ದೇವರಿಗೆ ನೋಟಿಸ್ ಜಾರಿಗೊಳಿಸಿದ ಅಧಿಕಾರಿಗಳು

ಸೋಮವಾರ, 8 ಜೂನ್ 2015 (09:05 IST)
ಇದು ಕಾಲ್ಪನಿಕ ಕತೆಯಲ್ಲ. ಮಧ್ಯಪ್ರದೇಶದಲ್ಲಿ ನಡೆದ ನೈಜ ಪ್ರಕರಣ. ರಸ್ತೆಗೆ ಸೇರಿದ ಜಾಗವನ್ನು ಅತಿಕ್ರಮಣ ಮಾಡಿಕೊಂಡಿರುವುದನ್ನು ಪ್ರಶ್ನಿಸಿ ದೇವಾಲಯವೊಂದರ ಮುಖ್ಯದೈವ ಹನುಮಾನ್‌ಗೆ ಅಧಿಕಾರಿಗಳು ನೋಟಿಸ್ ಜಾರಿ ಮಾಡಿದ್ದಾರೆ.

ಭಿಂಡ್‌ ಜಿಲ್ಲೆಯಲ್ಲಿ ಈ ಘಟನೆ ಬೆಳಕಿಗೆ ಬಂದಿದೆ. ಜಿಲ್ಲೆಯ ಬಜಾರಿಯಾ ಪ್ರದೇಶದಲ್ಲಿ ಹನುಮಾನ್ ದೇವಸ್ಥಾನವೊಂದಿದ್ದು, ಸಾರ್ವಜನಿಕ ರಸ್ತೆಗೆ ಸೇರಿದ ಜಾಗವನ್ನು ಒತ್ತುವರಿ ಮಾಡಿಕೊಂಡು ದೇವಸ್ಥಾನವನ್ನು ನಿರ್ಮಿಸಲಾಗಿದೆ ಎಂಬುದು ಅಧಿಕಾರಿಗಳ ಆರೋಪ.
 
ಗ್ವಾಲಿಯರ್ ಹೈಕೋರ್ಟ್‌ ಕಟ್ಟಡವನ್ನು ತೆರವುಗೊಳಿಸುವಂತೆ ಆದೇಶಿಸಿದೆ.  ಅದನ್ನು ನಿರ್ಲಕ್ಷಿಸಿದ್ದ ದೇವಾಲಯದ ಅರ್ಚಕರಿಗೆ ಹಾಗೂ ಆಡಳಿತ ಮಂಡಳಿಗೆ ನಗರ ಪಾಲಿಕೆ ಅಧಿಕಾರಿಗಳು ನೋಟಿಸ್ ನೀಡಬೇಕಿತ್ತು. ಆದರೆ ಅವರು ದೇವಸ್ಥಾನದ ಮುಖ್ಯದೈವ ಹನುಮಾನ್ ಹೆಸರಿನಲ್ಲಿ ನೋಟಿಸ್ ಜಾರಿಗೊಳಿಸಿದ್ದಾರೆ. 
 
ಆಂಜನೇಯನಿಗೆ ನೀಡಿದ ನೋಟಿಸ್‌ನಲ್ಲಿ ಹೀಗೆ ಬರೆಯಲಾಗಿದೆ: 'ನೀವು ಸಾರ್ವಜನಿಕ ರಸ್ತೆಗೆ ಸೇರಿದ ಸ್ಥಳವನ್ನು ಅತಿಕ್ರಮಿಸಿ ಕಟ್ಟಡ ನಿರ್ಮಿಸಿದ್ದೀರಿ. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದು ಜೊತೆಗೆ ಅಪಘಾತಕ್ಕೆ ಆಹ್ವಾನ ನೀಡುತ್ತಿದೆ. ಕಟ್ಟಡ ತೆರವುಗೊಳಿಸುವಂತೆ  ಈ ಮೊದಲು ಅನೇಕ ಬಾರಿ ಸೂಚಿಸಿದ್ದರೂ ನೀವದಕ್ಕೆ ಸ್ಪಂದಿಸಿಲ್ಲ. ಗ್ವಾಲಿಯರ್ ಹೈ ಕೋರ್ಟ್‌ ನೀಡಿದ್ದ ಆದೇಶಕ್ಕೂ ನೀವು ಮನ್ನಣೆ ನೀಡಿಲ್ಲ.  ಹೀಗಾಗಿ ನಿಮ್ಮ ಮೇಲೆ ನ್ಯಾಯಾಂಗ ನಿಂದನೆ ದೂರು ದಾಖಲಿಸಲಾಗುತ್ತದೆ'.
 
ಈ ನೋಟಿಸ್‌ಗೆ ವ್ಯಾಪಕ ಟೀಕೆಗಳು ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಪಾಲಿಕೆ ಅಧಿಕಾರಿಗಳು ತಪ್ಪಾಗಿ ನೋಟಿಸ್ ಜಾರಿಯಾಗಿದೆ, ಆದಷ್ಟು ಬೇಗ ತಪ್ಪನ್ನು ತಿದ್ದಿಕೊಳ್ಳಲಾಗುವುದು ಎಂದು ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