ಮಾದಕ ನಟಿ ಲೀಸಾ ರೇಗೆ ವಾಸಿಯಾಗದ ಕ್ಯಾನ್ಸರ್!

IFM
ಇದೊಂದು ಶಾಕಿಂಗ್ ಸುದ್ದಿ. ಕನ್ನಡದಲ್ಲಿ ಅಂದು ಶಿವರಾಜ್ ಕುಮಾರ್ ಜತೆಗೆ ನಾಯಕಿಯಾಗಿ ನಟಿಸಿ ಹೋಗಿದ್ದ ಬಾಲಿವುಡ್ ನಟಿ, ಗ್ಲ್ಯಾಮರ್ ಗೊಂಬೆ, ಮಾದಕ ಮಾಡೆಲ್ ಲೀಸಾ ರೇ ಗುಣಪಡಿಸಲಾಗದ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರಂತೆ. ಹಾಗಂತ ಸ್ವತಃ ಲೀಸಾರೇ ಹೇಳಿಕೊಂಡಿದ್ದಾರೆ. ತಮ್ಮ ಬ್ಲಾಗ್‌ನಲ್ಲಿ ಸುದೀರ್ಘವಾಗಿ ತಮಗೆ ಕ್ಯಾನ್ಸರ್ ತಗುಲಿರುವುದನ್ನು ಮನಮುಟ್ಟುವಂತೆ ವಿವರಿಸಿದ್ದಾರೆ ಲೀಸಾ.

ಸೆಪ್ಟೆಂಬರ್ ಮೂರರಂದು ತಮಗೆ ಕ್ಯಾನ್ಸರ್ ಇರುವ ಬಗ್ಗೆ ಬ್ಲಾಗ್‌ನಲ್ಲಿ ಬರೆದುಕೊಂಡಿರುವ ಲೀಸಾ, ಜೂನ್ 23ರಂದು ನನಗೆ ಮಲ್ಟಿಪಲ್ ಮೈಲೋಮಾ ಕ್ಯಾನ್ಸರ್ ಇರುವುದು ತಿಳಿದು ಬಂತು. ಜುಲೈ 2ರಿಂದ ಮೊದಲ ಹಂತದ ಚಿಕಿತ್ಸೆ ಆರಂಭವಾಗಿದೆ ಎಂದು ಬರೆದುಕೊಂಡಿದ್ದಾಳೆ.

ಮಲ್ಟಿಪಲ್ ಮೈಲೋಮಾ ಎಂಬುದು ಎಲುಬಿನ ಕ್ಯಾನ್ಸರ್. ಇಲ್ಲಿ ಎಲುಬಿನ ಪ್ಲಾಸ್ಮಾ ಕೋಶಗಲು ದ್ವಿಗುಣಗೊಳ್ಳುತ್ತಾ ಸಾಗುತ್ತದೆ. ವಿಪರೀತ ಸುಸ್ತು, ಬೆನ್ನು ನೋವು, ದಿನದಿಂದ ದಿನಕ್ಕೆ ಹೆಚ್ಚುವ ಕತ್ತು ನೋವು ಇವೆಲ್ಲ ಈ ರೋಗದ ಲಕ್ಷಣಗಳು. ಇತ್ತೀಚೆಗೆ ಇದ್ದಕ್ಕಿದ್ದಂತೆ ನನಗೆ ಸುಸ್ತು ಆರಂಭವಾಯಿತು. ವಿಪರೀತ ಬೆನ್ನುನೋವು ಶುರುವಾಯಿತು. ದಿನದಿಂದ ದಿನಕ್ಕೆ ನಾನು ಸೊರಗುತ್ತಿರುವಂತೆ ಅನಿಸಿತು. ವೈದ್ಯರಲ್ಲಿ ಕಾರಣ ಕೇಳಲೆಂದು ಹೋದಾಗ ಕ್ಯಾನ್ಸರ್ ಇರುವುದು ಗೊತ್ತಾಯಿತು. ನನಗೆ ತಗುಲಿರುವ ಕ್ಯಾನ್ಸರ್ ಗುಣಪಡಿಸಲಾಗದ್ದು ಎಂದು ಗೊತ್ತಾಯಿತು. ಒಂದು ಕ್ಷಣ ಹೇಗೆ ಪ್ರಕ್ರಿಯಿಸಬೇಕೆಂದು ಅರಿಯದಾಯಿತು. ನಾನು ಅಳಲಿಲ್ಲ. ಚೀರಾಡಲಿಲ್ಲ. ನಾಟಕೀಯವೆನಿಸತೊಡಗಿತು. ಆದರೆ ಅಷ್ಟಾಗಲೇ ನಾನು ಕ್ಯಾನ್ಸರ್ ರೋಗಿಯಾಗಿದ್ದೆ. ಈಗ ಚಿಕಿತ್ಸೆ ಆರಂಭವಾಗಿದೆ. ನನ್ನಲ್ಲೇ ನನಗೆ ವಿಪರೀತ ಆತ್ಮವಿಶ್ವಾಸವೂ ಮೊಳೆತಿದೆ. ಎಂದೂ ಇಲ್ಲದ ಧೈರ್ಯ ಬಂದಿದೆ. ನಾನು ಕ್ಯಾನ್ಸರ್ ವಿರುದ್ಧ ಜಯ ಸಾಧಿಸಿಯೇ ಸಾಧಿಸುತ್ತೇನೆ. ಶೀಘ್ರವೇ ನಾನು ಗುಣಮುಖಳಾಗುತ್ತೇನೆ ಎಂದು ಭಾವುಕವಾಗಿ ಬರೆದಿದ್ದಾರೆ ಲೀಸಾ.
PR


