ಮಾದಕ ಬಳುಕುವ ಬಳ್ಳಿ ಕಂಗನಾ ರಾಣಾವತ್ ಲೋಕ

IFM
ಮಾದಕತೆಗೆ ಇನ್ನೊಂದು ಹೆಸರೋ ಎಂಬಂತಿರುವ ಬಳುಕುವ ಬಳ್ಳಿ ಕಂಗನಾ ರಾಣಾವತ್. 'ಗ್ಯಾಂಗ್‌ಸ್ಟರ್' ಚಿತ್ರದ ಮೂಲಕ ತನ್ನ ಅಭಿನಯದಿಂದಲೇ ಎಲ್ಲರ ಮನಸೂರೆಗೊಂಡ ಸುರುಳುಕೂದಲ ಹುಡುಗಿ. ಮದ್ಯದ ಅಮಲಲ್ಲಿ ಇಳಿದುಹೋದವಳ ಹಾಗೆ ನಟಿಸಿ ಪ್ರೇಕ್ಷಕರಿಗೆ ನಶೆಯೇರಿಸಿದ ಈ ಫ್ಯಾಷನ್ ಚೆಲುವೆ ಅಂತಿಂಥವಳಲ್ಲ!

ಹಿಂದಿ ಮಾತನಾಡುವ ರಾಣಾವತ್ ಕುಟುಂಬದಲ್ಲಿ ಜನಿಸಿದ ಈಕೆಯ ತಾಯಿ ಸ್ಕೂಲ್ ಟೀಚರ್. ತಂದೆ ಅಮರದೀಪ್ ಬ್ಯುಸಿನೆಸ್‌ಮ್ಯಾನ್. ಕಂಗನಾಗೆ ಒಬ್ಬ ಅಕ್ಕ ರಂಗೋಲಿ ಹಾಗೂ ತಮ್ಮ ಅಕ್ಶಿತ್ ಇದ್ದಾರಂತೆ. ಆಕೆಯ ಕುಟುಂಬ ಇರೋದು ಶಿಮ್ಲಾದಲ್ಲಿ. ನಂತರ ಶಿಮ್ಲಾದಿಂದ ಈ ಕುಟುಂಬ ಚಂಢೀಗಢ್‌ಗೆ ವಲಸೆ ಬಂತು. ಹೀಗಾಗಿ ಕಂಗನಾ ಪ್ರಾಥಮಿಕ ವಿದ್ಯಾಭ್ಯಾಸ ನಡೆದುದು ಚಂಢೀಗಢದಲ್ಲೇ.

ಕಂಗನಾ ಕುಟುಂಬ ಮತ್ತೆ ಶಿಮ್ಲಾಕ್ಕೆ ವಾಪಾಸಾದ್ದರಿಂದ ಹೈಸ್ಕೂಲು ಶಿಕ್ಷಣವನ್ನು ಕಂಗನಾ ಶಿಮ್ಲಾದಲ್ಲೇ ಮುಗಿಸಿದಳು. ನಂತರ ಕಂಗನಾ ಮಾಡೆಲ್ ಆಗಬೇಕು ಹಾಗೂ ನಾಟಕರಂಗದಲ್ಲಿ ಅಭಿನಯಸಿಬೇಕೆಂದು ದೆಹಲಿಗೆ ಪಯಣ ಬೆಳೆಸಿದಳು. ಜತೆಗೆ ದೆಹಲಿಯ ಎಲೈಟ್ ಮಾಡೆಲಿಂಗ್ ಏಜೆನ್ಸಿಗೆ 2003ರಲ್ಲಿ ಸೇರಿ ಮಾಡೆಲ್ ಜಗತ್ತಿಗೆ ಕಾಲಿಟ್ಟಳು. ಆದರೆ ಯಶಸ್ಸು ದಕ್ಕಲಿಲ್ಲ.

