ದಾವೂದ್ ಮನೆಯಲ್ಲಿ ಖ್ಯಾತ ನಟನ ಪಾರ್ಟಿ

ಸೋಮವಾರ, 16 ಜನವರಿ 2017 (09:55 IST)
1993ರ ಮುಂಬೈ ಬಾಂಬ್ ಸ್ಫೋಟದ ರೂವಾರಿ, ಭಾರತದ ಮೋಸ್ಟ್ ವಾಂಟೆಡ್ ಕ್ರಿಮಿನಲ್, ಭೂಗತ ಪಾತಕಿ ದಾವೂದ್ ಇಬ್ರಾಹಿಂನನ್ನು ಬಂಧಿಸಲು ಭಾರತ ಸರಕಾರ ಅದೆಷ್ಟೋ ವರ್ಷಗಳಿಂದ ಪ್ರಯತ್ನಿಸುತ್ತಿದೆ. ಆದರೆ ಇದುವರೆಗೂ ಅವರು ಸಿಕ್ಕಿಬಿದ್ದಿಲ್ಲ. ಬಾಲಿವುಡ್ ನಟ ರಿಷಿ ಕಪೂರ್ ದುಬೈನಲ್ಲಿ ದಾವೂದ್‌‍ನನ್ನು ಭೇಟಿ ಮಾಡಿದ್ದರಂತೆ.
 
ಅಷ್ಟೇ ಅಲ್ಲದೆ ದಾವೂದ್ ಮನೆಯ ಔತಣಕ್ಕೂ ಹೋಗಿದ್ದರಂತೆ. ಆದರೆ ಇದು ನಡೆದು 30 ವರ್ಷಗಳಾಗುತ್ತಿದೆ. ಈ ವಿಷಯವನ್ನು ಸ್ವತಃ ರಿಷಿ ಕಪೂರ್ ಬಹಿರಂಗಪಡಿಸಿದ್ದಾರೆ. ಸಿನಿಮಾ ನಟನಾಗಿ ಇರುವ ಹೆಸರು, ಖ್ಯಾತಿಯಿಂದ ಈ ರೀತಿಯ ವ್ಯಕ್ತಿಗಳನ್ನು ಭೇಟಿಯಾಗುವಂತೆ ಮಾಡುತ್ತವೆ.
 
1988ರಲ್ಲಿ ನಾನು ದುಬೈಗೆ ಹೋಗಿದ್ದೆ. ನನ್ನ ಆಪ್ತಮಿತ್ರ ಬಿಟ್ಟೂ ಜತೆ ದುಬೈ ವಿಮಾನನಿಲ್ದಾಣದಲ್ಲಿ ಇಳಿದ ಮೇಲೆ ಒಬ್ಬ ಅಪರಿಚಿತ ನನ್ನನ್ನು ಭೇಟಿಯಾಗಿ ಫೋನ್ ಕೊಟ್ಟ. ದಾವೂದ್ ನಿಮ್ಮೊಂದಿಗೆ ಮಾತನಾಡಬೇಕೆಂದು ಕೋರಿದ್ದಾನೆ ಎಂದ. 1993ರ ಬಾಂಬ್ ಸ್ಫೋಟ ನಡೆಯುವುದಕ್ಕೂ ಹಿಂದಿನ ಘಟನೆ ಇದು.
 
ಆಗ ದಾವೂದ್ ದೇಶದ್ರೋಹಿಯಾಗಿರಲಿಲ್ಲ. ಹಾಗಾಗಿ ದಾವೂದ್ ಜತೆ ನಾನು ಮಾತನಾಡಿದೆ. ದುಬೈಗೆ ಬಂದಿದ್ದಕ್ಕೆ ಸ್ವಾಗತ ಕೋರಿದ. ಯಾವುದೇ ಅವಶ್ಯಕತೆ ಇರಲಿ ನನ್ನನ್ನು ಜ್ಞಾಪಕದಲ್ಲಿಡಿ ಎಂದ. ಮನೆಗೆ ಬರುವಂತೆ ಆಹ್ವಾನಿಸಿದ. ನಾನು ಉಳಿದುಕೊಂಡಿದ್ದ ಹೋಟೆಲ್‌ಗೆ ಕಾರು ಕಳುಹಿಸಿದ. ಅವರ ಮನೆಯ ಔತಣಕ್ಕೆ ಹೋದೆ. 
 
