ಸಂಬಂಧಿಗಳಾಗುತ್ತಿದ್ದಾರೆ ಸಲ್ಮಾನ್- ಗಂಭೀರ್ ; ಅದು ಹೇಗೆ?

ಗುರುವಾರ, 6 ಆಗಸ್ಟ್ 2015 (12:26 IST)
ಬಾಲಿವುಡ್ ಸ್ಟಾರ್ ಸಲ್ಮಾನ್ ಖಾನ್ ಮತ್ತು ಭಾರತ ಕ್ರಿಕೆಟ್ ಆಟಗಾರ ಗೌತಮ್ ಗಂಭೀರ್ ಸದ್ಯದಲ್ಲಿಯೇ ಸಂಬಂಧಿಗಳಾಗುತ್ತಿದ್ದಾರೆ. ಅದು ಹೇಗೆ ಅಂತೀರಾ? ಸಲ್ಲು ಮುದ್ದಿನ ತಂಗಿ ಅರ್ಪಿತಾ  ಗಂಡನ ಮನೆಯ ಕಡೆಯಿಂದ ಬೆಸೆಯುತ್ತಿದೆ ಈ ಸಂಬಂಧ. 

ಸಲ್ಮಾನ್ ಖಾನ್ ತಂಗಿ ಅರ್ಪಿತಾಳ ಗಂಡ ಅಯುಷ್ ಶರ್ಮಾರ ಸಹೋದರ ಅಕ್ಷಯ್ ಶರ್ಮಾ ಗೌತಮ್ ಗಂಭೀರ್ ಅವರ ತಂಗಿ (ಕಸಿನ್) ರಾಧಿಕಾ ಗಂಭೀರ್ ಅವರ ಕೈ ಹಿಡಿಯಲಿದ್ದಾರೆ. ಇತ್ತೀಚಿಗೆ ನವದೆಹಲಿಯಲ್ಲಿ ಅಕ್ಷಯ್ ಮತ್ತು ರಾಧಿಕಾ ನಿಶ್ಚಿತಾರ್ಥ ನಡೆಯಿತು. ಎರಡು ಕುಟುಂಬಗಳ ಸದಸ್ಯರು ಈ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಬರುವ ಡಿಸೆಂಬರ್ ತಿಂಗಳಲ್ಲಿ ವಿವಾಹ ನಡೆಯಲಿದೆ ಎಂದು ತಿಳಿದು ಬಂದಿದೆ. 
 
ಕಾನೂನು ಪದವೀಧರೆಯಾಗಿರುವ ರಾಧಿಕಾ ವೃತ್ತಿಯಲ್ಲಿ ವಸ್ತ್ರ ವಿನ್ಯಾಸಕಿಯಾಗಿದ್ದಾರೆ. ಅವರನ್ನು ವರಿಸಲಿರುವ ಅಕ್ಷಯ್ ಕೂಡ ಉದ್ಯಮಿಯಾಗಿದ್ದು, ಹಿಮಾಚಲ್‍ನ ಮಂಡಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ. 
 
ರಾಧಿಕಾರನ್ನು ವರಿಸುತ್ತಿರುವುದರ ಕುರಿತು ಅಕ್ಷಯ್  ಫೇಸ್‍ಬುಕ್‍ನಲ್ಲಿ ಪೋಸ್ಟ್ ಹಾಕಿದ್ದಾರೆ.
 
ಸಲ್ಮಾನ್ ಸಾಕು ತಂಗಿ ಅರ್ಪಿತಾ ಕೆಲ ತಿಂಗಳುಗಳ ಹಿಂದೆ ಬಹಳ ದಿನಗಳಿಂದ ಪ್ರೀತಿಸುತ್ತಿದ್ದ ಅಯುಷ್ ಶರ್ಮಾರನ್ನು ಮದುವೆಯಾಗಿದ್ದರು. ಈಗ ಅವರ ಸಹೋದರನನ್ನು ಗಂಭೀರ್ ತಂಗಿ ವರಿಸುತ್ತಿರುವುದು ಬಾಲಿವುಡ್ ಸೂಪರ್‌ಸ್ಟಾರ್ ಸಲ್ಲು ಮತ್ತು ಕ್ರಿಕೆಟ್ ಸ್ಟಾರ್ ಗಂಭೀರ್ ಅವರಿಬ್ಬರು ಸಂಬಂಧಿಗಳಾಗಲು ಕಾರಣವಾಗಿದೆ. 
 
ಗಂಭೀರ್ ಶಾರುಖ್ ಖಾನ್ ಅವರ ಕೋಲ್ಕತಾ ನೈಟ್ ರೈಡರ್ಸ್ ತಂಡದ ನಾಯಕರಾಗಿರುವುದರಿಂದ ಮದುವೆಗೆ ಸಲ್ಲು ಜತೆ ಶಾರುಖ್ ಅವರು ಆಗಮಿಸುವ ಸಾಧ್ಯತೆ ಇದೆ.

ವೆಬ್ದುನಿಯಾವನ್ನು ಓದಿ