ನಂತರ ಕಂಗನಾ ಅಸ್ಮಿತಾ ಥಿಯೇಟರ್ ಗ್ರೂಪ್‌ನಲ್ಲಿ 2003ರಿಂದ 2005ರವರೆಗೆ ಪಳಗಿದಳು. ಇದರ ಮಧ್ಯದಲ್ಲೇ 2004ರಲ್ಲಿ ಮುಂಬಯಿಗೆ ಬಂದ ಈ ಚೆಲುವೆ ಕಂಗನಾ ಬಾಲಿವುಡ್‌ನಲ್ಲಿ ಅವಕಾಶಕ್ಕೆ ಪ್ರಯತ್ನಿಸಿದಳು. ಆದರೆ ಆಕೆಯ ಪ್ರಯತ್ನಕ್ಕೆ ತಕ್ಕ ಫಲ ಸಿಕ್ಕಲಿಲ್ಲ. ಮತ್ತೆ ದೆಹಲಿಗೆ ವಾಪಾಸಾದಳು. ಈ
IFM
ನಡುವೆ ತನ್ನ ಅರ್ಧಕ್ಕೇ ನಿಂತಿದ್ದ ಶಿಕ್ಷಣವನ್ನೂ ಪೂರ್ಣಗೊಳಿಸಿದಳು. ನಂತರ 2004ರಲ್ಲಿ ಆಶಾ ಚಂದ್ರಾರ ಅಭಿನಯ ತರಗತಿಗೆ ಸೇರಿಕೊಂಡ ಕಂಗನಾ, ಕ್ಯಾಮರಾದೆದುರು ಅಭಿನಯಕ್ಕೆ ನಿಂತು ಬಣ್ಣ ಹಚ್ಚಿದಳು. ಇನ್ನೂ ಸಾಕಷ್ಟು ಹೆಣಗಾಡಿದ ಮೇಲೆ ಕೊನೆಗೂ 2005ರ ಸೆಪ್ಟೆಂಬರ್ ತಿಂಗಳಲ್ಲಿ ಕಂಗನಾ ಅನುರಾಗ್ ಬಸು ಅವರನ್ನು ಭೇಟಿಯಾಗಲು ಅವಕಾಶ ಸಿಕ್ಕಿತು. ಈ ಭೇಟಿ ಕಂಗನಾ ಜೀವನದ ಅದ್ಭುತ ತಿರುವು. ಇದರ ಪರಿಣಾಮವೇ 2006ರಲ್ಲಿ ಬಿಡುಗಡೆಯಾದ ಗ್ಯಾಂಗ್‌ಸ್ಟರ್ ಚಿತ್ರ.

ಅಂದಹಾಗೆ, ಕಂಗನಾ ಇನ್ನೂ ಸಣ್ಣ ಹುಡುಗಿಯಷ್ಟೇ. ಆಕೆ ಜನಿಸಿದ್ದು 1987ರ ಮಾರ್ಚ್ 20ರಂದು. ಮನಾಲಿಯ ಭಾಂಬಿಯಾ ಎಂಬ ಊರಲ್ಲಿ ಹುಟ್ಟಿದ ಈಕೆಯ ಮೊದಲ ಚಿತ್ರ ಅನುರಾಗ್ ಬಸು ಅವರ ಗ್ಯಾಂಗ್‌ಸ್ಟರ್. ಆಕೆಯ ಜೀವನದಲ್ಲಿ ಯಶಸ್ಸು ದಕ್ಕಿಸಿದ ಚಿತ್ರವೂ ಇದೇ. ಇನ್ನುಳಿದಂತೆ ವೋ ಲಮ್ಹೆ, ಲೈಫ್ ಇನ್ ಎ ಮೆಟ್ರೋ ಹಾಗೂ ಇತ್ತೀಚಿನ ಫ್ಯಾಷನ್ ಚಿತ್ರಗಳು ಆಕೆಗೆ ಸಿದ್ಧಿ, ಪ್ರಸಿದ್ಧಿ ಎಲ್ಲವನ್ನೂ ತಂದಿತ್ತವು. 2006ರಲ್ಲಿ ಗ್ಯಾಂಗ್‌ಸ್ಟರ್ ಚಿತ್ರಕ್ಕಾಗಿ ಅತ್ಯುತ್ತಮ (ಪ್ರಥಮ ಪ್ರವೇಶ ವಿಭಾಗ) ನಟಿ ಎಂಬ ಫಿಲಂಫೇರ್ ಪ್ರಶಸ್ತಿ ಹಾಗೂ 2008ರ ಫ್ಯಾಷನ್ ಚಿತ್ರಕ್ಕಾಗಿ ಅತ್ಯುತ್ತಮ ಪೋಷಕ ನಟಿ ಎಂಬ ಫಿಲಂಫೇರ್ ಪ್ರಶಸ್ತಿಗಳು ದೊರೆತವು. ಇವೆಲ್ಲವೂ ಈಕೆಯ ಅಭಿನಯ ಚಾತುರ್ಯಕ್ಕೆ ಸಿಕ್ಕ ಕೊಡುಗೆ ಎಂದೇ ಹೇಳಬೇಕು.

ಸದ್ಯದಲ್ಲಿ ಈಕೆಯ ರೋಶನ್ ಆಂಡ್ ಕೈಟ್ಸ್ ಚಿತ್ರ ಬರಲಿದೆ. ಅಂದಹಾಗೆ ಕಂಗನಾ ಬಾಲವುಡ್‌ ಬೆಡಗಿಯಾಗಿರುವುದು ಎಲ್ಲರಿಗೂ ಗೊತ್ತು. ಆದರೆ ಆಕೆಗೆ ಮೊದಲು ಡಾಕ್ಟರ್ ಆಗಬೇಕು ಎಂಬ ಕನಸಿತ್ತಂತೆ. ಆದರೆ ಅದು ಸಾಧ್ಯವಾಗಲಿಲ್ಲವಂತೆ!
IFM