ಫರಾನ್‌ರ ಹೊಸ ಅವತಾರದ 'ರಾಕ್ ಆನ್'

ಮಂಗಳವಾರ, 10 ಮಾರ್ಚ್ 2009 (14:46 IST)
WD
ಫರಾನ್ ಅಖ್ತರ್ ಯಶಸ್ಸಿನೊಂದಿಗೆ ಕೈಯಾಡಿಸಿಲ್ಲದ ಕೆಲವೇ ಕೆಲವು ವಿಷಯಗಳಷ್ಟೇ ಹಿಂದಿ ಚಿತ್ರರಂಗದಲ್ಲಿವೆ. ತಮ್ಮ ನಿರ್ದೇಶನದ ಮೊದಲ ಚಿತ್ರ 'ದಿಲ್ ಚಾಹತಾ ಹೈ'ದೊಂದಿಗೆ ಮೈಲುಗಲ್ಲು ಸ್ಥಾಪಿಸಿದ ನಂತರ ಹಿಟ್ ರಿಮೇಕ್ ಚಿತ್ರ 'ಡಾನ್‌'ವರೆಗೆ ಫರಾನ್ ಪಯಣ ಸಾಗಿಬರುತ್ತದೆ.

ಈಗ ಅಭಿಮಾನಿಗಳು ಫರಾನ್‌ರನ್ನು ಹೊಸ ಅವತಾರದಲ್ಲಿ ನೋಡಲು ಕಾತರರಾಗಿದ್ದಾರೆ. ಫರಾನ್ ಬಿಡುಗಡೆಗೆ ಸಿದ್ಧವಾಗಿರುವ 'ರಾಕ್ ಆನ್' ಚಿತ್ರದಲ್ಲಿ ನಟ ಹಾಗೂ ಗಾಯಕ ರಾಗಿದ್ದಾರೆ. ತಮ್ಮ ಹೊಸ ಅವತಾರಗಳ ಬಗ್ಗೆ ನಟ-ನಿರ್ದೇಶಕ-ಗಾಯಕ ಫರಾನ್ ತಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಇಲ್ಲಿ ಹಂಚಿಕೊಂಡಿದ್ದಾರೆ.

ಅಂದರೆ, ಈಗ ನೀವು ನಿರ್ದೇಶಕರಿಂದ, ನಟ ಮತ್ತು ಗಾಯಕರಾಗಿದ್ದೀರಿ.......

(ಹ...ಹ) ಅಂತಹುದೇನಿಲ್ಲ. ನಾನು ಈ ಚಿತ್ರದಲ್ಲಿ ನಟಿಸುತ್ತಿದ್ದೇನೆ ಏಕೆಂದರೆ ಚಿತ್ರದ ಕತೆ ಮತ್ತು ಪಾತ್ರ ನನಗೆ ಇಷ್ಟವಾಯಿತು. ಆದ್ದರಿಂದಲೇ ನಿರ್ದೇಶಕ ಅಭಿಷೇಕ್ ಕಪೂರ್ ನನ್ನಲ್ಲಿಗೆ ಬಂದಾಗ ನಾನು ಹೆಚ್ಚು ಚಿಂತಿಸಲಿಲ್ಲ.

ಆದರೆ ನಿಮ್ಮಲ್ಲಿ ಒಬ್ಬ ನಟ ಮತ್ತು ನಾಯಕನಿರುವುದು ನಮಗೆ ಎಂದೂ ತಿಳಿದು ಬಂದಿರಲಿಲ್ಲ..

