ಸಿಂಹವಿಲ್ಲದ ಸಫಾರಿಯಂತೆ ಫಿರೋಜ್ ಇಲ್ಲದ ಬಾಲಿವುಡ್

IFM
ಸ್ಟಾರ್, ಆಕ್ಟರ್, ಕೌಬಾಯ್, ರಾಕ್‌ಸ್ಟಾರ್, ಡೈರೆಕ್ಟರ್, ಪ್ರೊಡ್ಯೂಸರ್... ಒಂದೇ ಎರಡೇ? ಫಿರೋಜ್ ಖಾನ್ ಎಂಬ ಸ್ಟೈಲಿಶ್ ನಟನ ಹೆಸರಿನುದ್ದಕ್ಕೂ ಹಲವು ವರ್ಣರಂಜಿತ ಅಂಕಿತಗಳು ಸೇರಿಕೊಂಡಿದ್ದವು. ತನ್ನ ಅಂತಿಮ ದಿನದವರೆಗೂ ಸ್ಟೈಲಿಶ್ ಆಗಿಯೇ ಇದ್ದ ಫಿರೋಜ್ ಒಬ್ಬ ಸ್ಟೈಲ್ ಐಕಾನ್. ಕುರ್ಬಾನಿ, ಆದ್ಮಿ ಔರ್ ಇನ್ಸಾನ್, ಮೇಲಾ, ಜಾನ್‌ಬಾಝ್ ಚಿತ್ರಗಳ ಮೂಲಕ ಎಲ್ಲ ಜನರೇಶನ್‌ ಮಂದಿಯನ್ನೂ ತಲುಪುವ ಚಿತ್ರಗಳನ್ನು ನೀಡಿದ ಫಿರೋಜ್ ಅಮರರಾಗಿ ಉಳಿದಿದ್ದಾರೆ.

ಹೀಗಿದ್ದ ಫಿರೋಜ್ ಮೊನ್ನೆ ಮೊನ್ನೆ ಫಿರೋಜ್ ಖಾನ್ ತಮ್ಮ ಜೀವನಯಾತ್ರೆ ಮುಗಿಸಿ ಹೊರಟುಹೋದರು. ತಮ್ಮ ವಿನೂತನ ಸ್ಟೈಲ್‌ಗಳಿಂದಲೇ ಖ್ಯಾತಿವೆತ್ತ ಫಿರೋಜ್ ಯಾವಾಗಲೂ ಬಾಲಿವುಡ್ ಬಳಗವಷ್ಟೇ ಅಲ್ಲ ಎಲ್ಲರಿಂದಲೂ ಆಗಾಗ ನೆನಪಿಸಿಕೊಳ್ಳುತ್ತಲೇ ಇರುವ ಪ್ರತಿಭಾವಂತ ನಟ. ಬಹಳ ಇಷ್ಟಪಡುತ್ತಿದ್ದ ಬೆಂಗಳೂರಿನಲ್ಲೇ ತಮ್ಮ ಕೊನೆಯ ದಿನಗಳನ್ನು ಕಳೆದ ಫಿರೋಜ್ ತಮ್ಮ ಇಚ್ಛೆಯಂತೆಯೇ ಬೆಂಗಳೂರಿನಲ್ಲೇ ಮಣ್ಣಾದರು. ಪಿರೋಜ್ ಸ್ಮರಣೆಗಾಗಿ ಮಗ ಹಾಗೂ ನಟ ಫರ್ದೀನ್ ಖಾನ್ ಹಾಗೂ ಮಗಳು ಲೈಲಾ ಖಾನ್ ನೇತೃತ್ವದಲ್ಲಿ ಮುಂಬೈನಲ್ಲಿ ಫಿರೋಜ್ ಶೋಕಕೂಟ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಫಿರೋಜ್ ಖಾನ್‌ ತಮ್ಮ ಸಂಜಯ್ ಖಾನ್ ಈ ಕಾರ್ಯಕ್ರವನ್ನು ಪೂರ್ತಿಯಾಗಿ ಸಂಘಟಿಸಿದರು. ಕಾರ್ಯಕ್ರಮದಲ್ಲಿ ಫಿರೋಜ್ ಆಪ್ತ ಬಳಗ, ಗೆಳೆಯರು, ಚಿತ್ರೋದ್ಯಮದ ಸಹಕಲಾವಿದೆಯರು, ಕಲಾವಿದರು ಸೇರಿದಂತೆ ಹಲವರು ಪಾಲ್ಗೊಂಡಿದ್ದರು. ಧರ್ಮೇಂದ್ರ, ವಹೀದಾ ರೆಹಮಾನ್, ಮುಮ್ತಾಜ್, ಝೀನತ್ ಅಮನ್, ಸಿಮಿ ಗೇರ್‌ವಾಲ್, ಅಮಿತಾಬ್ ಬಚ್ಚನ್, ಜಯಾ ಬಚ್ಚನ್, ಅಭಿಷೇಕ್ ಬಚ್ಚನ್, ಐಶಷ್ವರ್ಯಾ ರೈ, ಅಮರ್ ಸಿಂಗ್, ಸಂಜಯ್ ದತ್, ಮಾನ್ಯತಾ, ಶಾರುಖ್ ಖಾನ್, ಗೌರಿ ಖಾನ್, ಹೃತಿಕ್ ರೋಷನ್, ಸುಸಾನೆ ಖಾನ್, ವಿದ್ಯಾ ಬಾಲನ್, ಮನೀಷಾ ಕೊಯಿರಾಲ್, ಸುಬ್ರತೋ ರಾಯ್, ಮಾಜಿ ಮುಖ್ಯಮಂತ್ರಿ ವಿಲಾಸ್ ರಾವ್ ದೇಶ್‌ಮುಖ್... ಹೀಗೆ ದಿಗ್ಗಜರೆಲ್ಲರೂ ಬಂದು ಫಿರೋಜ್‌ ಆತ್ಮಕ್ಕೆ ಚಿರಶಾಂತಿ ಕೋರಿದರು.

