ಐಶ್ವರ್ಯ ನನ್ನ ಪಾಲಿಗೆ ವಿಶೇಷ: ಸಂಜಯ್ ಲೀಲಾ ಬನ್ಸಾಲಿ

IFM
ಸಾವರಿಯಾ ನಂತರ ಸಂಜಯ್ ಲೀಲಾ ಬನ್ಸಾಲಿ ಮತ್ತೆ ನಿರ್ದೇಶನಕ್ಕಿಳಿಯುತ್ತಿದ್ದಾರೆ. ತಮ್ಮ ಮೆಚ್ಚಿನ ನಟಿ ಐಶ್ವರ್ಯ ರೈ ಜೊತೆ ಹೃತಿಕ್ ರೋಶನ್‌ರನ್ನು ಅವರು ತಮ್ಮ ಮುಂದಿನ ಚಿತ್ರಕ್ಕೆ ಆರಿಸಿದ್ದಾರೆ.

ಪಾಕಿಸ್ತಾನಿ ನಟ ಇಮ್ರಾನ್ ಅಬ್ಬಾಸ್‌ರನ್ನು ನಿಮ್ಮ ಚಿತ್ರ 'ಹೇರಾ ಮಂಡಿ'ಗೆ ಆರಿಸಿದ್ದೀರಿ ಎನ್ನಲಾಗುತ್ತಿದೆ?
ಹೇರಾ ಮಂಡಿ ಚಿತ್ರಕ್ಕಾಗಿ ನಾನು ಯಾರನ್ನೂ ಆರಿಸಿಲ್ಲ. ಸಧ್ಯಕ್ಕೆ ನಾನು ಹೇರಾ ಮಂಡಿ ಚಿತ್ರ ಮಾಡುತ್ತಿಲ್ಲ. ಚಿತ್ರ ತಯಾರಿಸುವಾಗ ಕಲಾವಿದರನ್ನು ಆರಿಸುವ ಬಗ್ಗೆ ಚಿಂತಿಸುತ್ತೇನೆ.

ಪ್ರಸ್ತುತ ನೀವು ಯಾವ ಚಿತ್ರ ತಯಾರಿಸುತ್ತಿದ್ದೀರಿ ?
ನಾನು ಐಶ್ವರ್ಯ ಮತ್ತು ಹೃತಿಕ್‌ರೊಂದಿಗೆ ಒಂದು ಚಿತ್ರ ತಯಾರಿಸುತ್ತಿದ್ದೇನೆ. ಈ ಚಿತ್ರದ ಬಗ್ಗೆ ನಾನು ಬಹಳ ಉತ್ಸುಕನಾಗಿದ್ದೇನೆ.

ಚಿತ್ರದಲ್ಲಿ ಯಾವುದೇ ಹೊಸಮುಖ ಕಾಣಿಸಿಕೊಳ್ಳುವುದಿಲ್ಲವೇ?
ಇಲ್ಲ. ಈ ಚಿತ್ರಕ್ಕೆ ಅನುಭವಿ ಕಲಾವಿದರ ಅವಶ್ಯಕತೆಯಿದೆ. ಇಸ್ಮಾಯಿಲ್ ದರ್‌ಬಾರ್, ಶ್ರೇಯ ಘೋಷಾಲ್, ರಣ್‌ಬೀರ್ ಕಪೂರ್ ಮತ್ತು ಸೋನಮ್‌ರಂತಹ ಹೊಸಬರೊಂದಿಗೆ ನಾನು ಈಗಾಗಲೇ ದುಡಿದಿದ್ದೇನೆ.

ಸಾವರಿಯಾ ಚಿತ್ರದ ಸೋಲಿನ ನಂತರವೂ ನೀವು ನಿಮ್ಮ ಮನಸ್ಸಿನಂತೆ ಚಿತ್ರ ತಯಾರಿಸುವಿರಾ?
ಈ ಸಂದರ್ಭ ಪ್ರಯೋಗದ ದೃಷ್ಟಿಯಲ್ಲಿ ಅತ್ಯಂತ ಉತ್ತಮವಾಗಿದೆ. ನಾನು ಯಾವಾಗಲೂ ಯಾವುದೇ ಭಯವಿಲ್ಲದೆ ಚಿತ್ರ ತಯಾರಿಸಿದವನು. ನನ್ನ ಪ್ರಥಮ ಚಿತ್ರ 'ಖಾಮೋಶಿ: ದ ಮ್ಯೂಸಿಕಲ್' ಅಸಫಲವೆನಿಸಿದ್ದರೂ, ಅದು ನನ್ನ ಶ್ರೇಷ್ಠ ಚಿತ್ರವೆಂದು ಜನ ಹೇಳುತ್ತಾರೆ.

ಸಾವರಿಯಾ ಚಿತ್ರದ ಬಗ್ಗೆಯೂ ಇದೇ ಹೆಮ್ಮೆ ಇದೆಯೇ ?
ಖಂಡಿತ, ದೇವದಾಸ್ ಅಥವಾ ಹಮ್ ದಿಲ್ ದೇ ಚುಕೆ ಸನಮ್‌ನಂತಹ ಚಿತ್ರಗಳನ್ನು ಮತ್ತೆ ತಯಾರಿಸಬಹುದು, ಆದರೆ ಸಾವರಿಯಾ ಚಿತ್ರವನ್ನು ಮತ್ತೆ ತಯಾರಿಸುವುದು ಸಾಧ್ಯವಿಲ್ಲ. ನಾನು ಸ್ಪೇಜ್ ಪ್ಲೆಯನ್ನು ಚಿತ್ರದಲ್ಲಿ ತೋರಿಸುವ ಪ್ರಯತ್ನ ಮಾಡಿದ್ದೆ ಆದರೆ ವೀಕ್ಷಕರು ತಮ್ಮ ನಿರ್ಧಾರ ಪ್ರಕಟಿಸಿದರು. ನನಗನಿಸುವಂತೆ ಅವರು ಮೊದಲೇ ಸಾವರಿಯಾವನ್ನು ಮೆಚ್ಚಲೇಬಾರದು ಎಂದು ನಿರ್ಧರಿಸಿಕೊಂಡುಬಿಟ್ಟಿದ್ದರು.

