ವಿಶ್ವದ ಸೆಕ್ಸೀ ಪುರುಷನೆಂಬ ಬಾಲಿವುಡ್ ನಟ ಜಾನ್ ಅಬ್ರಹಾಂ

IFM
ವಿಶ್ವದ ಏಳನೇ ಅತಿ ಸೆಕ್ಸೀ ಪುರುಷ, ಏಷ್ಯಾದ ಅತಿ ಸೆಕ್ಸೀ ಪುರುಷ ಎಂದೇ ಪ್ರಸಿದ್ಧಿ ಪಡೆದ ಜಾನ್ ಅಬ್ರಹಾಂರ ನಿಜವಾದ ಹೆಸರು ಫರ್ಹಾನ್. ತನ್ನ ಕಟ್ಟುಮಸ್ತಿನ ದೇಹ, ಉದ್ದ ಕೂದಲ ಚೆಹರೆಯಿಂದ ಅಪಾರ ಅಭಿಮಾನಿಗಳನ್ನು ಹೊಂದಿರುವ ಜಾನ್ ಈಗ ಯಶಸ್ವಿ ನಟ. ಮೊದಲ ಹಿಟ್ ಚಿತ್ರ ಜಿಸ್ಮ್ ನಂತರ, ಹಲವು ಚಿತ್ರಗಳು ಫ್ಲಾಪ್ ಆದರೂ, ತನ್ನದೇ ವಿಶಿಷ್ಟ ವ್ಯಕ್ತಿತ್ವದಿಂದ ಬಾಲಿವುಡ್‌ನಲ್ಲಿ ವಿಶೇಷ ಸ್ಥಾನ ಪಡೆದವರು ಜಾನ್ ಅಬ್ರಹಾಂ.

1972ರ ಡಿ.17ರಂದು ಮುಂಬೈನಲ್ಲಿ ಜನಿಸಿದ ಜಾನ್ ಅಬ್ರಹಾಂ ಭಾರತದ ಯಶಸ್ವೀ ಪುರುಷ ಮಾಡೆಲ್ ಆಗಿದ್ದರು. ಅಬ್ರಹಾಂ ಅವರ ತಂದೆ ಮಲಯಾಳಿ ಆರ್ಕಿಟೆಕ್ಟ್. ತಾಯಿ ಫಿರೋಜಾ ಇರಾನಿ ಮುಂಬೈಯ ಪಾರ್ಸಿ ಕುಟುಂಬಕ್ಕೆ ಸೇರಿದವರು. ಹೀಗಾಗಿ ಬಾಲ್ಯದಲ್ಲಿ ಪಾರ್ಸಿ ಹೆಸರಾದ ಫರ್ಹಾನ್ ಎಂದು ನಾಮಕರಣ ಮಾಡಲಾಗಿತ್ತು. ಸಿರಿಯಾನ್ ಕ್ರಿಶ್ಚಿಯನ್ ಆಗಿದ್ದ ಅಪ್ಪ ಮಗನಿಗೆ ಪ್ರೀತಿಯಿಂದ ಫರ್ಹಾನ್ ಜತೆಗೆ ಅಬ್ರಹಾಂ ಎಂಬುದನ್ನೂ ಸೇರಿಸಿದರು. ನಂತರ ಬೈಬಲ್ ಮೇಲಿನ ಪ್ರೀತಿಯಿಂದ ಜಾನ್ ಕೂಡಾ ಸೇರಿಕೊಂಡಿತು. ಹೀಗೆ ಬಾಲ್ಯದ ಹೆಸರು ಅಳಿಸಿಹೋಯಿತು. ಜಾನ್‌ಗೆ ಅಲಾನ್ ಎಂಬ ಒಬ್ಬ ತಮ್ಮನೂ ಇದ್ದಾರೆ.

