ಅಕ್ಷಯ್ ಜತೆ ಅಫೇರ್ ಇಲ್ಲ - ಕತ್ರಿನಾ

ಮಂಗಳವಾರ, 10 ಮಾರ್ಚ್ 2009 (14:48 IST)
IFM
ಸರ್ಕಾರ್, ನಮಸ್ತೆ ಲಂಡನ್, ವೆಲ್‌ಕಮ್, ಪಾರ್ಟರ್ ಮತ್ತು ರೇಸ್ ಮುಂತಾದ ಹಿಟ್ ಚಿತ್ರಗಳ ಸರಣಿಯಿಂದ ಬಾಲಿವುಡ್ ಕ್ವೀನ್ ಎನಿಸಿರುವ ಮೋಹಕ ನಟಿ ಕತ್ರಿನಾ ಕೈಫ್‌ರೊಡನೆ ಅವರ ಚಿತ್ರಗಳ ಹಾಗೂ ಬಾಲ್ಯ ನೆನಪಿನ ತುಣುಕಗಳ ಜೊತೆಗೆ ಸಲ್ಮಾನ್ ಮತ್ತು ಅಕ್ಷಯ್ ಜೊತೆಗಿನ ತಮ್ಮ ಸಂಬಂಧಗಳ ಬಗ್ಗೆ ಮನಬಿಚ್ಚಿ ಇಲ್ಲಿ ಮಾತನಾಡಿದ್ದಾರೆ.

ನಿರಂತರ ಹಿಟ್ ಚಿತ್ರಗಳ ಹೊರತಾಗಿಯೂ ನೀವು ಪ್ರಮುಖ ಪಾತ್ರವೊಂದನ್ನು ನಿಭಾಯಿಸಿಲ್ಲ ಮತ್ತು ನೀವು ಅಭಿನೇತ್ರಿಯಾಗಿ ಗುರುತಿಸಲ್ಪಡುವ ಬದಲಾಗಿ ಕೇವಲ ನಾಯಕಿಯಾಗಿ ಗುರುತಿಸಲ್ಪಟ್ಟಿದ್ದೀರಿ ಎಂಬ ಬಗ್ಗೆ ನಿಮ್ಮ ಅಭಿಪ್ರಾಯವೇನು?

ಇದು ಬಹುಶಃ ನನ್ನ ಚಿತ್ರಗಳ ಆಯ್ಕೆಯ ಕಾರಣದಿಂದ ಆಗಿರಬಹುದು, ನನ್ನ ಚಿತ್ರಗಳು ಪ್ರಶಸ್ತಿ ಜಯಿಸುವ ರೀತಿಯ ಚಿತ್ರಗಳಲ್ಲ ಬದಲಾಗಿ ಅವುಗಳು ಪಕ್ಕಾ ಕಮರ್ಷಿಯಲ್ ಚಿತ್ರಗಳಾಗಿರುವುದು ಇದಕ್ಕೆ ಕಾರಣವಾಗಿರಬಹುದು. ಆದರೆ ಇಂತಹ ಚಿತ್ರಗಳಿಂದ ನಾನು ಖುಷಿಯಾಗಿದ್ದೇನೆ. ನಾನಿನ್ನು ನನ್ನ ಕೆರಿಯರ್‌ನ ಆರಂಭಿಕ ಹಂತದಲ್ಲಿದ್ದೇನೆ ಮತ್ತು ಇದುವರೆಗೆ ನಾನು ನನ್ನ ನಿರೀಕ್ಷೆಗೆ ಮೀರಿದ್ದನ್ನು ಸಾಧಿಸಿದ್ದೇನೆ. ನಿಮಗೆ ಹಾಗೆ ಅನಿಸುವುದಿಲ್ಲವೇ?, ಇದಲ್ಲದೇ ನಮಸ್ತೇ ಲಂಡನ್ ಚಿತ್ರವನ್ನು ಜನ ನಾಯಕಿ ಪ್ರಧಾನ ಚಿತ್ರವಾಗಿ ಗುರುತಿಸಿದ್ದಾರೆ.

