ಕರುಣಾಜನಕ: ಪ್ರತಿದಿನ ದೇವರಿಗೆ ಪತ್ರ ಬರೆಯುವ ಬಾಲಕ

ಶುಕ್ರವಾರ, 15 ಮೇ 2015 (13:25 IST)
"ಓ ದೇವರೆ, ನನ್ನ ತಂಗಿಯನ್ನು ನನಗೆ ಮರಳಿ ಸಿಗುವಂತೆ ಮಾಡಿ", ಎಂದು ಆಗ್ರಾದ 7 ವರ್ಷದ ಬಾಲಕನೊಬ್ಬ ಪ್ರತಿದಿನ ದೇವಸ್ಥಾನಕ್ಕೆ ಹೋಗಿ ಪ್ರಾರ್ಥನೆ ಸಲ್ಲಿಸುತ್ತಾನಂತೆ. ಇಷ್ಟೇ ಅಲ್ಲ ಪ್ರತಿದಿನ ಆತ ದೇವರಿಗೆ ಪತ್ರವನ್ನು ಸಹ ಬರೆಯುತ್ತಾನೆ. ಪತ್ರದಲ್ಲೂ ಅವನದು ಒಂದೇ ನಿವೇದನೆ; 'ಭಗವಂತ ನನ್ನ ತಂಗಿಯನ್ನು ಹುಡುಕಿ ಕೊಡಿ'. 

 
ಕಳೆದ ಮಾರ್ಚ್ 10 ರಿಂದ ನಿಶಾಂತ್ ಅಲಿಯಾಸ್ ಸಕ್ಷಮ್ ಪ್ರತಿ ನಿತ್ಯ ನಾಗ ದೇವಸ್ಥಾನಕ್ಕೆ ಬರುತ್ತಾನೆ. ಅಲ್ಲಿ ಗಂಟೆಗಟ್ಟಲೆ ಕುಳಿತುಕೊಳ್ಳುವ ಬಾಲಕ ದೇವರ ಮೂರ್ತಿಯ ಮುಂದೆ ಮಂಡಿಯೂರಿ ಕುಳಿತು ಪ್ರಾರ್ಥನೆ ಸಲ್ಲಿಸುತ್ತಾನೆ. ಜತೆಗೆ ಪತ್ರವನ್ನು ಬರೆದು ಪೂಜಾರಿಯ ಬಳಿ ನೀಡುತ್ತಾನೆ. 
 
ಅಷ್ಟಕ್ಕೂ ಆತನ ತಂಗಿಗೇನಾಗಿದೆ? ನಿಶಾಂತನ ತಾಯಿ ಮಾರ್ಚ್ 9 ರಂದು ಜಿಲ್ಲಾ ಆಸ್ಪತ್ರೆಯಲ್ಲಿ ಹೆಣ್ಣು ಮಗುವೊಂದಕ್ಕೆ ಜನ್ಮ ನೀಡಿದ್ದಳು. ತಾಯಿ-ಮಗುವನ್ನು ವಾರ್ಡ್‌ಗೆ ಶಿಫ್ಟ್ ಮಾಡಿದ ಸಂದರ್ಭದಲ್ಲಿ ಅಲ್ಲಿಗೆ ಬಂದ ವ್ಯಕ್ತಿಯೊಬ್ಬ ಮಗುವನ್ನು ಎತ್ತಿಕೊಂಡು ನಾಪತ್ತೆಯಾದ. ಈ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆದರೆ ಇಲ್ಲಿಯವರೆಗೆ ಮಗುವಿನ ಪತ್ತೆಯಾಗಿಲ್ಲ.
 
ಹೀಗಾಗಿ ಮಗುವನ್ನು ಕಳೆದುಕೊಂಡಿರುವ ನಿಶಾಂತನ ತಾಯಿ ರೇಖಾ ಮತ್ತು ಅವರ ಪರಿವಾರ ಅತೀವ ದುಃಖದಲ್ಲಿದೆ. ಅನೇಕ ದಿನಗಳಿಂದ ಪುಟ್ಟ ತಂಗಿಯ ನಿರೀಕ್ಷೆಯಲ್ಲಿದ್ದ ನಿಶಾಂತ ಈ ಘಟನೆಯಿಂದ ಆಘಾತಗೊಂಡಿದ್ದಾನೆ ಮತ್ತು ತನ್ನ ತಂಗಿ ಮರಳಿ ಸಿಗುವಂತೆ ಮಾಡೆಂದು ದೇವರಲ್ಲಿ ಮೊರೆ ಇಟ್ಟಿದ್ದಾನೆ. 
 
ನಿಶಾಂತ್‌ ಪ್ರತಿದಿನ ದೇವಸ್ಥಾನಕ್ಕೆ ಬಂದು ವಿಶ್ವಾಸದಿಂದ ಪ್ರಾರ್ಥನೆ ಸಲ್ಲಿಸುವುದು ಸುತ್ತಮುತ್ತಲಿನ ಇಲಾಖೆಗಳಲ್ಲಿ ಚರ್ಚೆಯ ವಿಷಯವಾಗಿದೆ. 

ವೆಬ್ದುನಿಯಾವನ್ನು ಓದಿ