ್‌ಗಳಿಗಿಂತ ಮೂರನೇ ಒಂದು ಬೆಲೆಗೆ ಈ ಪ್ಯಾಡ್‌ಗಳು ಲಭ್ಯವಾಗುತ್ತಿವೆ. ಅರುಣಾಚಲಂ ತಯಾರಿಸಿದ ಈ ಮಿನಿ ಮಿಷಿನ್ ಈಗಾಗಲೆ ದೇಶದ 23 ರಾಜ್ಯಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಇದನ್ನು 106 ದೇಶಗಳಿಗೆ ವಿಸ್ತರಿಸಬೇಕೆಂದಿದ್ದಾರೆ. ಅರುಣಾಚಲಂ ಆಲೋಚನೆಯನ್ನು ಮೆಚ್ಚಿ ಟೈಮ್ ನಿಯತಕಾಲಿಕೆ 2014ರಲ್ಲಿ 100 ಮಂದಿ ಪ್ರತಿಭಾವಂತರ ಪಟ್ಟಿಯಲ್ಲಿ ಅವರನ್ನೂ ಸೇರಿಸಿದೆ.
2016ರಲ್ಲಿ ಭಾರತ ಸರಕಾರ ಅವರಿಗೆ ’ಪದ್ಮಶ್ರೀ’ ಪುರಸ್ಕಾರ ನೀಡಿದೆ. ಈ ಹಿನ್ನೆಲೆಯಲ್ಲಿ ಅಕ್ಷಯ್ ಕುಮಾರ್ ಚಿತ್ರ ತೆರೆಗೆ ಬರಲಿದೆ. ಸಾಮಾಜಿಕ ಕಥೆಗಳನ್ನು ಆಯ್ಕೆ ಮಾಡಿಕೊಳ್ಳುವುದರಲ್ಲಿ ಅಕ್ಷಯ್ ಕುಮಾರ್ ಎಲ್ಲರಿಗಿಂತಲೂ ಮುಂದೆ. ಹಾಗೆ ಆಯ್ಕೆ ಮಾಡಿಕೊಂಡಿರುವುದರಲ್ಲಿ ಟಾಯ್ಕೆಟ್ - ಏಕ್ ಪ್ರೇಮ್ ಕಥಾ ಚಿತ್ರವೂ ಒಂದು. ಈಗಾಗಲೆ ಅಭಿನಯಿಸುತ್ತಿರುವ ಈ ಚಿತ್ರಕ್ಕೆ ಪ್ಯಾಡ್‍ಮ್ಯಾನ್ ಎಂದು ಶೀರ್ಷಿಕೆ ಇಡಲಾಗಿದೆ. ಆರ್ ಬಾಲ್ಕಿ ಆಕ್ಷನ್ ಕಟ್ ಹೇಳುತ್ತಿರುವ ಸಿನಿಮಾ. ಅಕ್ಕಿ ಪತ್ನಿ ಟ್ವಿಂಕಲ್ ಖನ್ನಾ ನಿರ್ಮಾಪಕಿ. ಸೋನಂ ಕಪೂರ್ ನಾಯಕಿ.