ಅಂದರೆ, ನಿಮ್ಮ ಸಾಧನೆಯಿಂದ ನೀವು ತೃಪ್ತರಾಗಿದ್ದೀರಿ?

ನಿಮಗೆ ಗೊತ್ತೇ... ನನ್ನ ಮುಂದೆ ಇದ್ದ ಸಮಸ್ಯೆಗಳನ್ನು ನಿವಾರಿಸಿಕೊಂಡು ನಾನು ಬಾಲಿವುಡ್‌ನಲ್ಲಿ ತಳವೂರಿರುವುದೇ ನನ್ನ ದೊಡ್ಡ ಸಾಧನೆ. ನಾನು ಚಿತ್ರರಂಗಕ್ಕೆ ಹೊರಗಿನವಳು ಮತ್ತು ನನಗೆ ನಟನಾ ಹಿನ್ನೆಲೆ ಇಲ್ಲ, ಇದಲ್ಲದೆ ನನಗೆ ಸರಿಯಾದ ಹಿಂದಿಯಾಗಲಿ, ಡ್ಯಾನ್ಸ್ ಆಗಲಿ ಬರುವುದಿಲ್ಲ. ಹಿಂದಿ ಚಿತ್ರರಂಗದಲ್ಲಿ ಅತ್ಯಂತ ಪ್ರತಿಭಾನ್ವಿತ ಜನರಿಗೂ ಉತ್ತಮ ಅವಕಾಶಗಳು ಲಭಿಸುತ್ತಿಲ್ಲ, ಅಂತಹುದರಲ್ಲಿ ನನಗೆ ಒಲಿದಿರುವ ಅವಕಾಶಗಳನ್ನು ಕಂಡು ನಾನು ಅದೃಷ್ಟವಂತೆ ಅನಿಸುತ್ತಿದೆ.

ನಿಮ್ಮ ಬಾಲ್ಯದ ದಿನಗಳು ಹೇಗಿದ್ದವು?

ನನಗೆ 6 ಜನ ಸಹೋದರಿಯರು ಮತ್ತು ಒಬ್ಬ ಸಹೋದರ ಇರುವ ಬಗ್ಗೆ ಪ್ರಸ್ತುತ ವಿಶ್ವಕ್ಕೇ ತಿಳಿದಿದೆ. ಜನರಿಗೆ ತಿಳಿದಿರದಿರುವುದು ಎಂದರೆ ನಾನು ಭಾರತದಲ್ಲಿರದಿದ್ದರೂ ನಮ್ಮ ಕುಟುಂಬ ಇಲ್ಲಿನ ಅವಿಭಕ್ತ ಕುಟುಂಬ ಪದ್ದತಿ ಮತ್ತು ಸಂಪ್ರದಾಯಗಳನ್ನು ಪಾಲಿಸಿತ್ತು. ನಾನು ಹುಟ್ಟಿದ್ದು ಹಾಂಗ್‌ಕಾಂಗ್‌ನಲ್ಲಿ, ನಂತರ ಹಾವಯ್ಯಿ ಮತ್ತು 14ರ ವಯಸ್ಸಿನಲ್ಲಿ ಲಂಡನ್‌ ಸೇರಿದೆ.

ನನ್ನ ತಾಯಿ ಕ್ಯಾಕಸಿಯಾ ಪಂಗಡದವರು ಮತ್ತು ನನ್ನ ತಂದೆ ಕಾಶ್ಮೀರಿ. 14ನೇ ವಯಸ್ಸಿನಲ್ಲಿಯೇ ನಾನು ಲಂಡನ್‌ ಆಭರಣ ಮಳಿಗೆಗೆ ರೂಪದರ್ಶಿಯಾಗಿ ಮಾಡೆಲಿಂಗ್ ಆರಂಭಿಸಿದ್ದರಿಂದ ಒಂದು ಕಡೆ ಓದು ಇನ್ನೊಂದು ಕಡೆ ದುಡಿಮೆ ನನ್ನದಾಗಿತ್ತು, ಆದ್ದರಿಂದ ಬಾಲ್ಯದ ಬಗ್ಗೆ ಹೆಚ್ಚಿನ ಅದ್ಭುತ ನೆನಪುಗಳೇನು ಇಲ್ಲ.