ಕನ್ನಡದಲ್ಲಿ ಒಂದೊಮ್ಮೆ ಶಿವರಾಜ್ ಕುಮಾರ್ ಜತೆಗೆ ಯುವರಾಜ ಚಿತ್ರದಲ್ಲಿ ನಟಿಸಿ ಹೋಗಿದ್ದ ಲೀಸಾ ರೇ ನೇತಾಜಿ, ತಕ್ಕರಿ ದೋಂಗಾ ಎಂಬ ಎರಡು ತಮಿಳು ಚಿತ್ರರಂಗದಲ್ಲೂ ನಟಿಸಿದ್ದಳು. ಆದರೆ ಅಷ್ಟಾಗಿ ಕ್ಲಿಕ್ ಆಗಲಿಲ್ಲ. ಹುಟ್ಟಿದ್ದು ಬೆಳೆದಿದ್ದು ಎಲ್ಲವೂ ಕೆನಡಾದಲ್ಲಾದರೂ, ಲೀಸಾ ಅಪ್ಪ ಭಾರತದ ಕಲ್ಕತ್ತಾದವರು. ಬೆಂಗಾಳಿ ಕುಟುಂಬದ ಹಿನ್ನೆಲೆಯಿರುವುದರಿಂದ ಲೀಸಾ ಭಾರತದ ಸೆಳೆತಕ್ಕೆ ಒಳಗಾದರು.

ಮಾಡೆಲಿಗ್ ಪ್ರಪಂಚದಲ್ಲಿ ಯಶಸ್ಸು ಪಡೆದಿರುವ ಲೀಸಾ ತನ್ನ ಮಾದಕ ನೋಟಕ್ಕೆ ಹೆಸರುವಾಸಿ. ಕೆನಡಿಯನ್ ಸಿನಿಮಾಗಳಲ್ಲೂ ನಟಿಸಿರುವ ಲೀಸಾಗೆ ಖ್ಯಾತಿ ತಂದುಕೊಟ್ಟಿದ್ದು, ಅಂತಾರಾಷ್ಟ್ರೀಯ ಖ್ಯಾತಿಯ ದೀಪಾ ಮೆಹ್ತಾರ ವಾಟರ್ ಚಿತ್ರ. ಬ್ರಿಟೀಶ್ ಇಂಡಿಯಾ ಕಾಲದ ಬಾಲ್ಯ ವಿವಾಹ ಹಾಗೂ ವಿಧವಾ ವಿವಾಹದ ಕಥೆಯುಳ್ಳ ವಾಟರ್ ಚಿತ್ರ ಆಸ್ಕರ್ ಪ್ರಶಸ್ತಿಗೆ ನಾಮ ನಿರ್ದೇಶನಗೊಂಡಿತ್ತು. ಅಷ್ಟೇ ಅಲ್ಲ, ಹತ್ತು ಹಲವು ಪ್ರಶಸ್ತಿಗಳನ್ನು ಗೆದ್ದುಕೊಂಡಿತ್ತು. ಇದಲ್ಲದೆ, ಹನ್ಸ್ತೇ ಖೇಲ್ತೇ, ಕಸೂರ್ ಮತ್ತಿತರ ಹಿಂದಿ ಚಿತ್ರಗಳಲ್ಲಿ ನಟಿಸಿರುವ ಲೀಸಾ, ಬಾಲ್ ಎಂಡ್ ಚೈನ್, ಸೀಕಿಂಗ್ ಫೀಯರ್, ಕ್ವಾರ್ಟರ್ ಲೈಫ್ ಕ್ರೈಸಿಸ್, ಐ ಕಾಂಟ್ ಥಿಂಕ್ ಸ್ಟ್ರೈಟ್, ದಿ ವಲ್ರ್ಡ್ ಅನಿ‌ಸೀನ್, ಕಿಲ್ ಕಿಲ್ ಫಾಸ್ಟರ್ ಫಾಸ್ಟರ್ ಮತ್ತಿತರ ಹಲವು ಇಂಗ್ಲೀಷ್ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದರು.
IFM