IFM
ಫಿರೋಜ್ ಮಗ ಫರ್ದೀನ್ ಖಾನ್ ತಮ್ಮ ತಂದೆಯ ಕೊನೆಯ ದಿನಗಳ ಕಷ್ಟವನ್ನು ತುಂಬ ಭಾವುಕರಾಗಿ ವಿವರಿಸಿದರು. ''ಅಪ್ಪ ಫಿರೋಜ್ ಯಾವತ್ತೂ ತನಗೆ ಕ್ಯಾನ್ಸರ್ ಇದ್ದ ವಿಷಯವನ್ನು ಬೇರೆಯವರ ಬಳಿ ಚರ್ಚಿಸಲು ಇಷ್ಟಪಟ್ಟಿರಲಿಲ್ಲ. ನನಗೆ ಹಾಗೂ ತಂಗಿ ಲೈಲಾಗೆ ಬಿಟ್ಟರೆ ಮೊದಲು ಅವರಿಗೆ ಕ್ಯಾನ್ಸರ್ ಇರೋದು ಯಾರಿಗೂ ಗೊತ್ತಿರಲಿಲ್ಲ. ಇತರರು ಅವರನ್ನು ಅವರೊಬ್ಬ ರೊಗಿಯಂತೆ ನೋಡುವುದು ಅವರು ಇಷ್ಟಪಡುತ್ತಿರಲಿಲ್ಲ'' ಎಂದರು. ಅಲ್ಲದೆ ಕೊನೆಗೆ, ''ಈವರೆಗೆ ಯಾರು ತಮ್ಮ ಅಪ್ಪ, ಅಮ್ಮನನ್ನು ಪ್ರೀತಿಸುತ್ತೇವೆಂದು ಅವರ ಬಳಿ ಭಾವನಾತ್ಮಕವಾಗಿ ಹೇಳಿಕೊಂಡಿಲ್ಲವೋ ಅವರೆಲ್ಲ ಈಗಲೇ ಹೇಳಿಕೊಳ್ಳಿ. ಯಾಕೆಂದರೆ ಸಮಯ ಸಣ್ಣದಿದೆ. ಆದರೆ, ಹೆತ್ತವರು ಅಮೂಲ್ಯ'' ಎಂದು ಫರ್ದೀನ್ ಕಣ್ಣೀರು ಒರೆಸುತ್ತಾ ನುಡಿದರು.

