ವೈದ್ಯರ ಕಿತ್ತಾಟಕ್ಕೆ ತಾಯಿ ಗರ್ಭದಲ್ಲಿಯೇ ಕಂದಮ್ಮ ಸಾವು

ಬುಧವಾರ, 30 ಆಗಸ್ಟ್ 2017 (12:48 IST)
ಜೈಪುರ: ವೈದ್ಯರ ಕಿತ್ತಾಟದಿಂದ ಆಗ ತಾನೆ ಕಣ್ಣು ಬಿಡಬೇಕಿದ್ದ ಎಳೆ ಕಂದಮ್ಮ ತಾಯಿಯ ಗರ್ಭದಲ್ಲಿಯೇ ಪ್ರಾಣ ಕಳೆದುಕೊಂಡಿರುವ ಮನಕಲಕುವ ಘಟನೆ ಜೋಧ್ಪುರದ ಉಮೈದ್ ಆಸ್ಪತ್ರೆಯಲ್ಲಿ ನಡೆದಿದೆ. ಆಪರೇಷನ್ ಥಿಯೇಟರ್ ನಲ್ಲಿ ನಡೆದ ಈ ಘಟನೆಯ ವಿಡಿಯೋ ಈಗ ವೈರಲ್ ಆಗಿದೆ.


ಗರ್ಭಿಣಿಯೊಬ್ಬಳು ಹೆರಿಗೆ ನೋವಿನಿಂದ ಜೋಧ್ಪುರದ ಉಮೈದ್ ಆಸ್ಪತ್ರೆಗೆ ದಾಖಲಾಗಿದ್ದರು. ಬಳಿಕ ಗರ್ಭಿಣಿಯನ್ನು ಆಸ್ಪತ್ರೆ ಸಿಬ್ಬಂದಿ ಆಪರೇಶನ್ ಥಿಯೇಟರ್ ಗೆ ಕರೆ ತಂದಿದ್ದಾರೆಇದಾದ ಬಳಿಕ ಆಪರೇಷನ್ ಥಿಯೇಟರ್ ಗೆ ಬಂದ ಇಬ್ಬರು ವೈದ್ಯರು, ಗರ್ಭಿಣಿಗೆ ಶಸ್ತ್ರಚಿಕಿತ್ಸೆ ಮಾಡುವುದನ್ನು ಬಿಟ್ಟು ಅನಸ್ತೇಷಿಯಾ ಕೊಡುವ ವಿಚಾರವಾಗಿ ಪರಸ್ಪರ ಜಗಳವಾಡಿದ್ದಾರೆ.

30 ನಿಮಿಷಗಳ ಕಾಲ ವೈದ್ಯರು ಸಿಬ್ಬಂದಿ ಮಾತಿಗೂ ಬೆಲೆ ನೀಡದೇ ಪರಸ್ಪರ ವಾಗ್ವಾದ ನಡೆಸಿದ್ದಾರೆ. ಇದರಿಂದಾಗಿ ತಾಯಿ ಗರ್ಭದಿಂದ ಹೊರಬರಬೇಕಿದ್ದ ಕಂದಮ್ಮ ಕೊನೆಯುಸಿರೆಳೆದಿದೆ ಎಂದು ರಾಷ್ಟ್ರೀಯ ವಾಹಿನಿಯೊಂದು ವರದಿಮಾಡಿದೆ.

ಉಮೈದ್ ಆಸ್ಪತ್ರೆಯ ಡಾ. ಅಶೋಕ್ ನಾನಿವಾಲ್ ಹಾಗೂ ಡಾ. ಎಂ.ಎಲ್. ಟಕ್ ಅವರನ್ನು ಸದ್ಯ ಕರ್ತವ್ಯದಿಂದ ವಜಾ ಮಾಡಲಾಗಿದೆ ಎಂದು ತಿಳಿದು ಬಂದಿದೆ.
 
ಈ ಕುರಿತು ಪ್ರತಿಕ್ರಿಯಿಸಿರುವ ಆರೋಗ್ಯ ಸಚಿವ ಕಲಿ ಚರಣ್ ಸರಫ್, ಘಟನೆಗೆ ಸಂಬಂಧಿಸಿದಂತೆ ಸತ್ಯಾಂಶ ತಿಳಿಯಲು ತನಿಖಾ ಸಮಿತಿ ರಚಿಸಲಾಗಿದೆ. ಸಾವಿಗೆ ಕಾರಣ ತಿಳಿದುಬಂದ ಬಳಿಕ ಆರೋಪಿಗಳ ವಿರುದ್ಧ ಕ್ರಮತೆಗೆದುಕೊಳ್ಳಲಾಗುವುದು ಎಂದು ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