ಜಾನ್ ಬಾಂಬೆ ಸ್ಕಾಟಿಶ್ ಸ್ಕೂಲ್‌ನಲ್ಲಿ ವಿದ್ಯಾಭ್ಯಾಸ ಮುಗಿಸಿ ಜೈ ಹಿಂದ್ ಕಾಲೇಜಿನಲ್ಲಿ ಬಿಎ ಎಕಾನಮಿಕ್ಸ್ ಪದವಿ ಪಡೆದರು. ಕಾಲೇಜಿನ ದಿನಗಳಲ್ಲಿ ಅತ್ಯುತ್ತಮ ಕ್ರೀಡಾಳುವಾಗಿದ್ದ ಜಾನ್ ಕಾಲೇಜಿನ ಫುಟ್‌ಬಾಲ್ ತಂಡದ ನಾಯಕನಾಗಿದ್ದರು. ಮುಂಬೈ ಎಜುಕೇಶನಲ್ ಟ್ರಸ್ಟ್‌ನಿಂದ ನಂತರ ಇವರು ಎಂಎಂಎಸ್ ಡಿಗ್ರಿ ಪಡೆದರು.

ಟೈಮ್ ಅಂಡ್ ಸ್ಪೇಸ್ ಮೀಡಿಯಾ ಎಂಟರ್‌ಟೈನ್‌ಮೆಂಟ್ ಪ್ರೊಮೋಶನ್‌ನಲ್ಲಿ ಔದ್ಯೋಗಿಕ ಜೀವನ ಆರಂಭಿಸಿದ ಜಾನ್ ನಂತರ ಎಂಟರ್‌ಪ್ರೈಸಸ್- ನೆಕ್ಸಸ್‌ನಲ್ಲಿ ಮೀಡಿಯಾ ಪ್ಲಾನರ್ ಆಗಿ ಸೇರಿಕೊಂಡರು. 1999ರಲ್ಲಿ ಸಿಂಗಾಪುರದಲ್ಲಿ ನಡೆದ ಮ್ಯಾನ್‌ಹಂಟ್ ಇಂಟರ್‌ನ್ಯಾಷನಲ್ ಎಂಬ ಫ್ಯಾಷನ್ ಸ್ಪರ್ಧೆಯಲ್ಲಿ 2ನೇ ಸ್ಥಾನ ಪಡೆದರು.ಇದಾದ ನಂತರ ಅವರು ಹಲವು ಜಾಹಿರಾತುಗಳಿಗೆ ರೂಪದರ್ಶಿಯಾದರು. ಜತೆಗೆ ಪಂಕಜ್ ಉದಾಸ್, ಹಂಸ್‌ರಾಜ್, ಹ್ಯಾನ್ಸ್ ಆಂಡ್ ಬಾಬುಲ್ ಸುಪ್ರಿಯೋ ಮೊದಲಾದವರ ಮ್ಯೂಸಿಕ್ ವಿಡಿಯೋಗಳಲ್ಲೂ ಕಾಣಿಸಿಕೊಂಡರು. ನಂತರ ಸ್ವಲ್ಪ ನಟನೆಯನ್ನೂ ಕಲಿತುಕೊಂಡ ಇವರು ಕಿಶೋರ್ ನಮಿತ್ ಕಪೂರ್ ನಟನಾ ತರಬೇತಿ ಕೇಂದ್ರದಲ್ಲಿ ಕೋರ್ಸು ಮಾಡಿಕೊಂಡರು.

IFM
2003ರಲ್ಲಿ ಜಿಸ್ಮ್ ಚಿತ್ರದಲ್ಲಿ ಬಿಪಾಶಾ ಬಸು ನಾಯಕಿಯಾಗಿದ್ದ ಚಿತ್ರದಲ್ಲಿ ನಾಯಕನಾಗಿ ಆಯ್ಕೆಯಾಗಿ ಎಲ್ಲರಿಂದ ಮೆಚ್ಚುಗೆ ಪಡೆದರು. ಚಿತ್ರ ಬಾಕ್ಸ್ ಆಫೀಸಿನಲ್ಲಿ ಹಿಟ್ ಆಗಿ ರೂಪುಗೊಂಡಿತು. ಜಿಸ್ಮ್‌ನ ಮನೋಜ್ಞ ಅಭಿನಯ ಜಾನ್ ಅಬ್ರಹಾಂಗೆ ಹಲವು ಅವಕಾಶಗಳನ್ನು ಒದಗಿಸಿತು. ಅದೇ ವರ್ಷ ಹೊರಬಂದ ಇನ್ನೊಂದು ಚಿತ್ರ ಸಾಯಾ ಫ್ಲಾಪ್ ಆಯಿತು. 2004ರಲ್ಲಿ ಪೂಜಾ ಭಟ್ ಅವರ ಪಾಪ್, ಅಹ್ಮದ್ ಖಾನ್ ಅವರ ಲಕೀರ್ ಚಿತ್ರಗಳೂ ಫ್ಲಾಪ್ ಆದುವು. ಆದರೆ, ಜಿಸ್ಮ್ ಚಿತ್ರದ ಶೂಟಿಂಗ್ ಸಂದರ್ಭದಲ್ಲೇ ಸಹನಟಿಯಾಗಿದ್ದ ಬಿಪಾಶಾ ಜತೆಗೆ ಜಾನ್ ಅಫೇರ್ ಶುರುವಾಯಿತು. ಈಗಲೂ ಜಾನ್- ಬಿಪಾಶಾ ಜೋಡಿ ಜನಪ್ರಿಯ ಹಾಟ್ ಜೋಡಿ, ಸೂಪರ್ ಕಪಲ್ ಎಂದೇ ಜನಪ್ರಿಯ.