ಈ ಶೋಕಕೂಟ ಫರ್ದೀನ್‌ರಂತೆ ನಟ ಧರ್ಮೇಂದ್ರರಿಗೂ ಅಷ್ಟೇ ಬೇಸರದ ಕೂಟ. ಕಾರಣ ಧರ್ಮೇಂದ್ರ ಫಿರೋಜ್ ಅವರ ಪರಮಾಪ್ತ ಗೆಳೆಯ. 1959ರಿಂದಲೇ ಧರ್ಮೇಂದ್ರ ಹಾಗೂ ಫಿರೋಜ್ ಪರಿಚಿತರು. ಹಾಗೂ ಪರಿಚಯದ ಮೊದಲ ದಿನದಿಂದಲೇ ಗೆಳೆತನದ ಬೆಸುಗೆ ಆರಂಭವಾಗಿತ್ತು. ಸಭೆಯನ್ನು ಉದ್ದೇಶಿಸಿ ಮಾತನಾಡಿದ ಧರ್ಮೇಂದ್ರ, ''ನನಗೆ ಫಿರೋಜ್ ಬೆಂಗಳೂರಿನಿಂದ ಮುಂಬೈಗೆ ಬಂದ ಆಱಂಭದದಿನಗಳಿಂದಲೂ ಉತ್ತಮ ಗೆಳೆಯ. ಅದ್ಹೇಗೋ ಫಿರೋಜ್‌ನ ಕಣ್ಣುಗಳು ನನಗೆ ಮೊದಲ ನೋಟದಲ್ಲೇ ಗೆಳೆತನದ ಬೆಸುಗೆ ನೀಡಿತು. ನಾನು ಅವರ ಬಳಿ ಹೋಗಿ ನನ್ನ ಗೆಳೆಯನಾಗುವೆಯಾ ಎಂದಾಗ, ಫಿರೋಜ್ ನನ್ನನ್ನು ಅಪ್ಪಿಕೊಂಡು, ಇಂದಿನಿಂದ ನಾವಿಬ್ಬರೂ ಜೀವನದುದ್ದಕ್ಕ ಜೀವದ ಗೆಳೆಯರು ಎಂದಿದ್ದರು'' ಎಂದು ಧರ್ಮೇಂದ್ರ ಹಳೆಯ ದಿನಗಳನ್ನು ನೆನಪಿಸಿಕೊಂಡು ಬಿಕ್ಕಿದರು.

IFM
ಫಿರೋಜ್ ತಮ್ಮ ಸಂಜಯ್ ಖಾನ್‌ ಕೂಡಾ ಅಷ್ಟೇ ದುಃಖತಪ್ತರಾಗಿದ್ದರು. ಅಣ್ಣ ಫಿರೋಜ್‌ನ ಬಾಲ್ಯದ ದಿನಗಳನ್ನು ನೆನಪಿಸಿಕೊಂಡು ಸಂಜಯ್ ಕಣ್ಣು ಮಂಜಾಯಿತು. ''ಅಣ್ಣ ಫಿರೋಜ್ ತಮ್ಮ 13ನೇ ವಯಸ್ಸಿನಲ್ಲೇ ಇಡಿಯ ಖುರಾನ್‌ ಓದಿ ಮುಗಿಸಿದ್ದ. ಅಷ್ಟೇ ಅಲ್ಲ, ಆತ ಆಗಲೇ 6,236 ಖುರಾನ್‌ ಪಂಕ್ತಿಗಳ್ನು ಕಂಠಪಾಠ ಮಾಡಿಕೊಂಡಿದ್ದ. ಪ್ರತಿ ಶುಕ್ರವಾರ ಪರೀಕ್ಷೆಗಳಲ್ಲೂ ಅಣ್ಣನದೇ ಮೇಲುಗೈ. ಅಲ್ಲದೆ ಕರ್ನಾಟಕ ಶಿಕ್ಷಣ ಇಲಾಖೆ ಅಡಿಯಲ್ಲಿ ಹೈಸ್ಕೂಲ್ ಶಿಕ್ಷಣ ಮುಗಿಸಿದಾಗಲೂ ಫಿರೋಜ್ ಕಲಿಕೆಯ್ಲಲೂ ಮೊದಲಿಗಾಗಿದ್ದ. ಪಾಠದಲ್ಲಷ್ಟೇ ಅಲ್ಲ, ಆತ ರಾಜ್ಯಮಟ್ಟದ ಸ್ನೂಕರ್ ಚಾಂಪಿಯನ್ ಆಗಿದ್ದ. ಅಷ್ಟು ಪ್ರತಿಭಾವಂತ ನನ್ನ ಅಣ್ಣ'' ಎಂದರು ಸಂಜಯ್.

