ಮೋಹಕ್‌ ಗುಲ್ ಪನಾಗ್‌ಳ ಶೌರ್ಯ ಪರಿಚಯ!

IFM
ಹೆಸರು ಗುಲ್ ಪನಾಗ್. ಹುಟ್ಟಿದ್ದು 1977ರ ಜನವರಿ 3ರಂದು. ಮಾಡಿದ್ದು ಬೆರಳೆಣಿಕೆಯ ಹಿಂದಿ ಚಿತ್ರಗಳಲ್ಲಾದರೂ, ಬಾಲಿವುಡ್ಡಿನಲ್ಲಿ ತನ್ನದೇ ಆದ ಛಾಪು ಮೂಡಿಸಿದಾಕೆ. ಧೂಪ್, ಢರ್, ಮನೋರಮಾ ಸಿಕ್ಸ್ ಫೀಟ್ ಅಂಡರ್, ಹೆಲೋ, ಸ್ಟ್ರೈಟ್‌ನಂತಹ ಚಿತ್ರಗಳಲ್ಲಿ ನಟಿಸಿ ವಿಮರ್ಶಾತ್ಮಕವಾಗಿಯೂ ಭೇಷ್ ಎನಿಸಿಕೊಂಡಾಕೆ. ಕೆನ್ನೆಯೆರಡಲ್ಲೂ ಸುಂದರ ಗುಳಿಗಳನ್ನು ಮೂಡಿಸಿ ನಗುವ ಗುಲ್ ನಗು ಮೇಯಲ್ಲಿ ಅರಳಿದ ಗುಲ್‌ ಮೊಹರಿನಷ್ಟೇ ಸೊಬಗು. ಈಕೆಯ ನಗುವಿಗೆ ಮಿಸ್ ಇಂಡಿಯೂ ಬ್ಯೂಟಿಫುಲ್ ಸ್ಮೈಲ್ ಪ್ರಶಸ್ತಿಯೂ ಒಲಿದಿದೆ.

ಗುಲ್ ಪನಾಗ್‌ಗೆ ಸೈನ್ಯದ ಹಿನ್ನೆಲೆಯಿದೆ. ಅರ್ಥಾತ್ ಆಕೆಯೇನೂ ಸೈನ್ಯಕ್ಕೆ ಸೇರಿಲ್ಲ ಬಿಡಿ. ಆಕೆಯ ಅಪ್ಪ ಲೆಫ್ಟಿನೆಂಟ್ ಜನರಲ್ ಎಚ್.ಎಸ್.ಪನಾಗ್ ಭಾರತೀಯ ಸೇನೆಯಲ್ಲಿ ಕೆಲಸ ಮಾಡಿದವರು. ಹಾಗೂ ಈಗಲೂ ಕೇಂದ್ರ ಕಮಾಂಡ್‌ನಲ್ಲಿ ಸೇನಾ ಕಮಾಂಡರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಗುಲ್‌ಗೆ ಇರೋ ಒಬ್ಬ ತಮ್ಮ ಶೆರ್ಬೀರ್ ಸಿಂಗ್ ರಾಷ್ಟ್ರೀಯ ಸ್ಕೀಟ್ ಶೂಟರ್. ಅಪ್ಪನಿಗೆ ಆಗಾಗ ವರ್ಗಾವಣೆಯಾಗುತ್ತಿದ್ದುದರಿಂದ ಗುಲ್ ಪನಾಗ್ ಸೇನಾ ಶಾಲೆಯಲ್ಲೇ ಓದಿದವಳು ಹಾಗೂ ಪ್ರಾಥಮಿಕ ಹಂತದಲ್ಲಿ 14 ಬಾರಿ ದೇಶದ ಹಲವು ಶಾಲೆಗಳ ರುಚಿ ನೋಡಿದವಳು. ಚಂಡೀಗಢ, ಲೇಹ್, ಮೌ, ತಮಿಳುನಾಡುಗಳ ಕೇಂದ್ರೀಯ ವಿದ್ಯಾಲಯದ್ಲಲೂ ಈಕೆ ಪ್ರಾಥಮಿಕ ಶಿಕ್ಷಣ ಪಡೆದಿದ್ದಾಳೆ. ಬಿಎ ಓದಿದ್ದು ಪಂಜಾಬ್ ವಿಶ್ವವಿದ್ಯಾನಿಲಯದಲ್ಲಿ. ಗುಲ್ ರಾಜ್ಯಶಾಸ್ತ್ರದಲ್ಲಿ ಎಂಎ ಪದವಿಯನ್ನೂ ಚಂಡೀಗಢದಲ್ಲಿ ಪಂಜಾಬ್ ವಿವಿಯಿಂದ ಪಡೆದಿದ್ದಾರೆ.