2004ರಲ್ಲಿ ಧೂಮ್‌, 2006ರ ಝಿಂದಾ ಚಿತ್ರಗಳಲ್ಲಿ ನೆಗೆಟಿವ್ ರೋಲ್‌ನಲ್ಲಿ ಕಾಣಿಸಿಕೊಂಡ ಜಾನ್‍‌ಗೆ ಇವು ಹೆಚ್ಚು ಹೆಸರು, ಪ್ರಸಿದ್ಧಿ ಅವಕಾಶವನ್ನು ತಂದುಕೊಟ್ಟವು. 2005ರಲ್ಲಿ ಸೂಪರ್‌ನ್ಯಾಚುರಲ್ ಥ್ರಿಲ್ಲರ್ ಚಿತ್ರ ಕಾಲ್, ಕಾಮಿಡಿ ಚಿತ್ರ ಗರಂಮಸಾಲಾ ಎರಡೂ ಹಿಟ್ ಆದುವು. ಬ್ರಿಟೀಶ್ ಇಂಡಿಯಾದಲ್ಲಿನ ದುರಂತ ವಿಧವೆಯರ ಕಥಾನಕವುಳ್ಳ ದೀಪಾ ಮೆಹ್ತಾರ ಚಿತ್ರ ವಾಟರ್‌ಗೆ ಅಂತಾರಾಷ್ಟ್ರೀಯ ವಲಯದಲ್ಲಿ ಉತ್ತಮ ವಿಮರ್ಶೆ ಕೇಳಿಬಂತು. ಈ ಚಿತ್ರ ವಿದೇಶಗಳಲ್ಲಿ ಬಲು ಜನಪ್ರಿಯತೆ ಪಡೆದುಕೊಂಡಿತು. 2006ರಲ್ಲಿ ಜಾನ್ ಅಭಿನಯದ ಝಿಂದಾ, ಟ್ಯೋಕ್ಸಿ ನಂ 9211, ಬಾಬುಲ್, ಕಾಬೂಲ್ ಎಕ್ಸ್‌ಪ್ರೆಸ್ ಬಿಡುಗಡೆಯಾದವು. ಇವುಗಳಲ್ಲಿ ಕಾಬೂಲ್ ಎಕ್ಸ್‌ಪ್ರಸ್ ಹಾಗೂ ಟ್ಯಾಕ್ಸಿ ನಂ 9211 ಮಾತ್ರ ಸಮಾಧಾನಕರ ಯಶಸ್ಸು ತಂದುಕೊಟ್ಟವು. ನಿಖಿಲ್ ಅಡ್ವಾಣಿ ಅವರ ಬಹುನಾಯಕ ತಾರಾಗಣವಿರುವ ಸಲಾಂ ಎ ಇಶ್ಕ್ ಚಿತ್ರ ಭಾರತದಲ್ಲಿ ಫ್ಲಾಪ್ ಆದರೂ, ವಿದೇಶಗಳಲ್ಲಿ ಹಿಟ್ ಆಯಿತು. ನಂತರ ಬಿಡುಗಡೆಯಾದ ಕ್ರೀಡಾ ಚಿತ್ರ ಧನ್ ಧನಾ ಧನ್ ಗೋಲ್ ಹಾಗೂ ನೋ ಸ್ಮೋಕಿಂಗ್ ಚಿತ್ರ ಯಶಸ್ಸು ಕಾಣಲಿಲ್ಲ. ಆದರೆ 2008ರಲ್ಲಿ ಬಿಡುಗಡೆಯಾದ ದೋಸ್ತಾನಾ ಚಿತ್ರ ಭಾರೀ ಹಿಟ್ ಆಗುವುದರೊಂದಿಗೆ, ಬಾಲಿವುಡ್ಡಿನಲ್ಲಿ ಆ ವರ್ಷ ಅತಿ ಹೆಚ್ಚು ಗಳಿಸಿದ ಚಿತ್ರವಾಗಿ ಹೊರಹೊಮ್ಮಿತು.

