ಮುಂಬೈ: ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ಮುಂಬೈನ ಬಾಂದ್ರಾದಲ್ಲಿರುವ ನಿವಾಸದ ಮೇಲೆ ಗುಂಡಿನ ದಾಳಿ ನಡೆಸಿದವರನ್ನು ನಿನ್ನೆ ರಾತ್ರಿ ಗುಜರಾತ್ ನಲ್ಲಿ ಬಂಧಿಸಲಾಗಿದೆ.
ಮುಂಬೈ ಕ್ರೈಂ ಬ್ರ್ಯಾಂಚ್ ಅಧಿಕಾರಿಗಳು ಕ್ಷಿಪ್ರ ಕಾರ್ಯಾಚರಣೆ ನಡೆಸಿ ನಿನ್ನೆ ರಾತ್ರಿ ಗುಜರಾತ್ ನ ಕಛ್ ನಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಘಟನೆ ಬಳಿಕ ಲ್ಯಾರೆನ್ಸ್ ಗ್ಯಾಂಗ್ ದಾಳಿಯ ಹೊಣೆ ಹೊತ್ತುಕೊಂಡಿತ್ತು. ನಿನ್ನೆ ಬಂಧಿತರಾದವರಿಂದ ಇದೀಗ ಹೆಚ್ಚಿನ ಮಾಹಿತಿ ಹೊರಬೀಳಬೇಕಿದೆ.
ಏಪ್ರಿಲ್ 14 ರಂದು ಮುಂಜಾನೆ ಸಲ್ಮಾನ್ ಖಾನ್ ಮನೆ ಬಳಿ ಬೈಕ್ ನಲ್ಲಿ ಬಂದಿದ್ದ ಇಬ್ಬರು ಆರೋಪಿಗಳು ಮನೆ ಮೇಲೆ ಗುಂಡಿನ ದಾಳಿ ನಡೆಸಿದ್ದರು. ಸಲ್ಮಾನ್ ಖಾನ್ ಗೆ ಈಗಾಗಲೇ ಲಾರೆನ್ಸ್ ಗ್ಯಾಂಗ್ ನಿಂದ ಜೀವ ಬೆದರಿಕೆಯಿದೆ. ಇದೀಗ ಗುಂಡಿನ ದಾಳಿ ಶಬ್ಧ ಕೇಳಿ ನೆರೆಹೊರೆಯವರು ಬೆಚ್ಚಿಬಿದ್ದಿದ್ದರು.
ಒಟ್ಟು ನಾಲ್ಕು ಸುತ್ತು ಗುಂಡು ಹಾರಿತ್ತು. ಇದು ಸಲ್ಮಾನ್ ಮನೆ ಕಂಪೌಂಡ್ ಗೆ ತಗುಲಿತ್ತು. ಬೆಳಗಿನ ಜಾವವಾಗಿದ್ದರಿಂದ ಹೆಚ್ಚು ಜನರ ಓಡಾಟವಿರಲಿಲ್ಲ. ಹೀಗಾಗಿ ಯಾರಿಗೂ ಅಪಾಯವಾಗಿರಲಿಲ್ಲ. ದಾಳಿಯ ನಂತರ ಸಲ್ಮಾನ್ ತಂದೆ ಸಲೀಂ ಎಂದಿನಂತೇ ವಾಕಿಂಗ್ ತೆರಳಿದ್ದರು.
ದಾಳಿಯ ನಂತರ ಸಲ್ಮಾನ್ ಖಾನ್ ನಿವಾಸಕ್ಕೆ ಭದ್ರತೆ ಹೆಚ್ಚಿಸಲಾಗಿತ್ತು. ದಾಳಿ ವೇಳೆ ಸಲ್ಮಾನ್ ಮನೆಯಲ್ಲಿಯೇ ಇದ್ದರು ಎನ್ನಲಾಗಿದೆ. ಈ ದಾಳಿ ನಡೆಸಲು ಆರೋಪಿಗಳು ಎರಡು ತಿಂಗಳಿನಿಂದ ಪ್ಲ್ಯಾನ್ ಮಾಡಿದ್ದರು. ಇದಕ್ಕಾಗಿ ಸಲ್ಮಾನ್ ಮನೆ ಪಕ್ಕದಲ್ಲಿಯೇ ಬಾಡಿಗೆ ಮನೆ ಪಡೆದಿದ್ದರು.
ಬಳಿಕ ಸಲ್ಮಾನ್ ಚಲನವಲನಗಳನ್ನು ಗುರುತಿಸಿದ್ದರು. ಪಕ್ಕಾ ಪ್ಲ್ಯಾನ್ ಮಾಡಿಕೊಂಡು ಈ ದಾಳಿ ನಡೆಸಿದ್ದರು. ಗುಂಡಿನ ದಾಳಿ ನಡೆದ ಬೆನ್ನಲ್ಲೇ ಪೊಲೀಸರು ಕಾರ್ಯಪ್ರವೃತ್ತರಾಗಿದ್ದರು. ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿಕೊಂಡು ಆರೋಪಿಗಳ ಜಾಡು ಹಿಡಿದಿದ್ದರು. ಇದೀಗ ಇಬ್ಬರನ್ನೂ ಬಂಧಿಸಲಾಗಿದೆ. ಮುಂದಿನ ವಿಚಾರಣೆ ಬಳಿಕ ಮತ್ತಷ್ಟು ವಿಚಾರಗಳು ಹೊರಬೀಳಲಿದೆ.