1999ರಲ್ಲಿ ಮಿಸ್ ಇಂಡಿಯಾ ಯುನಿವರ್ಸ್ ಕಿರೀಟ ಧಾರಣೆ ಮಾಡಿದ ಈ ಬೆಡಗಿ, ಬಿಎ ಮಾಡುತ್ತಿರುವಾಗಲೇ ಮಾಡೆಲಿಂಗ್ ಕಡೆಗೂ ದೃಷ್ಟಿ ಹರಿಸಿದಳು. ಮಾಡೆಲಿಂಗ್‌ನಿಂದ ಬಾಲಿವುಡ್‌ನತ್ತ ಕಾಲಿಟ್ಟ ಈಕೆ ತನ್ನ ಮೊದಲ ಚಿತ್ರ ಧೂಪ್‌ಗಾಗಿ ಸಾಕಷ್ಟು ವಿಮರ್ಶಕರಿಂದ ಮೆಚ್ಚುಗೆ ಪಡೆದಳು. ನಾಗೇಶ್ ಕೂಕನೂರ್ ಅವರ ಢರ್ ಚಿತ್ರದಲ್ಲೂ ಆಕೆಯ ಝೀನತ್ ಪಾತ್ರಕ್ಕೂ ಭಾರೀ ಪ್ರಶಂಸೆ ವ್ಯಕ್ತವಾಗಿತ್ತು.

IFM
ಗುಲ್ ಮಾಮೂಲಿ ನಟಿ ಮಾತ್ರ ಆಲ್ಲ. ಆಕೆಯಲ್ಲಿ ಹಲವು ವಿಶೇಷತೆಗಳಿವೆ. ಗುಲ್ ಪುಸ್ತಕ ಪ್ರೇಮಿ ಕೂಡಾ. ಆಕೆ ಸಿಕ್ಕಾಪಟ್ಟೆ ಪುಸ್ತಕ ಖರೀದಿಸುವ ಹುಚ್ಚು ಹೊಂದಿದ್ದಾಳೆ. ಆಕೆಯ ಮನೆಯಲ್ಲಿ ಗ್ರಂಥಾಲಯಕ್ಕೆಂದೇ ಒಂದು ಕೋಣೆ ಮೀಸಲು. ಯಾವಾಗಲೂ ಮೂರು ಪುಸ್ತಕಗಳನ್ನು ಒಟ್ಟಿಗೆ ಓದುವ ಹವ್ಯಾಸ ಗುಲ್‌ಗಿದೆ. ಅಂದರೆ ಒಂದು ಮನೆಯಲ್ಲಿರುವಾಗ, ಇನ್ನೊಂದು ಕಾರಿನಲ್ಲಿ ಹೋಗುವಾಗ, ಮತ್ತೊಂದು ಬ್ಯಾಗಿನಲ್ಲಿ. ಸಮಯ ಸಿಕ್ಕಾಗಲೆಲ್ಲ ಪ್ರಯಾಣಿಸುವಾಗ, ಸುಮ್ಮನೆ ಕೂತಿರುವಾಗ ಪುಸ್ತಕ ಓದುತ್ತಾಳೆ ಗುಲ್. ಇದಲ್ಲದೆ ಯಾವಾಗಲೂ ಮೊದಲ ಆವೃತ್ತಿಯ ಪುಸ್ತಕಗಳನ್ನೇ ಕೊಂಡುಕೊಂಡು ಸಂಗ್ರಹಿಸುವ ಹವ್ಯಾಸ ಗುಲ್‌ಗಿದೆಯಂತೆ.

ಈಕೆ ಸಾಹಸಿ ಕೂಡಾ ಹೌದು. ಸಾಹಸವನ್ನು ಇಷ್ಟಪಡುವ ಗುಲ್, ಪರ್ವತಾರೋಹಣ, ಚಾರಣ, ವಾಟರ್ ರ‌‌್ಯಾಫ್ಟಿಂಗ್‌ಗಳಲ್ಲೂ ಪಳಗಿದಾಕೆ. ಸದ್ಯವೇ ಹಿಮಾಲಯವನ್ನೂ ಏರಿ ಉತ್ಸಾಹದಿಂದ ಮರಳಿದ್ದಾಳೆ. ಅಷ್ಟೇ ಅಲ್ಲ, ಪರ್ವತಗಳ ಕಡಿದಾದ ರಸ್ತೆಗಳಲ್ಲಿ ವಾಹನ ಚಾಲನೆ ಮಾಡುವುದೂ ಈಕೆಯ ಪ್ರಿಯವಾದ ಹವ್ಯಾಸ. ಮುಂಬೈನಿಂದ ಸಾವಿರಾರು ಕಿ.ಮೀ ದೂರದ ಲಡಾಕ್‌ವರೆಗೆ ಸ್ಕಾರ್ಪಿಯೋವನ್ನು ಚಲಾಯಿಸಿಕೊಂಡು ಹೋಗುವ ಸಾಹಸವನ್ನೂ ಮಾಡಿದ್ದಾಳೆ.