ಹಲವು ಬಾರಿ ನೆಗೆಟಿವ್ ರೋಲ್, ನಾಯಕ ನಟ, ಸಹನಟ ಪಾತ್ರಕ್ಕೆ ಜಾನ್ ಹೆಸರು ಫಿಲ್‌ಫೇರ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿತ್ತು. 2006ರಲ್ಲಿ ಜಾನ್‌ನ ಬಾಲಿವುಡ್ ಸಾಧನೆಗೆ ರಾಜೀವ್‌ಗಾಂಧಿ ಪ್ರಶಸ್ತಿಯೂ ಒದಗಿಬಂತು. 2007ರಲ್ಲಿ ಗೈಂಡ್ ಇಂಟರ್‌ನ್ಯಾಶನಲ್ ಅವಾರ್ಡನ್ನೂ ತನ್ನ ಬಾಲಿವುಡ್ ಸಾಧಗೆ ಜಾನ್ ಅಬ್ರಹಾಂ ಬಾಚಿಕೊಂಡರು.

ಜಾನ್ ಜಾಹಿರಾತಿನಲ್ಲಿ ಈಗಲೂ ಜನಪ್ರಿಯ ನಟ. ಕ್ಯಾಸ್ಟ್ರಾಲ್ ಪವರ್ 1, ಯಮಹಾ ಮಾರ್ಕ್, ರ‌್ಯಾಂಗ್ಲರ್, ಕ್ಲಿನಿಕ್ ಆಲ್ ಕ್ಲಿಯರ್, ಫಾಸ್ಟ್‌ಟ್ಯಾಕ್ ಕನ್ನಡಕ, ಗಾರ್ನಿಯರ್ ಮೆನ್, ಸ್ಯಾಂಸಂಗ್ ಸೆಲ್ ಫೋನ್‌ಗಳಿಗೆ ಜಾನ್ ರೂಪದರ್ಶಿ. ಡಯಟ್ ಪೆಪ್ಸಿ ಜಾಹಿರಾತಿಗೆ ಮೊದಲ ಭಾರತೀಯ ರೂಪದರ್ಶಿಯಾಗಿ ಆಯ್ಕೆಯಾದ ಶ್ರೇಯಸ್ಸೂ ಕೂಡಾ ಜಾನ್‌ಗೆ ಸಲ್ಲುತ್ತದೆ.

ಅಂದಹಾಗೆ, ವಿಶ್ವದ 25 ಸೆಕ್ಸೀ ಪುರುಷರ ಪಟ್ಟಿಯಲ್ಲಿ ಸ್ಥಾನ ಪಡೆದ ಮೊದಲ ಭಾರತೀಯ ಕೂಡಾ ಜಾನ್ ಅಬ್ರಹಾಂ. ವಿಶ್ವದ ಅತಿ ಸೆಕ್ಸೀ ಪುರುಷರಲ್ಲಿ ಏಳನೇ ಸ್ಥಾನದಲ್ಲಿರುವ ಜಾನ್, ಏಷ್ಯಾದ ನಂ.1 ಅತಿ ಸೆಕ್ಸೀ ಪುರುಷ ಎಂಬ ಕೀರ್ತಿಗೂ ಭಾಜನರಾಗಿದ್ದಾರೆ. ಪ್ರಾಣಿಗಳನ್ನು ಅತೀವವಾಗಿ ಪ್ರೀತಿಸುವ ಜಾನ್, ಸದ್ಯ ಡೇವಿಡ್ ಧವನ್ ಅವರ ಹುಕ್ ಯಾ ಕ್ರುಕ್ ಚಿತ್ರದ ಶೂಟಿಂಗ್‌ನಲ್ಲಿ ಕಾಲಿಗೆ ಏಟಾಗಿ ಶೂಟಿಂಗ್‌ಗೆ ರಜೆ ಹಾಕಿದ್ದಾರೆ.
IFM