ಗುದ್ದೋಡು ಪ್ರಕರಣ: ಸಲ್ಮಾನ್ ವಿರುದ್ಧ ಮಹಾರಾಷ್ಟ್ರ ಸರ್ಕಾರ ಸಲ್ಲಿಸಿದ್ದ ಅರ್ಜಿ ವಿಚಾರಣೆ

ಶುಕ್ರವಾರ, 5 ಫೆಬ್ರವರಿ 2016 (11:46 IST)
2002ರಲ್ಲಿ ನಡೆದ ಸಲ್ಮಾನ್ ಹಿಟ್ ಆಂಡ್ ರನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಂಬೆ ಹೈಕೋರ್ಟ್ ನೀಡಿದ್ದ ತೀರ್ಪು ಪ್ರಶ್ನಿಸಿ ಮಹಾರಾಷ್ಟ್ರ ಸರ್ಕಾರ ಸಲ್ಲಿಸಿದ್ದ  ಮೇಲ್ಮನವಿ ವಿಚಾರಣೆಯನ್ನು ಸುಪ್ರೀಂಕೋರ್ಟ್ ಇಂದು ಕೈಗೆತ್ತಿಕೊಳ್ಳಲಿದೆ.

ಸಲ್ಲು ಭವಿಷ್ಯ ನಿರ್ಧರಿಸಲಿರುವ ಈ ತೀರ್ಪು ದೇಶಾದ್ಯಂತ ಕುತೂಹಲ ಕೆರಳಿಸಿದ್ದು ಬಾಲಿವುಡ್ ಮತ್ತು ಸಲ್ಲು ಅಭಿಮಾನಿಗಳು ಸುಪ್ರೀಂನತ್ತ ದೃಷ್ಟಿ ನೆಟ್ಟಿದ್ದಾರೆ.
 
ಸೆಪ್ಟೆಂಬರ್ 28, 2002ರಂದು ಕುಡಿದ ಅಮಲಿನಲ್ಲಿ ನಟ ಸಲ್ಮಾನ್ ಖಾನ್ ವಾಹನ ಅಡ್ಡಾದಿಡ್ಡಿ ಚಲಾಯಿಸಿ ರಸ್ತೆ ಬದಿ ಮಲಗಿದ್ದವರ ಮೇಲೆ ಕಾರು ಹರಿಸಿದ್ದರು ಎಂಬ ಆರೋಪವಿದೆ. ಈ ಪ್ರಕರಣದ ವಿಚಾರಣೆ ನಡೆಸಿದ್ದ ಕೆಳ ಹಂತದ ನ್ಯಾಯಾಲಯ ಸಲ್ಮಾನ್ ಅವರಿಗೆ ವಿಧಿಸಿದ್ದ 5 ವರ್ಷಗಳ ಶಿಕ್ಷೆಯನ್ನು ರದ್ದುಗೊಳಿಸಿದ್ದ ಮುಂಬೈ ಹೈಕೋರ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಸಾಕ್ಷ್ಯಾಧಾರಗಳು ಇಲ್ಲದ ಕಾರಣ ಸಲ್ಮಾನ್ ಖಾನ್ ಅವರನ್ನು ದೋಷಮುಕ್ತಗೊಳಿಸಿ  ಖುಲಾಸೆಗೊಳಿಸಿತ್ತು. ಆದರೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಸರ್ಕಾರ  ಜನವರಿ 22 ರಂದು ಸುಪ್ರೀಂ ಮೆಟ್ಟಿಲೇರಿತ್ತು. 
 
ನ್ಯಾಯಮೂರ್ತಿ ಜೆ.ಎಸ್.ಖೇರ್ ಮತ್ತು ಸಿ ನಾಗಪ್ಪನ್ ಅವರನ್ನೊಳಗೊಂಡ ಪೀಠ ಇಂದು ಮಹಾರಾಷ್ಟ್ರ ಸರ್ಕಾರ ಸಲ್ಲಿಸಿರುವ ವಿಶೇಷ ಅನುಮತಿ ಅರ್ಜಿ ವಿಚಾರಣೆಯನ್ನು ನಡೆಸಲಿದೆ.

ವೆಬ್ದುನಿಯಾವನ್ನು ಓದಿ