ನಾನು ಎಂದೂ ನಟನೆ ಒಲ್ಲದವನಾಗಿರಲಿಲ್ಲ. ನಾನು ಯಾವಾಗಲೂ ನಟನೆಯನ್ನು ಇಷ್ಟಪಡುತಿದ್ದೆ, ಆದರೆ ಎಂದೂ ಸಹ ನಾನು ಈ ಬಗ್ಗೆ ಗಂಭೀರವಾಗಿ ಪ್ರಯತ್ನ ಮಾಡಿರಲಿಲ್ಲ ಆದರೆ ನಾನು ಈ ಬಗ್ಗೆ ಅವಕಾಶಗಳಿದ್ದಲ್ಲಿ ಮುಕ್ತನಾಗಿದ್ದೆ. ನಾನು ಸರಿಯಾದ ಸಮಯಕ್ಕಾಗಿ ಕಾಯುತ್ತಿದ್ದೆ ಏಕೆಂದರೆ ನಾನು ಅನೇಕ ಕಾರ್ಯಗಳನ್ನು ಏಕಕಾಲದಲ್ಲಿ ಮಾಡುವುದು ಸಾಧ್ಯವಿರಲಿಲ್ಲ. ನಾನು ನಿರ್ದೇಶಕನಾಗಿ ವೃತ್ತಿ ಆರಂಬಿಸಿದೆ ಮತ್ತು ಆದರ ಮೇಲೆ ಹೆಚ್ಚಿನ ಅದ್ಯತೆ ನೀಡಲು ಬಯಸಿದ್ದೆ.

ಆದರೆ ನೀವು ಉತ್ತಮ ಗಾಯಕರೂ ಹೌದು. ನಿಮಗೆ ಹಿಂದೆಂದೂ ಹಾಡಬೇಕೆಂದು ಅನಿಸಿರಲಿಲ್ಲವೆ ?

ಒಹ್.. ಹೌದಾ ?. ನನಗೆ ಸಂಗೀತದಲ್ಲೂ ಬಹಳ ಆಸಕ್ತಿ ಇತ್ತು ಆದರೆ ಇಲ್ಲೂ ಸಹ ನಾನು ಇದರ ಬಗ್ಗೆ ಗಂಭೀರವಾಗಿ ಯೋಚನೆ ಮಾಡಿರಲಿಲ್ಲ. ಇದು ತನ್ನಷ್ಟಕ್ಕೆ ನಡೆಯಿತು ಅಷ್ಟೇ ಆದರೆ ಈ ಎಲ್ಲಾ ಅನುಭವಗಳನ್ನು ನಾನು ಆನಂದಿಸಿದೆ.

ಭವಿಷ್ಯದಲ್ಲಿಯೂ ಸಹ ನಟನೆ ಮತ್ತು ಗಾಯನವನ್ನು ಮುಂದುವರಿಸುವ ಯೋಜನೆ ಇದೆಯೇ ?

ಸ್ಕ್ರಿಪ್ಟ್ ನನಗೆ ಇಷ್ಟವಾದರೆ ಯಾಕಾಗಬಾರದು... ಮುಂದೆ ನಾನು ಸಹೋದರಿ ಜೋಯ್ ಅಖ್ತರ್‌ರ 'ಲಕ್ ಬೈ ಚಾನ್ಸ್' ಚಿತ್ರದಲ್ಲಿ ನಟಿಸುತ್ತಿದ್ದೇನೆ. ಹಿನ್ನಲೆ ಗಾಯನದ ಬಗ್ಗೆ ನಾನು ಅಷ್ಟಾಗಿ ಚಿಂತಿಸಿಲ್ಲ. ಸದ್ಯಕ್ಕೆ ನಾನು ರಾಕ್ ಆನ್‌ನಲ್ಲಿ ತಲ್ಲೀನನಾಗಿದ್ದೇನೆ.

ಸರಿ, ರಾಕ್ ಆನ್ ಹೇಗೆ ಸಾಧ್ಯವಾಯಿತು ಎಂಬುದರ ಬಗ್ಗೆ ತಿಳಿಸಿ...

