ಕಟ್ಟಪ್ಪ ಬಾಹುಬಲಿಯನ್ನು ಕೊಂದಿದ್ಯಾಕೆ? ಈ ದಿನದಂದು ಸಿಗಲಿದೆ ಉತ್ತರ

ಶನಿವಾರ, 6 ಆಗಸ್ಟ್ 2016 (11:30 IST)
ಬಾಹುಬಲಿ ಸಿಕ್ಕಾಪಟ್ಟೆ ಸೌಂಡ್ ಮಾಡಿದ್ದ ಚಿತ್ರ. ಚಿತ್ರದ ಕೊನೆಯಲ್ಲಿ ಕಟ್ಟಪ್ಪ ಬಾಹುಬಲಿಯನ್ನು ಕೊಲ್ಲುತ್ತಾನೆ. ಅಲ್ಲಿಗೆ ಚಿತ್ರ ಮುಕ್ತಾಯವಾಗುತ್ತದೆ. ಕಟ್ಟಪ್ಪ ಬಾಹುಬಲಿಯನ್ನು ಕೊಂದಿದ್ದು ಯಾಕೆ? ವಿಶ್ವದಾದ್ಯಂತ ಅಸಂಖ್ಯ ಪ್ರೇಕ್ಷಕರನ್ನುಕಾಡುತ್ತಿದೆ ಈ ಪ್ರಶ್ನೆ. ಈ ಪ್ರಶ್ನೆಗೆ ಚಿತ್ರದ ಮುಂದಿನ ಭಾಗದಲ್ಲಿ ಉತ್ತರ ಸಿಗಲಿದೆ ಎಂದು ಸ್ವತಃ ನಿರ್ದೇಶಕರೇ ವಾಗ್ದಾನ ಮಾಡಿದ್ದರು. ಆದರೆ ಅದು ಯಾವಾಗ ಎಂಬುದು ರಹಸ್ಯವಾಗಿತ್ತು. ಆದರೆ ಆ ರಹಸ್ಯ ಈಗ ಬಯಲಾಗಿದೆ. 2017ರ ಏಪ್ರಿಲ್ 28ರಂದು ಬಹುನಿರೀಕ್ಷಿತ ಬಾಹುಬಲಿ-2 (ದಿ ಕನ್ ಕ್ಲುಷನ್)  ತೆರೆಗಪ್ಪಳಿಸಲಿದ್ದು ಎಲ್ಲ ಪ್ರಶ್ನೆಗಳಿಗೂ ಉತ್ತರ ನೀಡಲಿದೆ.

ಈ ಹಿಂದೆ ಬಾಹುಬಲಿ 2 ಮುಂದಿನ ವರ್ಷದ ಏಪ್ರಿಲ್ 14ರಂದು ಬಿಡುಗಡೆಯಾಗಲಿದೆ ಎನ್ನುವ ಒಂದು ವದಂತಿ ಹಬ್ಬಿತ್ತು. ಆದರೆ ಬಾಲಿವುಡ್ ಚಿತ್ರ ನಿರ್ದೇಶಕ ಕರಣ್ ಜೋಹರ್ ಟ್ವಿಟ್ಟರ್‌ನಲ್ಲಿ ನಿರ್ಣಾಯಕ ದಿನಾಂಕ ಪ್ರಕಟಿಸುವ ಮೂಲಕ ಎಲ್ಲ ಗೊಂದಲಗಳಿಗೆ ತೆರೆ ಎಳೆದಿದ್ದಾರೆ. ಕರಣ್ ಜೋಹರ್ ಅವರ ಧರ್ಮಾ ನಿರ್ಮಾಣ ಸಂಸ್ಥೆ ಬಾಹುಬಲಿ ಹಿಂದಿ ಅವತರಣಿಕೆಯ ಹಕ್ಕನ್ನು ಪಡೆದುಕೊಂಡಿದೆ.

ಎಸ್‍ಎಸ್ ರಾಜಮೌಳಿ ನಿರ್ದೆಶನದ ಬಾಹುಬಲಿ ಚಿತ್ರದ ಮೊದಲನೆಯ ಭಾಗ ಸುಮಾರು 120 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡು ವಿಶ್ವದಾದ್ಯಂತ ತೆರೆಕಂಡಿತ್ತು. ಬಾಕ್ಸ್ ಆಫೀಸ್‍ನಲ್ಲಿ 600 ಕೋಟಿ ಗಳಿಸಿದ್ದ  ಈ ಚಿತ್ರದ ಮುಂದಿನ ಭಾಗ ನಿರೀಕ್ಷಿಸುತ್ತಿರುವ ಸಿನಿಮಾ ಅಭಿಮಾನಿಗಳಿಗೆ ರಿಲೀಸ್ ಡೇಟ್ ಘೋಷಣೆಯಾಗಿದ್ದು ಕುತೂಹಲವನ್ನು ಇಮ್ಮಿಸಿದೆ.

2015ರ ಜುಲೈ 10ರಂದು ಬಿಡುಗಡೆಯಾಗಿದ್ದ  ಬಾಹುಬಲಿ- ಮೊದಲನೆಯ ಭಾಗದಲ್ಲಿ  ಪ್ರಭಾಸ್, ರಾಣಾ ದಗ್ಗುಬಾಟಿ, ಅನುಷ್ಕಾ ಶೆಟ್ಟಿ, ತಮನ್ನಾ, ರಮ್ಯಾಕೃಷ್ಣ, ಸುದೀಪ್ ಅಭಿನಯಿಸಿದ್ದಾರೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