ತಮ್ಮನಂತೆ ಸ್ಕೀಟ್ ಶೂಟಿಂಗ್ ಕೂಡಾ ಗುಲ್‌ಗೆ ಗೊತ್ತು. ಶೂಟರ್ ಆಗಿರುವ ತಮ್ಮನಿಂದಲೇ ಈಕೆಗೆ ಶೂಟಿಂಗ್ ತರಬೇತಿ ಸಿಕ್ಕಿತ್ತು. ಪ್ರವಾಸ ಎಂದರೆ ಈಕೆಗೆ ಅಚ್ಚುಮೆಚ್ಚು. ಅದರಲ್ಲೂ ಅಷ್ಟಾಗಿ ಚಿರಪರಿಚಿತವಿರದ ಪ್ರದೇಶಗಳಿಗೆ ಹೋಗುವುದೆಂದರೆ ಇನ್ನೂ ಇಷ್ಟ. ಜತೆಗೆ ಕುದುರೆ ಅಂದರೂ ಗುಲ್‌ಗೆ ಪ್ರಾಣ. ಕುದುರೆ ಸವಾರಿಯೂ ಗೊತ್ತು. ಹಲವು ಕುದುರೆ ಸವಾರಿ ಸ್ಪರ್ಧೆಗಳಲ್ಲಿ ಚಿಕ್ಕಂದಿನಲ್ಲೇ ಗುಲ್ ಬಹುಮಾನ ಪಡೆದಿದ್ದಳು. ಇಂತಿಪ್ಪ ಗುಲ್ ಮ್ಯಾರಥಾನ್ ಓಟಗಾರ್ತಿಯೂ ಹೌದು. ಮುಂಬೈ ಇಂಟರ್‌ನ್ಯಾಷ|ನಲ್ ಮ್ಯಾರಥಾನ್‌ನಲ್ಲಿ ಗುಲ್ ಆರಂಭದಿಂದಲೂ ಪ್ರತಿ ವರ್ಷ ಓಡಿದ್ದಾಳೆ. ಇದು ತನ್ನ ಸ್ಟಾಮಿನಾವನ್ನು ವೃದ್ಧಿಸುತ್ತದೆ. ಹಾಗಾಗಿ ನಾನು ಮ್ಯಾರಥಾನ್ ಪ್ರಿಯೆ ಎನ್ನುತ್ತಾಳೆ ಗುಲ್.

ಜುರ್ಮ್, ಮನೋರಮಾ ಸಿಕ್ಸ್ ಫೀಟ್ ಅಂಡರ್, ಚೈನಾಟೌನ್, ಹೆಲೋ, ಸಮ್ಮರ್ 2007 ಚಿತ್ರಗಳೂ ಆಕೆಗೆ ಖ್ಯಾತಿ ತಂದುಕೊಟ್ಟವು. ಸದ್ಯವಷ್ಟೆ ಬಿಡುಗಡೆಯಾದ ಸಲಿಂಗಕಾಮದ ವಸ್ತುವುಳ್ಳ ಸ್ಟ್ರೈಟ್ ಚಿತ್ರದಲ್ಲೂ ಗುಲ್ ವಿಮರ್ಶಕರಿಂದ ಮೆಚ್ಚುಗೆಗೆ ಪಾತ್ರರಾಗಿದ್ದರು. ಖ್ಯಾತ ಮ್ಯಾಕ್ಸಿಮ್ ಮ್ಯಾಗಜಿನ್‌ನಲ್ಲಿ ಗ್ಲಾಮರಸ್ ಪೋಸ್ ಕೊಟ್ಟ ಬಿಂದಾಸ್ ಬೆಡಗಿ ಈ ಗುಲ್.

ಸದ್ಯಕ್ಕೆ ಗುಲ್ ಕೈಯಲ್ಲಿ ಮೂರು ನಾಲ್ಕು ಚಿತ್ರಗಳಿವೆ. ಅವುಗಳಲ್ಲಿ ಸಾಕಷ್ಟು ಕುತೂಹಲ ಹುಟ್ಟುಹಾಕಿರುವ ರಾಮ್ ಗೋಪಾಲ್ ವರ್ಮಾರ ರಣ್ ಕೂಡಾ ಒಂದು. ಇದು ಅಕ್ಟೋಬರ್‌ನಲ್ಲಿ ಬಿಡುಗಡೆ ಕಾಣಲಿದೆ.
IFM