ನಟ ಸಂಜಯ್ ದತ್ ಕೂಡಾ ಫಿರೋಜ್ ಬಗ್ಗೆ ಎರಡು ಮಾತಾಡಿದರು. ''ನಾನು ನನ್ನ ಬಾಲಿವುಡ್ ಮೊದಲ ದಿನಗಳಿಂದಲೂ ನ್ನನ ಕೂದಲನ್ನು ಕೊಂಚ ಉದ್ದವಾಗಿ ಬೆಳೆಸುತಿದ್ದೆ. ಅಷ್ಟೇ ಅಲ್ಲ ಅರ್ಧ ಶರ್ಟ್ ಗುಂಡಿಗಳನ್ನು ಹಾಗೇ ಬಿಚ್ಚಿ ಇರುತ್ತಿದ್ದೆ. ನಾನು ಯಾಕೆ ಹಾಗೆ ಮಾಡುತ್ತಿದ್ದೆ ಎಂದರೆ, ಆ ಮೂಲಕವಾದರೂ ನಾನು ಫಿರೋಜ್‌ರಂತೆ ಕಾಣಿಸಲಿ ಎಂಬುದಕ್ಕೆ'' ಎಂದರು.

ಫಿರೋಜ್‌ರ ಮೊದಲ ದಿನಗಳ ನಾಯಕಿ ನಟಿ ಮುಮ್ತಾಜ್ ಕೂಡಾ ತಮ್ಮ ಫಿರೋಜ್ ಜತೆಗಿನ ಹಳೆಯ ದಿನಗಳನ್ನು ನೆನಪಿಸಿಕೊಂಡರು. ''ಜರ್ಮನಿಯಲ್ಲಿ ಅಪ್‌ರಾಧ್ ಚಿತ್ರದ ಶೂಟಿಂಗಿನಲ್ಲಿದ್ದೆ. ಬೆಲೆಬಾಳುವ ವಾಚ್ ಒಂದು ನನ್ನ ಕಣ್ಣಿಗೆ ಬಿತ್ತು. ಆಸೆಯಾಯಿತು. ಆದರೆ ಅಷ್ಟು ಬೆಲೆಯನ್ನು ತೆರುವಷ್ಟು ನನ್ನ ಬಳಿ ದುಡ್ಡಿರಲಿಲ್ಲ. ಆಗ ಫಿರೋಜ್ ನನ್ನ ಬಳಿ ಬಂದು 'ತೆಗೋ ಮಗು' ಎಂದು ಪ್ರೀತಿಯಿಂದ ಹೇಳಿದರು. ಅವರು ಆ ವಾಚನ್ನು ನನಗೆ ಗಿಫ್ಟ್ ಆಗಿ ನೀಡಿದರು'' ಎಂದರು. ಈಗ ಮುಮ್ತಾಜ್ ಮಗಳು ನತಾಶಾ ಫರ್ದೀನ್ ಖಾನ್ ಹೆಂಡತಿ. ಅರ್ಥಾತ್ ಫಿರೋಜ್ ಖಾನ್ ಸೊಸೆ.

ಮುಮ್ತಾಜ್ ಕೊನೆಗೆ ಹೇಳಿದ್ದು ಹೀಗೆ. ''ರಕ್ಷಿತಾರಣ್ಯದಲ್ಲಿ ಸಫಾರಿ ಹೋಗಿ ಅಲ್ಲಿ ಸಿಂಹವನ್ನು ನೋಡದೆ ವಾಪಸ್ಸು ಬಂದು ಬಿಟ್ಟರೆ ಅದು ಉತ್ತಮ ಸಫಾರಿ ಎನಿಸುವುದಿಲ್ಲ. ಹಾಗೆಯೇ ಸಿಂಹವಿಲ್ಲದ ಸಫಾರಿಯಂತೆ ಫಿರೋಜ್ ಇಲ್ಲದ ಬಾಲಿವುಡ್'' ಎಂದು ಮುಮ್ತಾಜ್ ಭಾವನಾತ್ಮಕವಾಗಿ ನುಡಿದರು.
IFM