ನೀವು ಸಲ್ಮಾನ್ ಜೊತೆ ಚಿತ್ರ ಮಾಡದಿರಲು ತೀರ್ಮಾನಿಸಿರುವ ವದಂತಿಗಳಲ್ಲಿ ಸತ್ಯಾಂಶವೆಷ್ಟು?

ನಾನು ಸಲ್ಮಾನ್ ಜೊತೆಗಿನ ವೀರ್ ಚಿತ್ರವನ್ನು ತಿರಸ್ಕರಿಸಿದ್ದು ಈ ಗಾಸಿಪ್‌ಗೆ ಮೂಲ ಎಂಬುದು ನನಗೆ ತಿಳಿದಿದೆ. ಆದರೆ ನಾನು ರಾಜ್‌ಕುಮಾರ್ ಸಂತೋಷಿಯವರ ಮುಂದಿನ ಚಿತ್ರ ಮತ್ತು ಯಶ್ ರಾಜ್‌ರ ಚಿತ್ರವನ್ನು ಈ ಮೊದಲೇ ಒಪ್ಪಿಕೊಂಡಿರುವುದು ವೀರ್ ಚಿತ್ರವನ್ನು ನಿರಾಕರಿಸಲು ಕಾರಣ.


ಎರಡನೇ ವದಂತಿಯ ಕಡೆಗೆ ಬರೋಣ- ಅಕ್ಷಯ್ ಕುಮಾರ್‌ರೊಂದಿಗಿನ ನಿಮ್ಮ ಸಂಬಂಧ....


ಇದು ಸಂದರ್ಶನಕ್ಕಿಂತ ಹೆಚ್ಚು ವದಂತಿ ಸ್ಪಷ್ಟನೆ ಕಾರ್ಯಕ್ರಮವಾಗುತ್ತಿದೆ, ಪರವಾಗಿಲ್ಲ. ಈ ವದಂತಿಯ ಬಗ್ಗೆ ನಾನೇನು ಮಾಡುವಂತಿಲ್ಲ, ಅಸಂಬದ್ಧ ವಿಷಯವೊಂದು ಜನರ ತಲೆಯನ್ನು ಹೊಕ್ಕು ಬಿಟ್ಟರೆ ಅದು ಅಲ್ಲೇ ಉಳಿದು ಬಿಡುತ್ತದೆ. ನನ್ನ ಮತ್ತು ಅಕ್ಷಯ್ ನಡುವೆ ಸ್ನೇಹಕ್ಕಿಂತ ಹೆಚ್ಚಿನದೇನಾದರೂ ಇರುತ್ತಿದ್ದರೆ ಅಕ್ಷಯ್ ಪತ್ನಿ ಟ್ವಿಂಕಲ್ ಮೂರು ವರ್ಷಗಳಿಂದ ನಮ್ಮನ್ನು ಜೊತೆಯಾಗಿ ದುಡಿಯಲು ಖಂಡಿತ ಬಿಡುತ್ತಿರಲಿಲ್ಲ.

ನಾವು ಒಳ್ಳೆಯ ಸ್ನೇಹಿತರು, ಒಮ್ಮೊಮ್ಮೆ ಅಕ್ಷಯ್ ನನ್ನ ಮೇಲೆ ಕೋಪಗೊಳ್ಳುತ್ತಾರೆ ಮತ್ತು ಬಯ್ಯುತ್ತಾರೆ, ನಾನು ಕೆಲವೊಮ್ಮೆ ಅವರಿಗೆ ತೊಂದರೆ ನೀಡುತ್ತೇನೆ, ಆದರೆ ಪರಸ್ಪರರ ಮೇಲೆ ಬಹಳಷ್ಟು ಗೌರವವಿದೆ ಮತ್ತು ಇದು ತೆರೆಯ ಮೇಲೆ ನಮ್ಮ ಜೋಡಿ ಮಿಂಚಲು ಕಾರಣವಾಗಿದೆ.

