ಪೇದೆ ಪತ್ನಿ ಐಎಎಸ್: ಸುಳ್ಳು ಸುದ್ದಿ!

ಶುಕ್ರವಾರ, 10 ಜುಲೈ 2015 (11:27 IST)
ಸಾಮಾನ್ಯ ಪೊಲೀಸ್‌ ಪೇದೆಯ ಪತ್ನಿ ಐಎಎಸ್‌ ಪರೀಕ್ಷೆಯಲ್ಲಿ ಉನ್ನತ ಶ್ರೇಯಾಂಕ ಪಡೆದು ಪಾಸಾಗಿದ್ದಾಳೆ ಎಂಬ ಸುದ್ದಿ ಕಳೆದೆರಡು ದಿನಗಳಿದ ಸಂಚಲನವನ್ನು ಸೃಷ್ಟಿಸಿತ್ತು. ಆದರೆ ಅದು ಸುಳ್ಳು ಸುದ್ದಿ ಎಂಬುದೀಗ ಬೆಳಕಿಗೆ ಬಂದಿದ್ದು, ಈ ಕುರಿತು ತನಿಖೆಗೆ ಆದೇಶಿಸಲಾಗಿದೆ. 
 
ಪೊಲೀಸ್ ಪೇದೆಯಾಗಿ ಕಾರ್ಯ ನಿರ್ವಹಿಸುತ್ತಿರುವ ಸಂದೀಪ್ ಕುಮಾರ್ ತನ್ನ ಪತ್ನಿ ಈ ಬಾರಿಯ ಐಎಎಸ್‌ನಲ್ಲಿ 46 ನೇ ಶ್ರೇಯಾಂಕದಲ್ಲಿ ತೇರ್ಗಡೆಯಾಗಿದ್ದಾಳೆ ಎಂದು ಹೇಳಿಕೊಂಡಿದ್ದ. ಈ ಸುದ್ದಿ ಮಾಧ್ಯಮಗಳಲ್ಲಿ ಹರಿದಾಡಿತ್ತು. 
 
ಆದರೆ ಪ್ರಕಟಿಸಲಾಗಿರುವ ಅಂತಿಮ ಪಟ್ಟಿಯಲ್ಲಿ ಪೂನಂ ಹೆಸರಿಲ್ಲವೆಂಬುದನ್ನು ಯುಪಿಎಸ್‌ಸಿ ಖಚಿತ ಪಡಿಸಿದೆ. 
 
ಪೂನಂ ಪತಿ ಹೇಳಿಕೊಂಡಿರುವಂತೆ ಆಕೆ ಗಣಿತದಲ್ಲಿ ಎಮ್ಎಸ್‌ಸಿ ಮಾಡಿರುವುದು ಸಹ ಸುಳ್ಳು. ಆಕೆ ಕೇವಲ ಹತ್ತನೇ ತರಗತಿ ಪಾಸ್‌ ಮಾಡಿದ್ದಾಳೆ ಎಂದು ಸಹ ಹೇಳಲಾಗುತ್ತಿದೆ. 
 
ಆದರೆ ಪತ್ನಿ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಪಾಸಾಗಿರುವ ಬಗ್ಗೆ ಖಚಿತ ಈಮೇಲ್‌ ಸಹ ಬಂದಿದೆ ಎಂದು ಸಂದೀಪ್ ಈಗಲೂ ವಾದಿಸುತ್ತಿದ್ದಾನೆ.
 
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸ್ ಅಧೀಕ್ಷಕರಾದ ಧರ್ಮೇಂದ್ರ ಸಿಂಗ್‌ ಸೂಕ್ತ ತನಿಖೆಗೆ ಆದೇಶ ನೀಡಿದ್ದಾರೆ. 
 
ಕೇವಲ ಮೋಜಿಗಾಗಿ ಈ ರೀತಿಯ ಸುಳ್ಳು ಸುದ್ದಿ ಹಬ್ಬಿಸಲಾಗಿದೆ ಎಂದು ಹೇಳಲಾಗುತ್ತಿದ್ದು, ತನಿಖೆಯ ಬಳಿಕವಷ್ಟೇ ಸತ್ಯಾಸತ್ಯತೆ  ಹೊರಬೀಳಲಿದೆ. 

ವೆಬ್ದುನಿಯಾವನ್ನು ಓದಿ