ಬಾಲಿವುಡ್‌ನ ಚಿಗರೆ ಮರಿ ಸೋನಂ ವೃತ್ತಾಂತ!

IFM
ಬಾಲಿವುಡ್ಡಿನ ಪಳ್ಳನೆ ನಗುವ ಮಿಂಚುಗಣ್ಣಿನ ಚಿಗರೆ ಮರಿ ಸೋನಂ ಕಪೂರ್ ಈಗ ಸಿಕ್ಕಾಪಟ್ಟೆ ಆತ್ಮವಿಶ್ವಾಸದಿಂದ ಮುನ್ನುಗ್ಗುತ್ತಿದ್ದಾಳೆ. ಅಪ್ಪ ಅನಿಲ್ ಕಪೂರ್‌ರ ಅಪರಿಮಿತ ಪ್ರೋತ್ಸಾಹ, ತನ್ನ ಅದ್ಭುತ ಪ್ರತಿಭೆ, ಅದಕ್ಕೆ ತಕ್ಕನಾದ ಆತ್ಮ ವಿಶ್ವಾಸ, ದಿವ್ಯ ಸೌಂದರ್ಯ ಇವಿಷ್ಟು ಬೆನ್ನಿಗಿರುವ ಸೋನಂ ಈಗ ಭವಿಷ್ಯದ ತಾರೆ ಎಂದೇ ಬಿಂಬಿತ.

ಇಂತಹ ದಂತದ ಬೊಂಬೆ ಸೋನಂ ಹುಟ್ಟಿದ್ದು 1985ರ ಜೂನ್ 9ರಂದು. ಮುಂಬೈನಲ್ಲೇ ಹುಟ್ಟಿ ಬೆಳೆದ ಸೋನಂಗೆ ಬಾಲಿವುಡ್ ಜಗತ್ತನ್ನು ಬೆರಗುಗಣ್ಣಿನಿಂದ ನೋಡಲೇ ಇಲ್ಲ. ಯಾಕೆಂದರೆ ಅಪ್ಪ ಅನಿಲ್ ಕಪೂರ್ ಬಾಲಿವುಡ್ ನಟ. ದೊಡ್ಡಪ್ಪ ಬೋನಿಕಪೂರ್ ಸಿನಿಮಾ ನಿರ್ಮಾಪಕ. ಚಿಕ್ಕಪ್ಪ ಸಂಜಯ್ ಕಪೂರ್ ಕೂಡಾ ನಟ. ದೊಡ್ಡಮ್ಮ ಶ್ರೀದೇವಿ ಒಂದು ಕಾಲದಲ್ಲಿ ಬಾಲಿವುಡ್ಡಿನ ನಂಬರ್ ವನ್ ನಾಯಕಿ. ಹೀಗಾಗಿ ಈಕೆಗೆ ಬಾಲಿವುಡ್ ಎಂಬುದು ಪಕ್ಕದ ಮನೆಯ ಅಂಗಳವಿದ್ದಂತೆ. ಆದರೆ, ಆ ಅಂಗಳಕ್ಕೆ ನೆಗೆಯಬೇಕು, ಅಲ್ಲಿ ಆತ್ಮವಿಶ್ವಾಸದಿಂದ ಹೆಜ್ಜೆ ಹಾಕಬೇಕೆಂದಿದ್ದರೆ, ಕೇವಲ ಅಪ್ಪ ಇದ್ದರೆ ಸಾಲದು. ಇನ್ನೇನೇನು ಇರಬೇಕೋ, ಅವೆಲ್ಲಾ ಸೋನಂಗಿವೆ.