ಅಭಿಷೇಕ್ ಸ್ಕ್ರಿಪ್ಟ್‌ನೊಂದಿಗೆ ನನ್ನ ಬಳಿ ಬಂದರು, ಅವರು ಚಿತ್ರದಲ್ಲಿ ನಾನು ನಟಿಸಬೇಕೆಂದು ಬಯಸಿದ್ದರು. ನನಗೂ ಸ್ಕ್ರಿಪ್ಟ್ ಇಷ್ಟವಾಯಿತು ಮತ್ತು ರಾಕ್ ಆನ್ ಸಾಧ್ಯವಾಯಿತು. ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿರುವವರೇ ಹಾಡಬೇಕು ಎಂಬ ಸ್ಪಷ್ಚ ಅಭಿಪ್ರಾಯವನ್ನು ಅವರು ಮೊದಲಿನಿಂದಲೂ ಹೊಂದಿದ್ದರು. ಅವರು ನನ್ನನ್ನು ಬಹಳ ಸಮಯದಿಂದ ತಿಳಿದವರಾಗಿದ್ದಾರೆ ಆದ್ದರಿಂದ ಅವರು ನನ್ನನ್ನು ಬಲೆಗೆ ಕೆಡವಿದರು.(ನಗುತ್ತಾರೆ)

ಆದರೆ ಹಾಡುಗಳಿಗೆ ನೀವು ನ್ಯಾಯ ಸಲ್ಲಿಸಿದ್ದೀರಿ..

ನಾನು ಗಿಟಾರ್ ನುಡಿಸುವುದನ್ನು ಕಲಿತಿದ್ದೆ ಮತ್ತು ರಾಕ್ ಸಂಗೀತದ ಬಗ್ಗೆ ಬಹಳ ಆಸಕ್ತಿ ಹೊಂದಿದ್ದೆ ಆದರೆ ನನ್ನ ಮೇಲೆ ನಂಬಿಕೆಯಿರಿಸಿದ ಶಂಕರ್-ಇಶಾನ್-ಲಾಯ್‌ ಅವರಿಗೆ ಇದರ ಶ್ರೇಯ ಸಲ್ಲಬೇಕು. ನಾನು ದಿಲ್ ಚಾಹತಾ ಹೈ, ಲಕ್ಷ್ಯ ಮತ್ತು ಡಾನ್ ಚಿತ್ರಗಳಲ್ಲಿ ಅವರೊಂದಿಗೆ ದುಡಿದಿದ್ದೆ ಮತ್ತು ಅವರು ಎಷ್ಟು ಪ್ರತಿಭಾನ್ವಿತರು ಎಂಬುದು ನನಗೆ ತಿಳಿದಿದೆ. ನಿಜ ಹೇಳಬೇಕೆಂದರೆ ನನ್ನೊಳಗಿನ ಸಂಗೀತ ಪ್ರತಿಭೆಯನ್ನು ಹೊರತೆಗೆದವರು ಶಂಕರ್, ಆದ್ದರಿಂದ ಹೆಚ್ಚಿನ ಶ್ರೇಯ ಅವರಿಗೆ ಸಲ್ಲಬೇಕು.
WD


ರಾಕ್ ಸಂಗೀತವನ್ನು(ವಿಸ್ಪಷ್ಟ ತಾಳ ಹಾಗೂ ಸರಳ ರಾಗಗಳುಳ್ಳ ಜನಪ್ರಿಯ ಸಂಗೀತ) ಬಾಲಿವುಡ್‌ನಲ್ಲಿ ಅಷ್ಟಾಗಿ ಬಳಸದಿರುವುದರಿಂದ 'ರಾಕ್ ಆನ್' ಜನರ ನಿರೀಕ್ಷೆಯ ಚಿತ್ರವಾಗಿದೆ ಎಂದು ನಿಮಗೆ ಅನಿಸುವುದಿಲ್ಲವೇ ?