ನನಗೊತ್ತು, ಈ ಕ್ಯಾನ್ಸರ್ ಗುಣಪಡಿಸಲು ಅಸಾಧ್ಯ ಎಂದು. ಇದು ಬಹಳ ಅಪರೂಪದ ಕ್ಯಾನ್ಸರ್. ಎಲ್ಲರಿಗೂ ಬರೋದಿಲ್ಲ. ಪ್ರತಿ ವರ್ಷ ಇಡೀ ಪ್ರಪಂಚದಲ್ಲಿ ಅಂದಾಜು 2,100 ಮಂದಿ ಸಾಯುತ್ತಾರೆ. ನನಗೀಗ ವಯಸ್ಸು 37. 37ರ ವಯಸ್ಸಿಗೆ ಬಂತಲ್ಲಾ, ಇನ್ನೂ ಇದ್ಕಕೂ ಮುಂಚೆಯೇ ಬರಲಿಲ್ಲವಲ್ಲ ಎಂದು ಖುಷಿ ಪಡುತ್ತೇನೆ. ಅರ್ಧ ಜೀವಿತಾವಧಿಯನ್ನು ಸಂತೋಷದಿಂದ, ಯಶಸ್ಸಿನಿಂದ ಕಳೆದಿದ್ದೇನೆ. ಆದರೂ, ಕ್ಯಾನ್ಸರ್ ವಿರುದ್ಧವೂ ಅದೇ ಯಶಸ್ಸು ಪಡೆಯುತ್ತೇನೆ ಎಂದು ನಂಬಿಕೆಯಿದೆ. ಧೈರ್ಯವೂ ಇದೆ ಎಂದು ವಿಷಾದ ಭರಿತ ಆತ್ಮವಿಶ್ವಾಸದಿಂದ ಹೇಳಿದ್ದಾರೆ ಲೀಸಾ.

ಲೀಸಾ ಅವರಿಗೆ ಕ್ಯಾನ್ಸರ್ ಇರುವುದನ್ನು ಅವರ ಬ್ಲಾಗ್‌ನಲ್ಲಿ ಓದಿ ಅಭಿಮಾನಿಗಳು, ಹಿತೈಷಿಗಳು, ಚಿತ್ರರಂಗದವರು ದಿಗ್ಭ್ರಮೆಗೊಂಡಿದ್ದಾರೆ. ರೋಗದಿಂದ ಮುಕ್ತಳಾಗಲೆಂದು ಹಾರೈಸಿ ಆಕೆಯ ಬ್ಲಾಗ್‌ಗೆ 325ಕ್ಕೂ ಹೆಚ್ಚು ಕಾಮೆಂಟು ಬರೆದಿದ್ದಾರೆ.

ಖ್ಯಾತ ಫ್ಯಾಷನ್ ಫೋಟೋಗ್ರಾಫರ್ ಪೌಲೋ ಝಾಂಬಾಲ್ಡಿ ಅವರನ್ನು ಬಹಳ ವರ್ಷಗಳ ಹಿಂದೆಯೇ ವಿವಾಹವಾಗಿರುವ ಲೀಸಾ ಕೆನಡಾದಲ್ಲಿ ವಾಸವಾಗಿದ್ದಾರೆ. ಲೀಸಾ ರೋಗಮುಕ್ತಳಾಗಲೆಂದು ಹಾರೈಸೋಣ.

ವೆಬ್ದುನಿಯಾವನ್ನು ಓದಿ