ಸೋನಂಗೆ ಒಬ್ಬ ತಂಗಿ ರಿಯಾ ಹಾಗೂ ತಮ್ಮ ಹರ್ಷವರ್ಧನ್ ಇದ್ದಾರೆ. ರಿಯಾ ನ್ಯೂಯಾರ್ಕ್‌ನಲ್ಲಿ ಹಾಗೂ ಹರ್ಷವರ್ಧನ್ ಕ್ಯಾಲಿಫೋರ್ನಿಯಾದಲ್ಲಿ ಓದುತ್ತಿದ್ದಾರೆ.ಸೋನಂ ಓದಿದ್ದು ಯನಿವರ್ಸಿಟಿ ಆಫ್ ಈಸ್ಟ್ ಲಂಡನ್. ನಂತರ ಯುನೈಟೆಡ್ ವಲ್ರ್ಡ್ ಕಾಲೇಜ್ ಆಫ್ ಸೌತ್ ಈಸ್ಟ್ ಏಷ್ಯಾದಲ್ಲೂ ಜಾಗ ಪಡೆದಳು. ಅಲ್ಲಿಂದ ಭಾರತಕ್ಕೆ ಮರಳಿದ ಸೋನಂ ಮುಂಬೈ ಯುನಿವರ್ಸಿಟಿಯಿಂದ ರಾಜ್ಯಶಾಸ್ತ್ರ ಹಾಗೂ ಅರ್ಥಶಾಸ್ತ್ರದಲ್ಲಿ ಪದವಿ ಪಡೆದಳು. ಇಂಗ್ಲೀಷ್, ಹಿಂದಿ ಹಾಗೂ ಪಂಜಾಬಿ ಭಾಷೆಗಳನ್ನು ಸುಲಲಿತವಾಗಿ ಮಾತನಾಡಬಲ್ಲ ಸೋನಂ ಶಾಸ್ತ್ರೀಯ ನೃತ್ಯ ಹಾಗೂ ಲ್ಯಾಟಿನ್ ನೃತ್ಯ ತರಬೇತಿಯನ್ನೂ ಪಡೆದಿದ್ದಾಳೆ.

IFM
ಸಿನಿಮಾದಲ್ಲಿ ನಟಿಸುವುದಕ್ಕೂ ಮೊದಲು ಸಂಜಯ್ ಲೀಲಾ ಬನ್ಸಾಲಿ ಅವರು 2005ರಲ್ಲಿ ಬ್ಲ್ಯಾಕ್ ಚಿತ್ರದ ನಿರ್ದೇಶನ ಮಾಡುತ್ತಿದ್ದಾಗ ಸೋನಂ ಸಹಾಯಕ ನಿರ್ದೇಶಕಿಯಾಗಿ ಕೆಲಸ ಮಾಡಿದ ಅನುಭವವಿದೆ. ಹಾಗಾಗಿ ಸೋನಂಗೆ ನಿರ್ದೇಶನವೂ ಅಲ್ಪ ಸ್ವಲ್ಪ ಗೊತ್ತು.

ಮೊದಲ ಚಿತ್ರ 2007ರಲ್ಲಿ ಬಿಡುಗಡೆಯಾದ ರಣಬೀರ್ ಕಪೂರ್ ಜತೆಗಿನ ಸಾವರಿಯಾ. ಚಿತ್ರ ಸೋತರೂ ಸಾಕಷ್ಟು ವಿಮರ್ಶಕರಿಂದ ಚಿತ್ರದ ಪ್ರಯೋಗದ ಬಗ್ಗೆ ಮೆಚ್ಚುಗೆ ಕೇಳಿಬಂದಿತ್ತು. ಅದರಲ್ಲೂ ಸೋನಂ ನಟನೆಗೆ ಅದ್ಭುತ ಪ್ರತಿಕ್ರಿಯೆ ಬಂದಿತ್ತು. 2009ರಲ್ಲಿ ರಾಕೇಶ್ ಓಂಪ್ರಕಾಶ್ ಮೆಹ್ರಾರ 'ಡೆಲ್ಲಿ-6' ಸೋನಂ ನಟಿಸಿದ ಎರಡನೇ ಚಿತ್ರ. ಅಭಿಷೇಕ್ ಬಚ್ಚನ್ ಜತೆಗಿನ ಈ ಚಿತ್ರದ ಬಗ್ಗೆ ಮಿಶ್ರ ಪ್ರತಿಕ್ರಿಯೆ ಬಂದರೂ, ಸೋನಂ ನಟನೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು.

