ನಾಯಕಿಯೇ ಬೇಕೆಂದೇನಿಲ್ಲ ಎನ್ನುವ ತೇಜಸ್ವಿನಿ

ಕನ್ನಡ ಚಿತ್ರರಂಗದಲ್ಲಿ ನಾಯಕಿಯಾಗಿ ಮಿಂಚಬೇಕೆಂಬ ಆಸೆಯಿಂದ ಚಿತ್ರರಂಗಕ್ಕೆ ಬಂದ ತೇಜಸ್ವಿನಿಗೆ ಪರಿಪೂರ್ಣ ನಟಿಯಾಗಿ ಮಿಂಚಲು ಸಾಧ್ಯವಾಗಲಿಲ್ಲ. ಆದರೇನಂತೆ ಚಿತ್ರಗಳಲ್ಲಿ ತಂಗಿ, ಮಗಳು, ಹೀಗೆ ಇತರ ಪಾತ್ರಗಳಲ್ಲಿ ಮಿಂಚುತ್ತಿರುವ ಈ ಬಳುಕುವ ಬಳ್ಳಿ ಬಂಧುಬಳಗ ಚಿತ್ರದಲ್ಲಿ ಶಿವರಾಜ್‌ಕುಮಾರ್ ತಂಗಿಯಾಗಿ ನಟಿಸಿದ್ದಾರೆ.

ಈ ಹಿಂದೆ ಪ್ರೇಮ್ ನಾಯಕನಾಗಿ ನಟಿಸಿದ 'ಸವಿಸವಿ ನೆನಪು' ಚಿತ್ರದಲ್ಲಿ ಎರಡನೇ ನಾಯಕಿಯಾಗಿ ಈಕೆ ನಟಿಸಿದ್ದರು. ಆದರೆ ಚಿತ್ರ ಯಾಕೋ ಹಿಟ್ ಆಗಲಿಲ್ಲ. ಆದರೆ ತೇಜಸ್ವಿನಿಗೆ ಬೇರೆ ಚಿತ್ರಗಳಲ್ಲಿ ಸಣ್ಣಪುಟ್ಟ ಪಾತ್ರಗಳಲ್ಲಿ ನಟಿಸಲು ಅವಕಾಶಗಳು ಸಿಕ್ಕಿವೆ. ಮಾತಾಡ್ ಮಾತಾಡ್ ಮಲ್ಲಿಗೆ, ಅರಮನೆ ಸೇರಿದಂತೆ ಕೆಲವು ಚಿತ್ರಗಳಲ್ಲಿ ಇವರು ನಟಿಸಿದ್ದಾರೆ.

ಪ್ರಿಯಾಭಾರತಿ ನಿರ್ದೇಶನದ 'ಇ-ಪ್ರೀತಿ' ಚಿತ್ರಕ್ಕೂ ಈಕೆ ಆಯ್ಕೆಯಾಗಿದ್ದಾರೆ. ಇತ್ತೀಚೆಗೆ ಬಂಧುಬಳಗ ಚಿತ್ರದ ಕ್ಯಾಸೆಟ್ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಈ ನಟಿ ನನಗೆ ಚಿತ್ರರಂಗದಲ್ಲಿ ರಾಧಿಕಾ ತರಹ ಹೆಸರು ಮಾಡಬೇಕೆಂದು ಆಸೆಯಿದೆ ಎಂದು ಮುಗ್ಧತೆಯಿಂದ ಹೇಳಿಕೊಂಡರು. ನನಗೆ ನಾಯಕಿ ಪಾತ್ರವೇ ಆಗಬೇಕೆಂದಿಲ್ಲ. ಜನ ಗುರುತಿಸುವಂತಹ ಉತ್ತಮ ಪಾತ್ರಗಳಲ್ಲಿ ನಟಿಸಿ ಒಳ್ಳೆಯ ಕಲಾವಿದೆಯಾಗಬೇಕೆಂಬ ಆಸೆ ಇದೆ ಎಂದು ತಮ್ಮ ಮನದಾಳದ ಮಾತನ್ನು ತೋಡಿಕೊಂಡರು.

ಅಂದಹಾಗೆ ಈ ನಟಿಗೆ ನಿದ್ದೆ ಅಂದರೆ ತುಂಬಾ ಇಷ್ಟವಂತೆ. ಅದರಲ್ಲೂ ಎಲ್ಲಾದರೂ ದೂರದ ಊರಿಗೆ ಪ್ರಯಾಣ ಹೋಗಿಬಂದು ಮಲಗುವುದರಲ್ಲಿರುವ ಖುಷಿಯೇ ಬೇರೆಯಂತೆ. ಕನ್ನಡಿ ಮುಂದೆ ನಿಲ್ಲುವುದರಲ್ಲಿ ಇವರು ಕೆಲ ಹೊತ್ತನ್ನು ಕಳೆಯುತ್ತಾರಂತೆ. ಅದಕ್ಕಾಗಿಯೇ ಇವರ ರೂಂನಲ್ಲಿ ದೊಡ್ಡ ಕನ್ನಡಿಗಳನ್ನು ಹಾಕಿಸಿದ್ದಾರಂತೆ. ಏನೇ ಆಗಲಿ ಈ ನಟಿ ಇನ್ನಷ್ಟು ಬೆಳೆಯಲಿ ಎಂದು ಹಾರೈಸೋಣ.

ವೆಬ್ದುನಿಯಾವನ್ನು ಓದಿ