ಇದಕ್ಕೆ ಕಾರಣ ಭಾರತೀಯರು ವಿದೇಶಿ ರಾಕ್ ಸಂಗೀತ ಮತ್ತು ಸೌಂಡ್ ಅನ್ನು ಕೇಳಿದ್ದಾರೆ, ಆದರೆ ಇಲ್ಲೂ ಸಹ ಉತ್ತಮ ಸಂಗೀತಗಾರರಿದ್ದರೂ ಅವರ ಪ್ರತಿಭೆ ಬಳಕೆಗೆ ಬಂದಿಲ್ಲ. ಅವರುಗಳನ್ನು ಉಪಯೋಗಿಸಿಕೊಂಡಿದ್ದಲ್ಲಿ ಬಹು ಹಿಂದೆಯೇ ಬಾಲಿವುಡ್‌ ಚಿತ್ರಗಳಲ್ಲಿ ರಾಕ್ ಸಂಗೀತ ಬಳಕೆಗೆ ಬಂದಿರುತ್ತಿತ್ತು.

ಅಂದರೆ ಚಿತ್ರ ಬಿಡುಗಡೆಯಾಗುತ್ತಿದ್ದಂತೆ ನೀವು ಆಕರ್ಷಣೆಯ ಕೇಂದ್ರಬಿಂದುವಾಗುತ್ತೀರಿ..?

ಕಮ್ ಆನ್.., ಹಾಗೆ ಹೇಳಬೇಡಿ. ಇದು ನಾಲ್ವರು ಗೆಳೆಯರ ಚಿತ್ರ ಮತ್ತು ಒಬ್ಬನು ಇಲ್ಲದಿದ್ದರೂ ಕತೆ ಮುಂದುವರಿಯುವುದಿಲ್ಲ. ಇದು ನಾಲ್ಕು ಜನರ ಚಿತ್ರ ಅರ್ಜುನ್ ರಾಂಪಾಲ್, ಲ್ಯೂಕ್ ಕೆನ್ನಿ, ಪೂರಬ್ ಮತ್ತು ನಾನು. ಆದರೆ ಕೊನೆಯಲ್ಲಿ ಇದು ಅಭಿಷೇಕ್ ಚಿತ್ರ. ಅವರೂ ಅತ್ಯುತ್ತಮ ಕಾರ್ಯನಿರ್ವಹಿಸಿದ್ದಾರೆಂದು ನಾನು ಹೇಳಲೇಬೇಕು.

ರಾಕ್ ಆನ್ ನಂತರ ಏನು? ನಟನೆ ಅಥವಾ ಮರಳಿ ನಿರ್ದೇಶನ..

ಎರಡೂ, ಏಕೆಂದರೆ ನಾನು 'ದ ಸ್ಕೈ' ಚಿತ್ರದ ನಿರ್ದೇಶನಕ್ಕೆ ಸಿದ್ಧತೆ ನಡೆಸುತ್ತಿದ್ದೇನೆ ಮತ್ತು ಇದೇ ಸಮಯ 'ಲಕ್ ಬೈ ಚಾನ್ಸ್' ಚಿತ್ರದಲ್ಲಿ ನಟಿಸಲಿದ್ದೇನೆ. ನಾನು ನನ್ನ ವೃತ್ತಿಯನ್ನು ಗಂಭೀರವಾಗಿ ತೆಗೆದುಕೊಳ್ಳುತ್ತೇನೆ ಆದ್ದರಿಂದ ನಾನು ಈ ಎರಡು ಕಾರ್ಯಗಳನ್ನು ಆರಂಭಿಸುತ್ತಿದ್ದಂತೆಯೇ ನನ್ನ ಗಮನ ಪೂರ್ಣವಾಗಿ ಆ ಕಡೆಗೆ ಕೇಂದ್ರಿಕೃತವಾಗಲಿದೆ.

ನಿಮ್ಮ ಮುಂದಿನ ಚಿತ್ರದ ವಿಷಯವೇನು ?

ಈ ಬಗ್ಗೆ ನಾನು ಹೆಚ್ಚೇನು ಹೇಳುವುದಿಲ್ಲ ಆದರೆ ಸ್ವಾರಸ್ಯಕರವಾಗಿರುತ್ತದೆ ಎಂಬ ಭರವಸೆ ನೀಡುತ್ತೇನೆ.

ಕೃಪೆ: ಟಿಡಬ್ಲ್ಯುಎಫ್