ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಮೆಚ್ಚುಗೆ ವ್ಯಕ್ತಪಡಿಸಿದ ನಟ ವಿಕ್ಕಿ ಕೌಶಲ್ ಅಭಿನಯದ ಛಾವಾ ಸಿನಿಮಾವನ್ನು ಇದೇ 27ರಂದು ಸಂಸತ್‌ನಲ್ಲಿ ಪ್ರದರ್ಶನವಾಗಲಿದೆ.
ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವರು ಮತ್ತು ಸಂಸತ್ ಸದಸ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ವರದಿಯ ಪ್ರಕಾರ, ಸಂಭಾಜಿ ಮಹಾರಾಜ್ ಪಾತ್ರದಲ್ಲಿ ನಟಿಸಿರುವ ನಟ ವಿಕ್ಕಿ ಕೌಶಲ್ ಸೇರಿದಂತೆ ಚಿತ್ರದ ಸಂಪೂರ್ಣ ಪಾತ್ರವರ್ಗ ಮತ್ತು ತಂಡವು ಹಾಜರಿರುತ್ತದೆ.
'ಛಾವಾ' ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದೆ. ಇದು ಈಗಾಗಲೇ ₹500 ಕೋಟಿ ಗಡಿ ದಾಟಿದೆ. ಛತ್ರಪತಿ ಸಂಭಾಜಿ ಮಹಾರಾಜ್ ಅವರ ಜೀವನವನ್ನು ಆಧರಿಸಿದ ಲಕ್ಷ್ಮಣ್ ಉಟೇಕರ್ ನಿರ್ದೇಶನದ ಈ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಮತ್ತು ಅಕ್ಷಯ್ ಖನ್ನಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಈ ಮೈಲಿಗಲ್ಲಿನೊಂದಿಗೆ, ಛಾವಾ ವಿಕ್ಕಿ ಕೌಶಲ್ ಅವರ ಅತಿ ಹೆಚ್ಚು ಗಳಿಕೆಯ ಚಿತ್ರವಾಗಿದ್ದು, ಅವರ ಹಿಂದಿನ ಬ್ಲಾಕ್‌ಬಸ್ಟರ್‌ಗಳಾದ 'ಉರಿ: ದಿ ಸರ್ಜಿಕಲ್ ಸ್ಟ್ರೈಕ್', 'ರಾಝಿ', 'ಸ್ಯಾಮ್ ಬಹದ್ದೂರ್', 'ಜರಾ ಹಟ್ಕೆ ಜರಾ ಬಚ್ಕೆ' ಗಳನ್ನು ಮೀರಿಸಿದೆ.
ಫೆಬ್ರವರಿ ಆರಂಭದಲ್ಲಿ, ನವದೆಹಲಿಯಲ್ಲಿ ನಡೆದ 98 ನೇ ಅಖಿಲ ಭಾರತೀಯ ಮರಾಠಿ ಸಾಹಿತ್ಯ ಸಮ್ಮೇಳನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಛಾವಾ ಚಿತ್ರದ ಯಶಸ್ಸನ್ನು ಗುರುತಿಸಿ, ಚಿತ್ರವನ್ನು ಶ್ಲಾಘಿಸಿದರು.
"ಮಹಾರಾಷ್ಟ್ರ ಮತ್ತು ಮುಂಬೈ ಮರಾಠಿ ಮತ್ತು ಹಿಂದಿ ಸಿನಿಮಾ ಎರಡನ್ನೂ ಹೊಸ ಎತ್ತರಕ್ಕೆ ಏರಿಸಿವೆ. ಇತ್ತೀಚಿನ ದಿನಗಳಲ್ಲಿ, ಛಾವಾ ದೇಶಾದ್ಯಂತ ಅಲೆಗಳನ್ನು ಸೃಷ್ಟಿಸುತ್ತಿದೆ (ಇನ್ ಡಿನೋ ಟು ಛಾವಾ ಕಿ ಧೂಮ್ ಮಚಿ ಹುಯಿ ಹೈ). ಈ ರೂಪದಲ್ಲಿ ಸಂಭಾಜಿ ಮಹಾರಾಜರ ಧೈರ್ಯದ ಚಿತ್ರಣವು ಶಿವಾಜಿ ಸಾವಂತ್ ಅವರ ಮರಾಠಿ ಕಾದಂಬರಿಯಿಂದ ಪ್ರೇರಿತವಾಗಿದೆ."