ರಣ್‌ಬೀರ್ ಕಪೂರ್ ನಿಮ್ಮೊಂದಿಗೆ ಚಿತ್ರ ಮಾಡಲು ಇಷ್ಟಪಡುವುದಿಲ್ಲ ಎನ್ನಲಾಗುತ್ತಿದೆ?
ಇವೆಲ್ಲಾ ಕೇವಲ ವದಂತಿ. ನಿಜವೇನೆಂದರೆ ರಣ್‌ಬೀರ್ ಮತ್ತು ಸೋನಮ್‌ರ ಅಗತ್ಯ ನನಗೆ ಯಾವ ಸಂದರ್ಭದಲ್ಲಿ ಇದ್ದರೂ ಅವರು ನನ್ನ ಜೊತೆಗಿರುತ್ತಾರೆ. ಸಧ್ಯಕ್ಕೆ ನಾನು ಐಶ್ ಮತ್ತು ಹೃತಿಕ್‌ರೊಂದಿಗೆ ಚಿತ್ರ ಮಾಡುತ್ತಿದ್ದೇನೆ.

ಹೃತಿಕ್‌ರನ್ನು ಆರಿಸಿದ್ದಕ್ಕೆ ಕಾರಣ?
ಹೃತಿಕ್ ಮತ್ತು ನಾನು ಬಹಳ ಸಮಯದಿಂದ ಜೊತೆಯಾಗಿ ದುಡಿಯಲು ಬಯಸಿದ್ದೆವು. ಒಬ್ಬ ನಟನಾಗಿ ಅವರು ಯಾವಾಗಲೂ ನನ್ನ ಮೇಲೆ ಪ್ರಭಾವ ಬೀರಿದ್ದರು. ನಾನು ಸರಿಯಾದ ಸಂದರ್ಭಕ್ಕಾಗಿ ಕಾಯುತ್ತಿದ್ದೆ.

ಐಶ್ವರ್ಯರೊಂದಿಗೆ ದೇವದಾಸ್ ಮತ್ತು ಹಮ್ ದಿಲ್ ದೇ ಚುಕೇ ಸನಮ್ ಈ ಎರಡು ಹಿಟ್ ಚಿತ್ರಗಳನ್ನು ನೀಡಿದ್ದೀರಿ. ಈ ಬಾರಿ ಹ್ಯಾಟ್ರಿಕ್ ಪೂರ್ಣವಾಗುವುದೇ?
ಐಶ್ವರ್ಯಾ ಯಾವಾಗಲೂ ನನ್ನ ಪಾಲಿಗೆ ವಿಶೇಷ. ನನ್ನ ಹೊಸ ಚಿತ್ರಕ್ಕೆ ಅವರು ಚೆನ್ನಾಗಿ ಹೊಂದಿಕೆಯಾಗುತ್ತಾರೆ. ಚಿತ್ರಕಥೆ ಓದಿದಾಗ ಅವರು ಬಹಳ ಪ್ರಭಾವಿತರಾದರು. ಅವರು ನನ್ನ ಎಷ್ಟು ಒಳ್ಳೆಯ ಮಿತ್ರರೆಂದರೆ ನಾನು ಅವರಿಗೆ ಚಿತ್ರಕಥೆ ಹೇಳದೇ ಇರುತ್ತಿದ್ದರೂ ಅವರು ನನ್ನೊಂದಿಗೆ ದುಡಿಯಲು ಸಿದ್ಧರಾಗುತ್ತಿದ್ದುದಾಗಿ ನುಡಿದರು. ಆದರೆ ತಾನು ಏನನ್ನು ಮಾಡಲು ಹೋಗುತ್ತಿದ್ದೇನೆ ಎಂಬುದು ಕಲಾವಿದರಿಗೆ ತಿಳಿದಿರಬೇಕು.

2008ರ ವರ್ಷ ನಿಮ್ಮ ಪಾಲಿಗೆ ಉತ್ತಮವಾಗಿತ್ತು. ಮೊದಲ ಬಾರಿಗೆ ಭಾರತೀಯ ನಿರ್ದೇಶಕರೊಬ್ಬರನ್ನು ಒಪೆರಾವನ್ನು ನಿರ್ದೇಶಿಸಲು ಪ್ಯಾರೀಸ್‌ಗೆ ಕರೆಸಲಾಯಿತು. ಈ ಬಗ್ಗೆ... ?
ಹೌದು, ಇದು ನನ್ನ ಪಾಲಿಗೆ ಅತ್ಯುತ್ತಮ ಸಂದರ್ಭ. ಒಪೆರಾ ನಿರ್ದೇಶಿಸುವುದರಲ್ಲಿ ಆನಂದ ಸಿಕ್ಕಿತು. ನನಗೆ ಬಹಳಷ್ಟು ಗೌರವ ಮತ್ತು ಅನುಭವ ದೊರೆಯಿತು. ನಾನು ನಿರ್ಮಾಪಕನಾಗಿ ಕೆಲವು ಚಿತ್ರ ತಯಾರಿಸಲಿದ್ದೇನೆ ಮತ್ತು 2009ರಲ್ಲಿ ನಾನು ಬಹಳ ಪರಿಶ್ರಮ ಪಡಬೇಕಿದೆ.

ವೆಬ್ದುನಿಯಾವನ್ನು ಓದಿ