ಸದಾ ಸುದ್ದಿಯಲ್ಲಿರುವ ಸೋನಂ ಕೆಲವೇ ಸಮಯದ ಹಿಂದೆ ಐಶ್ವರ್ಯಾ ರೈ ಜತೆಗೆ ಶೀತಲ ಸಮರ ನಡೆಸಿ ಎಲ್ಲರ ಹುಬ್ಬೇರಿಸಿದ್ದಳು. ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವೊಂದರಲ್ಲಿ ರೆಡ್ ಕಾರ್ಪೆಟ್ ಮೇಲೆ ನಡೆಯಲು ಐಶ್ವರ್ಯಾ ನನ್ನನ್ನು ಬಿಟ್ಟಿಲ್ಲ ಎಂದ ಸೋನಂ ವಿವಾದವೆಬ್ಬಿಸಿದ್ದಳು.
IFM


ನಂತರ ತನ್ನನ್ನು ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಲು ಬಿಡದ ಐಶ್ವರ್ಯಾಳನ್ನು ಆಂಟಿ ಎಂದು ಕರೆದು ಸೇಡನ್ನೂ ತೀರಿಸಿದ್ದಳು. 'ಆಂಟಿ ಅಂತ ಯಾಕೆ ಕರೆದೆ?' ಎಂದು ಸೋನಂಳನ್ನು ಕೇಳಿದರೆ, ಐಶ್ವರ್ಯಾರನ್ನು ನಾನು ಪುಟ್ಟ ಹುಡುಗಿಯಾಗಿದ್ದಾಗಿಂದಲೂ ನೋಡುತ್ತಿದ್ದೆ. ಅವರು ನನ್ನ ಅಪ್ಪನ ಜತೆಗೇ ನಟಿಸಿದ್ದರು. ಮತ್ತೆ ಆಕೆ ನನಗೆ ಆಂಟಿಯಲ್ಲದೆ ಇನ್ನೇನು ಅಂತ ತಮಾಷೆ ಭರಿತ ಖಾರ ಸಿಡಿಸಿದ್ದಳು ಈ ಪೋರಿ.

ಅಬ್ಬಾ! ಇಂತಿಪ್ಪ ಗರಂ ಸೋನಂ ಕೈಯಲ್ಲಿ ಮೂರು ಚಿತ್ರಗಳಿವೆ. ಒಂದು ಅಕ್ಷಯ್ ಕುಮಾರ್ ಜತೆಗಿನ ಡೇವಿಡ್ ಧವನ್ ಅವರ ಕಮ್ ಆನ್ ಪಪ್ಪು ಎಂಬ ಕಾಮಿಡಿ ಚಿತ್ರ. ಇನ್ನೊಂದು ಇಮ್ರಾನ್ ಖಾನ್ ಜತೆಗಿನ ಐ ಹೇಟ್ ಲವ್ ಸ್ಟೋರೀಸ್ ಎಂಬ ಚಿತ್ರ. ಮತ್ತೊಂದು ತನ್ನದೇ ಮನೆಯ ಚಿತ್ರ ಅರ್ಥಾತ್ ಅನಿಲ್ ಕಪೂರ್ ನಿರ್ಮಿಸುತ್ತಿರುವ ಆಯೇಷಾ ಚಿತ್ರ.

ಬಾಲಿವುಡ್ ಸಾಗರದಲ್ಲಿ ಈಜಲು ಹೊರಟಿರುವ ಸೋನಂಗೆ ಅಪ್ಪ ಅನಿಲ್ ಕೂಡಾ ಬೆನ್ನಿಗೆ ನಿಂತಿದ್ದಾರೆ. ಮಗಳು ಹಾದಿ ತಪ್ಪದಂತೆ ತಿದ್ದಿ ತೀಡುತ್ತಿದ್ದಾರೆ. ಇಂತಿಪ್ಪ ಸೋನಂ ತನ್ನ ಚಿಗರೆ ಕಣ್ಣುಗಳಲ್ಲಿ ಅಪಾರ ಕನಸನ್ನೂ ಹೊತ್ತಿದ್ದಾಳೆ. ಈಗಾಗಲೇ ಸ್ಟಾರ್ಡಸ್ಟ್ ಭವಿಷ್ಯದ ಸೂಪರ್‌ಸ್ಟಾರ್ ಪ್ರಶಸ್ತಿಯನ್ನೂ ಬುಟ್ಟಿಗೆ ಹಾಕಿಕೊಂಡಿರುವ ಸೋನಂಗೆ ಗುಡ್ ಲಕ್.

ವೆಬ್ದುನಿಯಾವನ್ನು ಓದಿ