ಸಲ್ಮಾನ್ ನಿಮ್ಮಲ್ಲಿ ಅಕ್ಷಯ್ ಜೊತೆ ನಟಿಸುವುದನ್ನು ನಿಲ್ಲಿಸಬೇಕೆಂದು ಹೇಳಿದ್ದಾರೆ ಎಂದು ಕೇಳಿಬರುತ್ತಿದೆ?

ಇದಕ್ಕೆ ವಿರುದ್ಧವಾಗಿ ಪ್ರತಿಸಲವು ಅಕ್ಷಯ್ ಜೊತೆ ಚಿತ್ರದ ಅಫರ್ ಬಂದಾಗ ಅದನ್ನು ಒಪ್ಪಿಕೊಳ್ಳುವಂತೆ ಸಲ್ಮಾನ್ ನನ್ನನ್ನು ಹುರಿದುಂಬಿಸುತ್ತಾರೆ. ಸಲ್ಮಾನ್‌ಗೆ ಸಿಂಗ್ ಈಸ್ ಕಿಂಗ್ ಖಂಡಿತ ಹಿಟ್ ಆಗುತ್ತದೆ ಎಂಬ ನಂಬಿಕೆ ಇದ್ದುದರಿಂದ ಚಿತ್ರಕ್ಕೆ ಸಹಿ ಹಾಕುವಂತೆ ನನಗೆ ಸಲಹೆ ನೀಡಿದ್ದರು.

ಆದರೆ, ಐಪಿಎಲ್ ಪಂದ್ಯಗಳ ಸಂದರ್ಭದಲ್ಲಿ ನೀವು ಅಕ್ಷಯ್ ಜೊತೆ ತೆಗೆಸಿಕೊಂಡಿದ್ದ ಫೋಟೊವೊಂದು ಮುಂಬಯಿ ಪತ್ರಿಕೆಯೊಂದರಲ್ಲಿ ಪ್ರಕಟವಾದ ಬಗ್ಗೆ, ಯುವರಾಜ್ ಚಿತ್ರದ ಸೆಟ್‌ನಲ್ಲಿ ಸಲ್ಮಾನ್ ನಿಮ್ಮ ಕೆನ್ನೆಗೆ ಹೊಡೆದಿದ್ದರು ಎಂದು ಸುದ್ದಿ ಮಾಧ್ಯಮವೊಂದು ವರದಿ ಮಾಡಿತ್ತು?

ನಾನ್ ಸೆನ್ಸ್!, ನನ್ನ ಮೇಲೆ ಕೈ ಎತ್ತುವಷ್ಟು ಧೈರ್ಯವನ್ನು ಯಾರೂ ಮಾಡುವುದಿಲ್ಲ. ನಾನು ಐಪಿಎಲ್ ಫೋಟೊ ವಿವಾದದ ಬಗ್ಗೆ ಏನನ್ನು ಹೇಳಬಯಸುವುದಿಲ್ಲ ಆದರೆ ನನ್ನ ಮತ್ತು ಸಲ್ಮಾನ್ ನಡುವೆ ಅಂತಹ ಸಮೀಕರಣವಿಲ್ಲ.

ನೀವು ಸಮೀಕರಣದ ಬಗ್ಗೆ ಹೇಳುತ್ತಿದ್ದೀರಿ ಆದರೆ ಸಲ್ಮಾನ್‌ರೊಂದಿಗಿನ ನಿಮ್ಮ ಸಂಬಂಧ ಮುರಿದು ಬೀಳುವ ಅಂಚಿನಲ್ಲಿದೆ ಎಂದು ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿದೆ?

ಇದು ತೀರಾ ವೈಯಕ್ತಿಕ ಪ್ರಶ್ನೆ.

ಕೃಪೆ:ಶ್ರೇಯಾ ಬಸು,ಟ್ರಾನ್ಸ್‌‌ ವರ್ಲ್ಡ್ ಫೀಚರ್ಸ

ವೆಬ್ದುನಿಯಾವನ್ನು ಓದಿ