ಕಾರು ಎಲ್ಲೆಲ್ಲೋ ಹಾದುಹೋಗಿ, ಸುತ್ತುಬಳಸಿ ಅವರ ಮನೆ ತಲುಪಿತು. ಹಾಗಾಗಿ ದಾವೂದ್ ಮನೆ ಯಾವ ಪ್ರದೇಶದಲ್ಲಿದೆ ಎಂಬುದನ್ನು ಜ್ಞಾಪಕದಲ್ಲಿಟ್ಟುಕೊಳ್ಳಲು ಸಾಧ್ಯವಾಗಲಿಲ್ಲ. ಮದ್ಯಪಾನ ಮಾಡುವುದಿಲ್ಲ, ಅದೇ ರೀತಿ ಯಾರಿಗೂ ಕುಡಿಸುವುದಿಲ್ಲ ಎಂದು ದಾವೂದ್ ಈ ಸಂದರ್ಭದಲ್ಲಿ ಹೇಳಿದ. ಅವರ ಮನೆಯಲ್ಲಿ ನಾಲ್ಕು ಗಂಟೆಗಳ ಕಾಲ ಇದ್ದೆ. ಟಿ, ಬಿಸ್ಕೆಟ್ ಕೊಟ್ಟರು.
 
ಈ ಸಂದರ್ಭದಲ್ಲಿ ದಾವೂದ್ ಮಾತನಾಡುತ್ತಾ ನಾನು ಚಿಕ್ಕಚಿಕ್ಕ ಅಪರಾಧಗಳನ್ನು ಮಾತ್ರ ಮಾಡಿದ್ದೇನೆ. ಯಾರನ್ನೂ ಸಾಯಿಸಿಲ್ಲ ಎಂದೂ ಹೇಳಿದ. ಆ ಬಳಿಕ 1989ರಲ್ಲಿ ಒಮ್ಮೆ ದಾವೂದ್‌‍ನನ್ನು ಭೇಟಿಯಾಗಿದ್ದೆ. ಆಗ ನನ್ನೊಂದಿಗೆ ನನ್ನ ಪತ್ನಿ ನೀತೂ ಸಹ ಇದ್ದರು. ದಾವೂದ್ ಸುತ್ತಲೂ ಹತ್ತು ಮಂದಿ ಬಾಡಿಗಾರ್ಡ್ಸ್ ಇದ್ದರು. ಏನಾದರೂ ಸಹಾಯಬೇಕಿದ್ದರೆ ಕೇಳು ಎಂದು ಮೊಬೈಲ್ ನಂಬರ್ ಕೊಟ್ಟಿದ್ದ. ಆದರೆ ಆತನ ಆಫರನ್ನು ನಾನು ತಿರಸ್ಕರಿಸಿದೆ. ನಾನೊಬ್ಬ ನಟ ಇಂತಹ ವ್ಯವಹಾರಗಳಿಂದ ದೂರ ಇರುತ್ತೇನೆ ಎಂದಿದ್ದನ್ನು ಅರ್ಥ ಮಾಡಿಕೊಂಡಿದ್ದ. ಆ ಬಳಿಕ ಪರಿಸ್ಥಿತಿ ಬದಲಾಯಿತು. ದಾವೂದ್ ನನ್ನನ್ನು ಎಂದೂ ಸಂಪರ್ಕಿಸಲಿಲ್ಲ ಎಂದಿದ್ದಾರೆ ರಿಷಿ ಕಪೂರ್. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