ಪುಣೆಯ ವಿಭಾಗೀಯ ಆಯುಕ್ತರು 2 ದಿನಗಳ ಹಿಂದೆಯೇ ಸಂಜಯ್ ದತ್ಗೆ ಪೆರೋಲ್ ನೀಡಿದ್ದಾರೆ. ಪೆರೋಲ್ 30 ದಿನಗಳ ಅವಧಿಯದ್ದಾಗಿದ್ದೂ, ಮತ್ತೆ 60 ದಿನಗಳವರೆಗೆ ಹೆಚ್ಚಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಹಾಗಾಗಿ ಈ ಬಾರಿ ಅವರು 90ದಿನಗಳ ಕಾಲ ಜೈಲಿನಿಂದ ಹೊರಗಿರುವ ಅವಕಾಶ ಪಡೆಯುವ ಸಾಧ್ಯತೆ ಇದೆ.
257 ಮಂದಿಯನ್ನು ಬಲಿ ತೆಗೆದುಕೊಂಡ 1993ರ ಮುಂಬಯಿ ಸರಣಿ ಸ್ಫೋಟ ಪ್ರಕರಣದ ಅಪರಾಧಿಗಳಿಂದ ಅಕ್ರಮವಾಗಿ ಶಸ್ತ್ರಾಸ್ತ್ರಗಳನ್ನು ಖರೀದಿಸಿದ್ದ ಆರೋಪದ ಮೇಲೆ 56ರ ವಯಸ್ಸಿನ ದತ್ಗೆ ಟಾಡಾ ನ್ಯಾಯಾಲಯ 2007ರಲ್ಲಿ 6 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿತ್ತು. ಆದರೆ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಿದ್ದ ದತ್ 18 ತಿಂಗಳ ಸೆರೆವಾಸದ ಬಳಿಕ ಜಾಮೀನಿನ ಮೇಲೆ ಹೊರಗಿದ್ದರು. ಟಾಡಾ ನ್ಯಾಯಾಲಯದ ತೀರ್ಪು ಎತ್ತಿಹಿಡಿದ ಸುಪ್ರೀಂಕೋರ್ಟ್, ಶಿಕ್ಷೆಯನ್ನು 6ರಿಂದ 5 ವರ್ಷಕ್ಕೆ ಇಳಿಸಿತು. ಕೋರ್ಟ್ ಆದೇಶದಂತೆ 2013ರಿಂದ ಮತ್ತೆ ಅವರು ಪುಣೆಯ ಯರವಾಡಾ ಜೈಲಿಗೆ ಕಳುಹಿಸಲ್ಪಟ್ಟರು.