ಬೆಂಗಳೂರು: ಇತ್ತೀಚೆಗೆ ಹಾಸನದಲ್ಲಿ ಹೃದಯಾಘಾತದ ಪ್ರಕರಣಗಳು ಹೆಚ್ಚಾಗುತ್ತಿದ್ದಂತೇ ಜನರಲ್ಲಿ ಆತಂಕ ಹೆಚ್ಚಿದೆ. ಹೃದಯದ ಬಗ್ಗೆ ಜನರಲ್ಲಿ ಕಾಳಜಿ ಹೆಚ್ಚಾಗಿದೆ. ಹೃದಯದ ಆರೋಗ್ಯದ ಬಗ್ಗೆ ಹಲವು ಅನುಮಾನಗಳೂ ಇವೆ. ಹೆಚ್ಚು ಶ್ರಮವಹಿಸಿ ಕೆಲಸ ಮಾಡಿದರೆ ಹೃದಯಾಘಾತವಾಗುತ್ತಾ? ಈ ಒಂದು ಪ್ರಶ್ನೆಗೆ ಸಂದರ್ಶನವೊಂದರಲ್ಲಿ ಹೃದ್ರೋಗ ತಜ್ಞ ಡಾ ಸಿಎನ್ ಮಂಜುನಾಥ್ ಹೇಳಿರುವ ಉತ್ತರ ಹೀಗಿದೆ ನೋಡಿ.
ಹೃದಯದ ಖಾಯಿಲೆ ಇರುವವರು ಅತಿಯಾಗಿ ಭಾರ ಎತ್ತುವುದು, ಶ್ರಮದ ಕೆಲಸ ಮಾಡುವುದರಿಂದ ಸಮಸ್ಯೆಯಾಗಬಹುದು ಎಂಬುದು ಸಾಮಾನ್ಯವಾಗಿ ವೈದ್ಯರು ನೀಡುವ ಸಲಹೆ. ಆದರೆ ಹೆಚ್ಚು ಕೆಲಸ ಮಾಡುವುದರಿಂದ ಹೃದಯಾಘಾತವಾಗುತ್ತಾ? ಈ ಅನುಮಾನಕ್ಕೆ ಡಾ ಸಿಎನ್ ಮಂಜುನಾಥ್ ಹೀಗಂತ ಉತ್ತರಿಸಿದ್ದಾರೆ.
ಕೆಲಸ ಮಾಡುವುದಕ್ಕೂ ಹೃದಯದ ಆರೋಗ್ಯಕ್ಕೂ ಸಂಬಂಧವಿಲ್ಲ. ಹೆಚ್ಚು ಕೆಲಸ ಮಾಡುವುದರಿಂದ ನಮ್ಮ ಹೃದಯಕ್ಕೆ ಹಾನಿಯಾಗುತ್ತದೆ ಎನ್ನುವುದು ತಪ್ಪು ಕಲ್ಪನೆ. ಆದರೆ ನಾವು ಮಾಡುವ ಕೆಲಸ ನಮಗೆ ಎಷ್ಟು ಖುಷಿ ಕೊಡುತ್ತಿದೆ ಎನ್ನುವುದು ಮುಖ್ಯ.
ಕೆಲಸ ಮಾಡುವುದರಿಂದ ಹೃದಯದ ಆರೋಗ್ಯ ಹಾಳಾಗದು. ಆದರೆ ಒತ್ತಡದಲ್ಲಿ ಕೆಲಸ ಮಾಡಿದರೆ, ಮನಸ್ಸಿಗೆ ಸಂತೋಷವಿಲ್ಲದೇ ಕೆಲಸ ಮಾಡಿದರೆ ಅದರಿಂದ ಮಾನಸಿಕವಾಗಿ ಶ್ರಮ, ಒತ್ತಡವಾಗಬಹುದು. ಇದು ಸಹಜವಾಗಿಯೇ ರಕ್ತದೊತ್ತಡ, ಮಧುಮೇಹದಂತಹ ಖಾಯಿಲೆಗಳಿಗೆ ಕಾರಣವಾಗಬಹುದು. ಹೃದಯದ ಆರೋಗ್ಯಕ್ಕೆ ಒತ್ತಡವೂ ಪ್ರಮುಖ ಕಾರಣ. ಹೀಗಾಗಿ ನಾವು ಎಷ್ಟು ಇಷ್ಟಪಟ್ಟು ಕೆಲಸ ಮಾಡುತ್ತೇವೆ ಎನ್ನುವುದರ ಮೇಲೆ ನಮ್ಮ ಹೃದಯವೂ ಆರೋಗ್ಯವಾಗಿರುತ್ತದೆ ಎನ್ನುತ್ತಾರೆ ಡಾ ಮಂಜುನಾಥ್.