ನಟನಾ ವೈಭವದ ಅಕ್ಷಯ್ ಖನ್ನಾ

ಬುಧವಾರ, 20 ಮೇ 2009 (21:32 IST)
ಬಾಲಿವುಡ್ ನಟ ವಿನೋದ್ ಖನ್ನಾ ಹಾಗೂ ಗಿತಾಂಜಲಿಯ ಕಿರಿಯ ಮಗನಾದ ಅಕ್ಷಯ್ ಖನ್ನಾ ಮುಂಬೈಯಲ್ಲಿ 1975ನೇ ಇಸವಿಯ ಮಾರ್ಚ್ 28ರಂದು ಜನಿಸಿದರು. ನಟ ರಾಹುಲ್ ಖನ್ನಾರ ಸಹೋದರನಾದ ಅಕ್ಷಯ್ ಖನ್ನಾ ಬಾಲಿವುಡ್‌ನ ಹಲವು ಹಿಟ್ ಸಿನೆಮಾಗಳಲ್ಲಿ ಅಭಿನಯಿಸಿದ್ದಾನೆ.

ತನ್ನ 22ನೇ ವಯಸ್ಸಿನಲ್ಲಿ ಚಿತ್ರರಂಗಕ್ಕೆ ಕಾಲಿಟ್ಟ ಅಕ್ಷಯ್ ಖನ್ನಾರ ಚೊಚ್ಚಲ ಚಿತ್ರ 1997ನೇ ಇಸವಿಯಲ್ಲಿ ತೆರೆಕಂಡ 'ಹಿಮಾಲಯ ಪುತ್ರ'. ಚಿತ್ರ ನಿರೀಕ್ಷಿತ ಮಟ್ಟದಲ್ಲಿ ಯಶಸ್ಸು ಕಾಣದೇ ಇದ್ದರೂ ಅದೇ ವರ್ಷ ಪ್ರದರ್ಶನಕ್ಕಿಳಿದ ನಿರ್ದೇಶಕ ಜೆ.ಪಿ ದತ್‌ರ 1971ರ ಇಂಡೋ-ಪಾಕ್ ಯುದ್ಧ ಆಧರಿತ ಚಿತ್ರ 'ಬಾರ್ಡರ್' ಭರ್ಜರಿ ಯಶಸ್ಸನ್ನು ಗಳಿಸಿತ್ತಲ್ಲದೆ ನಿರ್ಮಾಪಕರ ಬೊಕ್ಕಸವನ್ನು ಬಲಿಷ್ಠಗೊಳಿಸಿತು. 'ಬಾರ್ಡರ್' ಚಿತ್ರದಲ್ಲಿ ಸೆಕೆಂಡ್ ಲೆಪ್ಟಿನೆಂಟ್ ಧರಮ್ ವೀರ್ ಭಾನ್ ಪಾತ್ರದ ಅಭಿನಯಕ್ಕಾಗಿ ಅಕ್ಷಯ್ ಖನ್ನಾರಿಗೆ 'ಫೀಲ್ಮ್‌ಫೇರ್ ಅವಾರ್ಡ್‌'ನ ಉತ್ತಮ ಪಾದಾರ್ಪಣ ಪ್ರಶಸ್ತಿ ಒಲಿಯಿತು.

'ಬಾರ್ಡರ್' ಚಿತ್ರದ ನಂತರ ಸರಿಸುಮಾರು ಎರಡು ವರ್ಷಗಳ ಕಾಲ ಅಕ್ಷಯ್ ನಟನೆಯ ಚಿತ್ರಗಳೆಲ್ಲವು ಯಶಸ್ಸು ಕಾಣಲಿಲ್ಲ. ಆದರೆ 1999ರಲ್ಲಿ 'ತಾಲ್' ಚಿತ್ರದ ಮಾನವ್ ಮೆಹ್ತಾ ಪಾತ್ರದ ಮ‌ೂಲಕ ರಿ ಎಂಟ್ರಿ ಪಡೆದ ಅಕ್ಷಯ್ ಖನ್ನಾ 2001ರಲ್ಲಿ 'ದಿಲ್ ಚಾಹ್‌ತಾ ಹೇ' ಚಿತ್ರವು ಸೂಪರ್ ಹಿಟ್ ಆಯಿತು. ಈ ಚಿತ್ರದಲ್ಲಿನ ಅಭಿನಯಕ್ಕಾಗಿ ಖನ್ನಾರಿಗೆ ಫೀಲ್ಮ್‌ಫೇರ್ ವಿಮರ್ಶಕರ ಉತ್ತಮ ಸಹನಟ ಪ್ರಶಸ್ತಿ ಸಹ ಲಭಿಸಿತು.

ನಂತರ 2002ರಲ್ಲಿ 'ಹಮ್‌ರಾಜ್' ಚಿತ್ರದಲ್ಲಿ ಖನ್ನಾ ಮೊದಲ ಬಾರಿಗೆ ಖಳನಾಯಕನಾಗಿ ಅಭಿನಯಿಸಿದರು. ಚಿತ್ರ ಬಾಲಿವುಡ್‌ನಲ್ಲಿ ಕ್ಲಿಕ್ ಆಯಿತು. ಅದರ ನಂತರ 2003-04ರಲ್ಲಿ ನಿರ್ದೇಶಕ ಪ್ರಿಯದರ್ಶನ್ ಚಿತ್ರಗಳಾದ 'ಹಂಗಾಮಾ' ಮತ್ತು 'ಹಲ್‌ಚಲ್' ಭರ್ಜರಿ ವಿಜಯ ಕಂಡಿತು. 2006ರಲ್ಲಿ '36 ಚೈನಾ ಟೌನ್', 2007ರಲ್ಲಿ 'ನಕಾಬ್', 'ಗಾಂಧಿ ಮೈ ಫಾದರ್' ಚಿತ್ರಗಳೂ ಸಹ ಉತ್ತಮ ಯಶಸ್ಸನ್ನು ಕಂಡಿತು. ಗಾಂಧಿ ಮೈ ಫಾದರ್ ಚಿತ್ರದಲ್ಲಿ ಸೂಕ್ಷ್ಮ ಪಾತ್ರಾಭಿನಯ ಮಾಡಿದ ಅಕ್ಷಯ್ ಖನ್ನಾ ಅತ್ಯುತ್ತಮ ಸಾಧನೆ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.

ಯಾವುದೇ ಪಾತ್ರವಾದರೂ ಅದನ್ನು ತನ್ನದೇ ಆದ ವಿಭಿನ್ನ ಶೈಲಿಯಲ್ಲಿ ನಟಿಸಿ ಚಿತ್ರಕ್ಕೆ ಭರ್ಜರಿ ಯಶಸ್ಸನ್ನು ನೀಡುತ್ತಿರುವ ಅಕ್ಷಯ್ ಖನ್ನಾರ ಆತ್ಮವಿಶ್ವಾಸವನ್ನು ಅಭಿನಂದಿಸಲೇಬೇಕು. 2009ರಲ್ಲಿ ಹಲವು ಚಿತ್ರಗಳು ಕೈಯಲ್ಲಿರುವ ಅಕ್ಷಯ್ ಖನ್ನಾರ ಮುಂದಿನ ಬಾಲಿವುಡ್ ಜೀವನವು ಯಶಸ್ಸಿನಿಂದ ಕೂಡಿರಲಿ ಎಂದು ಹಾರೈಸೋಣ.

ವೆಬ್ದುನಿಯಾವನ್ನು ಓದಿ